ತಲಕಾವೇರಿಯಲ್ಲಿ ಸಿಎಂ ವಿಶೇಷ ಪೂಜೆ ಸಲ್ಲಿಕೆ

special pooja at talakaveri: cm kumaraswamy

20-07-2018

ಬೆಂಗಳೂರು: ತಲಕಾವೇರಿಗೆ ಭೇಟಿ ನೀಡಿದರೆ ಅಧಿಕಾರ ಕಳೆದುಕೊಳ್ಳಬೇಕಾಗುತ್ತದೆ ಎಂಬ ಮೂಢ ನಂಬಿಕೆಯನ್ನು ಸುಳ್ಳು ಮಾಡಿರುವ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಪತ್ನಿ ಸಮೇತರಾಗಿ, ಕಾವೇರಿ ನದಿಯ ಉಗಮ ಸ್ಥಳ ತಲಕಾವೇರಿಯಲ್ಲಿಂದು ವಿಶೇಷ ಪೂಜೆ ಸಲ್ಲಿಸಿದರು.

ನಂತರ ಕಬಿನಿ ಹಾಗೂ ಕೆ.ಆರ್.ಎಸ್ ಜಲಾಶಯಕ್ಕೆ ಕುಮಾರಸ್ವಾಮಿ ದಂಪತಿ ಮಧ್ಯಾಹ್ನ ಬಾಗಿನ ಅರ್ಪಿಸಿದರು. ಇತ್ತೀಚೆಗೆ ಸುರಿದ ಭಾರೀ ಮಳೆಯಿಂದ ಕಬಿನಿ, ಹಾರಂಗಿ ಹಾಗೂ ಕೆ.ಆರ್.ಎಸ್ ಜಲಾಶಯಗಳು ಪೂರ್ಣ ಪ್ರಮಾಣದಲ್ಲಿ ಭರ್ತಿಯಾಗಿದ್ದವು. ದಂಪತಿ ಸಹಿತವಾಗಿ ಕಬಿನಿ ಮತ್ತು ಕೆ.ಆರ್.ಎಸ್ ಜಲಾಶಯಗಳಿಗೆ ಕುಮಾರಸ್ವಾಮಿ ಬಾಗಿನ ಅರ್ಪಿಸಿದರು.

ಈ ಸಂದರ್ಭದಲ್ಲಿ ಮೈಸೂರು, ಮಂಡ್ಯ ಜಿಲ್ಲೆಯ ಸಚಿವರು ಹಾಗೂ ಶಾಸಕರು ಹಾಜರಿದ್ದರು. ಇದಕ್ಕೂ ಮುನ್ನ ಮೈಸೂರಿನ ಚಾಮುಂಡಿಬೆಟ್ಟಕ್ಕೆ ತೆರಳಿ ಚಾಮುಂಡೇಶ್ವರಿ ದೇವಿಗೆ ಮುಖ್ಯಮಂತ್ರಿಗಳು ವಿಶೇಷ ಪೂಜೆ ಸಲ್ಲಿಸಿದರು. ಇದಕ್ಕೂ ಮುನ್ನ ತಲಕಾವೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದ ಎಲ್ಲಾ ಕಡೆ ಉತ್ತಮ ಮಳೆಯಾಗುತ್ತಿದ್ದು, ಜಲಾಶಯಗಳು ಭರ್ತಿಯಾಗುತ್ತಿರುವುದು ರೈತರಿಗೆ ಸಂತಸದ ವಿಚಾರವಾಗಿದೆ. ವ್ಯವಸಾಯ ಮತ್ತು ಕುಡಿಯುವ ನೀರಿಗೆ ಅನುಕೂಲವಾಗಿದೆ, ಜನತೆಗೆ ವಿಶೇಷವಾಗಿ ರೈತರಿಗೆ ಸಂತೋಷವಾಗಿದೆ ಎಂದು ಹೇಳಿದರು.

ಉತ್ತರ ಕರ್ನಾಟಕ ಭಾಗದ ತುಂಗಭದ್ರ, ಆಲಮಟ್ಟಿ, ನಾರಾಯಣಪುರ ಜಲಾಶಯಗಳು ಸಹ ಭರ್ತಿಯಾಗಿದ್ದು, ಅಲ್ಲಿಗೂ ತೆರಳಿ ಬಾಗಿನ ಅರ್ಪಿಸಲಾಗುವುದು ಎಂದು ಅವರು ಹೇಳಿದರು.

ಪರಿಶಿಷ್ಟ ಜಾತಿ ಮತ್ತು ವರ್ಗದವರ ಬಡ್ತಿ ಮೀಸಲಾತಿ ಕುರಿತಂತೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ವಿಷಯ ಈಗ ನ್ಯಾಯಾಲಯದಲ್ಲಿದ್ದು, ನ್ಯಾಯಾಲಯದ ತೀರ್ಪಿನ ಅನ್ವಯ ಕ್ರಮ ಕೈಗೊಳ್ಳಲಾಗುವುದು ಎಂದರು.


ಸಂಬಂಧಿತ ಟ್ಯಾಗ್ಗಳು

H.D.Kumaraswamy Cauvery ಜಲಾಶಯ ಸಂತೋಷ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ