ಕಂಪನಿಗಳು ಸಿಎಸ್‌ಆರ್‌ ಫಂಡ್ ತೆಗೆದಿಡಲಿ: ಪರಮೇಶ್ವರ್

Companies should kept CSR Fund for development: DCM Parameshwar

19-07-2018

ಬೆಂಗಳೂರು: ಇನ್ಫೋಸಿಸ್ ಕಂಪನಿ ಮಾದರಿಯಲ್ಲೇ ಇತರೆ ದೊಡ್ಡ ಕೈಗಾರಿಕೆಗಳು ತಮ್ಮ ಲಾಭದಲ್ಲಿ ಶೇ.2ರಷ್ಟು ಹಣವನ್ನು ನಗರದ ಅಭಿವೃದ್ಧಿಗೆ ನೀಡುವ ಮೂಲಕ ಸಹಕಾರ ಕೊಡಬೇಕು ಎಂದು ಉಪಮುಖ್ಯಮಂತ್ರಿ ಹಾಗೂ‌ ನಗರಾಭಿವೃದ್ಧಿ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು.

ವಿಧಾನಸೌಧ ಸಮ್ಮೇಳನ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಕೋನಪ್ಪನ ಅಗ್ರಹಾರ ಮೆಟ್ರೋ ನಿಲ್ದಾಣದ ನಿರ್ಮಾಣ ಹಾಗೂ ನಿರ್ವಹಣೆ ಮಾಡಲು ಬೆಂಗಳೂರು ಮೆಟ್ರೋ ಜೊತೆ ಇನ್ಫೋಸಿಸ್  ಫೌಂಡೇಷನ್ ಒಡಂಬಡಿಕೆಗೆ ಸಹಿ‌ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸುಧಾಮೂರ್ತಿ ಅವರು ಸರಕಾರದೊಂದಿಗೆ ಒಪ್ಪಂದಕ್ಕೆ ಮುಂದಾಗಿರುವ ನಡೆ ಇಡೀ ದೇಶಕ್ಕೆ ಮಾದರಿಯಾಗಲಿದೆ. ಬೆಂಗಳೂರು ಇಡೀ ದೇಶದಲ್ಲಿ ಹೆಚ್ಚು ವೇಗವಾಗಿ ಬೆಳೆಯುತ್ತಿರುವ ನಗರ. ಇಲ್ಲಿ ಜನದಟ್ಟಣೆ ಜೊತೆಗೆ ಟ್ರಾಫಿಕ್ ಸಮಸ್ಯೆಯಿಂದ ನಿತ್ಯ ಜನರು ಪರದಾಡುವಂತಾಗಿದೆ. ಈ ಸಮಸ್ಯೆ ನೀಗಿಸಲು 2006ರಲ್ಲಿ ಕುಮಾರಸ್ವಾಮಿ ಅವರು ಮೆಟ್ರೋಗೆ ಅಡಿಗಲ್ಲು ಹಾಕಿದರು. ಇದರ ಮೊದಲ ಹಂತದಲ್ಲಿ ನಿತ್ಯ ಐದು ಲಕ್ಷ ಜನರು ಮೆಟ್ರೋದಲ್ಲಿ ಓಡಾಡುತ್ತಿದ್ದಾರೆ. ಎರಡನೇ ಹಂತ ಪೂರ್ಣಗೊಂಡರೆ ಸುಮಾರು 30ಲಕ್ಷ ಜನ ಓಡಾಡುವ ಅಂದಾಜು ಇದೆ. ಜನರು ನೆಮ್ಮದಿಯಿಂದ ಸಂಚಾರ ಮಾಡಬಹುದು, ಇದು ಮೆಟ್ರೋದ ಉದ್ದೇಶ ಎಂದು ಹೇಳಿದರು.

ನಗರದಲ್ಲಿ ದೊಡ್ಡ ಕೈಗಾರಿಕೆ, ಮಾಹಿತಿ ತಂತ್ರಜ್ಞಾನಗಳಿವೆ. ಇವರ ಲಾಭದಲ್ಲಿ ಸಿಎಸ್‌ಆರ್‌ ಫಂಡ್‌ನಲ್ಲಿ ಶೇ.2ರಷ್ಟು ಹಣ ತೆಗೆದಿಡುವ ಕಾನೂನು ಇದೆ. ಟ್ರಸ್ಟ್, ದೊಡ್ಡ ಕಂಪನಿಗಳು ಸರಕಾರದೊಂದಿಗೆ ಕೈ ಜೋಡಿಸಿದರೆ ಬೆಂಗಳೂರು ಹೆಚ್ಚು ಸುರಕ್ಷಿತ ಹಾಗೂ ಶಾಂತಿಯುತ ನಗರವಾಗಿ ನಿರ್ಮಾಣವಾಗಲಿದೆ ಎಂದರು.

ಐದು ವರ್ಷ ಪೂರೈಸಲಿದ್ದೇವೆ: ಸಮ್ಮಿಶ್ರ ಸರಕಾರದ ಬಗ್ಗೆ ಕೆಲವರು ಏನೇನೋ ಹೇಳುತ್ತಾರೆ. ‌ಆದರೆ, ನಮ್ಮ ಸಮ್ಮಿಶ್ರ ಸರ್ಕಾರ ಐದು ವರ್ಷ ಪೂರೈಕೆ ಮಾಡೇ ಮಾಡಲಿದೆ ಎಂದು ಹೇಳಿದರು. ಕರ್ನಾಟಕದ ದೃಷ್ಟಿಯಿಂದ ಒಳ್ಳೆ ಆಡಳಿತ ನೀಡಬೇಕು, ರಾಷ್ಟ್ರದಲ್ಲೇ ಮಾದರಿ ರಾಜ್ಯವನ್ನಾಗಿ ಮಾಡಲು ಮೈತ್ರಿ ಸರಕಾರ ರಚನೆಯಾಗಿದೆ. ಹೀಗಾಗಿ ಐದು ವರ್ಷ ಪೂರೈಸಲಿದ್ದೇವೆ ಎಂದರು.  ಕರ್ನಾಟಕವನ್ನು ಅಭಿವೃದ್ಧಿ ಮಾಡುವ ಕಲ್ಪನೆ ಮುಖ್ಯಮಂತ್ರಿ ಅವರಿಗಿದೆ. ಇದಕ್ಕೆ ನಾವೆಲ್ಲರೂ ಕೈ ಜೋಡಿಸೋಣ ಎಂದು ಹೇಳಿದರು.

ತನಿಖೆಗೂ ಸಿದ್ಧ: ಉಡುಪಿಯ ಶಿರೂರು ಶ್ರೀ ಲಕ್ಷ್ಮೀವರ ತೀರ್ಥ ಸ್ವಾಮೀಜಿ ಅವರ ಸಾವಿನ ಬಗ್ಗೆ ಅನುಮಾನ ವ್ಯಕ್ತವಾಗುತ್ತಿರುವುದು ನನ್ನ ಗಮನಕ್ಕೂ ಬಂದಿದೆ. ವಿಷಪ್ರಾಶನ ಆಗಿದೆ ಎಂದೂ ಕೆಲವರು ಹೇಳುತ್ತಿದ್ದಾರೆ. ಈ ಬಗ್ಗೆ ಅಗತ್ಯ ಬಿದ್ದರೆ ಖಂಡಿತ ತನಿಖೆ ಮಾಡಿಸಲಾಗುವುದು ಎಂದರು.


ಸಂಬಂಧಿತ ಟ್ಯಾಗ್ಗಳು

G.Parameshwara Metro ಇನ್ಫೋಸಿಸ್ ಸುಧಾಮೂರ್ತಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ