ಬೆಂಗಳೂರು ಮೇಯರ್ ಪಟ್ಟಕ್ಕೆ ಪೈಪೋಟಿ ಶುರು!

who is next mayor of bbmp?

20-07-2018

ಬೆಂಗಳೂರು: ಬೆಂಗಳೂರು ಮಹಾನಗರ ಪಾಲಿಕೆ ಮೇಯರ್ ಯಾರಾಗುತ್ತಾರೆ ಎನ್ನುವ ಚರ್ಚೆ ಸದ್ಯ ಆರಂಭವಾಗಿದ್ದು, ಈ ಸಾರಿ ಇರುವ ಕೆಟಗಿರಿಯನ್ನೇ ಬದಲಿಸುವ ಸಾಧ್ಯತೆ ಗೋಚರಿಸುತ್ತಿದೆ.

ಕಳೆದ ಮೂರು ಅವಧಿಯಿಂದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಆಡಳಿತ ಇದ್ದು, ಮೂರು ಅವಧಿಗೆ ಕಾಂಗ್ರೆಸ್ ಸದಸ್ಯರು ಮೇಯರ್ ಆಗಿ ಕಾರ್ಯನಿರ್ವಹಿಸಿದ್ದಾರೆ. ಈ ಸಾರಿ ಮೇಯರ್ ಪದವಿಯನ್ನು ತಮಗೆ ಕೊಡಿ ಎಂದು ಜೆಡಿಎಸ್ ಕೇಳಿದೆ. ಆದರೆ ಆ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದ್ದು, ಕಾಂಗ್ರೆಸ್ ಸದಸ್ಯರೇ ಮೇಯರ್ ಆಗಲಿದ್ದಾರೆ ಎಂಬ ಮಾತು ಅಧಿಕೃತವಾಗುತ್ತಿದೆ.

ಬದಲಾಗುತ್ತಾ ಕೆಟಗಿರಿ: ಈ ಸಾರಿಯ ಮೀಸಲಾತಿ ಪ್ರಕಾರ ‘ಸಾಮಾನ್ಯ ಮಹಿಳೆ’ ಮೇಯರ್ ಸ್ಥಾನ ಅಲಂಕರಿಸಬೇಕು. ತಮ್ಮವರಿಗೆ ಅವಕಾಶ ಕೊಡಿಸಬೇಕೆಂಬ ಕಾರಣಕ್ಕೆ ಕೆಲವರು ಮೇಯರ್ ಕೆಟಗಿರಿಯನ್ನೇ ಬದಲಿಸಲು ಮುಂದಾಗಿದ್ದಾರೆ ಎನ್ನುವ ಮಾಹಿತಿ ಇದೆ.

ಇನ್ನು ಎರಡು ತಿಂಗಳಲ್ಲಿ ಮೇಯರ್ ಸಂಪತ್‍ ರಾಜ್ ಅಧಿಕಾರಾವಧಿ ಮುಕ್ತಾಯವಾಗಲಿದೆ. ಇದರಿಂದ ಮುಂದಿನ ಅವಧಿಗೆ “ಸಾಮಾನ್ಯ ಮಹಿಳೆ’ ತಪ್ಪಿಸಿ ಹಿಂದುಳಿದ ವರ್ಗ ‘ಎ’ ಗೆ ಬದಲಾಯಿಸುವ ಯತ್ನ ಸಾಗಿದೆ ಎನ್ನಲಾಗುತ್ತಿದೆ. ಇದರ ಜೊತೆ ಜೊತೆಗೆ ಅಲ್ಪಸಂಖ್ಯಾತ ಮಹಿಳೆ ಇಲ್ಲವೇ ಪುರುಷರನ್ನು ಮೇಯರ್ ಮಾಡಿಸುವ ಸಲುವಾಗಿ ಕಾಂಗ್ರೆಸ್ ಪಕ್ಷದಲ್ಲಿ ಕಸರತ್ತು ನಡೆಯುತ್ತಿದೆ ಎಂಬ ಮಾಹಿತಿ ಇದೆ.

ಫೀಲ್ಡಿಗಿಳಿದ ಶಾಸಕರು: ಮೇಯರ್ ಸ್ಥಾನಕ್ಕೆ ಭರ್ಜರಿ ಪೈಪೋಟಿ ಆರಂಭವಾಗಿದೆ. ಸಚಿವ ಕೆ.ಜೆ. ಜಾರ್ಜ್, ಶಾಸಕರಾದ ರಾಮಲಿಂಗಾ ರೆಡ್ಡಿ ಹಾಗೂ ಎನ್.ಎ.ಹ್ಯಾರಿಸ್ ತಮ್ಮವರನ್ನು ಮೇಯರ್ ಸೀಟಿನಲ್ಲಿ ಕೂರಿಸುವ ಶತಪ್ರಯತ್ನ ಮಾಡುತ್ತಿದ್ದಾರೆ.

ಇವರು ಶತಪ್ರಯತ್ನ ನಡೆಸಿದ್ದು ತಮ್ಮವರಿಗೆ ಮೇಯರ್ ಪಟ್ಟ ಕೊಡಿಸಲು ಯತ್ನಿಸಿದ್ದಾರೆ. ಇದರಿಂದ ಸದ್ಯ ಮೇಯರ್ ಸ್ಥಾನಕ್ಕೆ ಲಿಂಗರಾಜಪುರಂನ ಲಾವಣ್ಯ ಗಣೇಶ್ ರೆಡ್ಡಿ, ಶಾಂತಿನಗರ ವಾರ್ಡ್‍ನ ಪಿ.ಸೌಮ್ಯ ಶಿವಕುಮಾರ್, ಜಯನಗರ ವಾರ್ಡ್‍ನ ಗಂಗಾಂಬಿಕೆ ಮಲ್ಲಿಕಾರ್ಜುನ ಮೇಯರ್ ರೇಸ್‍ನಲ್ಲಿ ಮುಂಚೂಣಿಯಲ್ಲಿದ್ದಾರೆ. ಸದ್ಯ ರೇಸ್‍ನಲ್ಲಿರುವ ಮೇಯರ್ ಪಟ್ಟ ಆಕಾಂಕ್ಷಿಯಾದ ಗಂಗಾಂಬಿಕಾ ಮಲ್ಲಿಕಾರ್ಜುನ ಬೆನ್ನಿಗೆ ರಾಮಲಿಂಗಾ ರೆಡ್ಡಿ ನಿಂತಿದ್ದಾರೆ. ಇವರನ್ನು ಲಿಂಗಾಯಿತ ಕೋಟಾ ಅಡಿ ಮೇಯರ್ ಮಾಡಿ ಎನ್ನುತ್ತಿದ್ದಾರೆ. ಸಚಿವ ಕೆ.ಜೆ ಜಾರ್ಜ್ ತಮ್ಮ ಕ್ಷೇತ್ರ ವ್ಯಾಪ್ತಿಯ ಲಾವಣ್ಯ ಗಣೇಶ್‍ ರೆಡ್ಡಿ ಪರ ಹೈಕಮಾಂಡ್‍ ಮಟ್ಟದಲ್ಲಿ ಲಾಬಿ ನಡೆಸಿದ್ದಾರೆ. ಸೌಮ್ಯ ಶಿವಕುಮಾರ್ ಪರ ಶಾಸಕ ಎನ್‍.ಎ.ಹ್ಯಾರಿಸ್‍ ಓಡಾಡುತ್ತಿದ್ದಾರೆ.

ಈ ಮೂವರೂ ಕಾರ್ಪೊರೇಟರ್ ಗಳು ಕೂಡ ತಾವು ಮೇಯರ್ ಸ್ಥಾನ ಆಕಾಂಕ್ಷಿಗಳು ಎಂದಿದ್ದಾರೆ. ತಮ್ಮವರನ್ನು ಮೇಯರ್ ಮಾಡುವ ಮೂಲಕ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ವಿರುದ್ಧ ಬಲ ಪ್ರದರ್ಶನ ಮಾಡಲು ಮುಂದಾಗಿದ್ದಾರೆ. ಇವರೆಲ್ಲರ ಪೈಪೋಟಿ ನಡುವೆಯೇ ಎಚ್‍ಎಂಟಿ ವಾರ್ಡ್ ಕಾರ್ಪೊರೇಟರ್ ಆಶಾ ಸುರೇಶ್‍ ಕೂಡ ಪ್ರಯತ್ನ ನಡೆಸಿದ್ದಾರೆ.

ಜೆಡಿಎಸ್‍ ಯತ್ನ: ಇವರುಗಳ ಪೈಪೋಟಿ ನಡುವೆಯೇ ಜೆಡಿಎಸ್‍ ಕೂಡ ಮಿತ್ರ ಪಕ್ಷ ಕಾಂಗ್ರೆಸ್‍ಗೆ ಮನವಿ ಮಾಡಿದ್ದು, ಈ ಸಾರಿ ಮೇಯರ್ ಪಟ್ಟ ಜೆಡಿಎಸ್‍ಗೆ ಬಿಟ್ಟುಕೊಡುವಂತೆ ಮನವಿ ಮಾಡಿದೆ. ಇವರುಗಳ ಕಡೆಯಿಂದ ಹಾಲಿ ಜೆಡಿಎಸ್‍ ಪಕ್ಷದ ನಾಯಕಿ ಹಾಗೂ ಕಾವಲಬೈರಸಂದ್ರ ವಾರ್ಡ್ ಕಾರ್ಪೊರೇಟರ್ ನೇತ್ರಾ ನಾರಾಯಣ್ ಪ್ರಬಲ ಆಕಾಂಕ್ಷಿಯಾಗಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Mayor BBMP ಪದವಿ ಸಾಮಾನ್ಯ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


Supara suddi
  • Nagaraj madival
  • Work