ಹುತಾತ್ಮ ಯೋಧರು ಯುವಕರಿಗೆ ಆದರ್ಶ: ಡಿಸಿಎಂ

Martyr warriors are ideal for young people

26-07-2018

ಬೆಂಗಳೂರು: ನಿವೃತ್ತಿ ಹೊಂದುವ ಅಥವಾ ಯುದ್ಧದಲ್ಲಿ ಹುತಾತ್ಮರಾಗುವ ಯೋಧರ ಕುಟುಂಬಗಳಿಗೆ ಮೂರು ತಿಂಗಳ ಒಳಗಾಗಿ ಸಂಪೂರ್ಣ ಪರಿಹಾರ ಹಾಗೂ ಇತರೆ ಸೌಲಭ್ಯ ಒದಗಿಸಿಕೊಡಲು ನೂತನ ಕಾನೂನು ತರುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಹೇಳಿದರು.

ರಾಷ್ಟ್ರೀಯ ಮಿಲಿಟರಿ ಸ್ಮಾರಕದಲ್ಲಿ ಹಮ್ಮಿಕೊಂಡಿದ್ದ ಕಾರ್ಗಿಲ್ ವಿಜಯ ದಿವಸ್ ಆಚರಣೆಯಲ್ಲಿ ಹುತಾತ್ಮ ಯೋಧರಿಗೆ ಗೌರವ ಸಲ್ಲಿಸಿ ಬಳಿಕ ಮಾತನಾಡಿದರು. 1999ರಲ್ಲಿ ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ 500ಕ್ಕೂ ಹೆಚ್ಚು ಯೋಧರು ಹುತಾತ್ಮರಾಗಿದ್ದಾರೆ.

ಇವರ ಸೇವೆ ಹಾಗೂ ತ್ಯಾಗ ಸ್ಮರಣಾರ್ಥ ಇವರನ್ನು ನೆನೆದು ಗೌರವ ಸಲ್ಲಿಸಲು ಈ ದಿನ ಆಚರಿಸುತ್ತೇವೆ. ಕಾರ್ಗಿಲ್ ಯುದ್ಧದಲ್ಲಿ ಹೋರಾಡಿ ಬದುಕಿರುವ ಸಾಕಷ್ಟು ಯೋಧರು ನಮ್ಮೊಟ್ಟಿಗಿದ್ದಾರೆ. ಅವರಿಗೂ ಕೃತಜ್ಞತೆ ಸಲ್ಲಿಸುವೆ. ಇಂದಿನ ಯುವ ಪೀಳಿಗೆಗೆ ಹುತಾತ್ಮ ಯೋಧರು ಆದರ್ಶರಾಗಿದ್ದಾರೆ ಎಂದರು.

ಗಡಿ ಕಾಯುವ ಯೋಧರು ಈ ದೇಶಕ್ಕಾಗಿ ತಮ್ಮ ಪ್ರಾಣವನ್ನೇ ಸಮರ್ಪಿಸುತ್ತಾರೆ. ಇವರಿಗೆ ಪರಿಹಾರ ನೀಡುವ ಕಾರ್ಯ ತಡವಾಗಬಾರದು. ಅದಕ್ಕಾಗಿಯೇ ಸೈನಿಕ ವೆಲ್ಫೇರ್ ಬೋರ್ಡ್ ತೆರೆಯಲಾಗಿದೆ. ಆದರೂ ಪರಿಹಾರ ತಡವಾಗುವ ಆರೋಪವಿದೆ. ಹೀಗಾಗಿ ನೂತನ ಕಾನೂನು ತರಲು ಹೊರಟಿದ್ದೇವೆ. ಕನಿಷ್ಟ ಮೂರು ತಿಂಗಳ ಒಳಗಾಗಿ ನಿವೃತ್ತ ಯೋಧರು ಅಥವಾ ಯುದ್ಧದಲ್ಲಿ ಹುತಾತ್ಮರಾಗುವ ಯೋಧ ಕುಟುಂಬಗಳಿಗೆ ಪರಿಹಾರ ಹಾಗೂ ಇತರೆ ಸೌಕರ್ಯ ಒದಗಿಸಿಕೊಡುವ ಕೆಲಸವಾಗುವ ನಿಟ್ಟಿನಲ್ಲಿ ಕಾನೂನು ರೂಪಿಸಲಾಗುವುದು ಎಂದರು.

ವೀರಗಲ್ಲು ತರುವ ಯತ್ನ ನಡೆದಿದೆ : ದೇವನಹಳ್ಳಿಯಲ್ಲಿರುವ ವೀರಗಲ್ಲು ತರುವ ಪ್ರಯತ್ನ ಮಾಡಲಾಗುತ್ತಿದ್ದು, ಎರಡು ಬಾರಿ ಸಭೆ ನಡೆಸಲಾಗಿದೆ. ಇದಕ್ಕೆ ಸಾರಿಗೆ ಸಮಸ್ಯೆ ಆಗುತ್ತಿದೆ. ಆದರೂ ಶೀಘ್ರವೇ ವೀರಗಲ್ಲನ್ನು ಈ ಸ್ಮಾರಕಕ್ಕೆ ತರಿಸಲಾಗುವುದು ಎಂದು ಭರವಸೆ ನೀಡಿದರು.

ನಿರ್ಬಂಧ ಹೇರುವ ಪ್ರಯತ್ನ ಮಾಡಿಲ್ಲ : ವಿಧಾನಸೌಧದ ಒಳಗೆ ಮಾಧ್ಯಮದವರ ಪ್ರವೇಶಕ್ಕೆ ನಿರ್ಬಂಧ ಹೇರುವ ಪ್ರಯತ್ನ ನಡೆಯುತ್ತಿಲ್ಲ. ವಿಧಾನಸೌಧದಲ್ಲಿ ಅನಗತ್ಯ ವ್ಯಕ್ತಿಗಳ ಓಡಾಟ ಹೆಚ್ಚಾಗಿದೆ. ಇದರಿಂದ ಕೆಲಸಕ್ಕೆ ದಕ್ಕೆಯಾಗುತ್ತಿದೆ. ಜೊತೆಗೆ, ಭದ್ರತೆ ದೃಷ್ಟಿಯಿಂದ ಅನಗತ್ಯ ವ್ಯಕ್ತಿಗಳ ಓಡಾಟಕ್ಕೆ ಕಡಿವಾಣ ಹಾಕುವುದು ಉತ್ತಮ ಎಂದು ಪೊಲೀಸ್ ಇಲಾಖೆಯವರು ಸಲಹೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಚರ್ಚೆ ನಡೆಸಿದ್ದೇವೆ ಎಂದು ಸ್ಪಷ್ಟ ಪಡಿಸಿದರು.


ಸಂಬಂಧಿತ ಟ್ಯಾಗ್ಗಳು

g.parameshwara Vidhana Soudha ಸ್ಮರಣಾರ್ಥ ಕಾರ್ಗಿಲ್


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ