ಇಷ್ಟಕ್ಕೂ ಯಾರೀತ ಯಮವೇಷಧಾರಿ?

do you know that man yama dharmaraju who creating awareness about helmet in roads

23-07-2018

ಬೆಂಗಳೂರು: ನಗರದಲ್ಲಿ ಸಂಚಾರ ನಿಯಮ ಉಲ್ಲಂಘಿಸುವವರನ್ನು ತಡೆದು, ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುತ್ತಿರುವ ಯಮರಾಜನನ್ನು ನೋಡಿರಬೇಕು ಇಲ್ಲವೇ ಅವರ ಬಗ್ಗೆ ಕೇಳಿರಬಹದು ಅಂದ ಹಾಗೆ ಯಾರೀ ಯಮರಾಜ.!

ಇಷ್ಟಕ್ಕೂ ಯಾರೀ ಯಮವೇಷಧಾರಿ. ಹೀಗೇಕೆ ರಸ್ತೆಯಲ್ಲಿ ನಿಂತು ಯಾರೂ ಇಷ್ಟಪಡದ ಯಮನ ವೇಷ ಧರಿಸಿಕೊಂಡು ಟ್ರಾಫಿಕ್ ನಿಯಮದ ಬಗ್ಗೆ ಹೇಳುತ್ತಿದ್ದಾರೆ ಎಂದುಕೊಂಡರೆ ಅದಕ್ಕೆ ಉತ್ತರ ಅವರು ಸಹೋದರನನ್ನು ಅಪಘಾತದಲ್ಲಿ ಕಳೆದುಕೊಂಡ ದುಃಖ ಯಾರಿಗೂ ಬೇಡ ಎನ್ನುತ್ತಾ ಜಾಗೃತಿ ಕೆಲಸಕ್ಕೆ ಮುಂದಾಗಿದ್ದಾರೆ.

ಜಾಗೃತಿ ಹುಟ್ಟಿಸುವ ಕೆಲಸದಲ್ಲಿ ನಿರತರಾಗಿರುವ ಇವರ ಹೆಸರು ವೀರೇಶ್ ಮುತ್ತಿನಮಠ. ಇವರನ್ನು ಈ ಯಮ ವೇಷಧಾರಿಯನ್ನಾಗಿ ಪ್ರೇರೇಪಿಸಿದ್ದು ಅವರ ಸೋದರನ ಸಾವು. 2017ರ 21ರಂದು ವೀರೇಶ್ ಅವರ ಸೋದರ ಮರಿಸ್ವಾಮಿ ದ್ವಿಚಕ್ರ ವಾಹನ ಅಪಘಾತದಿಂದ ತಲೆಗೆ ಗಂಭೀರ ಏಟು ಬಿದ್ದು 23ರಂದು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಬೈಕ್‍ನಲ್ಲಿ ಹಿಂಬದಿ ಸವಾರ ಆಗಿದ್ದ ಅವರು ತಲೆಗೆ ಹೆಲ್ಮೆಟ್ ಧರಿಸಿರಲಿಲ್ಲ. ಹೆಲ್ಮೆಟ್ ಧರಿಸಿದ್ದಿದ್ದರೆ ಅವರು ಹೀಗೆ ಪ್ರಾಣ ಕಳೆದುಕೊಳ್ಳುತ್ತಿರಲಿಲ್ಲ ಎಂದು ವೈದ್ಯರು ಹೇಳಿದ್ದರು. ಈ ಘಟನೆಯಿಂದ ವಾಹನ ಚಲಾಯಿಸುವಾಗ ಹಿಂಬದಿಯವರು ಮತ್ತು ಚಲಾಯಿಸುವವರು ಹೆಲ್ಮೆಟ್ ಧರಿಸಬೇಕಾದ ಅಗತ್ಯವನ್ನು ವೀರೇಶ್ ಮನಗಂಡರು.

ನಗರದ ರಸ್ತೆಗಳಲ್ಲಿ ಹೆಲ್ಮೆಟ್ ಧರಿಸದೆ ದ್ವಿಚಕ್ರ ವಾಹನದಲ್ಲಿ ಓಡಾಡುವವರ ಸಂಖ್ಯೆ ನೋಡಿ ಆತಂಕಗೊಂಡ ವೀರೇಶ್ ಪ್ರಾಣ ರಕ್ಷಣೆಗಾಗಿ ಯಮ ವೇಷಧಾರಿಯಾಗಿ ಸವಾರರಿಗೆ ಹೆಲ್ಮೆಟ್ ಧರಿಸಿರುವಂತೆ ಮನವೊಲಿಸುವ ಕೆಲಸದಲ್ಲಿ ತೊಡಗಿಸಿಕೊಂಡು ರಸ್ತೆಗಳಲ್ಲಿ ಸಂಚರಿಸುತ್ತಿದ್ದಾರೆ.

ಬಹಳಷ್ಟು ಹಿಂಬದಿ ಸವಾರರು ಹೆಲ್ಮೆಟ್ ಧರಿಸಬೇಕೆಂಬ ಸಲಹೆಯನ್ನು ಗಂಭೀರವಾಗಿ ಪರಿಗಣಿಸುವುದೇ ಇಲ್ಲ. ಅದರಿಂದ ಏನೂ ಪ್ರಯೋಜವಿಲ್ಲ ಎಂದೇ ವಾದಿಸುತ್ತಾರೆ. ಆದರೂ ಅವರ ಮನವೊಲಿಸಿ ಹೆಲ್ಮೆಟ್ ಧರಿಸಿದ್ದರೆ ಆಗುವ ಅಪಾಯದ ಬಗ್ಗೆ ಮನವರಿಕೆ ಮಾಡಿಕೊಡುವ ಪ್ರಯತ್ನ ನಡೆಸುತ್ತಿದ್ದೇನೆ ಎನ್ನುತ್ತಾರೆ ವೀರೇಶ್.

ಸಂಚಾರ ಪೊಲೀಸರು ಇಂಥದ್ದೊಂದು ಕಾರ್ಯಕ್ರಮದ ಮೂಲಕ ಜಾಗೃತಿ ಹುಟ್ಟಿಸುವ ಕಾರ್ಯಕ್ರಮ ಹಾಕಿಕೊಂಡಿದ್ದರೂ, ಪ್ರಾಣ ತೆಗೆಯುವ ದೇವರಾದ ಯಮನ ವೇಷಧಾರಿಯಾಗಲು ಯಾರೂ ಒಪ್ಪುತ್ತಿರಲಿಲ್ಲ. ರವೀಂದ್ರ ಕಲಾಕ್ಷೇತ್ರದ ಕ್ಯಾಂಟೀನ್‍ನಲ್ಲಿ ಪೊಲೀಸರ ಸಂಪರ್ಕಕ್ಕೆ ಬಂದ ವೀರೇಶ್ ಪ್ರಾಣ ರಕ್ಷಣೆಗಾಗಿ ಯಮ ವೇಷಧಾರಿಯಾಗಲು ಸಮ್ಮತಿಸಿದರು.

ಆದರೆ ಸ್ನೇಹಿತರು ಈ ವೇಷ ಧರಿಸುವುದು ಬೇಡ ಎಂದು ಹೇಳಿದರು, ಆದರೆ ವೀರೇಶ್ ತನ್ನ ನಿರ್ಧಾರ ಬದಲಿಸದೆ ತನ್ನ ಕೆಲಸ ಮುಂದುವರಿಸಿದರು. ವೀರೇಶ್ ಅವರು ಸ್ವಯಂ ಸೇವೆಯಾಗಿ ಸಮಾಜಕ್ಕೆ ನೀಡುತ್ತಿರುವ ಕೊಡುಗೆ ಇದಾಗಿದ್ದು, ಇದಕ್ಕಾಗಿ ಅವರೂ ಒಂದೇ ಒಂದು ಪೈಸೆ ಕೂಡ ಪಡೆದುಕೊಳ್ಳುತ್ತಿಲ್ಲ. ವೀರೇಶ್ ಅವರ ಈ ಸೇವೆ ಫಲ ಪ್ರದವಾಗಿರುವುದರಿಂದ ಪೊಲೀಸರು ನಗರದ ಇತರ ಭಾಗಗಳಿಗೂ ವಿಸ್ತರಿಸಲು ಒಲವು ತೋರಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ