ಜಿಲ್ಲಾಧಿಕಾರಿಗಳಿಗೆ ಸಿಎಂ ಖಡಕ್ ಎಚ್ಚರಿಕೆ

Cm kumaraswamy had meeting with District collectors

31-07-2018

ಬೆಂಗಳೂರು: ಮೀಸಲಿಟ್ಟ ಅನುದಾನ ಬಳಕೆಯಲ್ಲಿ ಲೋಪವಾದರೆ ಯಾವುದೇ ಕಾರಣಕ್ಕೂ ಸಹಿಸುವುದಿಲ್ಲವೆಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಜಿಲ್ಲಾಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.

ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಇಂದು ನಡೆದ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತಿ ಕಾರ್ಯ ನಿರ್ವಹಣಾಧಿಕಾರಿಗಳ ಸಭೆಯಲ್ಲಿ ಸಮಾಜಕಲ್ಯಾಣ ಇಲಾಖೆ ಕುರಿತ ಪರಿಶೀಲನೆ ವೇಳೆ ಮಾತನಾಡಿದ ಸಿಎಂ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಮೀಸಲಿಟ್ಟ ಅನುದಾನ ಬಳಕೆ ಮಾಡವುದರಲ್ಲಿ ಲೋಪವಾದರೆ ಸಹಿಸುವುದಿಲ್ಲ ಎಂದು ಹೇಳಿದರು.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಜನಸಂಖ್ಯೆಗನುಗುಣವಾಗಿ ಬಜೆಟ್ ನಲ್ಲಿ ಒದಗಿಸಿರುವ ಅನುದಾನವನ್ನು ಕಾಲಮಿತಿಯಲ್ಲಿ ಸದ್ಬಳಕೆ ಮಾಡಿಕೊಳ್ಳಬೇಕು. ಮೀಸಲಿಟ್ಟ ಹಣವನ್ನು ಆ ವರ್ಗದ ಕಲ್ಯಾಣಕ್ಕೆ ಕಡ್ಡಾಯವಾಗಿ ಬಳಕೆ ಮಾಡಲು ಕಾಯಿದೆಯನ್ನು ಕೂಡ ಜಾರಿಗೆ ತರಲಾಗಿದೆ. ಫಲಾನುಭವಿಗಳನ್ನು ಆಯ್ಕೆ ಮಾಡುವಾಗ ನಿಯಮಾನುಸಾರ ಮತ್ತು ಅರ್ಹರನ್ನು ಆಯ್ಕೆ ಮಾಡಬೇಕು. ಅದರಲ್ಲೂ ಸೌಲಭ್ಯ ವಂಚಿತರನ್ನು ಗುರುತಿಸಬೇಕೆಂದು ಸಲಹೆ ಮಾಡಿದರು.

ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯಾರ್ಥಿ ನಿಲಯದ ಅಭಿವೃದ್ಧಿಗೆ ಹೆಚ್ಚು ಆದ್ಯತೆ ನೀಡಬೇಕು. ಸ್ವಂತ ಕಟ್ಟಡವಿಲ್ಲದ ಹಾಸ್ಟೆಲ್ ಗಳಿಗೆ ಸ್ವಂತ ಕಟ್ಟಡ ನಿರ್ಮಿಸಲು ನಿವೇಶನ ಗುರುತಿಸಬೇಕು. ಶುಚಿತ್ವ, ಗುಣಮಟ್ಟದ ಆಹಾರ ಸೇರಿದಂತೆ ಹಾಸ್ಟೆಲ್ ಗಳಲ್ಲಿ ಮೂಲಸೌಲಭ್ಯ ಒದಗಿಸಿ ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಳ್ಳಬೇಕು. ಹಾಸ್ಟೆಲ್ ವಿಚಾರದಲ್ಲಿ ದೂರುಗಳು ಬರದಂತೆ ಮುನ್ನೆಚ್ಚರಿಕೆ ವಹಿಸಬೇಕೆಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.

ಇಲಾಖಾವಾರು ಹಾಗೂ ಜಿಲ್ಲಾವಾರು ಮಾಹಿತಿ ಪಡೆದು ಪರಿಣಾಮಕಾರಿಯಾಗಿ ಸರ್ಕಾರದ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಸಚಿವರಾದ ಆರ್.ವಿ.ದೇಶಪಾಂಡೆ, ಕೆ.ಜೆ.ಜಾರ್ಜ್, ಯು.ಟಿ.ಖಾದರ್. ಸಾ.ರಾ.ಮಹೇಶ್, ಪ್ರಿಯಾಂಕ್ಖರ್ಗೆ, ಡಿ.ಸಿ.ತಮ್ಮಣ್ಣ, ವೆಂಕಟರಾವ್ ನಾಡಗೌಡ, ಶಿವಾನಂದಪಾಟೀಲ್, ಸರ್ಕಾರದ ಮುಖ್ಯಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್ ಸೇರಿದಂತೆ ವಿಭಾಗೀಯ ಆಯುಕ್ತರು, ಸರ್ಕಾರದ ವಿವಿಧ ಇಲಾಖೆಯ ಹೆಚ್ಚುವರಿ ಮುಖ್ಯಕಾರ್ಯದರ್ಶಿಗಳು, ಪ್ರಧಾನಕಾರ್ಯದರ್ಶಿಗಳು, ಕಾರ್ಯದರ್ಶಿಗಳು, ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಮತ್ತು ಜಿಪಂ ಸಿಇಒಗಳು ಸಭೆಯಲ್ಲಿ ಭಾಗವಹಿಸಿದ್ದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ