ಸರ್ಕಾರದ ವಿರುದ್ಧ ದಲಿತ ಸಂಘಟನೆಗಳ ತೀವ್ರ ಆಕ್ರೋಶ

sc-st organisations huge protest in front of dcm residence

23-07-2018

ಬೆಂಗಳೂರು: ಪರಿಶಿಷ್ಟ ಜಾತಿ ವರ್ಗಗಳ(ಎಸ್ಸಿ-ಎಸ್ಟಿ)ನೌಕರರ, ಅಧಿಕಾರಿಗಳ ಹಿಂಬಡ್ತಿ ಆದೇಶ ರದ್ದುಗೊಳಿಸಬೇಕೆಂಬದು ಸೇರಿ ಹಲವು ಬೇಡಿಕೆಗಳಿಗೆ ಆಗ್ರಹಿಸಿ ದಲಿತ ಸಂಘಟನೆಗಳ ಒಕ್ಕೂಟದ ಮುಖಂಡರು ಕಾರ್ಯಕರ್ತರು ದಲಿತ ವರ್ಗಕ್ಕೆ ಸೇರಿದ ನಗರದ ಉಪಮುಖ್ಯಮಂತ್ರಿ, ಸಚಿವರುಗಳ ನಿವಾಸದ ಮುಂದೆ ಬೃಹತ್ ಪ್ರತಿಭಟನೆ ನಡೆಸಿದರು.

ಸದಾಶಿವನಗರದಲ್ಲಿರುವ ಉಪಮುಖ್ಯಮಂತ್ರಿ ಜಿ.ಪರಮೇಶ್ವರ, ಸಚಿವರಾದ ಪ್ರಿಯಾಂಕ ಖರ್ಗೆ, ವೆಂಕಟರಮಣಪ್ಪ, ರಮೇಶ್ ಜಾರಕಿಹೊಳಿ ಹಾಗೂ ಎನ್.ಮಹೇಶ್ ನಿವಾಸದ ಮುಂದೆ ಸರತಿಯಂತೆ ದಲಿತ ಸಂಘಟನೆಗಳ ಒಕ್ಕೂಟದ ಮುಖಂಡರು, ಕಾರ್ಯಕರ್ತರು ಸೇರಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ಪರಿಶಿಷ್ಟ ಜಾತಿ ವರ್ಗಗಳ ಅಧಿಕಾರಿಗಳ ಹಾಗೂ ನೌಕರರ ಬಡ್ತಿ, ಜೇಷ್ಠತೆ ಸಂರಕ್ಷಿಸುವ ಕಾಯ್ದೆಗೆ ರಾಷ್ಟ್ರಪತಿಗಳು ಅಂಕಿತ ಹಾಕಿದ್ದರೂ, ರಾಜ್ಯ ಮೈತ್ರಿ ಸರ್ಕಾರ ಕಾಯ್ದೆ ಅನುಷ್ಠಾನಗೊಳಿಸದೇ ದಲಿತ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ದೂರಿದರು

ಎಸ್ಸಿ-ಎಸ್ಟಿ ಅಧಿಕಾರಿ, ನೌಕರರ ಬಡ್ತಿ, ಜೇಷ್ಠತೆ ಸಂರಕ್ಷಿಸುವ ಸಂಬಂಧದ ಕಾಯ್ದೆಗೆ ರಾಷ್ಟ್ರಪತಿಗಳು ಅಂಕಿತ ಹಾಕಿದ್ದಾರೆ. ಜೊತೆಗೆ ರಾಜ್ಯ ಸರ್ಕಾರ ರಾಜ್ಯ ಪತ್ರದಲ್ಲಿ ಅಧಿಸೂಚನೆ ಸಹ ಹೊರಡಿಸಿದೆ. ಆದರೆ, ಅನುಷ್ಠಾನಗೊಳಿಸಲು ಕ್ರಮ ಕೈಗೊಳ್ಳದೇ ಮೌನಕ್ಕೆ ಶರಣಾಗಿದೆ. ರಾಷ್ಟ್ರಪತಿಗಳ ಅಂಕಿತಕ್ಕೆ ಗೌರವ ಕೊಡದ ಏಕೈಕ ರಾಜ್ಯ ಸರ್ಕಾರ ಎಂಬ ಅಪಖ್ಯಾತಿಗೆ ಈ ಸರ್ಕಾರ ಒಳಗಾಗಿದೆ ಎಂದು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಒಕ್ಕೂಟದ ಮುಖಂಡ ಎಂ.ವೆಂಕಟಸ್ವಾಮಿ ಆರೋಪಿಸಿದರು.

ಸದರಿ ಕಾಯ್ದೆಯನ್ನು ಯಥಾವತ್ತಾಗಿ ಜಾರಿಗೊಳಿಸಲು ಸಿಎಂ ಹೆಚ್.ಡಿ. ಕುಮಾರಸ್ವಾಮಿ ಅವರು ಶೀಘ್ರದಲ್ಲಿ ಕ್ರಮ ಕೈಗೊಳ್ಳಬೇಕು. ನಮ್ಮ ಸಮುದಾಯ ಹಕ್ಕುಗಳನ್ನು ದೊರಕಿಸಿಕೊಡಬೇಕು. ಅಲ್ಲದೆ, ಈ ಕಾಯ್ದೆ ಅನುಷ್ಠಾನಕ್ಕೆ ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಹಲವು ದಿನಗಳಿಂದ ಅನಿಧಿಷ್ಠಾವಧಿ ಪ್ರತಿಭಟನೆ ಮುಂದುವರೆಸುತ್ತಿದ್ದರೂ ಸರ್ಕಾರ ಕಣ್ಮಚಿ ಕುಳಿತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ದಲಿತ ರಕ್ಷಣಾ ವೇದಿಕೆ ಅಧ್ಯಕ್ಷ ಸೋರಹುಣಸೆ ವೆಂಕಟೇಶ್ ಮಾತನಾಡಿ, ಹಿಂಬಡ್ತಿ ನೀಡಿದ್ದವರಿಗೆ ಇದೇ ಜೂ.8ರಂದು ಕೆಳಹಂತದ ಹುದ್ದೆಗಳ ವೇತನ ನಿಗದಿಪಡಿಸಲು ಆದೇಶಿಸಲಾಗಿದೆ. ಜೊತೆಗೆ ಸುಪ್ರಿಂ ಕೋರ್ಟ್ ಆದೇಶವನ್ನು ಉಲ್ಲಂಘಿಸಿ ನಿವೃತ್ತಿ ಹೊಂದಿದ ದಲಿತ ಅಧಿಕಾರಿ ಹಾಗೂ ನೌಕರರಿಗೆ ಪಿಂಚಣಿಯಲ್ಲಿಯೂ ಕಡಿತಗೊಳಿಸಲಾಗಿದೆ ಎಂದು ದೂರಿದರು

ಎಸ್ಸಿ-ಎಸ್ಟಿ ಸರ್ಕಾರಿ ಅಧಿಕಾರಿ, ನೌಕರರ ಬಡ್ತಿ ಹಾಗೂ ಜೇಷ್ಠತೆ ಸಂರಕ್ಷಿಸುವ ಕಾಯ್ದೆಗೆ ರಾಷ್ಟ್ರಪತಿಗಳು ಇದೇ ಜೂ.14ರಂದು ಅಂಕಿತ ಹಾಕಿದ್ದಾರೆ. ರಾಜ್ಯ ಸರ್ಕಾರವೂ ಜೂ.23ರಂದು ರಾಜ್ಯ ಪತ್ರದಲ್ಲಿ ಅಧಿಸೂಚನೆ ಹೊರಡಿಸಿದೆ. ಆದರೆ, ಇಂದಿನ ಮೈತ್ರಿ ಸರ್ಕಾರ ಕಾಯ್ದೆ ಅನುಷ್ಠಾನಕ್ಕೆ ಮುಂದಾಗುತ್ತಿಲ್ಲ ಎಂದು ಆರೋಪಿಸಿದರು.

ಸೂಚನೆ ಪಾಲನೆ ಮಾಡದೇ ರಾಜ್ಯದಲ್ಲಿ ನಿಯಮಬಾಹಿರವಾಗಿ ಹಲವು ಇಲಾಖೆಗಳಲ್ಲಿ ಪರಿಶಿಷ್ಟ ಜಾತಿ ಹಾಗೂ ವರ್ಗದ 8 ಸಾವಿರಕ್ಕೂ ಹೆಚ್ಚು ಅಧಿಕಾರಿಗಳು ಹಾಗೂ ನೌಕರರಿಗೆ ಹಿಂಬಡ್ತಿ ನೀಡಲಾಗಿದೆ. ಜೊತೆಗೆ ಸುಮಾರು 60 ಸಾವಿರ ಅಧಿಕಾರಿ ಮತ್ತು ನೌಕರರ ಸೇವಾ ಜೇಷ್ಠತೆಯನ್ನು ಕೆಳಗಿನ ಕ್ರಮಾಂಕದಲ್ಲಿ ನಿಗದಿಪಡಿಸಲಾಗಿದೆ. ಇದರ ಪರಿಣಾಮ ಹಿಂಬಡ್ತಿ ಪಡೆದ ಮೂವರು ನೌಕರರು ಇದರ ಆಘಾತದಿಂದ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯ ಸರ್ಕಾರ ಈ ಕೂಡಲೇ ಎಸ್ಸಿ-ಎಸ್ಟಿ ಸಮುದಾಯಕ್ಕೆ ಆಗುತ್ತೀರುವ ಅನ್ಯಾಯ ತಡೆಯಬೇಕು. ಜೊತೆಗೆ, ದಲಿತ ಸಮುದಾಯವನ್ನು ಪ್ರತಿನಿಧಿಸುವ ಸಚಿವರು ಈ ಕುರಿತು ಮುಖ್ಯಮಂತ್ರಿಗಳ ಮೇಲೆ ಒತ್ತಡ ಹೇರುವ ಮೂಲಕ ನ್ಯಾಯ ಒದಗಿಸಬೇಕು ಎಂದು ದಲಿತ ಒಕ್ಕೂಟದ ಸದಸ್ಯರು ಆಗ್ರಹಿಸಿದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ