ಅಳಿವಿನಂಚಿನಲ್ಲಿ ಕೊಡಗಿನ ಕಪಾಳ ಜನಾಂಗ...

Kapala community in kodagu

28-07-2018

ಮಡಿಕೇರಿ: ಕೊಡವ ಭಾಷಿಕ ಜನಾಂಗದಲ್ಲೊಂದಾದ ‘ಕಪಾಳ ಜನಾಂಗ’ ಅಳಿವಿನಂಚಿನಲ್ಲಿದೆ. ಕೊಡಗಿನ ಕಕ್ಕಬ್ಬೆ ನಾಲಡಿಯ ಯುವಕಪಾಡಿಯಲ್ಲಿ ಮಾತ್ರ ಕಾಣಸಿಗುವ ಅಪರೂಪದಲ್ಲಿ ಅಪರೂಪದ ಸಾಧು ಜನಾಂಗವೇ ಈ ಕಪಾಳರು.

ಕಪಾಳ ಶದ್ಧವನ್ನು ಗಮನಿಸುವುದಾದರೆ "ಕಾಪ + ಆಳ " ಎಂದಾಗುತ್ತದೆ. ಕಾಯುವ +ಅಳು=ಕಾವಲುಗಾರ, ಕಾಯುವ ಕೆಲಸದವ ಎಂದಾಗುತ್ತದೆ. ಹದಿನೇಳನೇ ಶತಮಾನದ ಕೊನೆಯ ಭಾಗದಲ್ಲಿ ಇವರನ್ನು ದೊಡ್ಡವೀರರಾಜ ಯುವಕಪಾಡಿಯಲ್ಲಿರುವ ನಾಲಕ್ಕು ನಾಡು ಅರಮನೆಗೆ ಕಾವಲು ಕಾಯಲು ನೇಮಕ ಮಾಡುತ್ತಾನೆ. ಅದಕ್ಕೂ ಹಿಂದಿನಿಂದಲೂ ಇವರು ಕೊಡಗಿನಲ್ಲಿಯೇ ನೆಲೆ ನಿಂತಿದ್ದರು ಎನ್ನಲಾಗುತ್ತದೆ.

ಪ್ರಚಲಿತದಲ್ಲಿರುವ ಹೇಳಿಕೆಯ ಪ್ರಕಾರ: ಇಗ್ಗುತ್ತಪ್ಪ ದೇವರ ದೇವತಕ್ಕಾರದ ಪರದಂಡ ಕುಟುಂಬಸ್ಥರಲ್ಲಿಗೆ ಹೆಣ್ಣುಮಗಳೊಬ್ಬಳು ಕೇರಳದಿಂದ ಬರುತ್ತಾಳೆ. ಪರದಂಡ ಕುಟುಂಬಸ್ಥರು ಕೇರಳದ" ಖೊಲಿತಾಳ" ಎಂಬಲ್ಲಿ ಇರುವ ಕರಿ ಚೌಡಿ, ದೇವಿಯ ಸನ್ನಿದಿಗೆ ಸೇವೆಗೆ ಹೋಗಿದ್ದಾಗ, ಈಕೆ ಇವರೊಂದಿಗೆ ಇಲ್ಲಿಗೆ ಬರುತ್ತಾಳೆ. ಮನೆಯ ಹಿಂಬಾಗಿಲಿನಿಂದ ಒಳಗೆ ಪ್ರವೇಶ ಮಾಡುತ್ತಾಳೆ. ಈ ಹುಡುಗಿಯೊಂದಿಗೆ "ಕವಳ "ಎಂಬ ಹುಡುಗನೊಬ್ಬ ಬರುತ್ತಾನೆ. ಇವನು ಇಲ್ಲಿಯೇ ನೆಲಸುತ್ತಾನೆ. ಇವರಿಬ್ಬರ ಸಂತತಿಯೇ ಕಪಾಳರು ಎನ್ನುತ್ತಾರೆ.

ಕೊಡಗಿನ ರಾಜಕೀಯದಲ್ಲಿ ಸಾಕಷ್ಟು ಏರುಪೇರು ಆಗಿದ್ದ ಸಂದರ್ಭ ನಾಲಕ್ಕು ನಾಡು ಅರಮನೆ ಕಟ್ಟಲ್ಪಡುತ್ತದೆ. ಯುವಕಪಾಡಿಯ ದಟ್ಟ ಕಾಡಿನ ನಡುವೆ ಹೀಗೊಂದು ಅರಮನೆ ಇದೆ ಎಂದು ಯಾರಿಗೂ ತಿಳಿಯದ ರೀತಿ ಇದನ್ನು ಕಟ್ಟಲಾಗಿದೆ. ದಾಳಿಕೋರರ ಹದ್ದುಗಣ್ಣಿನಿಂದ ತಪ್ಪಿಸಿಕೊಳ್ಳಲು ಈ ಜಾಗವು ಪ್ರಶಸ್ತವು ಆಗಿತ್ತು. ಕ್ರಿ.ಶ 1780ರಲ್ಲಿ ಕೊಡಗಿನ ರಾಜ ಲಿಂಗರಾಜನು ಮೃತಪಟ್ಟಿದ್ದ ಸಂದರ್ಭ ಹೈದರಾಲಿ ಕೊಡಗಿನ ಆಡಳಿತವನ್ನು ತನ್ನ ಕೈಗೆ ತೆಗೆದುಕೊಂಡು ಅರ್ಕಾಟಿನ ಮೇಲೆ ಯುದ್ಧಕ್ಕೆ ಹೋದ ಸಮಯದಲ್ಲಿ ಮೃತಪಡುತ್ತಾನೆ. ಅಧಿಕಾರ ಟಿಪ್ಪುವಿನ ಕೈಗೆ ಬರುತ್ತದೆ. ಸುಮಾರು ಹತ್ತು ವರ್ಷಗಳ ತನಕ ಟಿಪ್ಪು ಕೊಡಗಿನ ರಾಜ್ಯಭಾರ ನಿರ್ವಹಿಸುತ್ತಾನೆ. ತದನಂತರ ದೊಡ್ಡವೀರರಾಜನಿಗೆ ಅಧಿಕಾರ ಸಿಗುತ್ತದೆ. ಹೀಗೆ ಸಾಕಷ್ಟು ಶತ್ರುಗಳು ಕೊಡಗನ್ನು ವಶಪಡಿಸಿಕೊಳ್ಳಲು ಹೊಂಚು ಹಾಕುತಿದ್ದ ಸಮಯದಲ್ಲಿ ಯಾರಕಣ್ಣಿಗೂ ಬೀಳದಿರುವ ಜಾಗದಲ್ಲಿ ಒಂದು ಅರಮನೆಯನ್ನು ಕಟ್ಟುವುದು ದೊಡ್ಡವೀರ ರಾಜನಿಗೆ ಅವಶ್ಯಕತೆ ಇತ್ತು. ಮಾತ್ರವಲ್ಲ ಸಮರ್ಥ ಕಾವಲುಗಾರರ ಅಗತ್ಯ ಇತ್ತು. ಈ ಸಮಯದಲ್ಲಿ ರಾಜನ ಕಣ್ಣಿಗೆ ಬಿದ್ದವರು ಈ ಕಪಾಳ ಜನಾಂಗದ ಕಟ್ಟಾಳುಗಳು. ರಾಜನ ಮರಣದಂಡನೆಗೆ ಒಳಗಾದವರನ್ನು ಇವರಿಂದಲೇ ಸಂಹರಿಸುತಿದ್ದನು ಎಂದು ರಿಕ್ಟರ್ ‘ಗೆಜೆಟಿಯರ್ ಆಫ್ ಕೂರ್ಗ್’ ನಲ್ಲಿ ಬರೆದಿದ್ದಾನೆ .

ಹೀಗಾಗಿ ಇವರು ಇತಿಯೋಪಿಯನ್ ಮೂಲದ ಸಿದ್ದಿ ಜನಾಂಗದವರೆಂದು ಊಹಿಸಲಾಗಿದೆ. ಕಪಾಳರೇ ಕೊಡುವ ಮಾಹಿತಿ ಪ್ರಕಾರ ಅವರು ತೀರಾ ಹಿಂದೆ ಮಲಯಾಳಂ ಭಾಷೆ ಮಾತಾಡುತ್ತಿದ್ದರಂತೆ. ಸುಮಾರು ಒಂದು ಶತಮಾನದಿಂದೀಚೆ ಕೊಡವ ಭಾಷೆ ಮಾತನಾಡುತ್ತಿದ್ದಾರೆ ಎನ್ನಲಾಗಿದೆ.

ಕೊಡಗಿನ ಕೊನೆಯ ರಾಜ ಚಿಕ್ಕದೇವರಾಯನು ಇವರಿಗೆ ಈಗಿರುವ ಅಂದಾಜು 60 ಎಕರೆ ಜಾಗವನ್ನು ಕೊಟ್ಟಿದ್ದಾಗಿ ಇವರು ಹೇಳುತ್ತಾರೆ. ಅದರಲ್ಲಿ ಪರರ ಪಾಲಾಗಿ ಇದೀಗ ಅಂದಾಜು 30ರಿಂದ 35 ಎಕರೆ ಇವರ ಸ್ವಾಧೀನದಲ್ಲಿದೆ ಎನ್ನುತ್ತಾರೆ .ನಿಮಗೇನು  ಬೇಕು ಎಂದು ರಾಜ ಕೇಳಿದಾಗ ಇವರ ಹಿರಿಯಜ್ಜ " ಗುದ್ದಲಿ ಕೂಳು, ಕವುಂಗ ಕರಿಯೂ ತಾರಿ " ಎಂದನಂತೆ. ಆದರೆ ಹಿರಿಯ ಅಜ್ಜಿ ರಾಜನಲ್ಲಿ" ನಂಗಕ್ಕ್ ಇಪ್ಪಾಕ್ಕ್ ಇಚ್ಚಾಕ್ ಅಗಲ ಜಾಗ ತಾರಿ" ಎಂದರಂತೆ. ರಾಜನು ಒಂದಷ್ಟು ಜಾಗವನ್ನು ಕಣ್ಣಳತೆಯಲ್ಲಿ ತೋರಿಸಿ ಈ ಜಾಗದಲ್ಲಿ ಇರಿ ಎಂದನಂತೆ . ಹೀಗೆ ಆಡ್ಸತ್ತು ಜಮ್ಮಾ ಜಾಗದಲ್ಲಿ ನೆಲೆ ನಿಂತಿದ್ದಾರೆ. ಸರಕಾರಿ ದಾಖಲೆಗಳಲ್ಲಿಯೂ ಇದು "ಅರಮನೆ ಹಿತ್ತಿಲು" ಎಂದು ನಮೂದಾಗಿದೆ .

ಇವರ ಜನಸಂಖ್ಯೆ 150 ಮಾತ್ರ. ಕೊಡಗಿನಲ್ಲಿ ಬೇರೆ ಯಾವುದೇ ಜಾಗದಲ್ಲಿ ಈ ಸಂತತಿ ಇಲ್ಲ. ಇವರ ಈಗಿನ ವೃತ್ತಿ ದಿನಗೂಲಿ ಕೆಲಸ, ಯುವಕಪಾಡಿ ಗ್ರಾಮದ ಕಾಫಿ ತೋಟ ಗದ್ದೆಗಳಲ್ಲಿ ಇವರು ಕೃಷಿ ಕೆಲಸ ನಿರ್ವಹಿಸುತ್ತಾರೆ. ಅರಂಜಟ್, ಬೊಳ್ಳಾಟ್ಟ್, ಪಾಲೇ ಕೊಟ್ಟು ,ಎಂಬ ಮೂರು ಮನೆತನದವರು ಇಲ್ಲಿದ್ದು , ಒಬ್ಬರು ಇತರ ಮನೆತನದವರ ಜೊತೆ ಮಾತ್ರ ಸಂಬಂಧ ಬೆಳೆಸುತ್ತಾರೆ .

ಯುವಕಪಾಡಿ ನೆಟ್ಟುಮಾಡುವಿನಲ್ಲಿ 15 ಮನೆತನದ ಪೈಕಿ ಕಪಾಳರ ಮನೆತನಕ್ಕೂ ಹಕ್ಕುದಾರಿಕೆ ಇದೆ. ದೇವಾಲಯದ  ಹಬ್ಬದ ಸಂದರ್ಭ ದೇವರು ಹೋಗುವ ದಾರಿಯನ್ನು ವರ್ಷಕೊಮ್ಮೆ ಕಡಿದು ಒಪ್ಪ ಓರಣವಾಗಿಸುವ ಕರ್ತವ್ಯ ಇವರ ಪಾಲಿನದು. ಇವರಿಗೆ ಮೀಸಲಾಗಿರುವ ಸ್ಮಶಾನ ಕೂಡ ಸರಕಾರಿ ದಾಖಲೆಯಲ್ಲಿ ನಮೂದಾಗಿದೆ. ನಾಮಕರಣ, ಸಾವು, ತಿಥಿ, ಇತ್ಯಾದಿ ಕ್ರಿಯೆಗಳು ಕೊಡವ ಪದ್ದತಿಯಂತೆ ನಡೆಯುತ್ತದೆ. ಕೊಡವರ ಕುಪ್ಪಯ್ಯ, ಚಾಲೇ, ಮಂಡೆ ತುಣಿ  ಸಹಿತ ಮದುವೆ ನಡೆಯುತ್ತದೆ. ದುಡಿ ವಾದ್ಯ ನುಡಿಸುತ್ತಾರೆ. ಕೊಡವ ಹೆಸರುಗಳಾದ ಬೆಳ್ಳಿಯಪ್ಪ , ಪೊನ್ನಪ್ಪ , ಇತ್ಯಾದಿಗಳನ್ನು ಇಡುತ್ತಾರೆ. (ಕಪಾಲರ ಪೊನ್ನಪ್ಪ ,ಕಪಾಲರ ಬೆಳ್ಳಿಯಪ್ಪ, ಇತ್ಯಾದಿ ). ಊರಿನ ದೇವರಲ್ಲದೆ ಕಪಾಳ ಕೇರಿಯಲ್ಲಿ ಭದ್ರಕಾಳಿಯ ಬೀರ , ಚೋಉಂಡಿ, ಮಲೆ ಬೀರ, ಮಲೆ ತಮ್ಮಚ್ಚ, ಚೆಟ್ಟಿ ಅಜ್ಜಪ್ಪ, ಭದ್ರಕಾಳಿ ಕುಂಜ್ಯ್ ಬೋಳ್ತ್, ಮನೆ ದೇವರು. ಭದ್ರಕಾಳಿಯ ಬೀರನಿಗೆ ಕೋಲಾ ಕಟ್ಟುವ ಕ್ರಮ ಇದೆ .

ವೀಶುವಿನಲ್ಲಿ (ಸೌರಮಾನ ಆರಂಭದ ದಿವಸ ) ಕಪಾಳ ಕೇರಿಯಲ್ಲಿ ಭಗವತಿ ದೇವಿಗೆ ಶುದ್ಧ ವಿಧಿಯನ್ನು ಭಟ್ಟರು ಅರ್ಚಕರು ಮಾಡುತ್ತಾರೆ. ಮಲೆ ತಮ್ಮಚ್ಚನಿಗೆ ಎರಡು ವರ್ಷಕೊಮ್ಮೆ ಕೋಲಾ ನಡೆಯುತ್ತದೆ. ತುಳು ಭಾಷಿಕ ಅರಮನೆ ಪಾಲೇ ಜನಾಂಗ ಕೋಲಾ ಕಟ್ಟುವರು. ಇವರಿಗೆ ಹಿಂದಿನಿಂದಲೂ ಊಮೆ ಇದೆ. ಕುಂಜ್ಯ್ ಬೋಳ್ತು ಬರುವ ಕಪಾಳ ಪಾತ್ರಿ ಕೊಡವ ಭಾಷೆ ಮಾತನಾಡುತ್ತಾನೆ. ಹಂದಿ ಬೇಟೆ ಕೊಡುವ ಸಂಪ್ರದಾಯ ಇದೆ. ಇಡೀ ಯುವಕಪಾಡಿಯಲ್ಲಿ ದೇವತಕ್ಕ ಮನೆತನದವರಾದ ಪರದಂಡ ಕುಟುಂಬಸ್ಥರಿಗೆ ಮತ್ತು ಕಪಾಳ ಕುಟುಂಬಸ್ಥರಿಗೆ ಮಾತ್ರ" ಜೋಡು' ಕುತ್ತಿ " ಇದೆ ಎನ್ನಲಾಗುತ್ತದೆ .

ಹುತ್ತರಿ ದಿವಸ ಅಪ್ಪಾರಂಡ ಮನೆತನದವರ ಗದ್ದೆಯಿಂದ ಕದಿರು ತೆಗೆಯಲಾಗುತ್ತದೆ.  ಹಿಂದಿನ ಕಾಲದಲ್ಲಿ ಅಪ್ಪಾರಂಡ , ಕೇಟೋಳಿರ ಮನೆಯವರಲ್ಲಿ ಹುತ್ತರಿ ಸಮಯದಲ್ಲಿ ಮನೆಪತಿಗೆ ಹೋಗುತ್ತಿದ್ದರಂತೆ. ಈ ಪದ್ಧತಿ ಈಗ ನಿಂತು ಹೋಗಿದೆ. ಕಪಾಳ ಕೇರಿಯಲ್ಲಿ ಹುತ್ತರಿ ಕಳೆದು ಮೂರು ದಿವಸಕ್ಕೆ ಮನೆಪಾಟ್ ಇದೆ. ಕೊಡವರ ಮನೆತನದ ಅಲ್ಲಾರಂಡ ಮನೆಯಿಂದ ಬಂಡ ಪೂವಕ್ಕ ಎಂಬ ದೇವತೆಯ ಕೋಲಾ ಕೂಡ ನಡೆಯುತ್ತದೆ. ಈ ಕೊಳದ ವೇಷ ಕೊಡಾವತಿ ಸೆರೆಯಲ್ಲಿರುವುದು ವಿಶೇಷ .

ಕೊಡವ ಭಾಷೆಯನ್ನೇ ಮಾತನಾಡುತ್ತಿದ್ದು ಕೊಡವ ಸಂಸ್ಕೃತಿಯನ್ನೇ ಆಚರಿಸುತಿದ್ದು ಇವರು ಮೂಲತಃ ಕೊಡವ ಭಾಷಿಕ ಜನಾಂಗದವರಲ್ಲ ಎಂಬುದೊಂದು ವಿಪರ್ಯಾಸ ."ಕೊಡಗಿನ ಕಾಪಳ್ಳಿ" ಎಂಬುವುದಾಗಿ ವರ್ಗದಲ್ಲಿ ಇವರನ್ನು ಸರಕಾರಿ ದಾಖಲೆಗಳಲ್ಲಿ ಗುರುತಿಸಲಾಗಿದೆ . ಆರ್ಥಿಕವಾಗಿ ತೀರಾ ಹಿಂದುಳಿದಿರುವ, ವಿದ್ಯೆಯಲ್ಲಿ ಹಿಂದುಳಿದಿರುವ ತೀರಾ ಸಾಧು ಜೀವಿಗಳಾದ ಇವರ ಬದುಕನ್ನು ಮೇಲೆತ್ತಲು ಸಂಬಂಧಪಟ್ಟವರು ಮನಸ್ಸು ಮಾಡಬೇಕಾಗಿದೆ .  

ವರದಿ: ಪುತ್ತರಿರ ಪಪ್ಪು ತಿಮ್ಮಯ


ಸಂಬಂಧಿತ ಟ್ಯಾಗ್ಗಳು

Kodava Custom ಕಪಾಳ ಜನಾಂಗ ಕೇರಳ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ