ವಿಧಾನಸೌಧ, ವಿಕಾಸಸೌಧ ಪ್ರವೇಶ ಇನ್ಮುಂದೆ ಮತ್ತಷ್ಟು ದುಸ್ತರ!

government planing to strict rules to enter vidhana soudha and vikasa soudha!

26-07-2018

ಬೆಂಗಳೂರು: ಇನ್ನು ಮುಂದೆ ಮಧ್ಯವರ್ತಿಗಳು, ಪತ್ರಕರ್ತರು ಸೇರಿದಂತೆ ಸಾರ್ವಜನಿಕರು ವಿಧಾನಸೌಧ, ವಿಕಾಸಸೌಧ ಪ್ರವೇಶಿಸುವುದು ಮತ್ತಷ್ಟು ದುಸ್ತರವಾಗಲಿದೆ...!

ಈಗಾಗಲೇ ವಿಧಾನಸೌಧ ಮತ್ತು ವಿಕಾಸಸೌಧದ ಸುತ್ತಲೂ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ. ಇದನ್ನು ಮತ್ತಷ್ಟು ಬಿಗಿಗೊಳಿಸಲು ಸರ್ಕಾರ ಚಿಂತನೆ ನಡೆಸಿದೆ. ವಿಧಾನಸೌಧ ಹಾಗೂ ಸುತ್ತಮುತ್ತ ಪ್ರಮುಖ ಕಚೇರಿಗಳಿರುವ ಪ್ರದೇಶವನ್ನು ಆಡಳಿತಾತ್ಮಕ ವಲಯ ಎಂದು ಘೋಷಣೆ ಮಾಡಿ ರಕ್ಷಣೆಗಾಗಿ ಶಸ್ತ್ರ ಸಜ್ಜಿತ ವಿಶೇಷ ಪೊಲೀಸ್ ಪಡೆಯನ್ನು ನಿಯೋಜಿಸಲು ಮೈತ್ರಿ ಸರ್ಕಾರ ಮುಂದಾಗಿದೆ ಎಂದು ತಿಳಿದುಬಂದಿದೆ.

ವಿಧಾನಸೌಧದಲ್ಲಿ ಮಧ್ಯವರ್ತಿಗಳು, ದಲ್ಲಾಳಿಗಳ ಹಾವಳಿ ಹೆಚ್ಚಾಗಿದೆ. ಇದಕ್ಕೆ ಕಡಿವಾಣ ಹಾಕಲು ಕ್ರಮ ಕೈಗೊಳ್ಳಲಾಗುವುದು. ಜೊತೆಗೆ ಮಾಧ್ಯಮ ನಿರ್ಬಂಧದ ಬಗ್ಗೆಯೂ ಪರೋಕ್ಷವಾಗಿ ಇತ್ತೀಚೆಗಷ್ಟೇ ಸಿಎಂ ಹೆಚ್.ಡಿ.ಕುಮಾರಸ್ವಾಮಿಯವರು ಹೇಳಿದ್ದರು. ಇದಕ್ಕೆ ಪುಷ್ಠಿ ನೀಡುವಂತೆ ಮತ್ತಷ್ಟು ಭದ್ರತೆಯನ್ನು ಕಲ್ಪಿಸಲು ಇಲಾಖೆ ಸಜ್ಜಾಗಿದೆ ಎನ್ನಲಾಗಿದೆ.

ವಿಧಾನಸೌಧ, ಎಂಎಸ್ ಬಿಲ್ಡಿಂಗ್ ವಿಕಾಸಸೌಧ ಇತರ ಪ್ರಮುಖ ಕಟ್ಟಡಗಳಲ್ಲಿ ಮಧ್ಯವರ್ತಿಗಳು ಹಾಗೂ ದಲ್ಲಾಳಿಗಳ ಹಾವಳಿ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ದೆಹಲಿ ಮಾದರಿಯಲ್ಲಿ ಭದ್ರತಾ ವ್ಯವಸ್ಥೆ ರೂಪಿಸಬೇಕೆಂಬ ಸಲಹೆ ಕೇಳಿಬಂದಿದೆ. ದೆಹಲಿಯ ಸಂಸತ್ ಭವನದಲ್ಲಿ ಬಿಗಿಭದ್ರತೆ, ಪೂರ್ವಾನುಮತಿ ಪಾಸ್ ಗಳಿಲ್ಲದೆ ಪ್ರವೇಶಕ್ಕೆ ಅವಕಾಶವಿಲ್ಲ. ಅತ್ಯಂತ ಬಿಗಿಬಂದೋಬಸ್ತ್  ಆಯೋಜಿಸಲಾಗಿದೆ. ಆದರೆ, ಕರ್ನಾಟಕದಲ್ಲಿ ಆ ರೀತಿಯ ಭದ್ರತೆ ಒದಗಿಸುವುದು ಕಷ್ಟಸಾಧ್ಯವಾಗಿದ್ದು, ಇದ್ದದರಲ್ಲೇ ವ್ಯವಸ್ಥೆಯನ್ನು ಒದಗಸಿ ಸುರಕ್ಷಿತ ವಲಯವನ್ನಾಗಿಸಲು ಸರ್ಕಾರ ಚಿಂತನೆ ನಡೆಸಿದೆ ಎಂದು ಹೇಳಲಾಗುತ್ತಿದೆ.

ವಿಧಾನಸೌಧ, ವಿಕಾಸಸೌಧ, ಮಾಹಿತಿ ಆಯೋಗ, ಕೆಪಿಎಸ್‍ಸಿ, ಎಂಎಸ್ ಬಿಲ್ಡಿಂಗ್, ರಾಜ್ಯಭವನ, ಹೈಕೋರ್ಟ್ ಒಳಗೊಂಡಂತೆ ಭೌಗೋಳಿಕ ವಿಸ್ತೀರ್ಣವನ್ನು ನಿಗದಿಪಡಿಸಿ ಆಡಳಿತಾತ್ಮಕ ಘೋಷಣೆ ಮಾಡಲಾಗುತ್ತದೆ. ಈ ವಲಯ ಪ್ರವೇಶಿಸಬೇಕಾದರೆ ಪೂರ್ವಾನುಮತಿ ಪಾಸ್ ಕಡ್ಡಾಯ.  ಅಧಿಕಾರಿಗಳಿಗೆ, ಶಾಸಕರಿಗೆ, ಸಚಿವರಿಗೆ ಜನಸಾಮಾನ್ಯರಿಗೆ, ಪತ್ರಕರ್ತರಿಗೆ ಪ್ರತ್ಯೇಕ ಅನುಮತಿ ಪತ್ರಗಳನ್ನು ನಿಗದಿಪಡಿಸಲು ಮುಂದಾಗಿದೆ ಎನ್ನಲಾಗಿದೆ.

ಈ ಪ್ರಮುಖ ಪ್ರದೇಶಗಳ ರಕ್ಷಣೆಗೆ ಪೊಲೀಸರಿಗೆ ವಿಶೇಷ ತರಬೇತಿ ನೀಡಲಾಗುತ್ತಿದ್ದು, ಅವರಿಗೆ ವಿಭಿನ್ನವಾದ ಸಮವಸ್ತ್ರವನ್ನು ನಿಗದಿಪಡಿಸಲು ಚಿಂತನೆ ನಡೆದಿದ್ದು, ಪ್ರತಿ ಪೊಲೀಸರಿಗೆ ಶಸ್ತ್ರಾಸ್ತ್ರಗಳನ್ನು ನೀಡಲಾಗುತ್ತದೆ.

ಮಾಹಿತಿ ಕೇಂದ್ರ ಸ್ಥಾಪನೆ? : ಪತ್ರಕರ್ತರ ಹೆಸರಿನಲ್ಲಿ ಅಡ್ಡಾದಿಡ್ಡಿ ಓಡಾಡುವುದನ್ನು ತಪ್ಪಿಸಲು ವಿಧಾನಸೌಧದ ನೆಲಮಹಡಿಯಲ್ಲಿ ಪ್ರತ್ಯೇಕ ಕೊಠಡಿಯನ್ನು ವ್ಯವಸ್ಥೆ ಮಾಡಿ ಅಲ್ಲಿ ಸುದ್ದಿಗೋಷ್ಠಿ ಹಾಗೂ ಇತರ ಮಾಹಿತಿ ಕೇಂದ್ರವನ್ನು ರೂಪಿಸಲು ಮುಂದಾಗಿರುವ ಸರ್ಕಾರ, ಈ ನಿಟ್ಟಿನಲ್ಲಿ ಈಗಾಗಲೇ ಸಭೆಗಳು ಆರಂಭವಾಗಿದ್ದು, ಒಂದೆರಡು ತಿಂಗಳಲ್ಲಿ ಸ್ಪಷ್ಟ ರೂಪ ಪಡೆದುಕೊಳ್ಳಲಿದೆ ಎಂದು ಉನ್ನತ ಮೂಲಗಳು ಮಾಹಿತಿ ನೀಡಿವೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ