ಶನಿ ಸೀರಿಯಲ್‍ನ ಸುಳ್ಳು ಕಥೆ

Shani serial and real story

19-07-2018

ಕಲರ್ಸ್ ಕನ್ನಡ ಚಾನೆಲ್‍ನಲ್ಲಿ ರಾತ್ರಿ 8:30ಕ್ಕೆ ಪ್ರಸಾರವಾಗುವ ಮೆಗಾ ಸೀರಿಯಲ್ ಶನಿ ತನ್ನ ಅದ್ಭುತ ಗ್ರಾಫಿಕ್ಸ್, ಅತ್ಯುತ್ತಮ ನಿರ್ಮಾಣ ಗುಣಮಟ್ಟ, ಸುಮಧುರ ಸಂಗೀತ ಮತ್ತು ಗಮನ ಸೆಳೆಯುವ ನಟನೆಯೊಂದಿಗೆ ಜನಪ್ರಿಯವಾಗಿದೆ. ಅತ್ಯಂತ ದುಬಾರಿ ವೆಚ್ಚದಲ್ಲಿ  ನಿರ್ಮಾಣವಾಗಿರುವ ಈ ಸೀರಿಯಲ್ ಹಿಂದಿ ಸೇರಿ ಬೇರೆ ಭಾಷೆಗಳಲ್ಲೂ ಬೇರೆ ನಟರನ್ನೊಳಗೊಂಡು ಪ್ರಸಾರವಾಗುತ್ತಿದೆ. ಶನಿಯ ಜನ್ಮದಿಂದ ಹಿಡಿದು ಆತನ ಪರಾಕ್ರಮಗಳನ್ನು ತೋರಿಸುತ್ತಾ, ಆತನ ಗುಣಗಾನವನ್ನು ಮಾಡುವ ಈ ಸೀರಿಯಲ್ ಜನರಲ್ಲಿ ಭಕ್ತಿಯನ್ನು ಮೂಡಿಸುತ್ತಾ ವೀಕ್ಷಕರನ್ನು ದಿನೇ ದಿನೇ ಗಳಿಸುತ್ತಾ ಹೋಗುತ್ತಿದೆ.

ಸುಂದರೀ ಸ್ಕಂಧ ಪುರಾಣ, ಶಿವಪುರಾಣ, ಭವಿಷ್ಯ ಪುರಾಣ ಮತ್ತು ಶ್ರೀಮದ್ಭಾಗವತದ ಆಧಾರದ ಮೇಲೆ ಮಾಡಿದ್ದಾರೆನ್ನಲಾದ ಈ ಸೀರಿಯಲ್‍ನಲ್ಲಿ ಬರೀ ಶನಿಯದ್ದೇ ಗುಣಗಾನ. ಈ ಸೀರಿಯಲ್ ನೋಡಿದವರಿಗೆ ಒಂದು ಮಾತ್ರ ಸ್ಪಷ್ಟವಾಗುತ್ತದೆ, ಅದೇನೆಂದರೆ ಎಲ್ಲದಕ್ಕೂ ಶನಿಯೇ ಕಾರಣ. ಅಮೃತ ಮಂಥನಕ್ಕೆ, ದೇವಾಸುರರ ಯುದ್ಧಕ್ಕೆ, ಗಣಪತಿಯ ರೂಪಾಂತರಕ್ಕೆ, ಹರಿಶ್ಚಂದ್ರನ ಗಾಥೆಗೆ, ಬ್ರಹ್ಮನ ಶಿರಚ್ಛೇದಕ್ಕೆ, ಹನುಮಂತನ ಜೀವನಕ್ಕೆ ಹೀಗೆ. ಕರ್ಮಫಲದಾತನೆಂದು ಬಣ್ಣಿಸಲ್ಪಡುವ ಶನಿ ಎಲ್ಲರಿಗಿಂತಲೂ ಮೇಲಿನ ಸ್ಥಾನದಲ್ಲಿರುವಂತೆ ಪ್ರದರ್ಶಿತಗೊಂಡಿದ್ದಾನೆ. ಶನಿಯ ಕೃಪೆ ಒಂದಿದ್ದರೆ ಸಾಕು ಬೇರಾವ ದೇವರೂ ಬೇಡ ಎಂಬಂತೆ ಈ ಶನಿ ಕಥೆಯನ್ನು ರೂಪಿಸಲಾಗುತ್ತಿದೆ. ಶನಿ ಇಲ್ಲದೇ ದೇವಲೋಕದಲ್ಲಿ ಏನೂ ನಡೆಯುವುದಿಲ್ಲ. ವಿಷ್ಣು, ಶಿವ ಬ್ರಹ್ಮಾದಿಗಳೂ ಕೂಡ ಶನಿಯ ಅಭಿಮಾನಿಗಳು, ವಿಷ್ಣು ಒಂದು ಕಡೆ ಶನಿಯ ವೈಶಿಷ್ಟ್ಯತೆಗೆ ಮಾರುಹೋದಂತೆ ಕಂಡುಬಂದರೆ ಇನ್ನೊಂದು ಕಡೆ ಶಿವ ಶನಿಯ ವಕ್ತಾರನಂತೆ ಬಿಂಬಿತಗೊಂಡಿದ್ದಾನೆ. ದೇವದೇವಾದಿಗಳ ಎಲ್ಲ ವಿಚಾರದಲ್ಲೂ ಮೂಗು ತೂರಿಸುವ ಶನಿ ಕೊನೆಗೆ ಎಲ್ಲದರಲ್ಲೂ ತನ್ನದೇ ಕೊನೆಯ ಮಾತು ಎಂಬಂತೆ ಚಿತ್ರಿತಗೊಂಡಿದ್ದಾನೆ. ಆದರೆ ಇದೇ ಸೋಜಿಗ, ಯಾಕೆಂದರೆ ಪುರಾಣ ಓದಿದ ಎಲ್ಲರಿಗೂ ಶನಿಯ ಈ ವ್ಯಕ್ತಿತ್ವದ ಅರಿವಿಲ್ಲ. ಪುರಾಣದಲ್ಲಿ ಶನಿಯೊಬ್ಬ ಸಾಮಾನ್ಯ ಗ್ರಹ. ಜಾತಕದಲ್ಲಿ ಅವನ ದೆಸೆ ಅಥವಾ ದೃಷ್ಠಿಯಿದ್ದರೆ ಮಾತ್ರ ಅವನಿಗೆ ಪ್ರಾಮುಖ್ಯತೆ. ಇಲ್ಲದಿದ್ದರೆ ಅದೊಂದು ನಪುಂಸಕ ಗ್ರಹ. ಶನಿಯ ಪ್ರಭಾವವನ್ನು ಶಿವಪೂಜೆ ಮತ್ತು ಆಂಜನೇಯ ಸ್ತುತಿಯಿಂದ ಉಪಶಮನ ಮಾಡಿಕೊಳ್ಳಬಹುದು ಎನ್ನುತ್ತವೆ ಶಾಸ್ತ್ರಗಳು.

ಶನಿ ಸೀರಿಯಲ್‍ನಲ್ಲಿ ಬಿಂಬಿಸಿರುವಂತೆ ಆತ ಅಷ್ಟೊಂದು ಶಕ್ತಿಯುತನಾಗಿದ್ದರೆ ರಾವಣ ಆತನನ್ನು ತನ್ನ ಕುರ್ಚಿಯ ಕೆಳೆಗೆ ಯಾಕೆ ಕಟ್ಟಿಹಾಕಿದ್ದ ಮತ್ತು ಅವನನ್ನು ಬಿಡಿಸಲು ಆಂಜನೇಯ ಏಕೆ ಬರಬೇಕಾಯಿತು ಎಂಬುದು ಇನ್ನೊಂದು ಕಥೆ. ಶನಿ ಧಾರಾವಾಹಿಗೆ ಸುಂದರೀ ಸ್ಕಂಧ ಪುರಾಣ ಆಧಾರ ಎನ್ನುತ್ತಾರೆ,  ಈ ಸುಂದರೀ ಸ್ಕಂಧ ಪುರಾಣವನ್ನ ಕೇಳಿದವರೇ ಇಲ್ಲ ಹಾಗೇ ಶಿವಪುರಾಣದಲ್ಲಿ ಮತ್ತು ಶ್ರೀಮದ್ಭಾಗವತದಲ್ಲಿ ಶನಿಯ ಉಲ್ಲೇಖ ನಗಣ್ಯ. ಭವಿಷ್ಯ ಪುರಾಣದಲ್ಲಿ ಭವಿಷ್ಯದ ಬಗ್ಗೆ ಹೇಳಲಾಗುತ್ತದೇ ವಿನಃ ಶನಿಯ ಇತಿಹಾಸವಲ್ಲ.

ಸೀರಿಯಲ್ ನಿರ್ಮಾಪಕರು ಮತ್ತು ಚಾನೆಲ್‍ನವರು ಈ ಕಟ್ಟುಕಥೆಯನ್ನು ಹೇಳುವ ಸಂದರ್ಭದಲ್ಲಿ ವೀಕ್ಷಕರ ಬುದ್ಧಿವಂತಿಕೆಯ ಬಗ್ಗೆ ಏನು ಅಭಿಪ್ರಾಯ ಇಟ್ಟುಕೊಂಡಿದ್ದಾರೋ ತಿಳಿಯದು. ಈ ಸೀರಿಯಲ್‍ನಲ್ಲಿ ತೋರಿಸುವ ಶೇ 90ರಷ್ಟು ವಿಚಾರಗಳು ಸೀರಿಯಲ್ ಸ್ಕ್ರಿಪ್ಟ್ ರೈಟರ್ ಬರೆದಿರುವ ಕಟ್ಟು ಕಥೆಗಳು. ಟಿ.ಆರ್.ಪಿ ಮತ್ತು ಲಾಭಕ್ಕೋಸ್ಕರ ಜನರ ನಂಬಿಕೆಯನ್ನು ದುರುಪಯೋಗಪಡಿಸಿಕೊಂಡು, ಅವರು ನಂಬುವ ದೇವರುಗಳನ್ನು ಬಳಸಿಕೊಂಡು ಅವರ ಮೇಲೆ ಪ್ರಭಾವ ಬೀರಿ ಲಾಭಕೋರತನವನ್ನು ತೋರಿಸುವ ಮೋಸದಾಟ. ಇದು ಜನರಿಗೆ ಇನ್ನೂ ಗೊತ್ತಾಗಿಲ್ಲ ಅನೇಕ ಮಂದಿ ಈ ಸೀರಿಯಲ್‍ನ ಸುಳ್ಳು ಕಥೆಯನ್ನು ಶನಿಯ ನಿಜವಾದ ಕಥೆಯೆಂದೇ ನಂಬಿಬಿಟ್ಟಿದ್ದಾರೆ. ಅದೇ ನಂಬಿಕೆಯೊಂದಿಗೆ ಶನಿ ಸೀರಿಯಲನ್ನು ಪ್ರತಿರಾತ್ರಿ ತಪ್ಪದೇ ನೋಡುತ್ತಿದ್ದಾರೆ. ಚಾನೆಲ್‍ಗೆ ಲಾಭ ತಂದುಕೊಡುತ್ತಿದ್ದಾರೆ. ಈ ಸೀರಿಯಲ್‍ಗೆ ಶನಿಮಹಾತ್ಮೆ ಎಂಬ ಪುಸ್ತಕ ಆಧಾರವಾಗದಿರುವುದು ಒಂದು ದೊಡ್ಡ ಆಶ್ಚರ್ಯವೇ ಸರಿ. ಹಾಗೆನ್ನಬೇಕೆಂದರೆ ಸೀರಿಯಲ್ ಆರಂಭದಲ್ಲೇ ತೋರಿಸುತ್ತಾರೆ ಇದೊಂದು ಕಾಲ್ಪನಿಕ ಕಥೆ ಇದು ಮನರಂಜನೆಗೆ ಮಾತ್ರ ಎಂದು, ಅದನ್ನೂ ಸರಿಯಾಗಿ ಓದಿಕೊಳ್ಳದೇ ಜನರು ಇದನ್ನು ಇನ್ನೊಂದು ಮಹಾತ್ಮೆ ಎಂದರೆ ತಪ್ಪಾಗಲಾರದು.


ಸಂಬಂಧಿತ ಟ್ಯಾಗ್ಗಳು

shani serial ಸ್ಕಂಧ ಪುರಾಣ ನಗಣ್ಯ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಚಲನ ಚಿತ್ರ ಗಳಲ್ಲೂ ಕಾಲ್ಪನಿಕ ಎಂದೇ ತೋರಿಸುತ್ತಾರೆ ಹಾಗಂತ ನೋಡಲ್ವಾ ಮನರಂಜನೆಗೆ.. ಇದೂ ಹಾಗೆ.. ಪ್ರತಿದಿನ ಚಿತ್ರಮಂದಿರದಲ್ಲಿ ಚಲನಚಿತ್ರ ನೋಡೋಕೆ ಆಗಲ್ಲ ಅಂತ ಮನೆಲೆ ಶನಿ ನೋಡ್ತಾರೆ ಮನರಂಜನೆಗೆ..
  • ಭಾನು ಕೋಡಿ
  • ಡ್ರೈವರ್
ಚಲನ ಚಿತ್ರ ಗಳಲ್ಲೂ ಕಾಲ್ಪನಿಕ ಎಂದೇ ತೋರಿಸುತ್ತಾರೆ ಹಾಗಂತ ನೋಡಲ್ವಾ ಮನರಂಜನೆಗೆ.. ಇದೂ ಹಾಗೆ.. ಪ್ರತಿದಿನ ಚಿತ್ರಮಂದಿರದಲ್ಲಿ ಚಲನಚಿತ್ರ ನೋಡೋಕೆ ಆಗಲ್ಲ ಅಂತ ಮನೆಲೆ ಶನಿ ನೋಡ್ತಾರೆ ಮನರಂಜನೆಗೆ..
  • ಭಾನು ಕೋಡಿ
  • ಡ್ರೈವರ್
ಈ ಪೋಸ್ಟ್ ಮಾಡಿದ ಕಮಂಗಿಗೆ ನನ್ನದೊಂದು ಪ್ರಶ್ನೆ ನಮ್ಮ ಹಿಂದೂ ದೇವತೆಗಳು ಕೋಟ್ಯಾನು ಕೋಟಿ ದೇವತೆಗಳು ಇದ್ದಾರೆ ಒಪ್ಪಿಕೊಳ್ಳೋಣ. ಹೆಸರೇ ಹೇಳುವಂತೆ ಶನಿ ಎಂಬ ಹೆಸರಿದೆ ಅದಕ್ಕೋಸ್ಕರ ಶನಿಯ ವಿಷಯವನ್ನೇ ತೋರಿಸುತ್ತಾರೆ.ಹಾಗೆ ಬೇರೆ ಬೇರೆ ಚಾನಲ್ ಗಳಲ್ಲಿ ಬೇರೆ ಬೇರೆ ದೇವರ ಸೀರಿಯಲ್ ಗಳು ಬರುತ್ತವೆ ಅಲ್ಲಿ ಹಾ ಹೆಸರಿನ ದೇವತೆಗಳ ವಿಷಯವನ್ನೇ ತೊರಿಸುತ್ತವೆ
  • ನಾಗರಾಜು
  • ವೆಲ್ನೆಸ್ ಅದ್ವೈಸರ್
ಈ ಮೇಲೆ ಕಾಮೆಂಟ್ ಮಾಡಿದ ಕಮಂಗಿಗೆ ಕನ್ನಡ ಓದಲಿಕ್ಕೆ ಬರಲ್ಲ ಅನ್ಸುತ್ತೆ. ಇದು ಶನಿ ಬಗ್ಗೆ ಅಲ್ಲ, ಶನಿ ಬಗ್ಗೆ ಕಟ್ಟು ಕಥೆ ತೋರಿಸಿ ಅದು ಮನರಂಜನೆಗೆ ಮಾತ್ರ ಅಂತ ಹಾಕಿದ ಬಗ್ಗೆ ಬರೆದಿದ್ದಾರೆ. ಥೂ. ಈ ಥರ ದೇವರ ಬಗ್ಗೆ ಕಟ್ಟು ಕಥೆ ಮಾಡಿ ಮನರಂಜನೆ ಕೊಡೋದು ಹಿಂದೂ ಧರ್ಮದಲ್ಲಿ ಮಾತ್ರ ಸಾಧ್ಯ ಆಲ್ವಾ?
  • Patil
  • Media
ಶನಿ ಒಬ್ಬ ಕ್ಷುದ್ರ ಶಕ್ತಿ. ಆತನನ್ನು ದೊಡ್ಡ ದೇವರಂತೆ ತೋರಿಸುವುದು ದೇವರುಗಳಿಗೆ ಮಾಡುವ ಅಪಮಾನ.,
  • Ansh Rao
  • Astrologer