ವಕ್ಫ್ ಆಸ್ತಿ ಕಬಳಿಕೆ ಪ್ರಕರಣ: ಸಿಬಿಐಗೆ ನೀಡುವಂತೆ ಬಿಜೆಪಿ ಗಡುವು

karnataka Legislative Council opposition leader Kota Srinivas Poojary given deadline for government to hand over the wakfs case to cbi!

19-07-2018

ಬೆಂಗಳೂರು: ವಕ್ಫ್ ಆಸ್ತಿ ಕಬಳಿಕೆ ಪ್ರಕರಣ ಸಂಬಂಧ ಅನ್ವರ್ ಮಾಣಿಪ್ಪಾಡಿ ವರದಿ ಹಾಗು ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸದೇ ಇದ್ದಲ್ಲಿ ರಾಜ್ಯಾದ್ಯಂತ ಬಿಜೆಪಿ‌ ಹೋರಾಟ ನಡೆಸಲಿದೆ ಎಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ಎಚ್ಚರಿಕೆ ನೀಡಿದ್ದಾರೆ.

ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಅನ್ವರ್ ಮಾಣಿಪ್ಪಾಡಿ ವರದಿ ಸದನದಲ್ಲಿ ಮಂಡನೆ ಸಂಬಂಧ ವಿಧಾನ ಪರಿಷತ್ ನಲ್ಲಿ ನಡೆದ ಚರ್ಚೆ ವೇಳೆ ಸಚಿವ ಜಮೀರ್ ಅಹಮದ್ ವರದಿಯಲ್ಲಿ ಸತ್ಯವಿದ್ದರೆ ನನ್ನ ತಂದೆಯಾದರೂ ಕ್ಷಮಿಸಲ್ಲ. ನೀವು ಇದನ್ನು ಸಿಬಿಐಗೆ ಕೊಡಲಿಲ್ಲ. ಆದರೆ, ನಾನು ಕೊಡುತ್ತೇನೆ ಎಂದು ಹೇಳಿದ್ದರು. ಸಚಿವರ ಭರವಸೆ ಹಿನ್ನೆಲೆ ಚರ್ಚೆ ಅಲ್ಲಿಗೆ ಮುಗಿಯಿತು ಎಂದು ಸದನದಲ್ಲಿ ಸಭಾಪತಿಗಳು ಚರ್ಚೆ ಮುಕ್ತಾಯವಾಗಿತ್ತು ಎಂದಿದ್ದರು.

ಸರ್ಕಾರದ ಉತ್ತರವನ್ನು ನಾವು ಸ್ವಾಗತಿಸಿದ್ದೆವು. ಆದರೆ, ಸರ್ಕಾರ ಸದನದಲ್ಲಿ ಸಿಬಿಐಗೆ ಕೊಡುವುದಾಗಿ ಹೇಳಿ ಈಗ ನುಣುಚಿಕೊಳ್ಳುತ್ತಿದೆ. ತಕ್ಷಣ ಇದನ್ನು ಸಿಬಿಐಗೆ ಕೊಡಬೇಕು, ಇದು ಬಹುದೊಡ್ಡ ರಾಜಕೀಯ ಸಮಸ್ಯೆ ಇರಬಹುದು, ರಾಜಕೀಯ ತಲ್ಲಣವಾಗಬಹುದು. ಹಿರಿಯರ ತಲೆ‌ ಉರುಳಲಿದೆ ಎನ್ನುವ ಭೀತಿ ಕಾಂಗ್ರೆಸ್ ಗೆ ಇರಬಹುದು. ಆದರೆ ಜೆಡಿಎಸ್ ಗೆ ಇಲ್ಲವಲ್ಲಾ. 15ದಿನಗಳಲ್ಲಿ ವರದಿ ಹಾಗು ಹಗರಣ ಸಿಬಿಐಗೆ ಕೊಡಬೇಕು. ಇಲ್ಲದಿದ್ದಲ್ಲಿ ರಾಜ್ಯಾದ್ಯಂತ ಹೋರಾಟ ಮಾಡುತ್ತೇವೆ, ಹಗರಣವನ್ನು ಜನರ ಮುಂದೆ‌ ತೆಗೆದುಕೊಂಡು ಹೋಗುತ್ತೇವೆ. ಕುಮಾರಸ್ವಾಮಿ ಬುಡಕ್ಕೂ ಇದು ಬರಬಹುದು. ಅವರ ತಲೆ ದಂಡವೂ ಆದರೆ ಅದಕ್ಕೆ ಅವರೇ ಹೊಣೆ ಎಂದು ಎಚ್ಚರಿಕೆ ನೀಡಿದರು.

ಸದನದ ಬಳಿಕ ಯು.ಟಿ.ಖಾದರ್‌ ಹೋಗಿ ಏನೋ ಬುದ್ಧಿ ಹೇಳಿದ್ದಾರೆ. ಅದಕ್ಕೆ ಜಮೀರ್ ಈಗ ನಿಲುವು ಬದಲಿಸಿಕೊಂಡಿದ್ದಾರೆ. ಮಾಣಿಪ್ಪಾಡಿ ವರದಿ ಯಥಾವತ್ತಾಗಿ ಮಂಡಿಸಿ ಎಂದಾಗ ನುಣುಚಿಕೊಳ್ಳುವ ಯತ್ನ ಮಾಡುತ್ತಿದ್ದಾರೆ. ಹಾಗಾಗಿ ನಾವು ಹೋರಾಟದ ಹಾದಿ ಹಿಡಿಯುತ್ತೇವೆ. ಅಗತ್ಯ ಬಿದ್ದರೆ ಕಾನೂನು ಹೋರಾಟವೂ ನಡೆಸುತ್ತೇವೆ ಎಂದರು.

ಅನ್ವರ್ ಮಾಣಿಪ್ಪಾಡಿ ಮಾತನಾಡಿ, 2012 ಮಾರ್ಚ್ 26ರಂದು ಏಳು ಸಾವಿರ ಪುಟದ ವರದಿ ನೀಡಿದ್ದೆ, ಆಗಿನ ನಮ್ಮ ಸರ್ಕಾರ ಲೋಕಾಯುಕ್ತಕ್ಕೆ ಹಸ್ತಾಂತರ ಮಾಡಿ ಅದೇ ರೀತಿ ಸಂಪುಟದಲ್ಲೂ‌ ಚರ್ಚಿಸಿ ಸದನದಲ್ಲಿ ಮಂಡನೆಗೆ ತೀರ್ಮಾನ ಮಾಡಿತ್ತು. 2013ರಲ್ಲಿ ಸಂಪುಟದಲ್ಲಿ‌ ಅನುಮೋದಿಸಿ ಕೆಲ‌ ಉತ್ತಮ ವಿಧೇಯಕಗಳನ್ನು ತರಲಾಗಿತ್ತು. ಯಾವ ಆಸ್ತಿಯಲ್ಲಿ ಕಬಳಿಕೆ ಆಗಿದೆಯೋ ಆ ಆಸ್ತಿ ವಾಪಸ್ ತಂದುಕೊಡಲು ಎರಡು ಸಮಿತಿ‌ ರಚನೆ ಮಾಡಲಾಗಿತ್ತು. ರಾಜ್ಯ ಸಮಿತಿ, ಜಿಲ್ಲಾ ಸಮಿತಿ ರಚಿಸಿ ಯಾರೂ ಕೂಡ ಕೋರ್ಟ್ ಗೆ‌ ಹೋಗುವಂತಿಲ್ಲ, ಸಮಿತಿ ಮುಂದೆ ಬರಬೇಕು ಎಂದು ವಿಧೇಯಕ ರಚಿಸಿತ್ತು. ವೈದ್ಯಕೀಯ ಕಾಲೇಜು, ಎಂಜಿನಿಯರಿಂಗ್ ಕಾಲೇಜು, ಪಂಚತಾರಾ ಹೋಟೆಲ್‌, ಶಿಕ್ಷಣ ಸಂಸ್ಥೆಗಳು ಸೇರಿ ಇತರೆಡೆ ಅದ ಕಬಳಿಕೆ ವಾಪಾಸ್ ತರುವ ಮಹತ್ವದ ವಿಧೇಯಕ ತಂದಿದ್ದೆವು. ಆದರೆ ನನ್ನ ಅವಧಿ ಮುಗಿದ ನಂತರ ವಿಧೇಯಕ ತಂದರು ಎಂದು ತಪ್ಪು ಮಾಹಿತಿ ನೀಡಿದ್ದಾರೆ.

ಹೈಕೋರ್ಟ್ ಕೂಡ‌ ವರದಿ ಮಂಡಿಸಲು‌ ಹೇಳಿತ್ತು. ಅಂದಿನ‌ ಸಭಾಪತಿ ಶಂಕರಮೂರ್ತಿ ಕೂಡ ತನ್ನ ಆದೇಶ ಅನುಷ್ಠಾನ ಆಗದಾಗ ರಾಜ್ಯಪಾಲರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು. ವರದಿ ಸಂಪೂರ್ಣ ತನಿಖೆ ನಡೆಸಲು ಲೋಕಾಯುಕ್ತಕ್ಕೆ‌ ಒಪ್ಪಿಸಿದ್ದಂತೆ. ಉಪ ಲೋಕಾಯುಕ್ತರು ತನಿಖೆ ನಡೆಸಿ ಸರ್ಕಾರಕ್ಕೆ‌ ಒಪ್ಪಿಸಿತ್ತು. ‌ಅದರೂ ಕೂಡ‌ ವರದಿ ಇನ್ನೂ ಮಂಡನೆಯಾಗಿಲ್ಲ, ಅದೂ ಮಂಡ‌ನೆಯಾಗಬೇಕು 2.30ಲಕ್ಷ ಕೋಟಿ ಕಬಳಿಕೆ ಆಗಿದೆ. ಯಾವ ರೀತಿ ಕಬಳಿಕೆ ಆಗಿದೆ ಎಂದು ವರದಿ ನೀಡಿದ್ದೆ ಅದು ಜಾರಿಯಾಗಬೇಕು ಅದಕ್ಕಾಗಿ ಬಿಜೆಪಿ ಎಲ್ಲಾ ರೀತಿಯ ಹೋರಾಟ ನಡೆಸಲಿದೆ ಎಂದರು.



ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ