ಲಕ್ಷ್ಮೀವರ ತೀರ್ಥ ಶ್ರೀ ವಿಧಿವಶ: ಸಿಬಿಐ-ಸಿಐಡಿ ತನಿಖೆಗೆ ಭಕ್ತ ಸಮೂಹ ಆಗ್ರಹ

Lakshmivara tirtha swamiji death: Devotees demanding to investigation

19-07-2018

ಬೆಂಗಳೂರು: ಉಡುಪಿಯ ಅಷ್ಟಮಠಗಳಲ್ಲಿ ಒಂದಾಗಿರುವ ಶಿರೂರು ಮಠದ ಲಕ್ಷ್ಮೀವರ ತೀರ್ಥ ಶ್ರೀಗಳು ವಿಧಿವಶರಾಗಿದ್ದಾರೆ. ಆದರೆ ಅವರ ಸಾವಿನ ಬಗ್ಗೆ ಭಾರೀ ಅನುಮಾನ ವ್ಯಕ್ತವಾಗಿದ್ದು, ಈ ಬಗ್ಗೆ ಸಿಬಿಐ ಇಲ್ಲವೆ ಸಿಐಡಿ ತನಿಖೆ ನಡೆಸುವಂತೆ ಭಕ್ತ ಸಮೂಹ ಆಗ್ರಹಿಸಿದೆ.

ಸ್ವಾಮೀಜಿಗೆ ವಿಷಪ್ರಾಶನ ಮಾಡಿಸಲಾಗಿದೆ ಎಂದು ಒಂದು ವರ್ಗ ಆಪಾದಿಸಿದ್ದರೆ ಮತ್ತೊಂದೆಡೆ ಸ್ವಾಮೀಜಿ ಸಾವು ನಿಗೂಢವಾಗಿದೆ ಎಂದು ಇನ್ನೊಂದು ಬಣ ದೂರಿದೆ. ಆದರೆ ಉಡುಪಿಯ ಪೇಜಾವರ ಸ್ವಾಮೀಜಿ ಈ ಎಲ್ಲಾ ಆಪಾದನೆಗಳನ್ನು ಅಲ್ಲಗಳೆದಿದ್ದು, ವಿಷಪ್ರಾಶನ ಮಾಡಿಸಲು ಸಾಧ್ಯವೇ ಇಲ್ಲ. ಸ್ವಾಮೀಜಿ ಅವರಿಗೆ ಲಿವರ್ ಮತ್ತು ಕಿಡ್ನಿ ವೈಫಲ್ಯವಾಗಿತ್ತು ಎಂದು ಹೇಳಿದ್ದಾರೆ.

ಉಡುಪಿಯ ಪೇವಾವರ ಮಠದ ಮಾಜಿ ಕಿರಿಯ ಸ್ವಾಮೀಜಿಗಳಾದ ವಿಶ್ವ ವಿಜಯ ಸ್ವಾಮೀಜಿ ಅನುಮಾನ ವ್ಯಕ್ತಪಡಿಸಿರುವುದು ಭಾರೀ ಚರ್ಚೆಗೆ ಕಾರಣವಾಗಿದೆ. ಲಕ್ಷ್ಮೀವರ ತೀರ್ಥ ಸ್ವಾಮೀಜಿ ಅವರಿಗೆ 55 ವರ್ಷ ವಯಸ್ಸಾಗಿತ್ತು. ಉದರ ಸಂಬಂಧಿ ಸಮಸ್ಯೆಯಿಂದಾಗಿ ಅವರನ್ನು ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ನಿನ್ನೆ ದಾಖಲಿಸಲಾಗಿತ್ತು. ಆದರೆ. ಚಿಕಿತ್ಸೆ ಫಲಕಾರಿಯಾಗದೆ ಇಂದು ಮುಂಜಾನೆ ಅವರು ಮೃತಪಟ್ಟಿದ್ದಾರೆ.

ಮರಣೋತ್ತರ ಪರೀಕ್ಷೆ ನಡೆಸಿದ ಕೆಎಂಸಿ ಆಸ್ಪತ್ರೆ ವೈದ್ಯರು ಶಿರೂರು ಶ್ರೀಗಳ ದೇಹದಲ್ಲಿ ವಿಷಕಾರಿ ಅಂಶ ಪತ್ತೆಯಾಗಿದೆ ಎಂದು ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಮಠದ 30ನೇ ಯತಿಗಳಾಗಿದ್ದ ಶಿರೂರು ಶ್ರೀಗಳು ಮೂರು ಪರ್ಯಾಯಗಳನ್ನು ಪೂರೈಸಿದ್ದರು.

ಮುಖ್ಯಮಂತ್ರಿ ಹೆಚ್.ಡಿ.ಕುಮಾರ ಸ್ವಾಮಿ, ಈ ಬಗ್ಗೆ ಪ್ರತಿಕ್ರಿಯೆ ನೀಡಿ, ಈ ಘಟನೆ ಬಗ್ಗೆ ತನಿಖೆ ನಡೆಸಲು ಸರ್ಕಾರ ಸಿದ್ಧವಿದೆ ಎಂದು ಭರವಸೆ ನೀಡಿದ್ದಾರೆ.

ಶ್ರೀಲಕ್ಷ್ಮೀವರ ತೀರ್ಥ ಸ್ವಾಮೀಜಿಯವರು ಪೂರ್ವಾಶ್ರಮದಲ್ಲಿ ಹೆಬ್ರಿ ತಾಲೂಕಿನ ಮಡಮಕ್ಕಿ ಮೂಲದ ಪಿ.ವಿಠಲ ಆಚಾರ್ಯ ಮತ್ತು ಕುಸುಮಾ ಆಚಾರ್ಯ ಅವರ ಪುತ್ರರಾಗಿದ್ದರು. ಹರೀಶ್ ಆಚಾರ್ಯ ಅವರ ಮೂಲ ನಾಮವಾಗಿತ್ತು. ಶೀರೂರು ಮಠದ 29ನೇ ಯತಿ ಶ್ರೀ ಲಕ್ಷ್ಮೇಮನೋಜ್ಞ ತೀರ್ಥರು ಸನ್ಯಾಸ ಪೀಠ ತ್ಯಜಿಸಿದ ನಂತರ 1971ರಲ್ಲಿ ಮಠದ ಪರಂಪರೆಯ 30ನೇ ಯತಿಯಾಗಿ ಶ್ರೀಲಕ್ಷ್ಮೀವರ ತೀರ್ಥ ಸ್ವಾಮೀಜಿ ಅವರನ್ನು ನೇಮಿಸಲಾಗಿತ್ತು.

ತಮ್ಮ ಮೊದಲ ಪರ್ಯಾಯವನ್ನು 1979- 1981ರಲ್ಲಿ ಪೂರೈಸಿದ್ದರು. ತಮ್ಮ ಮೊದಲನೇ ಪರ್ಯಾಯದ ಅವಧಿಯಲ್ಲಿ ಶ್ರೀಕೃಷ್ಣ ಮಠದ ಮುಖಮಂಟಪವನ್ನು ನವೀಕರಣಗೊಳಿಸಿದ್ದರು. 1994-1996ರಲ್ಲಿ ಎರಡನೇ ಪರ್ಯಾಯ ನಡೆಸಿದ್ದ ಶೀರೂರು ಶ್ರೀಗಳು, 2010- 2012ರಲ್ಲಿ ಮೂರನೇ ಬಾರಿ ಶ್ರೀಕೃಷ್ಣಮುಖ್ಯಪ್ರಾಣರಿಗೆ ಪರ್ಯಾಯ ಪೂಜೆ ಸಲ್ಲಿಸಿದ್ದರು. ಈ ಅವಧಿಯಲ್ಲಿ ಶ್ರೀಕೃಷ್ಣನಿಗೆ ಪ್ರತಿದಿನ ವಿಶೇಷ ಅಲಂಕಾರಿಕ ಪೂಜೆಯನ್ನು ಸಲ್ಲಿಸುವುದರ ಮೂಲಕ ವಿಶೇಷ ಕೊಡುಗೆಯನ್ನು ನೀಡಿದ್ದರು.

ಕಳೆದ ಕೆಲ ತಿಂಗಳುಗಳಿಂದ ಶೀರೂರು ಶ್ರೀಗಳಿಗೆ ಆಗಾಗ ಆರೋಗ್ಯ ಸಮಸ್ಯೆ ಎದುರಾಗುತ್ತಲೇ ಇತ್ತು. ಈ ಹಿಂದೆ ಥೈರಾಯ್ಡ್ ಸಮಸ್ಯೆ ಇದ್ದಿದ್ದರಿಂದ ಅವರಿಗೆ ಶಸ್ತ್ರ ಚಿಕಿತ್ಸೆ ನಡೆಸಲಾಗಿತ್ತು. ನಂತರದ ದಿನಗಳಲ್ಲಿ ಪದೇ ಪದೇ ತಪಾಸಣೆಗೆ ಆಸ್ಪತ್ರೆಗೆ ತೆರಳುತ್ತಿದ್ದ ಶ್ರೀಗಳು ಆರೋಗ್ಯ ಸ್ಥಿತಿ ಆಗಾಗ ಬಿಗಡಾಯಿಸುತ್ತಿತ್ತು.

ಚುನಾವಣೆ ಸಂದರ್ಭ ನಿರ್ಜಲೀಕರಣದಿಂದ ಮತ್ತು ಕಡಿಮೆ ರಕ್ತದೊತ್ತಡದಿಂದ ಅಸ್ವಸ್ಥರಾಗಿದ್ದರು. ಎರಡು ದಿನಗಳ ಹಿಂದೆ ಮತ್ತೆ ಆರೋಗ್ಯದಲ್ಲಿ ಏರುಪೇರಾಗಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಇದೀಗ ಆಸ್ಪತ್ರೆಯಲ್ಲೇ ವಿಧಿವಶರಾಗಿದ್ದಾರೆ.

 

 


ಸಂಬಂಧಿತ ಟ್ಯಾಗ್ಗಳು

lakshmivara tirtha Devotees ವಿಧಿವಶ ಅಲಂಕಾರ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ