ಸಿಎಂ ಅಧ್ಯಕ್ಷತೆಯ ಸಭೆಯಲ್ಲಿ ಚರ್ಚಿಸಲಾದ ವಿಚಾರಗಳು

CM kumaraswamy meeting with higher officials at vidhana soudha

30-07-2018

ಬೆಂಗಳೂರು: ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರ ಅಧ್ಯಕ್ಷತೆಯಲ್ಲಿ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಸಭೆ ನಡೆದಿದ್ದು, ಸಭೆಯಲ್ಲಿ ಚರ್ಚಿಸಲಾದ ಪ್ರಮುಖ ವಿಷಯಗಳು ಯಾವುವೆಂದರೆ.

1. ವಿವಿಧ ಜಿಲ್ಲೆಗಳ ಮಳೆ, ಬಿತ್ತನೆ ಪ್ರಗತಿ ಮಾಹಿತಿ ಪಡೆದ ಮುಖ್ಯಮಂತ್ರಿಗಳು ಪರಿಹಾರ ಕ್ರಮಗಳನ್ನು ಎನ್‍ಡಿಆರ್‍ಎಫ್ ಮಾರ್ಗಸೂಚಿಗಳನ್ವಯ ಕೈಗೊಳ್ಳುವಂತೆ ಸೂಚಿಸಿದರು.

2. ವಿವಿಧ ಜಿಲ್ಲೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆಗೆ ಟ್ಯಾಂಕರ್ ಮೂಲಕ ಪೂರೈಕೆಗೆ ಪರ್ಯಾಯ ಯೋಜನೆಯಿದೆಯೇ ಎಂದು ಪರಿಶೀಲಿಸಿ, ಪ್ರಸ್ತಾವನೆ ಸಲ್ಲಿಸುವಂತೆ ನಿರ್ದೇಶನ ನೀಡಿದರು.

3. ರಾಜ್ಯದಲ್ಲಿ ಮಳೆ ಕೊರತೆ ಆಗಿರುವ 12 ಜಿಲ್ಲೆಗಳನ್ನು ಗುರುತಿಸಲಾಗಿದ್ದು, ಅಲ್ಲಿ ಬರ ಪರಿಸ್ಥಿತಿ ಎದುರಾದರೆ ಕೈಗೊಳ್ಳಬೇಕಾದ ಪರಿಹಾರ ಕ್ರಮಗಳಿಗೆ ಯೋಜನೆ ರೂಪಿಸುವಂತೆ ಸೂಚಿಸಿದರು.

4. ರೈತರಿಗೆ ಸರ್ಕಾರ ಇಷ್ಟು ಬೆಂಬಲ ನೀಡುತ್ತಿದ್ದರೂ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಕ್ಕೆ ಕಾರಣ ಏನು? ಎಂಬ ಬಗ್ಗೆ ಮಾಹಿತಿ ನೀಡುವಂತೆ ಮುಖ್ಯಮಂತ್ರಿಯವರು ತಿಳಿಸಿದರು.

5. ಆತ್ಮಹತ್ಯೆ ಮಾಡಿಕೊಂಡ ರೈತನ ಕುಟುಂಬಕ್ಕೆ ಪರಿಹಾರ ನೀಡುವಾಗ ವಿಧಿ ವಿಜ್ಞಾನ ಪ್ರಯೋಗಾಲಯ ವರದಿ ವಿಳಂಬವಾಗುತ್ತಿದ್ದಲ್ಲಿ ಕೃಷಿ ಇಲಾಖೆ ಕಾರ್ಯದರ್ಶಿಗಳ ಮುಖಾಂತರ ಶೀಘ್ರವೇ ವರದಿ ತರಿಸಿಕೊಳ್ಳಲು ಕ್ರಮ ಕೈಗೊಳ್ಳಲು ಅವಕಾಶವಿದೆ. ಆದ್ದರಿಂದ ರೈತರ ಆತ್ಮಹತ್ಯೆ ಕುರಿತು ಉಪವಿಭಾಗಾಧಿಕಾರಿಗಳ ಅಧ್ಯಕ್ಷತೆಯ ಸಮಿತಿ ತೀರ್ಮಾನ ಕೈಗೊಂಡು, ವಿಧಿ ವಿಜ್ಞಾನ ಪ್ರಯೋಗಾಲಯದಿಂದ ಶೀಘ್ರವೇ ವರದಿ ತರಿಸಿಕೊಂಡು ಪರಿಹಾರ ವಿತರಿಸಲು ಸೂಚಿಸಿದರು.

6. ರಾಜ್ಯದಲ್ಲಿ ವಿವಿಧ ಸಾಮಾಜಿಕ ಭದ್ರತಾ ಯೋಜನೆಗಳಡಿ 67ಲಕ್ಷಕ್ಕೂ ಹೆಚ್ಚು ಜನರು ಪಿಂಚಣಿ ಪಡೆಯುತ್ತಿದ್ದು, ಈ ಎಲ್ಲ ಪಿಂಚಣಿ ಯೋಜನೆಗಳಡಿ ನೇರವಾಗಿ ಫಲಾನುಭವಿಗಳ ಖಾತೆಗೆ ಪಿಂಚಣಿ ಜಮೆ ಮಾಡಲು ಇರುವ ತಾಂತ್ರಿಕ ಅಡಚಣೆಗಳನ್ನು ಕೂಡಲೇ ನಿವಾರಿಸಿ, ಆಧಾರ್ ಲಿಂಕ್ ಮಾಡಿ, 3 ತಿಂಗಳೊಳಗೆ ಸಮಸ್ಯೆ ಬಗೆಹರಿಸುವಂತೆ ಸೂಚಿಸಿದರು. ಇದನ್ನು ಜಿಲ್ಲಾಧಿಕಾರಿಗಳು ಪ್ರತಿ ವಾರ ಪ್ರಗತಿ ಪರಿಶೀಲನೆ ನಡೆಸುವಂತೆ ಸೂಚಿಸಿದರು.

7. ಪರಿಶಿಷ್ಟ ಜಾತಿ/ ಪಂಗಡದವರಿಗೆ ಎಲ್ಲ ಗ್ರಾಮಗಳಲ್ಲಿ ಆದ್ಯತೆಯ ಮೇರೆಗೆ ಸ್ಮಶಾನ ಸೌಲಭ್ಯ ಕಲ್ಪಿಸಿಕೊಡಲು ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

8. 94ಸಿ ಮತ್ತು 94 ಸಿಸಿ ಪ್ರಕರಣಗಳ ಹಕ್ಕು ಪತ್ರಗಳೊಂದಿಗೆ ಖಾತಾವನ್ನೂ ವಿತರಿಸುವುದು ಕಡ್ಡಾಯ. ಮತ್ತೊಮ್ಮೆ ಜನರು ಸರ್ಕಾರಿ ಕಚೇರಿಗಳಿಗೆ ಇದಕ್ಕಾಗಿ ಅಲೆದಾಡುವಂತಾಗಬಾರದು ಎಂದು ನಿರ್ದೇಶನ ನೀಡಿದರು.

9. ಅರಣ್ಯ ಹಕ್ಕು ಕಾಯಿದೆಯಡಿ ಅರ್ಜಿಗಳ ವಿಲೇವಾರಿ ತ್ವರಿತಗೊಳಿಸುವ ನಿಟ್ಟಿನಲ್ಲಿ ಕಾಯಿದೆ ತಿದ್ದುಪಡಿಗೆ ಪ್ರಸ್ತಾವನೆ ಸಲ್ಲಿಸುವಂತೆ ಸಮಾಜ ಕಲ್ಯಾಣ ಇಲಾಖೆಗೆ ಸೂಚಿಸಿದರು.

10. ಪೋಡಿ ಪ್ರಕರಣಗಳ ವಿಲೇವಾರಿಗೆ ಸರ್ವೇಯರುಗಳ ಕೊರತೆ ಕುರಿತು ಚರ್ಚಿಸಲಾಯಿತು.

11. ಬೆಳೆ ಸಮೀಕ್ಷೆ ಕುರಿತು ಮೊಬೈಲ್ ಆಪ್‍ನಲ್ಲಿ ರೈತರೇ ತಾವು ಬೆಳೆದ ಮಾಹಿತಿಯನ್ನು ಅಪ್‍ಲೋಡ್ ಮಾಡುವುದನ್ನು ಪ್ರೋತ್ಸಾಹಿಸುವಂತೆ ಸೂಚಿಸಿದರು.

12. ಮಂಡ್ಯ, ರಾಮನಗರ, ಬೆಳಗಾವಿ ಜಿಲ್ಲೆಗಳಲ್ಲಿ ಕಂದಾಯ ಅದಾಲತ್‍ನಲ್ಲಿ ಸ್ವೀಕರಿಸಲಾಗಿರುವ ಅರ್ಜಿಗಳ ಪೈಕಿ, ವಿಲೇವಾರಿ ಆಗದೆ ಬಾಕಿ ಇರುವ ಅರ್ಜಿ ಸಂಖ್ಯೆ ಹೆಚ್ಚಿದ್ದು, ಒಂದು ತಿಂಗಳೊಳಗೆ ಅರ್ಜಿಗಳನ್ನು ವಿಲೇವಾರಿ ಮಾಡಲು ಸೂಚಿಸಿದರು.

13. ಕೊಪ್ಪಳಜಿಲ್ಲೆಯಲ್ಲಿ 2 ಬಾರಿ ಪಿಂಚಣಿ ಅದಾಲತ್ ನಡೆಸಿದ್ದರೂ ಯಾವುದೇ ಅರ್ಜಿ ಸ್ವೀಕಾರವಾಗಿರುವುದಿಲ್ಲ ಎಂಬ ಬಗ್ಗೆ ಮಾಹಿತಿ ಪಡೆದ ಮುಖ್ಯಮಂತ್ರಿಗಳು, ಚಾಮರಾಜನಗರ, ಬೆಂಗಳೂರು ನಗರ, ಬೆಳಗಾವಿ ಜಿಲ್ಲೆಗಳಲ್ಲಿ ಬಾಕಿ ಇರುವ ಅರ್ಜಿಗಳನ್ನು ಶೀಘ್ರವಾಗಿ ವಿಲೇವಾರಿ ಮಾಡಲು ಸೂಚಿಸಿದರು.

14. ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗಳ ವಿದ್ಯಾರ್ಥಿನಿಲಯಗಳ ನಿವೇಶನಗಳ ಮಂಜೂರಾತಿಗೆ ಸಂಬಂಧಿಸಿದಂತೆ, ಬಾಕಿ ಇರುವ ಪ್ರಕರಣಗಳನ್ನು ಶೀಘ್ರವಾಗಿ ವಿಲೇವಾರಿ ಮಾಡುವಂತೆ ಸೂಚಿಸಿದರು. ಈ ಕೆಲಸವನ್ನು ಆದ್ಯತೆ ಮೇರೆಗೆ ಕೈಗೊಳ್ಳುವಂತೆ ತಿಳಿಸಲಾಯಿತು.

15. ಕಂದಾಯ ಗ್ರಾಮಗಳ ರಚನೆಯ ಪ್ರಕ್ರಿಯೆಯನ್ನು ಆರು ತಿಂಗಳಲ್ಲಿ ಬಗೆಹರಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಯಿತು.

16. ಕರ್ನಾಟಕ ಭೂ ಸುಧಾರಣೆ ಕಾಯ್ದೆಯ  ಕಲಂ 79ಎ, 79ಬಿ ಗಳಿಗೆ ಸುಧಾರಣೆ ಅಥವಾ ಬದಲಾಯಿಸುವ ಅಗತ್ಯ ಇದೆ. ಅನೇಕ ಸಂದರ್ಭದಲ್ಲಿ ಇವು ನಿಜವಾದ ಭೂ ಮಾಲೀಕರಿಗೆ ತೊಂದರೆಯುಂಟು ಮಾಡುವ ಸಂಭವವಿದೆ. ಈ ಬಗ್ಗೆ ಚರ್ಚಿಸಿ ತೀರ್ಮಾನಿಸಬಹುದಾಗಿದೆ ಎಂದರು.

17. 14 ತಾಲ್ಲೂಕುಗಳಲ್ಲಿ ಮಿನಿ ವಿಧಾನಸೌಧ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲು ಸೂಚಿಸಿದರು. ಈ ಸಂಬಂಧ ವಿವರಗಳನ್ನು ಪಡೆಯುವಂತೆ ತಿಳಿಸಿದರು.

18. ಮುಖ್ಯಮಂತ್ರಿ ಗ್ರಾಮ ವಿಕಾಸ ಯೋಜನೆಯಡಿ ತ್ವರಿತವಾಗಿ ಪ್ರಗತಿ ಸಾಧಿಸಬೇಕು ಎಂದು ಸೂಚಿಸಿದರು. ನಿಗದಿಪಡಿಸಿರುವ ಅನುದಾನದ ಪೈಕಿ 30.22 ಕೋಟಿ ರೂ.ಗಳ ಅನುದಾನ ಬಿಡುಗಡೆ ಮಾಡಲಾಗಿದೆ.

19. ಸ್ವಚ್ಛ ಭಾರತ ಮಿಷನ್ ಯೋಜನೆಯಡಿ ರಾಜ್ಯವು ಬಯಲು ಬಹಿರ್ದೆಸೆ ಮುಕ್ತ ಎಂದು ಘೋಷಿಸಲು 10 ಜಿಲ್ಲೆಗಳು ಬಾಕಿ ಉಳಿದಿವೆ. ಅಕ್ಟೋಬರ್ 02ರೊಳಗೆ ಎಲ್ಲ ಜಿಲ್ಲೆಗಳಲ್ಲಿ ನಿಗದಿತ ಶೌಚಾಲಯ ನಿರ್ಮಾಣ ಕಾರ್ಯವನ್ನು ಮುಕ್ತಾಯಗೊಳಿಸಬೇಕೆಂದು ಸೂಚಿಸಿದರು. ಶೌಚಾಲಯಗಳ ಬಳಕೆಗೂ ಉತ್ತೇಜನ ನೀಡಲು ತಿಳಿಸಿದರು.

20. ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಶಾಲಾ ಕಾಂಪೌಂಡ್, ಅಂಗನವಾಡಿ ಕಟ್ಟಡ ಮುಂತಾದ ಕೆಲಸಗಳನ್ನು ಕೈಗೊಳ್ಳಲು ಅವಕಾಶವಿದ್ದು, ಮಾನವ ದಿನಗಳನ್ನು ಸೃಜಿಸಲು ಸೂಚಿಸಿದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ