ಗೌರಿ ಹತ್ಯೆ: ಏಳನೇ ಆರೋಪಿ ಬಂಧನ, ತೀವ್ರ ವಿಚಾರಣೆ

gauri lankesh Murder: 7th accused arrested

20-07-2018

ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಗೆ ಕೃತ್ಯದಲ್ಲಿ ಪ್ರಮುಖ ಪಾತ್ರ ವಹಿಸಿರುವ ಏಳನೇ ಆರೋಪಿಯನ್ನು ವಿಶೇಷ ತನಿಖಾ ತಂಡದ(ಎಸ್‍ಐಟಿ) ಅಧಿಕಾರಿಗಳು ಬಂಧಿಸಿ ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.

ಸುಳ್ಯ ಮೂಲದ ಮೋಹನ್ ನಾಯಕ್(30) ಬಂಧಿತ ಆರೋಪಿಯಾಗಿದ್ದಾನೆ, ಕಳೆದ ಬುಧವಾರ ರಾತ್ರಿ ಆತನನ್ನು ಸುಳ್ಯದ ಸಂಪಾಜೆಯ ನಿವಾಸದಲ್ಲಿಯೇ ಬಂಧಿಸಿದ ಮೋಹನ್‍ ನಾಯಕ್‍ನನ್ನು ನಗರಕ್ಕೆ ಕರೆತಂದು ವಿಚಾರಣೆ ನಡೆಸಿ ಮಾಹಿತಿ ಪಡೆದ ನಂತರ ಗುರುವಾರ ಸಂಜೆ ಎಸ್‍ಐಟಿ ಅಧಿಕಾರಿಗಳು ಕೋರ್ಟ್ ಮುಂದೆ ಹಾಜರು ಪಡಿಸಿದ್ದರು.

ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಮೋಹನ್ ನಾಯಕ್ ಏಳನೇ ಬಂಧಿತ ಆರೋಪಿಯಾಗಿದ್ದು, ಇತ್ತೀಚೆಗೆ ಬಂಧಿತವಾಗಿರುವ ಪರಶುರಾಮ ವಾಘ್ಮೋರೆಯನ್ನು ಹಿಂಬದಿಯಲ್ಲಿ ಕೂರಿಸಿಕೊಂಡು ಬೈಕ್ ಚಾಲನೆ ಮಾಡಿದ್ದು ಈತನೇ ಎಂದು ಹೇಳಲಾಗುತ್ತಿದೆ. ಜೊತೆಗೆ ಬೆಂಗಳೂರಿನಲ್ಲಿದ್ದ ಪತ್ರಕರ್ತೆ ಗೌರಿ ಲಂಕೇಶ್ ಮನೆ ಕುರಿತು ತನ್ನ ಸಹಚರರಿಗೆ ಮಾಹಿತಿ ನೀಡಿದ್ದು ಈತನೇ ಎಂದು ಶಂಕಿಸಲಾಗಿದೆ.

ಆರೋಪಿಯು ಗೌರಿ ಹತ್ಯೆಗೂ 3ತಿಂಗಳ ಹಿಂದೆಯೇ ಬಿಡದಿ ಬಳಿ ಬಾಡಿಗೆ ರೂಂ ಮಾಡಿದ್ದು, ಅದರಲ್ಲಿ ಗೌರಿ ಹತ್ಯೆ ಆರೋಪಿಗಳಾದ ಪರಶುರಾಮ ವಾಘ್ಮೋರೆ ಮತ್ತು ಇತರರನ್ನು ಜೊತೆಗಿರಿಸಿಕೊಂಡಿದ್ದನು. ಕೃತ್ಯಕ್ಕೆ ವಾಘ್ಮೋರೆಗೆ 7.65ಎಂಎಂ ಗನ್ ಕೊಟ್ಟು ಬೈಕ್ ಚಲಾಯಿಸುತ್ತಿದ್ದ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ. ಗೌರಿ ಲಂಕೇಶ್‍ಹತ್ಯೆಯಲ್ಲಿ ಈತನ ಪಾತ್ರ ಬಹುಮುಖ್ಯವಾದ್ದದು ಎಂದು ತಿಳಿದುಬಂದಿರುವ ಕಾರಣ ಎಸ್‍ಐಟಿ ಅಧಿಕಾರಿಗಳು ನ್ಯಾಯಾಲಯದ ಅನುಮತಿ ಮೇರೆಗೆ 14ದಿನಗಳ ಕಾಲ ತಮ್ಮ ಕಸ್ಟಡಿಗೆ ಪಡೆದುಕೊಂಡು ವಿಚಾರಣೆ ಆರಂಭಿಸಿದ್ದಾರೆ. ಬೈಕ್‍ನಲ್ಲಿ ಬಂದಿದ್ದ ಇಬ್ಬರು ಕಳೆದ 5ಸೆಪ್ಟೆಂಬರ್ 2017ರಂದು ಗೌರಿ ಲಂಕೇಶ್‍ನನ್ನು ಅವರ ಮನೆ ಮುಂದೆಯೇ ಗುಂಡಿಕ್ಕಿ ಹತ್ಯೆ ಮಾಡಿದ್ದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ