ಇಬ್ಬರ ಜೀವ ತೆಗೆದ ಮೊಬೈಲ್!

2 people died because of phone talk while driving

27-07-2018

ಬೆಂಗಳೂರು: ಬೈಕ್ ನಲ್ಲಿ ಹೋಗುತ್ತಿದ್ದಾಗ ಮೊಬೈಲ್ ಕರೆ ಸ್ವೀಕರಿಸಲು ಹೋಗಿ ಸಂಭವಿಸಿದ ಸರಣಿ ಅಪಘಾತದಲ್ಲಿ ಇಬ್ಬರು ಮೃತಪಟ್ಟು, ಓರ್ವ ಗಾಯಗೊಂಡಿರುವ ದುರ್ಘಟನೆ ಯಲಹಂಕದ ಕಾಫಿ ಡೇ ಬಳಿ ನಿನ್ನೆ ರಾತ್ರಿ ನಡೆದಿದೆ.

ಹುಣಸಮಾರನಹಳ್ಳಿಯ ಶ್ರೀನಿವಾಸಲು (32) ಹಾಗೂ ತಿಲಕ್ ನಗರದ ಗಣೇಶ್ (32)ಎಂದು ಮೃತಪಟ್ಟವರನ್ನು ಗುರುತಿಸಲಾಗಿದೆ. ಸಣ್ಣಪುಟ್ಟ ಗಾಯವಾಗಿರುವ ವೆಂಕಟರೆಡ್ಡಿ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆಂಧ್ರದ ಕದ್ರಿ ಮೂಲದ ಶ್ರೀನಿವಾಸಲು ಅವರು ವಾಯುಸೇನೆಯಲ್ಲಿ ಕೂಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದರು. ಕೆಲಸದ ನಿಮಿತ್ತ ರಾತ್ರಿ 8.45ರ ವೇಳೆ ಬೈಕ್‍ನಲ್ಲಿ ವೆಂಕಟರೆಡ್ಡಿಯನ್ನು ಹಿಂದೆ ಕೂರಿಸಿಕೊಂಡು ಯಲಹಂಕದ ಕಾಫಿ ಡೇ ಕಡೆಯಿಂದ ನಗರಕ್ಕೆ ಬರುತ್ತಿದ್ದಾಗ ಅವರ ಮೊಬೈಲ್ ಸಂಖ್ಯೆಗೆ ಕರೆ ಬಂದಿದೆ. ರಸ್ತೆ ಬದಿ ಬೈಕ್ ನಿಲ್ಲಿಸಿ ಮೊಬೈಲ್ ಕರೆ ಸ್ವಿಕರಿಸಿ ಶ್ರೀನಿವಾಸಲು ಮಾತನಾಡುತ್ತಿದ್ದರು.

ಈ ವೇಳೆ ಹಿಂದಿನಿಂದ ನಗರದ ಕಡೆ ಬರುತ್ತಿದ್ದ ಕ್ಯಾಬ್ ಡಿಕ್ಕಿ ಹೊಡೆದು ಕೆಳಗೆ ಶ್ರೀನಿವಾಸಲು ಹಾಗೂ ವೆಂಕಟರೆಡ್ಡಿ ಬಿದ್ದು ಗಾಯಗೊಂಡಿದ್ದಾರೆ. ಅವರನ್ನು ನೋಡಲು ಕಾರು ನಿಲ್ಲಿಸಿ ಬಂದ ಕ್ಯಾಬ್ ಚಾಲಕ ಗಣೇಶ್‍ಗೆ ವೇಗವಾಗಿ ಬಂದ ಮತ್ತೊಂದು ಕಾರು ಡಿಕ್ಕಿ ಹೊಡೆದು ಕೆಳಗೆ ಬಿದ್ದ ಗಣೇಶ್ ಹಾಗೂ ಶ್ರೀನಿವಾಸಲು ಮೇಲೆ ಹರಿದಿದೆ. ಗಂಭೀರವಾಗಿ ಗಾಯಗೊಂಡ ಅವರಿಬ್ಬರನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದು ಹೆಚ್ಚಿನ ಚಿಕಿತ್ಸೆಗಾಗಿ ಶ್ರೀನಿವಾಸಲು ಅವರನ್ನು ಬ್ಯಾಪ್ಟೀಸ್ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ತಡರಾತ್ರಿ ಮೃತಪಟ್ಟರು.

ಗಣೇಶ್ ತಿಲಕ್‍ ನಗರದ ಸಾಯಿಬಾಬಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಿಗ್ಗೆ ಮೃತಪಟ್ಟಿದ್ದಾರೆ. ವೆಂಕಟರೆಡ್ಡಿ ಪಾರಾಗಿದ್ದು, ಅಪಘಾತವೆಸಗಿದ ಕಾರು ಚಾಲಕ ರಾಜೇಶ್‍ನನ್ನು ಯಲಹಂಕ ಸಂಚಾರ ಪೊಲೀಸರು ಬಂಧಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ ಎಂದು ಡಿಸಿಪಿ ಸಾರಾ ಫಾತಿಮಾ ತಿಳಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Mobile driving ಚಿಕಿತ್ಸೆ ಸಾರಾ ಫಾತಿಮಾ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ