ಯಾವುದೇ ಕಾರಣಕ್ಕೂ ರಾಜ್ಯ ಇಬ್ಭಾಗವಾಗಲು ಬಿಡುವುದಿಲ್ಲ: ಬಿಎಸ್ವೈ

B.S.Yeddyurappa reaction on uttar karnataka issue!

30-07-2018

ಬೆಂಗಳೂರು: ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ರಾಜ್ಯವನ್ನು ಪ್ರತ್ಯೇಕಿಸುವ ಮೂಲಕ ಜೆಡಿಎಸ್ ಬಲಪಡಿಸುವ ಹುನ್ನಾರ ನಡೆಸಿದ್ದಾರೆ. ಇದನ್ನು ರಾಜ್ಯದ ಜನತೆ ಒಪ್ಪುವುದಿಲ್ಲ. ಕಾಂಗ್ರೆಸ್ ಪಕ್ಷ ವೀರಶೈವ-ಲಿಂಗಾಯತರನ್ನು ಒಡೆಯಲು ಹೋದರೆ, ಜೆಡಿಎಸ್ ರಾಜ್ಯವನ್ನು ಒಡೆಯಲು ಹೊರಟಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ವಾಗ್ದಾಳಿ ನಡೆಸಿದ್ದಾರೆ.

ಅಖಂಡ ಕರ್ನಾಟಕ ನಿರ್ಮಾಣವಾಗಲು ಹಿರಿಯರೆಲ್ಲ ಸೇರಿ ರಕ್ತ ಹರಿಸಿದ್ದಾರೆ. ಆದರೆ ಮುಖ್ಯಮಂತ್ರಿ ಕುಮಾರಸ್ವಾಮಿಯವರ ಇತ್ತೀಚಿನ ಹೇಳಿಕೆಗಳನ್ನು ಗಮನಿಸಿದರೆ ಏಕೀಕೃತ ಕರ್ನಾಟಕ ಒಡೆಯಲು ಷಡ್ಯಂತ್ರ ನಡೆಸಿದಂತಿದೆ. ರಾಜ್ಯದ ಜನತೆ 104 ಶಾಸಕರನ್ನು ಚುನಾಯಿಸುವ ಮೂಲಕ ಬಿಜೆಪಿಗೆ ಬೆಂಬಲ ಸೂಚಿಸಿದರೂ ಸಹ 37 ಶಾಸಕರನ್ನೊಳಗೊಂಡ ಜೆಡಿಎಸ್, 79 ಶಾಸಕರನ್ನೊಳಗೊಂಡ ಕಾಂಗ್ರೆಸ್ ಪಕ್ಷದವರು ಅನೈತಿಕ ಸಂಬಂಧ ಬೆಳಸುವ ಮೂಲಕ ಸರ್ಕಾರ ರಚಿಸಿ ಜನತೆಗೆ ಮೋಸ ಮಾಡಿದ್ದಾರೆ ಎಂದು ಪತ್ರಿಕಾ ಪ್ರಕಟಣೆ ಮೂಲಕ ಕಿಡಿಕಾರಿದ್ದಾರೆ.

ಉತ್ತರ ಕರ್ನಾಟಕದ ಜನತೆಯನ್ನು ಸವತಿ ಮಕ್ಕಳಂತೆ ಕಾಣುತ್ತಿರುವ ಕುಮಾರಸ್ವಾಮಿಯವರು, ನಿಮ್ಮ ಸಾಲಮನ್ನಾ ಮಾಡಲು, ನೀವೇನು ನನಗೆ ವೋಟು ಹಾಕಿದ್ದೀರಾ? ವೋಟು ಹಾಕುವಾಗ ನನ್ನ ನೆನಪಾಗಲಿಲ್ಲವೆ ಎಂದು ಹೇಳುವ ಮೂಲಕ ಸಂವಿಧಾನಕ್ಕೆ ಅಪಚಾರ ಎಸಗಿದ್ದಾರೆ ಹಾಗೂ ದುರಹಂಕಾರದ ಮಾತುಗಳನ್ನಾಡಿದ್ದಾರೆ. ಹಿಂದೆಂದು ಯಾವುದೇ ಮುಖ್ಯಮಂತ್ರಿಗಳು ಈ ರೀತಿಯ ಹೇಳಿಕೆ ನೀಡಿರಲಿಲ್ಲ. ಬೆಂಗಳೂರಿನ ಹಣವನ್ನು ಉತ್ತರ ಕರ್ನಾಟಕದ ಅಭಿವೃದ್ಧಿಗೆ ನೀಡುತ್ತೇನೆ ಎನ್ನುವ ಹೇಳಿಕೆ ಮೂಲಕ ಮುಖ್ಯಮಂತ್ರಿಗಳು ಮನೆಯನ್ನು ಒಡೆಯುವ ಸಂಚಿಗೆ ಕೈ ಹಾಕಿದ್ದಾರೆ. ಇದಕ್ಕೆ ಬೆಂಬಲ ಸೂಚಿಸುತ್ತಿರುವ ಕಾಂಗ್ರೆಸ್ ನಾಯಕರ ಮೌನ ಹಲವಾರು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ ಎಂದಿದ್ದಾರೆ.

ಅಲ್ಲದೆ ದೇವೇಗೌಡರು ರಾಜ್ಯವನ್ನು ಪ್ರತ್ಯೇಕಿಸುವ ಮೂಲಕ ಜೆಡಿಎಸ್ ಬಲಪಡಿಸುವ ಹುನ್ನಾರ ನಡೆಸಿದ್ದಾರೆ. ಇದನ್ನು ರಾಜ್ಯದ ಜನತೆ ಒಪ್ಪುವುದಿಲ್ಲ. ಈ ಹಿಂದೆ ವೀರಶೈವ-ಲಿಂಗಾಯತರನ್ನು ಪ್ರತ್ಯೇಕಿಸುವ ಹುನ್ನಾರಕ್ಕೆ ಕಾಂಗ್ರೆಸ್ ಕೈಹಾಕಿತ್ತು. ಜೆಡಿಎಸ್ ಸಹ ಇದೇ ಹಾದಿಯಲ್ಲಿದ್ದು, ಜನತೆ ಸರಿಯಾಗಿ ಬುದ್ಧಿ ಕಲಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ನಾಳೆ ಬೆಳಗಾವಿಯ ಸುವರ್ಣಸೌಧದ ಮುಂದೆ ಪ್ರತ್ಯೇಕ ಕರ್ನಾಟಕ ರಾಜ್ಯ ಹೋರಾಟದಲ್ಲಿ ಭಾಗವಹಿಸಲಿರುವ ವಿವಿಧ ಮಠಾಧೀಶರು ಹಾಗೂ ಇತರ ಹೋರಾಟಗಾರರ ಮನವೊಲಿಸಲು ನಾಳೆ ನಾನು ಬೆಳಗಾವಿಗೆ ತೆರಳುತ್ತಿದ್ದೇನೆ. ಏಕೀಕೃತ ಕರ್ನಾಟಕದ ಹೋರಾಟಕ್ಕೆ ಬದ್ಧವಾಗಲು ಸ್ವಾಮೀಜಿಗಳನ್ನು ಪ್ರಾರ್ಥನೆ ಮಾಡುವವನಿದ್ದೇನೆ ಎಂದಿದ್ದಾರೆ.

ಮುಖ್ಯಮಂತ್ರಿಗಳ ಹೇಳಿಕೆಗಳಿಂದ ಉತ್ತರ ಕರ್ನಾಟಕದ ಜನತೆಗೆ ನೋವಾಗಿದೆ. ಇವರ ಹೇಳಿಕೆಗಳ ಲಾಭ ಪಡೆಯಲು ಹಲವರು ಪ್ರಯತ್ನಿಸುತ್ತಿದ್ದು, ರಾಜ್ಯವನ್ನು ಒಡೆಯವ ಹುನ್ನಾರ ನಡೆಸುತ್ತಿದ್ದಾರೆ. ಯಾವುದೇ ಕಾರಣಕ್ಕೂ ರಾಜ್ಯವನ್ನು ಇಬ್ಭಾಗವಾಗಲು ಬಿಜೆಪಿ ಅವಕಾಶ ನೀಡುವುದಿಲ್ಲ ಎಂದು ಪತ್ರಿಕಾ ಹೇಳಿಕೆ ಮೂಲಕ ತಮ್ಮ ಪಕ್ಷದ ನಿಲುವನ್ನು ಸ್ಪಷ್ಟಪಡಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

h.d.deve gowda B.S.Yeddyurappa ವೀರಶೈವ ಲಿಂಗಾಯತ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ