ಸರ್ಕಾರದ ವಿರುದ್ಧ ಬೀದಿಗಿಳಿದು ಹೋರಾಟ ಮಾಡುತ್ತೇವೆ: ರವಿಕುಮಾರ್

We will fight on the street against the government: Ravikumar

24-07-2018

ಬೆಂಗಳೂರು: ಕೇವಲ ಸರ್ಕಾರಿ ಶಾಲೆಯ ಮಕ್ಕಳಿಗೆ ಮಾತ್ರ ಉಚಿತ ಬಸ್ ಪಾಸ್ ನೀಡುವ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ನಿಲುವನ್ನು ಬಿಜೆಪಿ ಖಂಡಿಸುತ್ತಿದ್ದು, ಎಲ್ಲಾ ವಿದ್ಯಾರ್ಥಿಗಳಿಗೂ‌ ಉಚಿತ ಬಸ್ ಪಾಸ್ ವಿತರಿಸುವ ನಿರ್ಧಾರ ಪ್ರಕಟಿಸದೇ ಇದ್ದಲ್ಲಿ ಬಿಜೆಪಿ ಬೀದಿಗಿಳಿದು ಹೋರಾಟ ನಡೆಸಲಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಎಚ್ಚರಿಕೆ ನೀಡಿದ್ದಾರೆ.

ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯದಲ್ಲಿ ಶಿಕ್ಷಣ ಕ್ಷೇತ್ರವನ್ನು ಸಮ್ಮಿಶ್ರ ಸರ್ಕಾರ ಸಂಪೂರ್ಣ ನಿರ್ಲಕ್ಷಿಸಿದೆ. ಬಸ್ ಪಾಸ್ ವಿತರಣೆ, ಕೆಜಿಯಿಂದ ವಿವಿವರೆಗೆ ಬೋಧಕ, ಬೋಧಕೇತರ ಶಿಕ್ಷಕರ ನೇಮಕ, ಶಿಕ್ಷಕರ ವರ್ಗಾವಣೆ ಸೆರಿ ಸಂಪೂರ್ಣ ನಿರ್ಲಕ್ಷ್ಯ ಮಾಡಿದೆ. ಕೇವಲ ಸರ್ಕಾರಿ ಶಾಲೆಗಳ ಮಕ್ಕಳಿಗೆ ಮಾತ್ರ ಉಚಿತ ಬಸ್ ಪಾಸ್ ಎನ್ನುವ ಸರ್ಕಾರದ ಧೋರಣೆ ಖಂಡಿಸುತ್ತೇವೆ ಎಂದರು.

ಸರ್ಕಾರಿ‌ ಶಾಲಾ ಕಾಲೇಜುಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡದ ಕಾರಣ ಮಧ್ಯಮ ಬಡವರು ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಮಕ್ಕಳನ್ನು ಸೇರಿಸುತ್ತಿದ್ದಾರೆ. ಸಾಲ ಸೋಲ ಮಾಡಿ ಓದಿಸುತ್ತಿದ್ದಾರೆ. ಆದರೂ ಕೇವಲ ಸರ್ಕಾರಿ ಶಾಲೆಯಲ್ಲಿ ಓದುವವರು ಮಾತ್ರ ಬಡವರು, ಖಾಸಗಿ ಶಾಲೆಯಲ್ಲಿ ಓದುವವರು ಶ್ರೀಮಂತರು ಎನ್ನುವ ಧೋರಣೆ ಸರಿಯಲ್ಲ, ಸರ್ಕಾರಿ ಶಾಲೆ ಮಕ್ಕಳು ಮಾತ್ರ ಬಡವರು ಎನ್ನಲು ಇವರ ಬಳಿ ಏನು ಮಾನದಂಡವಿದೆ. ಸಮಾಜ ಒಡೆಯುವ ಕೆಲಸ ಮಾಡಬಾರದು ಎಂದರು.

ಆರ್ಟಿಇ ಅಡಿ ಬಡ ವಿದ್ಯಾರ್ಥಿಗಳು ಖಾಸಗಿ ಶಾಲೆಗಳಿಗೆ ಸೇರಿದ್ದಾರೆ ಅವರ ಗತಿ ಏನು? ಗ್ರಾಮೀಣ ಪ್ರದೇಶಗಳಲ್ಲಿ ಕೆಲವೆಡೆ ಸರ್ಕಾರಿ ಶಾಲೆ ಮುಚ್ಚುವ ಹೇಳಿಕೆ‌ ನೀಡಿದ್ದರಿಂದ ಖಾಸಗಿ ಶಾಲೆಗೆ ಸೇರಿಸಿದ್ದಾರೆ ಅವರ ಪಾಡು ಏನು? ಬಸ್ ಪಾಸ್ ಉಚಿತವಾಗಿ ಸಿಗಲಿದೆ ಎಂದು ಇನ್ನು ಸಾಕಷ್ಟು ವಿದ್ಯಾರ್ಥಿಗಳು ಪಾಸ್ ಪಡೆದಿಲ್ಲ ಅವರ ಕಥೆ ಏನು? ಬಸ್ ಪಾಸ್ ಇಲ್ಲದ ಕಾರಣ ಶೇ.12ರಷ್ಟು ಹಾಜರಾತಿ ಕುಸಿತ ಕಂಡಿದೆ ಎಂದು ಪ್ರಶ್ನಿಸಿದರು.

ಉತ್ತರ ಕರ್ನಾಟಕದ ಜನರು ಮತ ಹಾಕಿಲ್ಲ ಅವರ ಪರ ಏಕೆ ಇರಬೇಕು ಎಂದು ಮುಖ್ಯಮಂತ್ರಿ ಹೇಳಿಕೆ ನೀಡಿದ್ದಾರೆ. ಇದು ದೇಶ ವಿರೋಧಿ, ಸಂವಿಧಾನ ವಿರೋಧಿ, ಕಾನೂನು ವಿರೋಧಿ ನೀತಿ, ಉತ್ತರ ಕರ್ನಾಟಕದ ಜನರು ಜೆಡಿಎಸ್ ಗೆ ಮತ ಹಾಕಲ್ಲ ಅವರ ಪರ ಏಕೆ ಇರಬೇಕು ಎನ್ನುವ ಧೋರಣೆ ಸರಿಯಲ್ಲ, ಸಿಎಂ ಜೆಡಿಎಸ್ ಮತದಾರರಿಗೋ ಅಥವಾ ರಾಜ್ಯಕ್ಕೋ ಎನ್ನುವುದನ್ನು ಸಿಎಂ ಸ್ಪಷ್ಟಪಡಿಸಬೇಕು. ಕೂಡಲೇ ತಮ್ಮ ಹೆಳಿಕೆ ವಾಪಸ್ ಪಡೆಯಿರಿ ಎಂದು‌ ಒತ್ತಾಯಿಸಿದರು.

ಬಡವರ ಪರ ಕಣ್ಣೀರು ಹಾಕುವ ಮುಖ್ಯಮಂತ್ರಿಗಳಿಗೆ ವಿದ್ಯಾರ್ಥಿಗಳ ಪರಿಸ್ಥಿತಿ ಅರ್ಥವಾಗುತ್ತಿಲ್ಲವಾ, ಇದು ಸಿಎಂಗೆ ನೆನಪಾಗಿಲ್ಲವೇ ಈಗ ಕಣ್ಣೀರು ಬರಲಿಲ್ಲವೇ ಎಂದು ಸಿಎಂ ಧೋರಣೆಯನ್ನು ಖಂಡಿಸಿದರು.

ಪಾಸ್ ಪಾಸ್ ವಿಚಾರದಲ್ಲಿ ಸಮ್ಮಿಶ್ರ ಸರ್ಕಾರ ರಾಜಕಾರಣ ಮಾಡುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ ಆರೋಪಿಸಿದರು. ಈ ಸರ್ಕಾರ ವಿದ್ಯಾರ್ಥಿಗಳ ನಡುವೆ ಹಿರಿಮೆ-ಗರಿಮೆ ಮೂಡಿಸ ಹೊರಟಿದೆ, ಹಿಂದೆ ಪ್ರವಾಸದ ವಿಚಾರ, ಯೂನಿಫಾರಂ,ಪಠ್ಯ ಪುಸ್ತಕ ಆದೇಶಗಳನ್ನು ನೋಡಿದ್ದೆ ಈಗ ಹೊಸ ಆದೇಶ ಬಸ್ ಪಾಸ್ ವಿಚಾರದಲ್ಲಿ ಬಂದಿದೆ ಎಂದರು.

ಸಮ್ಮಿಶ್ರ ಸರ್ಕಾರಕ್ಕೆ ಕುಮಾರಸ್ವಾಮಿ ಡ್ರೈವರ್, ಕಾಂಗ್ರೆಸ್ ಕಂಡಕ್ಟರ್. ಬಸ್ ಪಾಸ್ ಗೆ 300 ಕೋಟಿ ವೆಚ್ಚವಾಗಲಿದೆ. ಈಗಾಗಲೇ ಸಾರಿಗ ಇಲಾಖೆ ಶೇ.25, ಶಿಕ್ಷಣ ಇಲಾಖೆ ಶೇ.25 ರಷ್ಟು ಭರಿಸುವುದಾಗಿ ಹೇಳಿವೆ. ಇನ್ನು 150 ಕೋಟಿ ಹಣ ನೀಡಲು ಸರ್ಕಾರಕ್ಕೆ ಬರವೇ? ಇಷ್ಟು ಹಣವಿಲ್ಲದಷ್ಟು ದಿವಾಳಿಯಾಗಿದೆಯಾ ಸರ್ಕಾರ ಎಂದು ವಾಗ್ದಾಳಿ ನಡೆಸಿದರು.

ರಾಜ್ಯದಲ್ಲಿ 1.14 ಕೋಟಿ ಬಿಪಿಎಲ್ ಕಾರ್ಡ್ ಇದೆ, ಜನಸಂಖ್ಯೆಯಲ್ಲಿ 1.10 ಕೋಟಿ ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ, ಮಕ್ಕಳ ಹಿತ ಕಾಯದ ನೀವು ರಾಜ್ಯವನ್ನು ಹೇಗೆ ಕಾಯುತ್ತೀರಿ, ರಾಮನಗರ, ಹಾಸನ, ಮಂಡ್ಯಕ್ಕೆ ಕೊಟ್ಟ ಅನುದಾನದಲ್ಲಿ 150 ಕೋಟಿ‌ ಕಡಿತ ಮಾಡಿ ಮಕ್ಕಳಿಗಾಗಿ ಅನುಕೂಲ ಮಾಡಿ. ಇಲ್ಲದೆ ಇದ್ದಲ್ಲಿ ಬಿಜೆಪಿ ವಿದ್ಯಾರ್ಥಿಗಳೊಂದಿಗೆ ಬೀದಿಗಿಳಿದು ಹೋರಾಟ ಮಾಡಲಿದೆ ಎಂದರು.


ಸಂಬಂಧಿತ ಟ್ಯಾಗ್ಗಳು

Bus pass Ravikumr ವೆಚ್ಚ ದಿವಾಳಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ