ಎಲಿವೇಟೆಡ್ ಕಾರಿಡಾರ್ ಯೋಜನೆಗೆ ವಿರೋಧ!

Opposition to the elevated corridor in bengaluru!

30-07-2018

ಬೆಂಗಳೂರು: ನಗರದಲ್ಲಿ ಅನುಷ್ಠಾನಗೊಳಿಸಲು ನಿರ್ಧರಿಸಿರುವ 15,825 ಕೋಟಿ ರೂ ವೆಚ್ಚದ ಎಲಿವೇಟೆಡ್ ಕಾರಿಡಾರ್ ಯೋಜನೆಗೆ ಸಾಮಾಜಿಕ ಜಾಲತಾಣಗಳಲ್ಲಿ ಯೋಜನೆಗೆ ಭಾರೀ ವಿರೋಧ ವ್ಯಕ್ತವಾಗಿದೆ.

ಎಲಿವೇಟೆಡ್ ಕಾರಿಡಾರ್ ಯೋಜನೆಯನ್ನು ಕೈಬಿಡುವಂತೆಯೂ ಒತ್ತಾಯಿಸಿದ್ದಾರೆ. ಜೊತೆಗೆ ನಗರಕ್ಕೆ ಉಪನಗರ ರೈಲು ಯೋಜನೆ ಅನುಷ್ಠಾನ ಅಗತ್ಯವಿದೆ ಎಂದು ಹೇಳಿದ್ದು, ಇದಕ್ಕೆ ಧ್ವನಿ ಜೋಡಿಸಿರುವ ಅನೇಕ ಸಮಾನ ಮನಸ್ಕರೂ ಸಹ ವಿಡಿಯೊ ಮೂಲಕ ಸರ್ಕಾರಕ್ಕೆ ಆಗ್ರಹಿಸಿದ್ದಾರೆ. ಮೊದಲು ಬಸ್, ರೈಲು ಸೌಕರ್ಯ ಅಭಿವೃದ್ಧಿಪಡಿಸಿ' ಎಂದು ಒತ್ತಾಯಿಸಿದ್ದಾರೆ. ಸಿಟಿಜನ್ಸ್ ಫಾರ್ ಬೆಂಗಳೂರು' (ಸಿಎಫ್‍ಬಿ) ಸಂಸ್ಥೆಯ ಶ್ರೀನಿವಾಸ್ ಅಲವಿಲ್ಲಿ ಫೇಸ್‍ ಬುಕ್‍ನಲ್ಲಿ ಲೈವ್ ವಿಡಿಯೋ ಮಾಡಿ ಆರಂಭಿಸಿರುವ ಅಭಿಯಾನಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ.

ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಸಾರ್ವಜನಿಕರೊಂದಿಗೆ ಸಮಾಲೋಚನೆ ನಡೆಸದೆ ಬೇಕಾಬಿಟ್ಟಿ ಕಾಮಗಾರಿಗಳನ್ನು ಯೋಜಿಸುವುದು ಸರಿಯಲ್ಲ, ಸಂಚಾರ ದಟ್ಟಣೆ ಹಾಗೂ ಮಾಲಿನ್ಯ ಬಹುದೊಡ್ಡ ಸಮಸ್ಯೆಯಾಗಿದೆ. ಸಂಚಾರ ದಟ್ಟಣೆ ತಗ್ಗಿಸಲು ಇಲ್ಲಿಯವರೆಗೆ ರಸ್ತೆ ವಿಸ್ತರಣೆ, ಮೇಲ್ಸೇತುವೆ, ಎತ್ತರಿಸಿದ ಮೇಲ್ಸೇತುವೆಗಳ ನಿರ್ಮಾಣ, ಏಕಮುಖ ಸಂಚಾರ ವ್ಯವಸ್ಥೆ ರೂಪಿಸಲಾಗಿದೆ. ಸಾರ್ವಜನಿಕ ಸಾರಿಗೆ ವ್ಯವಸ್ಥೆ ಅಭಿವೃದ್ಧಿ ಪಡಿಸುವ ಬಗ್ಗೆ ಸರ್ಕಾರ ಯೋಚನೆಯೇ ಮಾಡಿಲ್ಲ ಎಂದು ದೂರಿದ್ದಾರೆ.

ಸಾವಿರಾರು ಕೋಟಿ ರೂಪಾಯಿ ವಿನಿಯೋಗಿಸಿ, ನಗರದ ಅಂದಗೆಡಿಸಿ ಅವುಗಳನ್ನು ನಿರ್ಮಿಸುವುದಕ್ಕಿಂತ ಈಗಾಗಲೇ ಇರುವ ರೈಲು ಮಾರ್ಗಗಳನ್ನೇ ಬಳಸಿಕೊಂಡು ಉಪನಗರ ರೈಲು ಯೋಜನೆ ಅನುಷ್ಠಾನಗೊಳಿಸುತ್ತಿದ್ದರೆ ಹಾಗೂ ಬಸ್ ಸೌಕರ್ಯನೇ ಅಭಿವೃದ್ಧಿ ಪಡಿಸಿದ್ದಿದ್ದರೆ ವಾಹನಗಳ ಸಂಖ್ಯೆಯೂ ಏರಿಕೆಯಾಗುತ್ತಿರಲಿಲ್ಲ. ಮಾಲಿನ್ಯವೂ ನಮ್ಮನ್ನು ಕಾಡುತ್ತಿರಲಿಲ್ಲ ಎಂದು ತಿಳಿಸಿದ್ದಾರೆ.

ಮೆಜೆಸ್ಟಿಕ್‍ನಿಂದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪ್ರತಿದಿನ ಸಾವಿರಾರು ಕಾರುಗಳು ಸಂಚರಿಸುತ್ತವೆ. ಅದರ ಬದಲು ವಿಮಾನನಿಲ್ದಾಣದ ಸಮೀಪದ ದೇವನಹಳ್ಳಿವರೆಗೆ ರೈಲು ಸಂಪರ್ಕ ಇದೆ. ರೈಲಿನಲ್ಲಿ ಪ್ರಯಾಣಿಸಿದರೆ ವಾಹನ ದಟ್ಟಣೆಯಲ್ಲಿ ಸಿಲುಕಿಕೊಳ್ಳುವ ಆತಂಕ ಇಲ್ಲ. ದುರಾದೃಷ್ಟವಶಾತ್ ಸರಿಯಾದ ರೈಲಿನ ವ್ಯವಸ್ಥೆಯನ್ನೇ ಸರ್ಕಾರ ಕಲ್ಪಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

1.2 ಕೋಟಿ ಜನಸಂಖ್ಯೆ ಇರುವ ನಗರದಲ್ಲಿ ಕೇವಲ 6,500 ಬಿಎಂಟಿಸಿ ಬಸ್‍ಗಳಿವೆ. ಎಲಿವೇಟೆಡ್ ಕಾರಿಡಾರ್ ನಿರ್ಮಾಣಕ್ಕೆ ವ್ಯಯಿಸುತ್ತಿರುವ ಹಣವನ್ನು ಸಬ್‍ ಅರ್ಬನ್ ರೈಲು ಹಳಿ ನಿರ್ಮಾಣಕ್ಕೆ ವಿನಿಯೋಗಿಸಿದರೆ, ಲಕ್ಷಾಂತರ ಮಂದಿ ಪ್ರಯಾಣಿಸಬಹುದು. ಚೆನ್ನೈ, ಮುಂಬೈ ಹಾಗೂ ಹೈದರಬಾದ್‍ನಲ್ಲಿ ಉಪನಗರ ರೈಲು ಸೇವೆಯಿದೆ. ನಮಲ್ಲಿ ಮಾತ್ರ ಅದಿನ್ನೂ ಚಿಂತನೆ ಹಂತದಲ್ಲೇ ಇದೆ ಎಂದು ಹಲವು ಸಾಮಾಜಿಕ ಕಾರ್ಯಕರ್ತರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಉಪನಗರ ರೈಲಿನಲ್ಲಿ ಪ್ರಯಾಣಿಸುವುದರಿಂದ ಹಣ ಮತ್ತು ಸಮಯ ಉಳಿತಾಯವಾಗುತ್ತದೆ. ಓಲಾ, ಉಬರ್ ಗೆ 500 ಕೊಡುವ ಬದಲು ಕೇವಲ 50 ರೂನಲ್ಲಿ ಪ್ರಯಾಣ ಮುಗಿಯುತ್ತದೆ. ಸಾರ್ವಜನಿಕ ಸಾರಿಗೆ ಬಳಸುವಂತಹ ವ್ಯವಸ್ಥೆಯನ್ನು ರೂಪಿಸಿ. ಅದನ್ನು ಬಿಟ್ಟು ರಸ್ತೆಯ ಮೇಲೆ ಇನ್ನೂ ಹೆಚ್ಚಿನ ಸಂಖ್ಯೆಯ ಕಾರುಗಳು ಓಡಾಡುವಂತೆ ಮಾಡಬೇಡಿ ಎಂದು ಒತ್ತಾಯಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Elevated sub urban ಜಾಲತಾಣ ಯೋಜನೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ