ಪಾರಿವಾಳ ಬಿಟ್ಟು ಕಳ್ಳತನಕ್ಕೆ ಸ್ಕೆಚ್: ಖತರ್ನಾಕ್ ಕಳ್ಳರ ಬಂಧನ

They using pigeons for theft:3 arrested

24-07-2018

ಬೆಂಗಳೂರು: ಪಾರಿವಾಳ ಹಿಡಿಯುವ ನೆಪದಲ್ಲಿ ಮನೆಗಳ್ಳತನ ಮಾಡುತ್ತಿದ್ದ ಓರ್ವ ಬಾಲಾಪರಾಧಿ ಸೇರಿ ಮೂವರು ಆರೋಪಿಗಳನ್ನು ಕುಮಾರಸ್ವಾಮಿ ಲೇಔಟ್ ಠಾಣೆಯ ಪೊಲೀಸರು ಬಂಧಿಸಿ 8ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ 2 ಬೈಕ್ ಗಳನ್ನು ವಶ ಪಡಿಸುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಕುಮಾರಸ್ವಾಮಿ ಲೇಔಟ್‍ನ ಅನಿಲ್‍ಕುಮಾರ್ ಜಾನಿ (19), ರಾಹುಲ್ ನಾಯ್ಕ (20)ಬಂಧಿತ ಆರೋಪಿಗಳಾಗಿದ್ದಾರೆ. ಓರ್ವ ಬಾಲಾಪರಾಧಿಯನ್ನು ವಶಕ್ಕೆ ತೆಗೆದುಕೊಂಡು ತನಿಖೆ ಕೈಗೊಳ್ಳಲಾಗಿದೆ. ಆರೋಪಿಗಳ ಬಂಧನದಿಂದಾಗಿ ಐದಕ್ಕೂ ಹೆಚ್ಚು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಕಳ್ಳತನ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳು ಕ್ಯಾಪ್ ಧರಿಸಿ ಬೈಕ್ ನಲ್ಲಿ ಬಂದು ಬೀಗ ಹಾಕಿರುವ ಮನೆಗಳನ್ನ ಗುರುತಿಸಿ ಮನೆಗಳ್ಳತನಕ್ಕೆ ಪ್ಲಾನ್ ಹಾಕಿಕೊಳ್ಳುತ್ತಿದ್ದರು. ಬೀಗ ಹಾಕಿರುವ ಮನೆಗಳ ಮೇಲೆ ಹಾರಲು ಬಾರದ ಪಾರಿವಾಳ ಬಿಟ್ಟು ಯಾರಿಗೂ ಅನುಮಾನ ಬಾರದಂತೆ ಕಳ್ಳತನ ಮಾಡುತ್ತಿದ್ದರು. ಕಳ್ಳತನದ ವೇಳೆ ಯಾರಾದರೂ ಅನುಮಾನಿಸಿ ಪ್ರಶ್ನಿಸಿದರೆ ಪಾರಿವಾಳ ಮಹಡಿ ಮೇಲೆ ಬಂದಿದೆ ಹಿಡಿದುಕೊಳ್ಳಲು ಬಂದಿದ್ದೇವೆ ಎಂದು ಹೇಳಿ ತಪ್ಪಿಸಿಕೊಳ್ಳುತ್ತಿದ್ದರು.

ಕುಮಾರಸ್ವಾಮಿ ಲೇಔಟ್‍ನಲ್ಲಿ ಕಳ್ಳತನ ಸಂಬಂಧ ದೂರು ಬಂದ ಹಿನ್ನೆಲೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ. ತನಿಖೆ ವೇಳೆ ಘಟನಾ ಸ್ಥಳದಲ್ಲಿದ್ದ ಸಿಸಿ ಟಿವಿಯನ್ನು ಪರಿಶೀಲಿಸಿದಾಗ ಓರ್ವ ಬಾಲಕ ಅನುಮಾನಸ್ಪದವಾಗಿ ಪಾರಿವಾಳ ಹಿಡಿದು ಓಡಾಡುತ್ತಿರುವುದು ಕಂಡು ಬಂದಿದೆ.

ಕೂಡಲೇ ಎಚ್ಚೆತ್ತ ಪೊಲೀಸರು ಸಿಸಿ ಟಿವಿಯ ಜಾಡನ್ನು ಹಿಡಿದು ಬೆನ್ನತ್ತಿದ್ದಾರೆ. ಈ ವೇಳೆ ಪೊಲೀಸರಿಗೆ ಓರ್ವ ಬಾಲಕ ಸಿಕ್ಕಿದ್ದಾನೆ. ವಿಚಾರಣೆಗೆ ಒಳಪಡಿಸಿದಾಗ ಬಾಲಕ ಕಳ್ಳತನವನ್ನು ಒಪ್ಪಿಕೊಂಡಿದ್ದು, ಕೃತ್ಯದಲ್ಲಿ ಇನ್ನೂ ಇಬ್ಬರು ಭಾಗಿಯಾಗಿರುವುದಾಗಿ ತಿಳಿಸಿದ್ದಾನೆ. ಈ ವೇಳೆ ಆ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಹಲವು ಪ್ರಕರಣಗಳು ಬೆಳಕಿಗೆ ಬಂದಿದೆ.


ಸಂಬಂಧಿತ ಟ್ಯಾಗ್ಗಳು

Pigeon thives ಮನೆಗಳ್ಳತನ ಬಾಲಾಪರಾಧಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ