12ನೇ ವಯಸ್ಸಿಗೇ ಪೊಲೀಸ್ ಇನ್ಸ್ಪೆಕ್ಟರ್ ಆದ ಬಾಲಕ

An 12 years old boy as police inspector

24-07-2018

ಬೆಂಗಳೂರು: ಕೇವಲ ಹನ್ನೆರಡು ವರ್ಷಕ್ಕೆ ಬಾಲಕನೊಬ್ಬ ನಗರದಲ್ಲಿ ಪೊಲೀಸ್ ಇನ್ಸ್ಪೆಕ್ಟರ್ ಆಗಿ ಅಧಿಕಾರ ಸ್ವೀಕರಿಸಿದ್ದಾನೆ. ಇನ್ಸ್ಪೆಕ್ಟರ್ ಸಮವಸ್ತ್ರದಲ್ಲಿ ಠಾಣೆಗೆ ಬಂದ ಬಾಲಕನಿಗೆ ಸಂಪ್ರದಾಯಿಕ ಸ್ವಾಗತ ನೀಡಿ ಹೂಗುಚ್ಚ ನೀಡಿ ಬರಮಾಡಿಕೊಂಡ ಸಿಬ್ಬಂದಿ ಇನ್ಸ್ಪೆಕ್ಟರ್ ಆಸನದಲ್ಲಿ ಕೂರಿಸಿ ಆತನ ಆದೇಶ ಪಾಲಿಸಿ ಸೆಲ್ಯೂಟ್ ಹೊಡೆದರು.

ಇಂತಹ ಹೃದಯ ಸ್ಪರ್ಶಿ ಸನ್ನಿವೇಶವು ನಗರದ ವಿವಿಪುರಂ ಪೊಲೀಸ್ ಠಾಣೆಯಲ್ಲಿ ಕಂಡುಬಂತು ಇನ್ಸ್ಪೆಕ್ಟರ್ ಆಗಿ ಆಸನದಲ್ಲಿ ಕುಳಿತು ಆದೇಶ ನೀಡುತ್ತಿದ್ದ ಮಗನನ್ನು ನೋಡಿ ಆತನ ತಾಯಿ ಕಣ್ಣೀರಿಟ್ಟರೆ ತಂದೆ ಮೂಕವಿಸ್ಮಿತರಾದರು. ಠಾಣೆಯ ಸಿಬ್ಬಂದಿ ಅಪರೂಪದ ಸನ್ನಿವೇಶಕ್ಕೆ ಸಾಕ್ಷಿಯಾದರು.

ತಲಸ್ಸೇಮಿಯಾ ಪೀಡಿತ: ತಲಸ್ಸೇಮಿಯಾ ಮತ್ತು ಮಧುಮೇಹದಿಂದ ಬಳಲುತ್ತಿರುವ 12 ವರ್ಷದ ಬಾಲಕ ಶಶಾಂಕ್ ಶಾಲೆ ಮುಂದುವರೆಸಲು ಸಾಧ್ಯವಾಗದೇ ವಾಣಿವಿಲಾಸ ಆಸ್ಪತ್ರೆಯಲ್ಲಿ  ಶಶಾಂಕ್ ಚಿಕಿತ್ಸೆ ಪಡೆಯುತ್ತಿದ್ದು, ಆತನಿಗೆ ಪೊಲೀಸ್ ಇನ್ಸ್ಪೆಕ್ಟರ್ ಆಗುವ ಆಸೆಯಿತ್ತು.

ಪೊಲೀಸ್ ಇನ್ಸ್ಪೆಕ್ಟರ್ ಆಗಬೇಕೆಂಬ ಆತನ ಆಸೆಯನ್ನು ಮೇಕ್ ಎ ವಿಶ್ ಫೌಂಡೇಷನ್ ಮತ್ತು ವಾಣಿವಿಲಾಸ ಆಸ್ಪತ್ರೆ ಮುಂದಾಗಿದ್ದರಿಂದ ಇಂದು ವಿವಿಪುರಂ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್  ಆಗುವ ಅವಕಾಶ ಕೂಡಿ ಬಂದಿದೆ. ವಿವಿ ಪುರಂ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ರಾಜು ಅವರು ಶಶಾಂಕ್‍ಗೆ ಅಧಿಕಾರ ವಹಿಸಿಕೊಟ್ಟು ಬಾಲಕನ ಬಹುದಿನದ ಕನಸು ಈಡೇರಿಸಿದ್ದಾರೆ.

ಸಂಪ್ರದಾಯಿಕ ಸ್ವಾಗತ: ಪೊಲೀಸ್ ಸಮವಸ್ತ್ರದಲ್ಲಿ ಬಂದ ಇನ್ಸ್ಪೆಕ್ಟರ್ ಶಶಾಂಕ್‍ನನ್ನು ಠಾಣೆಯ ಸಿಬ್ಬಂದಿ ಗೌರವ ಪೂರ್ವಕವಾಗಿ ಸ್ವಾಗತಿಸಿದರು. ಬಳಿಕ ಇನ್ಸ್ಪೆಕ್ಟರ್ ಶಶಾಂಕ್ ಠಾಣೆಯ ಎಲ್ಲ ಸಿಬ್ಬಂದಿಯ ಪರಿಚಯ ಮಾಡಿಕೊಂಡು ವಿವಿ ಪುರಂ ಠಾಣೆಯ ಇನ್ಸ್ಪೆಕ್ಟರ್ ಆಗಿ ಅಧಿಕಾರ ವಹಿಸಿಕೊಂಡರು. ಬಳಿಕ ಠಾಣೆಗೆ ಸಂಬಂಧಿಸಿದ ಎಲ್ಲ ವಿವರವನ್ನೂ ಇನ್ಸ್ಪೆಕ್ಟರ್ ಶಶಾಂಕ್‍ಗೆ ನೀಡಲಾಯಿತು.

ಚಿಂತಾಮಣಿಯ ನಾಯಂಡಹಳ್ಳಿ ಗ್ರಾಮದ ಮುನಿರಾಜ್ ಮತ್ತು ಸುಜಾತಾ ದಂಪತಿಯ ಮಗನಾದ ಶಶಾಂಕ್ ಸರ್ಕಾರಿ ಶಾಲೆಯಲ್ಲಿ ಏಳನೇ ತರಗತಿ ಓದುತ್ತಿದ್ದಾನೆ. ಈತನಿಗೆ ಐದು ತಿಂಗಳ ಮಗುವಾಗಿರುವಾಗಲೇ ತಲಸ್ಸೇಮಿಯಾ ಸಮಸ್ಯೆ ಕಾಣಿಸಿಕೊಂಡಿತ್ತು. ಅಷ್ಟೇ ಅಲ್ಲದೆ, ಎರಡು ವರ್ಷಗಳಿಂದ ಮಧುಮೇಹವೂ ಕಾಣಿಸಿಕೊಂಡಿತ್ತು. ಈಗ ಖಾಯಿಲೆ ಉಲ್ಬಣಿಸಿರುವುದರಿಂದ ಶಶಾಂಕ್ ವಾಣಿ ವಿಲಾಸ ಆಸ್ಪತ್ರೆಯ ಮಕ್ಕಳ ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಉತ್ತಮ ಸಮಾಜದ ಕನಸು: ಪೊಲೀಸ್ ಇನ್ಸ್ಪೆಕ್ಟರ್ ಆಗಿ ಅಧಿಕಾರ ವಹಿಸಿಕೊಂಡ ಶಶಾಂಕ್ ಸಂಪೂರ್ಣ ಮದ್ಯಪಾನ ನಿಷೇಧ ಮಾಡಬೇಕು ಕುಡುಕರನ್ನು ಸರಿದಾರಿಗೆ ತಂದು ಉತ್ತಮ ಸಮಾಜ ನಿರ್ಮಿಸುವ ಬಯಕೆ. ಅದಕ್ಕಾಗಿಯೇ ಪೊಲೀಸ್ ಇನ್ಸ್ಪೆಕ್ಟರ್ ಆಗುವ ಕನಸು ಕಂಡಿದೆ ನಾನು ಕಂಡ ಕನಸು ಇಂದು ನನಸಾಗಿದೆ. ಇನ್ಸ್ಪೆಕ್ಟರ್ ಆಗಿದ್ದು ಖುಷಿಯಾಗಿದೆ ಎಂದು ತಿಳಿಸಿದ್ದಾನೆ.

ನನ್ನ ಮಗನಿಗೆ ಇನ್ಸ್ಪೆಕ್ಟರ್ ಆಗುವ ಕನಸಿತ್ತು. ತುಂಬಾ ಚೆನ್ನಾಗಿಯೇ ಓದುತ್ತಿದ್ದ. ಆದರೆ ಆ ದೇವರು ಅವನಿಗೆ ಖಾಯಿಲೆ ಕೊಟ್ಟುಬಿಟ್ಟ. ಆತನ ಆಸೆಯನ್ನು ತೀರಿಸುವ ಪ್ರಯತ್ನ ಮಾಡಿದ್ದೇವೆ. ಅದಕ್ಕೆ ಆಸ್ಪತ್ರೆಯವರು, ಪೊಲೀಸರೂ ಸ್ಪಂದಿಸಿದ್ದಾರೆ ಎಂದು ತಾಯಿ ಸುಜಾತಾ ತಿಳಿಸಿದರು.

ನಂತರ ಪೊಲೀಸ್ ಇನ್ಸ್ಪೆಕ್ಟರ್ ಆಗುವ ಆಸೆ ಈಡೇರಿಸಿಕೊಂಡ ಬಾಲಕ ಶಶಾಂಕ್‍ನನ್ನು ಕಚೇರಿಗೆ ಕರೆಸಿಕೊಂಡ ದಕ್ಷಿಣ ವಿಭಾಗದ ಡಿಸಿಪಿ ಡಾ.ಶರಣಪ್ಪ ಅವರು ಹೂಗೂಚ್ಚ ನೀಡಿ ಅಭಿನಂದನೆ ಸಲ್ಲಿಸಿದರು.

 


ಸಂಬಂಧಿತ ಟ್ಯಾಗ್ಗಳು

inspector Police ಸೆಲ್ಯೂಟ್ ಮೂಕವಿಸ್ಮಿತ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ