ಪ್ರತ್ಯೇಕ ರಾಜ್ಯ ಬಯಸಿದವರು ನಾವಲ್ಲ: ಎಂ.ಬಿ.ಪಾಟೀಲ್

We do not want a separate state: MB Patil

31-07-2018

ಬೆಂಗಳೂರು: ಪ್ರತ್ಯೇಕ ಉತ್ತರ ಕರ್ನಾಟಕ ರಾಜ್ಯ ಬೇಡಿಕೆ ವಿಚಾರದ ಕುರಿತು ಮಾಜಿ ಸಚಿವ ಎಂ.ಬಿ.ಪಾಟೀಲ್ ಪ್ರತಿಕ್ರಿಯಿಸಿದ್ದಾರೆ. ಸದಾಶಿವನಗರದ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಎಂ.ಬಿ.ಪಾಟೀಲ್, ‘ಪ್ರತ್ಯೇಕ ರಾಜ್ಯ ಬಯಸಿದವರು ನಾವಲ್ಲ, ಸಮಗ್ರ ಕರ್ನಾಟಕ ಬಯಸಿದವರು ನಾವು’ ಎಂದು ಪ್ರತ್ಯೇಕತೆಗೆ ವಿರೋಧ ವ್ಯಕ್ತಪಡಿಸಿದ್ದಾರೆ.

ಉತ್ತರ ಕರ್ನಾಟಕ-ದಕ್ಷಿಣ ಕರ್ನಾಟಕ ರಾಜ್ಯದ ಎರಡು ಕಣ್ಣುಗಳು ಇದ್ದಂತೆ, ಅಭಿವೃದ್ಧಿಯನ್ನು ನಾವು ಬಯಸುತ್ತೇವೆ ಹೊರತು ಪ್ರತ್ಯೇಕ ರಾಜ್ಯ ಅಲ್ಲ. ಮೈಸೂರು ಒಡೆಯರಿಂದ ದಕ್ಷಿಣ ಕರ್ನಾಟಕ್ಕೆ ಅನೇಕ ನೀರಾವರಿ ಯೋಜನೆಗಳು ಬಂದವು. ಉತ್ತರ ಕರ್ನಾಟಕ ನೀರಾವರಿ, ಔದ್ಯೋಗಿಕ ಯೋಜನೆಗಳಿಂದ ವಂಚಿತವಾಗಿದೆ. ಉತ್ತರ ಕರ್ನಾಟಕಕ್ಕೆ ಹೆಚ್ಚಿನ ಕಂಪನಿಗಳು ಬರಬೇಕಿದೆ. ಆರೋಗ್ಯ, ಶಿಕ್ಷಣ, ಪ್ರವಾಸೋದ್ಯಮ ಕ್ಷೇತ್ರಗಳು ಅಭಿವೃದ್ಧಿ ಆಗಬೇಕಿದೆ. ಈ ಎಲ್ಲಾ ಕ್ಷೇತ್ರಗಳಲ್ಲೂ ಒಂದು ಅಧ್ಯಯನ ನಡೆಸಿ ಮುಂದಿನ‌ ಹೆಜ್ಜೆ ಇಡಬೇಕಾಗಿದೆ ಎಂದರು.

ಕಾಂಗ್ರೆಸ್ ಪಕ್ಷಕ್ಕೆ ಉತ್ತರ ಕರ್ನಾಟಕದ ಮತದಾರರೂ ಮತ ನೀಡಿದ್ದಾರೆ, ದಕ್ಷಿಣ ಕರ್ನಾಟಕದಿಂದ ಹೆಚ್ಚಾಗಿ ಉತ್ತರ ಕರ್ನಾಟಕದ ಜನ ಕಾಂಗ್ರೆಸ್ ಗೆ ಮತ ನೀಡಿದ್ದಾರೆ. ಸಿದ್ದರಾಮಯ್ಯನವರು ಯಾವತ್ತೂ ಉತ್ತರ ಕರ್ನಾಟಕ-ದಕ್ಷಿಣ ಕರ್ನಾಟಕ ಎಂಬ ತಾರತಮ್ಯ ಮಾಡಿಲ್ಲ. ಕುಮಾರಸ್ವಾಮಿಯವರೂ ಮಾಡಲ್ಲ ಅನ್ನೋ ನಂಬಿಕೆ ಇದೆ. ಉತ್ತರ ಕರ್ನಾಟಕಕ್ಕೆ ಯಾವುದೇ ರೀತಿಯ ಅನ್ಯಾಯ ಆಗೋದಕ್ಕೆ ಬಿಡೋದಿಲ್ಲ, ಆದರೆ ಅಭಿವೃದ್ಧಿ ಆಗಬೇಕಾಗಿದೆ. ನಿಗಧಿತ ಸಮಯದೊಳಗೆ ಅಭಿವೃದ್ಧಿಯನ್ನ ಮಾಡಬೇಕಾಗಿದೆ ಎಂದರು.

ರಾಜ್ಯ ಇಬ್ಭಾಗ ವಿಚಾರದಲ್ಲಿ ರಾಜಕೀಯ ಬೇಳೆ ಬೇಯಿಸಬಾರದು, ಈ‌ ವಿಚಾರವನ್ನಿಟ್ಟುಕೊಂಡು ಬಿ.ಎಸ್.ವೈ ರಾಜ್ಯ ಪ್ರವಾಸ ನಡೆಸಿದರೆ ಅದು ದುರ್ದೈವ ಎಂದು ಬಿಎಸ್ವೈಗೆ ಟಾಂಗ್ ಕೊಟ್ಟಿದ್ದಾರೆ.

ಉತ್ತರ ಕರ್ನಾಟಕ ಅಭಿವೃದ್ಧಿ ವಿಚಾರದಲ್ಲಿ ಸಿಎಂ ಕುಮಾರಸ್ವಾಮಿ ಬೇಧ ಮಾಡಲ್ಲ. ಉತ್ತರ ಕರ್ನಾಟಕಕ್ಕೆ ಅನ್ಯಾಯ ಆಗೋಕೆ ಬಿಡಲ್ಲ. ಸಮಗ್ರ ಕರ್ನಾಟಕದ ಅಭಿವೃದ್ಧಿ ‌ನಮ್ಮ ಧ್ಯೇಯ. ಆದರೆ ಉತ್ತರ ಕರ್ನಾಟಕ ಇನ್ನೂ ಅಭಿವೃದ್ಧಿ ಆಗಬೇಕು ಎಂಬುದು ಆ ಭಾಗದ ಜನರ ಅಪೇಕ್ಷೆ ಎಂದು ಹೇಳಿದ್ದಾರೆ.


ಸಂಬಂಧಿತ ಟ್ಯಾಗ್ಗಳು

M.B.Patil North Karnataka ಮತದಾರ ಸಮಯ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ