ಕೇಂದ್ರದ ಕ್ರಮ: ಮುಚ್ಚುವ ಭೀತಿಯಲ್ಲಿ ಗ್ರಾಮೀಣ ಬ್ಯಾಂಕುಗಳು!

Rural banks in fear of closing!

31-07-2018

ಬೆಂಗಳೂರು: ಅಕಾಲಿಕ ಮಳೆ, ಅವೈಜ್ಞಾನಿಕ ಬೆಲೆ ಪದ್ಧತಿಯಿಂದಾಗಿ ತತ್ತರಿಸಿ ಹೋಗಿರುವ ರೈತ ಸಮುದಾಯಕ್ಕೆ ಗ್ರಾಮೀಣ ಬ್ಯಾಂಕುಗಳು ಅಲ್ಪ ಪ್ರಮಾಣದಲ್ಲಿ ಆಪದ್ಭಾಂದವನಂತೆ ಇವೆ. ಈಗ, ರೈತ ಸಮುದಾಯ ಆತಂಕಕ್ಕೀಡಾಗುವ ಸುದ್ದಿಯೊಂದು ದೆಹಲಿಯಿಂದ ಹೊರ ಬಿದ್ದಿದೆ. ಪ್ರಸ್ತುತ ಇರುವ 58 ಪ್ರಾದೇಶಿಕ ಗ್ರಾಮೀಣ ಬ್ಯಾಂಕ್ ಗಳನ್ನು 38ಕ್ಕೆ ಇಳಿಸಲು ಕೇಂದ್ರ ಸರ್ಕಾರ ನಬಾರ್ಡ್ ನೊಂದಿಗೆ ಸಮಾಲೋಚಿಸಿ ಮಾರ್ಗಸೂಚಿ ಸಿದ್ಧಪಡಿಸಿದೆ. ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳ ವಿಲೀನಕ್ಕೆ ಸಂಬಂಧಿಸಿದಂತೆ ರೂಪು-ರೇಷೆ ರಚಿಸಲು ಪ್ರಾದೇಶಿಕ ಬ್ಯಾಂಕ್ ಹಾಗು ರಾಜ್ಯ ಸರ್ಕಾರಗಳ ಅಭಿಪ್ರಾಯವನ್ನು ಕೇಳಿದೆ.

ಮತ್ತೆ ಬ್ಯಾಂಕ್ ವಿಲೀನದ ಸದ್ದು: ಸ್ಟೇಟ್ ಬ್ಯಾಂಕ್ ಗ್ರೂಪ್ ನ 5 ಸಹವರ್ತಿ ಬ್ಯಾಂಕುಗಳನ್ನು ಈಗಾಗಲೇ ಭಾರತೀಯ ಸ್ಟೇಟ್ ಬ್ಯಾಂಕ್ ಜತೆ ವಿಲೀನಗೊಳಿಸಿರುವ ಕೇಂದ್ರ ಸರ್ಕಾರ ಇದೀಗ ಸಾರ್ವಜನಿಕ ಕ್ಷೇತ್ರದ ಬ್ಯಾಂಕ್ ಗಳ ವಿಲೀನದ ಸಾಧ್ಯತೆ ಬಗ್ಗೆ ಪರಿಶೀಲಿಸುವಂತೆ ಭಾರತೀಯ ರಿಸರ್ವ್ ಬ್ಯಾಂಕ್ ಗೆ ಸೂಚಿಸಿದೆ. ಆದರೆ, ಇದಕ್ಕೆ ಯಾವುದೇ ಕಾಲಮಿತಿಯನ್ನು ನಿಗದಿಪಡಿಸಿಲ್ಲ. ಬಲಾಢ್ಯ ಹಣಕಾಸು ಸಂಸ್ಥೆಗಳನ್ನು ರೂಪಿಸುವುದು ಈ ಪ್ರಕ್ರಿಯೆಯ ಹಿಂದಿರುವ ಚಿಂತನೆ.

ವಸೂಲಾಗದ ಸಾಲ: ಒಂದೆಡೆ, ಕೇಂದ್ರ ಸರ್ಕಾರ ಬಲಾಢ್ಯ ಬ್ಯಾಂಕಿಂಗ್ ವ್ಯವಸ್ಥೆ ರೂಪಿಸುವ ಚಿಂತನೆಯಲ್ಲಿದ್ದರೆ; ಮತ್ತೊಂದೆಡೆ ಸಾರ್ವಜನಿಕ ಕ್ಷೇತ್ರದ ಬಹುತೇಕ ಬ್ಯಾಂಕುಗಳು ನಷ್ಟದ ಸುಳಿಗೆ ಸಿಲುಕಿವೆ. ಉದ್ಯಮಿಗಳು ಮತ್ತು ಬ್ಯಾಂಕ್ ಮುಖ್ಯಸ್ಥರ ಕಣ್ಣಾ-ಮುಚ್ಚಾಲೆ ಆಟದಿಂದ ವಸೂಲಾಗದ ಸಾಲದ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.

2018ರ ಮಾರ್ಚ್ ಅಂತ್ಯಕ್ಕೆ ಸಾಲಗಾರರ ಸಾಲದ ಪ್ರಮಾಣ ವಸೂಲಾಗದ ಸಾಲದ ಒಟ್ಟಾರೆ ಶೇಕಡಾ 90 ರಷ್ಟಾಗಿತ್ತು. ಅಂದರೆ, ಸುಮಾರು 8.6 ಲಕ್ಷ ಕೋಟಿ ರೂಪಾಯಿಗಳು ಬ್ಯಾಂಕಿಂಗ್ ಕ್ಷೇತ್ರದ ಒಟ್ಟಾರೆ ವಸೂಲಾಗದ ಸಾಲದ ಮೊತ್ತ 9. 62 ಲಕ್ಷ ಕೋಟಿ ರೂಪಾಯಿ. ಇದು 2013-14 ಹಣಕಾಸು ವರ್ಷದ ಅಂತ್ಯದ ವೇಳೆಗೆ 2.15 ಲಕ್ಷ ಕೋಟಿ ರೂಪಾಯಿ ಆಗಿತ್ತು.

2018ರ ಮಾರ್ಚ್ 31ರ ವೇಳೆಗೆ 10 ಕೋಟಿ ರುಪಾಯಿಗೂ ಅಧಿಕ ಬಾಕಿ ಉಳಿಸಿಕೊಂಡವರ ಒಟ್ಟು ಸಂಖ್ಯೆ 4,387. ಈ ಮಹನೀಯರು ಹಿಂದಿರುಗಿಸಬೇಕಾದ ಒಟ್ಟು ಸಾಲದ ಮೊತ್ತ 3,59, 532 ಕೋಟಿ ರೂಪಾಯಿಗಳು. ಸಣ್ಣ ಪುಟ್ಟ ಸಾಲ ಪಡೆದವರ ಆಸ್ತಿ ಜಪ್ತಿ ಮಾಡಿ ಬ್ಯಾಂಕ್‌ಗಳು ಮಾನ ಹರಾಜು ಹಾಕುತ್ತವೆ. ಆದರೆ, ಹತ್ತು ಕೋಟಿಗೂ ಹೆಚ್ಚು ಸಾಲ ಮಾಡಿದ ವ್ಯಕ್ತಿ ಅಥವಾ ಸಂಸ್ಥೆಗಳ ವಿವರ ಬಹಿರಂಗ ಪಡಿಸದ ನಿಯಮಾವಳಿಯನ್ನು ಆರ್.ಬಿ.ಐ ರೂಪಿಸಿದೆ.

ಉದ್ಯಮಗಳ ಸಾಲ ಮನ್ನಾ ಮಾಡುವಾಗ ಇಲ್ಲದ ಕಾನೂನು ಮತ್ತು ದೇಶದ ಆರ್ಥಿಕತೆಯ ಚಿಂತೆ ರೈತರು, ಕೈಮಗ್ಗ ನೇಕಾರರು ಮತ್ತು ಸಣ್ಣ ಮೀನುಗಾರರ ಸಾಲ ಮನ್ನಾ ವಿಷಯ ಪ್ರಸ್ತಾಪವಾಗುತ್ತಿದ್ದಂತೆ ಮುನ್ನಲೆಗೆ ಬರುತ್ತವೆ. ಇವರ ಸಾಲ ಮನ್ನಾದಿಂದ ದೇಶದ ಆರ್ಥಿಕ ಬೆಳವಣಿಗೆಯ ಮೇಲೆ ದೀರ್ಘಕಾಲೀನ ದುಷ್ಪರಿಣಾಮಗಳಾಗುತ್ತವೆ ಎನ್ನುವ ಹುಯಿಲನ್ನು ಬಹುತೇಕ ಉದ್ಯಮಿಗಳ ಕೈಯಲ್ಲೇ ಇರುವ ಮಾಧ್ಯಮಗಳು ಎಬ್ಬಿಸುತ್ತವೆ.

ಚೇತರಿಕೆಯತ್ತ ಭಾರತದ ಆರ್ಥಿಕತೆ: 2019ರ ಸಾರ್ವತ್ರಿಕ ಚುನಾವಣೆಯ ಹಿನ್ನೆಲೆಯಿದ್ದರೂ ಈ ವರ್ಷವು ಭಾರತದ ಆರ್ಥಿಕತೆ ಅತಿ ವೇಗವಾಗಿಯೇ ಬೆಳವಣಿಗೆ ತೋರುತ್ತಿದೆ ಎನ್ನುವುದು ಅರ್ಥಿಕ ಪರಿಣತರ ಅಭಿಪ್ರಾಯ. ಆದರೆ, ಈ ವೇಗದ ಬೆಳವಣಿಗೆಗೆ ಏರುತ್ತಿರುವ ತೈಲ ಬೆಲೆಗಳು ಆತಂಕ ಒಡ್ಡುತ್ತಿವೆ.

ಭಾರತದ್ದು ಎರಡು ಟ್ರಿಲಿಯನ್ ಡಾಲರ್ ಗೂ ಮೀರಿದ ಆರ್ಥಿಕತೆ. ಸದ್ಯ ವಿಶ್ವದ ಆರ್ಥಿಕತೆಯಲ್ಲಿ ಆರನೇ ಸ್ಥಾನ ದಲ್ಲಿರುವ ಫ್ರಾನ್ಸ್ ಅನ್ನು ಹಿಂದಿಕ್ಕುವ ಯತ್ನದಲ್ಲಿ ಭಾರತ ಇದೆ. 2019ರ ಮಾರ್ಚ್ ವೇಳೆಗೆ ಶೇಕಡಾ 7.4ರ ಬೆಳವಣಿಗೆ ಕಾಣುವ ನಿರೀಕ್ಷೆ ಇದೆ. ಇದು 2020ರ ವೇಳೆಗೆ ಶೇಕಡಾ 7.6 ಕ್ಕೆ ಏರಿಕೆಯಾಗುವ ಸಾಧ್ಯತೆಯೂ ಇದೆ.

ಅಧಿಕ ಬಡ್ಡಿದರ, ಏರುತ್ತಿರುವ ತೈಲ ಬೆಲೆಗಳು, ವಿನಿಮಯ ದರದ ಅನಿಶ್ಚಿತತೆ, 2019ರ ಸಾರ್ವತ್ರಿಕ ಚುನಾವಣೆಯ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ಮೇಲೆ ಹೆಚ್ಚುತ್ತಿರುವ ರಾಜಕೀಯ ಒತ್ತಡ-ಈ ಎಲ್ಲ ಅಂಶಗಳು ಭಾರತದ ಆರ್ಥಿಕತೆಯ ಬೆಳವಣಿಗೆಯ ವೇಗಕ್ಕೆ ಸವಾಲಾಗಿರುವ ಅಂಶಗಳು. 

ತೈಲ ಬೆಲೆಯ ದಾಖಲೆ ಪ್ರಮಾಣದ ಹೆಚ್ಚಳ ಭಾರತದ ಆರ್ಥಿಕತೆಗೆ ಪ್ರಮುಖ ಅಡ್ಡಿ. ತೈಲ ಬೆಲೆ ಪ್ರತಿ ಬ್ಯಾರೆಲ್ ಗೆ ಹತ್ತು ಡಾಲರ್ ಏರಿಕೆಯಾದಂತೆ ಭಾರತದ ಆರ್ಥಿಕ ಬೆಳವಣಿಗೆಯಲ್ಲಿ 30-40 ಬೇಸಿಸ್ ಪಾಯಿಂಟ್‌ಗಳ ಇಳಿಕೆ ಕಾಣುತ್ತದೆ. ಡಾಲರ್ ವಿರುದ್ಧ ರೂಪಾಯಿಯ ಅಪಮೌಲ್ಯ ಆರ್ಥಿಕ ಬೆಳವಣಿಗೆಯ ಪ್ರಮುಖ ಸವಾಲುಗಳಲ್ಲಿ ಒಂದು.  2016ರ ರೂಪಾಯಿ ಅಪಮೌಲ್ಯ ಪ್ರಕ್ರಿಯೆ ಹಾಗು ಕಳೆದ ಜುಲೈ ನಲ್ಲಿ ಜಾರಿಗೆ ಬಂದ ಸರಕು ಮತ್ತು ಸೇವಾ ತೆರಿಗೆ-ಜಿಎಸ್ ಟಿ ಯಿಂದ ಕುಸಿತ ಕಂಡಿದ್ದ ಭಾರತದ ಆರ್ಥಿಕತೆ ಈಗ ಚೇತರಿಕೆಯ ಹಾದಿಯತ್ತ ನಡೆದಿದೆ.

'ಸ್ವಿಸ್ ಹೂಡಿಕೆ ಇಳಿಕೆ' : ಕಪ್ಪುಹಣ ಎಂದ ಕೂಡಲೆ ಸಾಮಾನ್ಯ ಭಾರತೀಯನ ಮನಸ್ಸಿನಲ್ಲಿ ಮೂಡುವುದು ಸ್ವಿಸ್ ಬ್ಯಾಂಕ್ ಗಳು. ಭಾರತದ ರಾಜಕಾರಣಿಗಳು ಮತ್ತು ಉದ್ಯಮಿಗಳು ಕೊಳ್ಳೆಹೊಡೆದಿದ್ದನ್ನ ರಹಸ್ಯವಾಗಿ ಸ್ವಿಸ್ ಬ್ಯಾಂಕ್ ನಲ್ಲಿ ಇಡುವುದು ವಾಡಿಕೆ. ಆದರೆ, ಕಪ್ಪುಹಣವನ್ನ ಭಾರತಕ್ಕೆ ವಾಪಸ್ ತರುವಂತೆ ರೂಪುಗೊಂಡಿರುವ ಜನಾಭಿಪ್ರಾಯದ ಹಿನ್ನೆಲೆಯಲ್ಲಿ ಪ್ರಸ್ತುತ ಭಾರತ ಹಾಗು ಫ್ರಾನ್ಸ್ ಸರ್ಕಾರಗಳ ನಡುವೆ ಏರ್ಪಟ್ಟಿರುವ ಒಪ್ಪಂದದಂತೆ ಸ್ವಿಸ್ ಬ್ಯಾಂಕುಗಳು ತಮ್ಮಲ್ಲಿ ಭಾರತೀಯರು ಹೂಡಿರುವ ಹಣದ ವಿವರವನ್ನು ಬಹಿರಂಗಪಡಿಸಬೇಕಿದೆ. ಈ ಕಾರಣದಿಂದಾಗಿ ಸ್ವಿಸ್ ಬ್ಯಾಂಕುಗಳಲ್ಲಿ ಹಣ ಹೂಡಿಕೆ ಪ್ರಮಾಣ ಗಣನೀಯವಾಗಿ ಕುಸಿಯುತ್ತಿದೆ. 2017ರಲ್ಲಿ ಈ ಇಳಿಕೆಯ ಪ್ರಮಾಣ ಶೇಕಡಾ 34.5. ರಷ್ಟು. 2014ರಲ್ಲಿ ಕೇಂದ್ರದಲ್ಲಿ ನರೇಂದ್ರ ಮೋದಿ ನೇತ್ರತ್ವದ ಎನ್ ಡಿಎ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಒಟ್ಟಾರೆ ಕುಸಿತ ಶೇಕಡಾ 80ರಷ್ಟು ಆಗಿದೆ.

ಷೇರುಪೇಟೆ: ಭಾರತದ ಷೇರು ಪೇಟೆಗೆ ಇದು ಸುಗ್ಗಿಯ ಕಾಲ. ಏರಿಕೆಯ ಹಳೆಯ ದಾಖಲೆಗಳು ಪತನಗೊಂಡು ಹೊಸದಾಖಲೆಗಳು ನಿರ್ಮಾಣವಾಗುತ್ತಿವೆ. ಸೋಮವಾರ ಷೇರುಪೇಟೆ ಸಾರ್ವಕಾಲಿಕ ದಾಖಲೆಯ ಎತ್ತರಕ್ಕೆ ತಲುಪಿದೆ. ಬಿಎಸ್ಸಿ ಸೆನ್ಸೆಕ್ಸ್ 157 ಅಂಶಗಳ ಏರಿಕೆ ಯೊಂದಿಗೆ 37,494 ಅಂಶಕ್ಕೆ, ಎನ್ ಎಸ್ಸಿ ನಿಫ್ಟಿ 41 ಅಂಶಗಳ ಏರಿಕೆಯೊಂದಿಗೆ 11,319 ಅಂಶಕ್ಕೆ ತಲುಪಿವೆ.

ಐಸಿಐಸಿಐ ಬ್ಯಾಂಕ್,  ರಿಲಯನ್ಸ್ ಇಂಡಸ್ಟ್ರೀಸ್, ಭಾರತೀಯ ಸ್ಟೇಟ್ ಬ್ಯಾಂಕ್, ಆಕ್ಸಿಸ್ ಬ್ಯಾಂಕ್, ಎಚ್ ಯು ಎಲ್,  ಷೇರುಪೇಟೆ ಏರಿಕೆಗೆ ಪ್ರಮುಖ ಕೊಡುಗೆ ನೀಡಿದವು. ಷೇರುಪೇಟೆಯ ಸಾರ್ವಕಾಲಿಕ ದಾಖಲೆ ಏರಿಕೆಯ ನಡುವೆಯೂ ರಾಷ್ಟ್ರೀಯ ಷೇರುಪೇಟೆಯಲ್ಲಿ 50 ಕಂಪನಿಯ ಷೇರುಗಳು 52 ವಾರಗಳಲ್ಲೇ ಅತ್ಯಂತ ಕೆಳಕ್ಕೆಬಿದ್ದವು. ಅವುಗಳೆಂದರೆ ಬಿ ವೈ ಕೆ ಇ ಹಾಸ್ಪಿಟಾಲಿಟಿ,  ಗ್ಯಾಮನ್ ಇಂಡಿಯಾ, ಜಾಗರಣ ಪ್ರಕಾಶನ್, ಸ್ಕಿಪ್ಪರ್, ಎಸ್ ಎಚ್ ಕೇಲ್ಕರ್ ಅಂಡ್ ಕಂಪನಿಗಳು.

ಭಾರತೀಯ ರಿಸರ್ವ್ ಬ್ಯಾಂಕ್ ನಾಳೆ ಬಡ್ಡಿದರಗಳ ಪರಾಮರ್ಶೆ ಸಂಬಂಧ ಸಭೆ ಕರೆದಿದೆ. ಚಿಲ್ಲರೆ ಮತ್ತು ಸಗಟು ಹಣದುಬ್ಬರ ಗರಿಷ್ಠ ಮಟ್ಟದಲ್ಲಿರುವುದರಿಂದ ಆರ್ಬಿಐನ ನಿರ್ಧಾರಗಳು ಷೇರುಪೇಟೆ ಮೇಲೆ ಪರಿಣಾಮ ಬೀರಲಿವೆ. ಈ ಹಿನ್ನೆಲೆಯಲ್ಲಿ ಹೂಡಿಕೆದಾರರು ನಾಳೆಯವರೆಗೂ ಕಾಯುವುದು ಒಳ್ಳೆಯದು.



ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ