4ನೇ ದಿನಕ್ಕೆ ಲಾರಿ ಮುಷ್ಕರ: ಮಾತುಕತೆಗೆ ಮುಂದಾಗದ ಕೇಂದ್ರ

4th day of lorry strike: huge losses

23-07-2018

ಬೆಂಗಳೂರು: ಡೀಸೆಲ್‍ ದರ ಇಳಿಕೆ ವಿಮಾ ಜಾರಿ ದೇಶಾದ್ಯಂತ ಟೋಲ್ ಮುಕ್ತ ಮಾಡುವುದೂ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಳೆದ ಶುಕ್ರವಾರದಿಂದ ನಡೆಸುತ್ತಿರುವ ಅನಿರ್ಧಿಷ್ಟಾವಧಿ ಲಾರಿ ಮುಷ್ಕರ ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ.

ಲಾರಿ ಮುಷ್ಕರದಿಂದಾಗಿ ಸರಕು ಸಾಗಾಣೆಯಲ್ಲಿ ವ್ಯತ್ಯಯ ಕಂಡುಬಂದಿದೆ. ಮುಷ್ಕರದಿಂದ ಸಾವಿರಾರು ಕೋಟಿ ರೂಗಳ ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ ಬಂದ್ ಹಿನ್ನಲೆಯಲ್ಲಿ ರಾಷ್ಟ್ರೀಯ ಹೆದ್ದಾರಿಗಳು ಎಪಿಎಂಸಿ ಯಾರ್ಡ್‍ಗಳಲ್ಲಿ ಲಾರಿಗಳ ಸಂಚಾರ ವಿರಳವಾಗಿವೆ.

ಲಾರಿಗಳು ದೊರೆಯದಿರುವ ಹಿನ್ನಲೆಯಲ್ಲಿ ಸರಕು ಸಾಗಾಣೆ ಮಾಡಲು ಲಘು ವಾಹಗಳನ್ನೇ ಅವಲಂಬಿಸುವಂತಾಗಿ ವ್ಯಾಪಾರಿಗಳು ಕೂಲಿ ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಲಾರಿ ಮಾಲೀಕರ ಸಂಘಟನೆಯಲ್ಲಿನ ಒಡಕಿನ ಹಿನ್ನಲೆಯಲ್ಲಿ ಮೊದಲ ಎರಡು ದಿನ ಮಷ್ಕರ ತೀವ್ರ ಸ್ವರೂಪ ಪಡೆದುಕೊಂಡಿರದಿದ್ದರೂ ನಿನ್ನೆಯಿಂದ ಮುಷ್ಕರದ ಪರಿಣಾಮವನ್ನು ಜನತೆ ಎದುರಿಸುವಂತಾಗಿದೆ.

ಅಗತ್ಯ ವಸ್ತುಗಳಿಗೆ ವಿನಾಯಿತಿ: ಅಖಿಲ ಭಾರತ ಸರಕು ಸಾಗಾಣಿಕೆ ವಾಹನಗಳ ಸಂಘದ ಕರೆಯ ಮೇರೆಗೆ ಲಾರಿ ಮುಷ್ಕರ ನಡೆಯುತ್ತಿದ್ದು, ತರಕಾರಿ, ಔಷಧಿ, ಹಾಲು ಪೂರೈಕೆ ಲಾರಿಗಳಿಗೆ ಮುಷ್ಕರದಿಂದ ವಿನಾಯಿತಿ ನೀಡಲಾಗಿದೆ. ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳಲ್ಲಿ ದೊಡ್ಡ ದೊಡ್ಡ ಲಾರಿಗಳು ಸಾಲುಗಟ್ಟಿ ನಿಂತಿವೆ. ಅದರಲ್ಲಿಯೂ ಯಶವಂತಪುರದ ಟ್ರಕ್‍ ಟರ್ಮಿನಲ್, ಎಪಿಎಂಸಿ, ಕಂಠೀರವ ನಗರ, ನಾಯಂಡನಹಳ್ಳಿ ಸೇರಿದಂತೆ ವಿವಿಧೆಡೆ ಲಾರಿಗಳು ಸಾಲುಗಟ್ಟಿ ನಿಂತಿವೆ.

ಪೆಟ್ರೋಲಿಯಂ ಟ್ಯಾಂಕರ್ ಗಳು  ಎಂದಿನಂತೆ ಸಂಚಾರ ಮಾಡುತ್ತಿರುವುದರಿಂದ ಪೆಟ್ರೋಲ್ ಮತ್ತು ಡೀಸೆಲ್ ಸರಬರಾಜಿನಲ್ಲಿ ಯಾವುದೇ ವ್ಯತ್ಯಯ ಕಂಡುಬಂದಿಲ್ಲ. ದೇಶದಾದ್ಯಂತ ನಡೆಯುತ್ತಿರುವ ಅನಿರ್ದಿಷ್ಟಾವಧಿ ಲಾರಿ ಮುಷ್ಕರದಿಂದ ರಾಷ್ಟ್ರದಾದ್ಯಂತ ಸುಮಾರು 10ಸಾವಿರ ಕೋಟಿ ರೂ ನಷ್ಟ ಸಂಭವಿಸಿದೆ. ಲಾರಿ ಮುಷ್ಕರದಿಂದಾಗಿ ಮಹಾರಾಷ್ಟ್ರದಲ್ಲಿ ಸುಮಾರು 2000 ಕೋಟಿ ರೂ. ಹೆಚ್ಚು ನಷ್ಟ ಅಂದಾಜಿಸಲಾಗಿದೆ.

ಬಿಗಡಾಯಿಸಿದ ಸಮಸ್ಯೆ: ಸರ್ಕಾರ ಕೂಡಲೇ ನಮ್ಮ ಸಮಸ್ಯೆಗಳಿಗೆ ಸ್ಪಂದಿಸಿ ಪರಿಹರಿಸಬೇಕು, ಇಲ್ಲದಿದ್ದರೆ ದಿನೇ ದಿನೇ ಸಮಸ್ಯೆಗಳು ಬಿಗಡಾಯಿಸುತ್ತವೆ ಎಂದು ಮಹಾರಾಷ್ಟ್ರ ರಾಜ್ಯ ಲಾರಿ, ಟೆಂಪೋ, ಟ್ಯಾಂಕರ್, ಖಾಸಗಿ ಬಸ್‍ಗಳ ಒಕ್ಕೂಟದ ಅಧ್ಯಕ್ಷ ರಾಮನ್ ಕೋಸ್ಲ ಮನವಿ ಮಾಡಿದ್ದಾರೆ.

ದೊಡ್ಡ ದೊಡ್ಡ ಲಾರಿ ಟ್ರಾನ್ಸ್ ಪೋರ್ಟ್ ಮಾಲೀಕರಿಗೆ ಮುಷ್ಕರದ ಬಿಸಿ ಅಷ್ಟಾಗಿ ತಟ್ಟುವುದಿಲ್ಲ. ಆದರೆ ಒಂದು-ಎರಡು ಲಾರಿ ಇರುವ ಮಾಲೀಕರು ತೀವ್ರ ಸಂಕಷ್ಟದಲ್ಲಿ ಸಿಲುಕುತ್ತಾರೆ. ಸರ್ಕಾರ ಲಾರಿ ಮಾಲೀಕರ ಕನಿಷ್ಠ ಬೇಡಿಕೆಗಳನ್ನಾದರೂ ಗಮನಿಸಬೇಕು ಎಂದು ಅಖಿಲ ಭಾರತ ಸರಕು ಸಾಗಾಣೆ ವಾಹನ ಕಾಂಗ್ರೆಸ್‍ನ ಬಾಲ್ ಮಲ್ಕಿತ್ ಸಿಂಗ್ ಹೇಳಿದ್ದಾರೆ. ಡೀಸೆಲ್ ಬೆಲೆ ಇಳಿಸಬೇಕು. ಸರಕು ಸಾಗಾಣಿಕೆ ವಾಹನಗಳಿಗೆ ಟೋಲ್‍ಗಳಲ್ಲಿ ಶುಲ್ಕ ವಿಧಿಸಬಾರದು ಹಾಗೂ ವಾಣಿಜ್ಯ ವಾಹನಗಳ ಥರ್ಡ್ ಪಾರ್ಟಿ ಇನ್ಸೂರೆನ್ಸ್ ಶುಲ್ಕ ಇಳಿಸಬೇಕು ಎಂಬುದು ಮುಷ್ಕರ ನಿರತ ಲಾರಿ ಮಾಲೀಕರ ಆಗ್ರಹವಾಗಿದೆ.

ಬಂದರು, ಕಬ್ಬಿಣ, ಕಲ್ಲಿದ್ದಲು, ಸಿಮೆಂಟ್, ಗ್ರಾನೈಟ್ ಸೇರಿದಂತೆ ಅಗತ್ಯ ವಸ್ತುಗಳ ಪೂರೈಕೆ ಹೊರತುಪಡಿಸಿ ಎಲ್ಲಾ ರೀತಿಯ ಲಾರಿಗಳ ಸಂಚಾರವನ್ನು ಬಂದ್ ಮಾಡಲಾಗಿದೆ ಎಂದು ಸಿಂಗ್ ತಿಳಿಸಿದ್ದಾರೆ. ಮುಷ್ಕರ ನಾಲ್ಕನೇ ದಿನಕ್ಕೆ ಕಾಲಿಟ್ಟರೂ ಇದೂವರೆಗೆ ಮಾತುಕತೆಗೆ ಸರ್ಕಾರದ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.

 

 ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ