'ಪೊಲೀಸ್ ಇಲಾಖೆಯಲ್ಲಿ ಕ್ರೀಡಾ ಪಟುಗಳ ನೇರ ನೇಮಕಾತಿ'26-07-2018

ಬೆಂಗಳೂರು: ಆಸ್ಟ್ರೇಲಿಯಾದ ಗೋಲ್ಡ್ ಕೋಸ್ಟ್‌ ನಲ್ಲಿ ನಡೆದ 21ನೇ ಕಾಮನ್‌ ವೆಲ್ತ್ ಗೇಮ್ಸ್‌ ನ ಬ್ಯಾಡ್ಮಿಂಟನ್ ಕ್ರೀಡೆಯ ಮಿಶ್ರ ಟೀಂ ವಿಭಾಗದಲ್ಲಿ ಚಿನ್ನ ಹಾಗೂ ಮಹಿಳಾ ಡಬಲ್ಸ್‌ ನಲ್ಲಿ ಕಂಚು ಗೆದ್ದಿದ್ದ ಅಶ್ವಿನಿ ಪೊನ್ನಪ್ಪ ಅವರಿಗೆ ಉಪಮುಖ್ಯಮಂತ್ರಿ ಹಾಗೂ ಯುವಜನ ಮತ್ತು ಕ್ರೀಡಾ ಸಚಿವ ಡಾ.ಜಿ.ಪರಮೇಶ್ವರ್ ಅವರು 33ಲಕ್ಷ ರೂ. ಚೆಕ್ ವಿತರಣೆ ಮಾಡಿದರು.

ವಿಧಾನಸೌಧ ಕಚೇರಿಯಲ್ಲಿ ಅಶ್ವಿನಿ‌ ಪೊನ್ನಪ್ಪ ಅವರನ್ನು ಸನ್ಮಾನಿಸಿದರು. ಬಳಿಕ ಮಾಧ್ಯಮದೊಂದಿಗೆ ಮಾತ‌ನಾಡಿದ ಅವರು, ಕಾಮನ್‌ ವೆಲ್ತ್ ಗೇಮ್‌ ಬ್ಯಾಡ್ಮಿಂಟನ್‌ನಲ್ಲಿ ಚಿನ್ನದ ಪದಕ ಗೆದ್ದ ಅಶ್ವಿನಿ ‌ಪೊನ್ನಪ್ಪ ಅವರಿಗೆ 25 ಲಕ್ಷ ಹಾಗೂ ಕಂಚಿಗೆ 8 ಲಕ್ಷ ರೂ.ಪುರಸ್ಕಾರ ನೀಡಲಾಗಿದೆ. ನಮ್ಮ ರಾಜ್ಯ ಹಾಗೂ ರಾಷ್ಟ್ರಕ್ಕೆ ಕೀರ್ತಿ ತಂದಿರುವ ಅಶ್ವಿನಿ‌ ಪೊನ್ನಪ್ಪ ಅವರಿಗೆ ಅಭಿನಂದನೆ. ಒಲಂಪಿಕ್ಸ್‌ಗಾಗಿ ತಯಾರಿ ನಡೆಸುತ್ತಿರುವ ಇವರು, ಚಿನ್ನ‌ ಗೆಲ್ಲುವ‌ ಮೂಲಕ ರಾಜ್ಯಕ್ಕೆ ಕೀರ್ತಿ ತರಲಿ‌ ಎಂದು ಆಶಿಸಿದರು. ಒಲಂಪಿಕ್ಸ್ ನಲ್ಲಿ ಚಿನ್ನ ಗೆದ್ದರೆ 5 ಕೋಟಿ, ಬೆಳ್ಳಿಗೆ 3 ಕೋಟಿ ಹಾಗೂ ಕಂಚು ಗೆದ್ದರೆ 2 ಕೋಟಿ‌ ರೂ. ನೀಡುವುದಾಗಿ ಸರಕಾರ ಘೋಷಿಸಿದೆ ಎಂದರು.

ಕ್ರೀಡಾಪಟುಗಳಿಗೆ ಪೊಲೀಸ್‌ ಇಲಾಖೆಯಲ್ಲಿ‌ ನೇರ ನೇಮಕಾತಿ ಮಾಡಿಕೊಳ್ಳುವ‌ ಸಂಬಂಧ ‘ಸಿ ಆ್ಯಂಡ್‌ ಆರ್’ ನಿಯಮದಲ್ಲಿ‌ ಬದಲಾವಣೆ ತಂದು‌ ಹಿಂದಿನ‌ ಪದ್ಧತಿ‌ ಮುಂದುವರೆಸುವುದಾಗಿ ಪರಮೇಶ್ವರ್ ಹೇಳಿದರು. ಈ ಮೊದಲು ಕ್ರೀಡಾಪಟುಗಳನ್ನು‌ ನೇರ ನೇಮಕಾತಿ‌ ಮಾಡಿಕೊಳ್ಳಲಾಗುತ್ತಿತ್ತು. ಈಗ ಈ ನೇರ ನೇಮಕಾತಿ ಇಲ್ಲ. ಹೀಗಾಗಿ ನಿಯಮಕ್ಕೆ ಬದಲಾವಣೆ ತಂದು‌ ನೇರ ನೇಮಕಾತಿಗೆ ಅವಕಾಶ ನೀಡಲಾಗುವುದು ಎಂದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ