ಹೊಸ ತಾಲ್ಲೂಕುಗಳಿಗೆ ಮೂಲಸೌಕರ್ಯ ಮರೀಚಿಕೆ!

There is no Infrastructure for new taluks!

18-07-2018

ಬೆಂಗಳೂರು: ರಾಜ್ಯದಲ್ಲಿ ಹೊಸದಾಗಿ ರಚಿಸಲಾಗಿರುವ ಸುಮಾರು 50 ತಾಲ್ಲೂಕು ಕೇಂದ್ರಗಳು ಮೂಲ ಸೌಕರ್ಯದ ಕೊರತೆ ಎದುರಿಸುತ್ತಿವೆ. ಕಳೆದ 2013ರಲ್ಲಿ ಬಿಜೆಪಿ ಸರ್ಕಾರದಲ್ಲಿ ಜಗದೀಶ್ ಶೆಟ್ಟರ್ ಮುಖ್ಯಮಂತ್ರಿಯಾಗಿದ್ದಾಗ ಘೋಷಣೆಯಾಗಿದ್ದ 45 ಹೊಸ ತಾಲ್ಲೂಕುಗಳಿಗೆ ಹಿಂದಿನ ಕಾಂಗ್ರೆಸ್ ಸರ್ಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಆಡಳಿತಾವಧಿಯ ಕೊನೆಯಲ್ಲಿ ಮೋಕ್ಷ ಕಾಣಿಸಿದ್ದರು. ಇದರ ಜೊತೆಗೆ ಐದು ತಾಲ್ಲೂಕುಗಳನ್ನು ಹೊಸದಾಗಿ ಸೇರಿಸಿದ್ದರು.

ಕಳೆದ ಜನವರಿಯಿಂದ ಇವು ಕಾರ್ಯಾರಂಭ ಮಾಡಿವೆ. ಆದರೆ, ಯಾವ ತಾಲ್ಲೂಕು ಕಚೇರಿಗಳಿಗೂ ಇನ್ನು ಮೂಲಭೂತ ಸೌಕರ್ಯ ದೊರಕಿಲ್ಲ. ಸರ್ಕಾರ ಕೂಡ ಈ ಬಗ್ಗೆ ಗಮನಹರಿಸಿಲ್ಲ. ಹೊಸ ತಾಲ್ಲೂಕುಗಳನ್ನು ಪ್ರಾರಂಭಿಸಲು ಮತ್ತು ಆಡಳಿತಕ್ಕೆ ಅನುಕೂಲವಾಗುವಂತೆ ಕಂಪ್ಯೂಟರ್ ಮತ್ತಿತರ ಸೌಲಭ್ಯ ಪಡೆಯಲು ಸರ್ಕಾರ ಪ್ರತಿಯೊಂದು ತಾಲ್ಲೂಕುಗಳಿಗೆ ತಲಾ 10ಲಕ್ಷ ರೂ. ಬಿಡುಗಡೆ ಮಾಡಿದೆ. ಆದರೆ ಈ ಹಣ ಯಾವುದಕ್ಕೂ ಸಾಲದಂತಾಗಿದೆ.

ಹಲವೆಡೆ ಉಪ ತಹಶೀಲ್ದಾರ್ ಕಚೇರಿಗಳನ್ನು ತಹಶೀಲ್ದಾರ್ ಕಚೇರಿಯನ್ನಾಗಿ ಮೇಲ್ದರ್ಜೆಗೇರಿಸಲಾಗಿದೆ. ಆದರೆ, ಬೋರ್ಡ್ ಬದಲಾವಣೆ ಬಿಟ್ಟರೆ ಬೇರೇನೂ ಆಗಿಲ್ಲ. ತಹಶೀಲ್ದಾರ್ ಸೇರಿದಂತೆ ಅಗತ್ಯ ಸಿಬ್ಬಂದಿ ನೇಮಕ, ಪೀಠೋಪಕರಣ ಇತ್ಯಾದಿ ವ್ಯವಸ್ಥೆ ಆಗಿಲ್ಲ. ಸ್ವಂತ ಕಟ್ಟಡ ಸೇರಿದಂತೆ ಪೂರ್ಣ ಪ್ರಮಾಣದ ತಹಶೀಲ್ದಾರ್ ಕಚೇರಿಯೊಂದು ಅಸ್ತಿತ್ವಕ್ಕೆ ಬರಲು ಕನಿಷ್ಟ 10ಕೋಟಿ ರೂ. ಅಗತ್ಯವಿದೆ. ಕೇವಲ 10ಲಕ್ಷ ರೂ. ಯಾವುದಕ್ಕೂ ಸಾಲದಾಗಿದೆ.

ಪ್ರತಿ ಹೊಸ ತಾಲ್ಲೂಕು ಕಚೇರಿಯಲ್ಲಿ 14ಮುಖ್ಯವಾದ ಇಲಾಖೆಗಳು ಕಾರ್ಯನಿರ್ವಹಿಸಬೇಕಾಗುತ್ತದೆ. ಆ ಎಲ್ಲಾ ಇಲಾಖೆಗಳ ಸಮುಚ್ಛಯವಾಗಿ ತಾಲ್ಲೂಕು ಕಚೇರಿ ನಿರ್ಮಾಣ ಆಗಬೇಕು. ಸರ್ಕಾರದ ಎಲ್ಲಾ ಇಲಾಖೆಗಳ ಸೇವೆಯೂ ಒಂದೆಡೆ ಸಿಗುವಂತಾಗಬೇಕು ಎನ್ನುವುದು ಇದರ ಪರಿಕಲ್ಪನೆ. ಆದರೆ ಈಗ ಹೊಸದಾಗಿ ರಚನೆಯಾದ ತಾಲೂಕು ಕಚೇರಿಗಳಲ್ಲಿ ಕಂದಾಯ ಇಲಾಖೆ ಕಚೇರಿಗಳು ಮಾತ್ರ ಕಾರ್ಯನಿರ್ವಹಣೆ ಮಾಡುತ್ತಿವೆ. ಹೊಸ ತಾಲ್ಲೂಕು ಕಚೇರಿಯನ್ನು ಬಾಡಿಗೆ ಕಟ್ಟಡದಲ್ಲಿ ತೆರೆಯಲು ಸರ್ಕಾರ ಸಿದ್ಧತೆ ನಡೆಸಿದೆ. ಆದರೆ ಹೊಸ ತಾಲ್ಲೂಕುಗಳು ಕಾರ್ಯಾರಂಭ ಮಾಡಲು ತೀವ್ರ ಆರ್ಥಿಕ ಬಿಕ್ಕಟ್ಟು ಎದುರಾಗಿದೆ. ರೈತರ ಸಾಲ ಮನ್ನಾ ಸೇರಿದಂತೆ ಹಲವು ವಿಚಾರಗಳಲ್ಲಿ ಬೊಕ್ಕಸಕ್ಕೆ ತೀವ್ರ ಹೊಡೆ ಉಂಟಾಗಿರುವ ಸಂದರ್ಭದಲ್ಲಿ ಹೊಸ ತಾಲ್ಲೂಕುಗಳಿಗೆ ಮೂಲ ಸೌಕರ್ಯ ಮರೀಚಿಕೆಯಾಗಿದೆ.


ಸಂಬಂಧಿತ ಟ್ಯಾಗ್ಗಳು

Taluks Infrastructure ಇಲಾಖೆ ಬೋರ್ಡ್


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ