ಐಎಎಸ್ ಅಧಿಕಾರಿಗಳ ಮನೆಗೆ ಕನ್ನ: ಅಜ್ಮೀರ್ ಕಳ್ಳರಿಬ್ಬರ ಬಂಧನ

Police arrested 2 ajmer thieves at  bengaluru

19-07-2018

ಬೆಂಗಳೂರು: ಕಲಬುರಗಿ ಪ್ರಾದೇಶಿಕ ಆಯುಕ್ತರಾದ ಸುಬೋದ್ ಯಾದವ್ ಸೇರಿ ಇಬ್ಬರು ಹಿರಿಯ ಐಎಎಸ್ ಅಧಿಕಾರಿಗಳ ಮನೆಗಳಿಗೆ ಹಾಡಹಗಲೇ ಕನ್ನ ಹಾಕಿ ಲೂಟಿ ಮಾಡಿ ಪರಾರಿಯಾಗಿದ್ದ ರಾಜಸ್ತಾನದ ಅಜ್ಮೀರ್ ನ ಇಬ್ಬರು ಕುಖ್ಯಾತ ಕಳ್ಳರನ್ನು ಬಂಧಿಸುವಲ್ಲಿ ಸಂಜಯನಗರ ಪೊಲೀಸರು ಯಶಸ್ವಿಯಾಗಿದ್ದಾರೆ.

ರಾಜಸ್ಥಾನದ ಅಜ್ಮೀರ್ ನ ಜಗದೀಶ್ ಅಲಿಯಾಸ್ ಜಗ್ಗ(34) ಹಾಗೂ ರತನ್ ಅಲಿಯಾಸ್ ರಾಜೇಂದ್ರ(30)ನನ್ನ ಬಂಧಿಸಲಾಗಿದೆ. 600 ಗ್ರಾಂ ಚಿನ್ನಾಭರಣ, 2.5 ಕೆಜಿ ಬೆಳ್ಳಿ ಸೇರಿ 19 ಲಕ್ಷ ಮೌಲ್ಯದ ಮಾಲುಗಳನ್ನು ವಶಪಡಿಸಿಕೊಂಡು 8 ಕನ್ನಗಳವು ಪ್ರಕರಣಗಳನ್ನು ಪತ್ತೆ ಹಚ್ಚಲಾಗಿದೆ ಎಂದು ಡಿಸಿಪಿ ಚೇತನ್‍ಸಿಂಗ್ ರಾಥೋರ್ ತಿಳಿಸಿದ್ದಾರೆ.

ಸುಬೋದ್ ಯಾದವ್ ಅವರು ಪತ್ನಿ ರೀತು ಅವರೊಂದಿಗೆ ಕಳೆದ ಜುಲೈ16 ರಂದು ಮುಂಜಾನೆ ಚೆನ್ನೈಗೆ ವೀಸಾ ಮಾಡಿಸಿಕೊಂಡು ಬರಲು ಬೀಗ ಹಾಕಿಕೊಂಡು ಹೋಗಿದ್ದರು. ಈ ವೇಳೆ ಮನೆಯಲ್ಲಿ ಯಾರೂ ಇಲ್ಲದ್ದನ್ನು ಗಮನಿಸಿ ಕಳ್ಳತನ ಮಾಡಿದ್ದಾರೆ.  ಬೀಗ ಹಾಕಿದ ಮನೆಯನ್ನು ಗುರುತಿಸುತ್ತಿದ್ದ ಆರೋಪಿಗಳು ಹೊಂಚು ಹಾಕಿ ಬೀಗ ಮುರಿದು 240 ಗ್ರಾಂ ಚಿನ್ನ, 1 ಕೆಜಿ ಬೆಳ್ಳಿ ಇನ್ನಿತರ ಬೆಲೆ ಬಾಳುವ ವಸ್ತುಗಳನ್ನು ದೋಚಿ ಪರಾರಿಯಾಗಿದ್ದರು. ಇದಕ್ಕೂ ಮುನ್ನ ಶ್ರೀನಿವಾಸಾಚಾರಿ ಅವರ ಮನೆಯ ಬೀಗ ಮುರಿದು 100 ಗ್ರಾಂ ಚಿನ್ನ, 2 ಕೆಜಿ ಬೆಳ್ಳಿ ವಸ್ತುಗಳನ್ನು ದೋಚಿದ್ದರು.

ಕೃತ್ಯವನ್ನು ಗಂಭೀರವಾಗಿ ಪರಿಗಣಿಸಿ ಸಂಜಯ್ ನಗರ ಪೊಲೀಸ್ ಇನ್ಸ್ಪೆಪೆಕ್ಟರ್ ಪ್ರಶಾಂತ್ ವರ್ಣಿ ಅವರ ನೇತೃತ್ವದಲ್ಲಿ ರಚಿಸಲಾಗಿದ್ದ ವಿಶೇಷ ತಂಡ ಕಾರ್ಯಾಚರಣೆ ಕೈಗೊಂಡು ಕೃತ್ಯವೆಸಗಿದ ಆರೋಪಿಗಳು ರೈಲ್ವೆ ನಿಲ್ದಾಣದಲ್ಲಿ ಮಲಗುತ್ತಿದ್ದ ಸುಳಿವು ಪತ್ತೆ ಹಚ್ಚಲಾಯಿತು.

ಸುಳಿವಿನ ಮೇಲೆ ರಾಜಸ್ತಾನಕ್ಕೆ ತೆರಳಿದ ತಂಡ 1 ವಾರಗಳ ಕಾಲ ಶೋಧ ನಡೆಸಿ ಆರೋಪಿ ಜಗ್ಗನನ್ನು ಬಂಧಿಸಿ ಆತ ನೀಡಿದ ಮಾಹಿತಿ ಮೇರೆಗೆ ಮತ್ತೊಬ್ಬ ರತನ್‍ನನ್ನು ಬಂಧಿಸಿ ಕಳವು ಮಾಡಿದ್ದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ರಾಜಸ್ತಾನದಿಂದ ಬರುತ್ತಿದ್ದ ಇವರಿಬ್ಬರು ರೈಲ್ವೆ ನಿಲ್ದಾಣಗಳಲ್ಲಿ ರಾತ್ರಿ ವೇಳೆ ವಾಸ್ತವ್ಯ ಹೂಡಿ ಬೆಳಗಿನ ವೇಳೆ ಬಲೂನ್ ಮಾರಾಟ ಮಾಡುವ ನೆಪದಲ್ಲಿ ಬೀಗ ಹಾಕಿದ ಮನೆಗಳನ್ನು ಗುರುತಿಸಿ ಹೊಂಚು ಹಾಕಿ ಕಳವು ಮಾಡುತ್ತಿದ್ದರು. ಆರೋಪಿಗಳಿಬ್ಬರು ವೃತ್ತಿಪರ ಕನ್ನಗಳ್ಳರಾಗಿದ್ದು, ನಗರದಲ್ಲಿ ಕಳವು ಮಾಡಿದ ಆಭರಣ ಹಾಗೂ ಬೆಲೆ ಬಾಳುವ ವಸ್ತುಗಳನ್ನು ರಾಜಸ್ತಾನಕ್ಕೆ ಕೊಂಡೊಯ್ದು ಮಾರಾಟ ಮಾಡಿ ಮೋಜಿನ ಜೀವನ ನಡೆಸುತ್ತಿದ್ದರು ಎಂದು ಚೇತನ್ ಸಿಂಗ್ ತಿಳಿಸಿದ್ದಾರೆ. ಆರೋಪಿಗಳ ಬಂಧನದಿಂದ ಸಂಜಯ್ ನಗರದ 4, ಅನ್ನಪೂರ್ಣೇಶ್ವರಿ ನಗರದ 3, ಜ್ಞಾನಭಾರತಿಯ 1 ಸೇರಿದಂತೆ 8 ಕನ್ನಗಳವು ಪ್ರಕರಣಗಳು ಪತ್ತೆಯಾಗಿವೆ.


ಸಂಬಂಧಿತ ಟ್ಯಾಗ್ಗಳು

thief arrested ರಾಜಸ್ತಾನ ಬಲೂನ್


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ