ಕುಮಾರ ಕೃಪಾ ಅಥಿತಿಗೃಹದಲ್ಲಿ ಕಾಮಗಾರಿ ರೇವಣ್ಣ ಸ್ಪಷ್ಟನೆ

H.D.Revanna reaction on Kumara krupa guest house inside work

24-07-2018

ಬೆಂಗಳೂರು: ಕುಮಾರ ಅಥಿತಿಗೃಹಕ್ಕೆ ಸಂಬಂಧ ಪಟ್ಟಂತೆ ಪೈಪ್ ಲೈನ್ ಕಾಮಗಾರಿ ನಡೆಸಲಾಗುತ್ತಿದೆಯೇ ಹೊರತು ವಾಸ್ತು ಪ್ರಕಾರ ತಮ್ಮ ಮನೆಯ ನವೀಕರಣ ಕೆಲಸ ಮಾಡುತ್ತಿಲ್ಲ ಎಂದು ಲೋಕೋಪಯೋಗಿ ಸಚಿವ ಹೆಚ್.ಡಿ.ರೇವಣ್ಣ ಸ್ಪಷ್ಟ ಪಡಿಸಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ತಮ್ಮ ಅಧಿಕೃತ ಮನೆಯನ್ನು ವಾಸ್ತು ಶಾಸ್ತ್ರಕ್ಕನುಗುಣವಾಗಿ ನವೀಕರಣ ಮಾಡಲಾಗುತ್ತಿದೆ ಎಂದು ಮಾಧ್ಯಮಗಳಲ್ಲಿ ತಪ್ಪಾಗಿ ಪ್ರಸಾರ ಮಾಡಲಾಗುತ್ತಿದೆ. ಮನೆಯೊಳಗೆ ಯಾವುದೇ ನವೀಕರಣ ಕಾಮಗಾರಿ ನಡೆಸಲಾಗುತ್ತಿಲ್ಲ. ಕುಮಾರ ಕೃಪಾ ಅಥಿತಿಗೃಹದಲ್ಲಿ ಪೈಪ್ ಲೈನ್ ಅಳವಡಿಕೆ ಮಾಡಲಾಗುತ್ತಿದೆ ಅಷ್ಟೆ. ಇದಕ್ಕಾಗಿ ಸುಮಾರು 6 ಲಕ್ಷ ಖರ್ಚು ಮಾಡಲಾಗುತ್ತಿದೆ. ಬೇಕಾದರೆ ಮಾಹಿತಿ ಹಕ್ಕು ಮೂಲಕ ಮಾಹಿತಿ ಪಡೆಯಿರಿ. ನಾನು ಯಾವುದೇ ವಿಷಯವನ್ನು ಮುಚ್ಚಿಡುತ್ತಿಲ್ಲ. ಮನೆ ನವೀಕರಣ ಮಾಡಿ ಯಾವುದೇ ಮಜಾ ಮಾಡುವ ಅಗತ್ಯ ನನಗಿಲ್ಲ ಎಂದು ವೇಳೆ ವಿವರಿಸಿದರು.

ಇದೇ ವೇಳೆ ಕಾಮಗಾರಿಗಳ ದಾಖಲಾತಿ, ಕಾಮಗಾರಿಯ ಚಿತ್ರಗಳನ್ನು ಸುದ್ದಿಗಾರರಿಗೆ ನೀಡಿದರು. ಕುಮಾರಕೃಪ ಅತಿಥಿ ಗೃಹದ ಆವರಣದಲ್ಲಿ ಮಳೆನೀರು ಹಾದು ಹೋಗಲು ಒಳಚರಂಡಿ ವ್ಯವಸ್ಥೆ ಇಲ್ಲ. ಹೆಚ್ಚು ಮಳೆಯಾಗಿ ಕುಮಾರಕೃಪ ಅತಿಥಿ ಗೃಹ ಮತ್ತು ಸಚಿವರ ಮನೆಯ ನಡುವೆ ಇದ್ದ ಕಾಂಪೌಂಡ್ ಗೋಡೆಯು ಕುಸಿದು ಬಿದ್ದಿದೆ. ಹೀಗಾಗಿ ಮಳೆ ನೀರು ಸರಾಗವಾಗಿ ಹರಿಯಲು ಮನೆಯ ಪಕ್ಕದ ಕಾಂಪೌಂಡ್ ಗೋಡೆಯ ಪಕ್ಕ ಪೈಪ್ ಲೈನ್ ಅಳವಡಿಸಲಾಗುತ್ತಿದೆ ಎಂದು ಸ್ಪಷ್ಟನೆ ನೀಡಿದರು. ಬಿಬಿಎಂಪಿ ಡ್ರೈನೇಜ್ ಗೆ ಲಿಂಕ್ ಮಾಡಲು ತಮ್ಮ ಮನೆಯಿಂದ ಪೈಪ್ ಲೈನ್ ಅಳವಡಿಕೆ ಕಾಮಗಾರಿ ಪ್ರಗತಿಯಲ್ಲಿದೆ ಎಂದು ತಿಳಿಸಿದರು.

 


ಸಂಬಂಧಿತ ಟ್ಯಾಗ್ಗಳು

H.D.Revanna Kumara krupa ಪೈಪ್ ಲೈನ್ ಡ್ರೈನೇಜ್


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ