ಹೃದಯವಂತರಿಗೆ ಕಣ್ಣೀರು ಬರುವುದು ಸಹಜ: ನಾಡಗೌಡ

H.D kumaraswamy and congress

16-07-2018

ಬೆಂಗಳೂರು: ಪಕ್ಷದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರ ಸ್ವಾಮಿ ಕಣ್ಣೀರು ಸುರಿಸಿರುವ ಪ್ರಕರಣ ಮೈತ್ರಿ ಸರ್ಕಾರದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಜೆಡಿಎಸ್ ನಾಯಕರು ಮುಖ್ಯಮಂತ್ರಿ ಅವರನ್ನು ಸಮರ್ಥಿಸಿಕೊಂಡಿದ್ದರೆ, ಕಾಂಗ್ರೆಸ್ ವಲಯದಿಂದ ಟೀಕೆ ವ್ಯಕ್ತವಾಗಿದೆ.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಆಪ್ತರ ಬಳಿ ತೀವ್ರ ಅಸಮಾಧಾನ ತೋಡಿಕೊಂಡಿದ್ದಾರೆ. ಕಾಂಗ್ರೆಸ್ ಪಕ್ಷವನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವ ಪ್ರಯತ್ನ ಸರಿಯಲ್ಲ ಎಂದು ಗರಂ ಆಗಿದ್ದಾರೆ.
 
ಕುಮಾರ ಸ್ವಾಮಿ ಅವರ ವರ್ತನೆಯನ್ನು ತೀಕ್ಷ್ಣವಾಗಿ ಟೀಕಿಸಿರುವ ಮಾಜಿ ಸಚಿವ ಹಾಗೂ ಹಾಸನ ಜಿಲ್ಲೆಯ ಹಿರಿಯ ಮುಖಂಡ ಎ. ಮಂಜು, ಕುಮಾರಸ್ವಾಮಿ ಅವರಿಗೆ ನಾವು ವಿಷ ಕೊಟ್ಟಿಲ್ಲ. ಅಧಿಕಾರ ಎಂಬ ಅಮೃತ ನೀಡಿದ್ದೇವೆ. ಹೀಗಿರುವಾಗ ಅವರು ಅಳುವುದು ಏಕೆ ಎಂದು ಪ್ರಶ್ನಿಸಿದ್ದಾರೆ.
ನಮ್ಮ ಪಕ್ಷ ಜೆಡಿಎಸ್ ಮುಖ್ಯಮಂತ್ರಿ ಸ್ಥಾನ ನೀಡಿದೆ. ಇದೊಂದು ರೀತಿ ಸಂಸಾರದಂತೆ. ಜೆಡಿಎಸ್‍ನವರಿಗೆ ಮಗಳು ಮಾತ್ರ ಮುಖ್ಯವಾಗಿರುತ್ತಾರೆ. ಮಗಳೊಬ್ಬಳೇ ಚೆನ್ನಾಗಿರಬೇಕು ಎಂದರೆ ಹೇಗೆ? ಅಳಿಯ ಚೆನ್ನಾಗಿರುವುದು ಬೇಡವೇ?. ಕಾಂಗ್ರೆಸ್ ಹೆಗಲ ಮೇಲೆ ಜೆಡಿಎಸ್ ಬಂದೂಕು ಇಟ್ಟುಕೊಂಡಿರುವುದು ಸರಿಯಲ್ಲ ಎಂದು ಕುಟುಕಿದ್ದಾರೆ.
 
ಮಾಜಿ ಸ್ಪೀಕರ್ ಕೆ.ಬಿ.ಕೋಳಿವಾಡ, ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಮಾತನಾಡಿದ್ದಾರೆ. ಕೆಲವು ಕಾಂಗ್ರೆಸ್ ನಾಯಕರಿಗೆ ಸಮ್ಮಿಶ್ರ ಸರ್ಕಾರ ಅಧಿಕಾರದಲ್ಲಿ ಮುಂದುವರೆಯುವುದು ಬೇಕಿಲ್ಲ. ಅದಕ್ಕಾಗಿ ವಿಷಮ ಪರಿಸ್ಥಿತಿ ನಿರ್ಮಾಣ ಮಾಡುತ್ತಿದ್ದಾರೆ. ಆದರೆ ಅಂತಹ ನಾಯಕರು ಯಾರು ಎಂದು ನಾನು ಹೇಳಲಾರೆ ಎಂದು ಮಾರ್ಮಿಕವಾಗಿ ನುಡಿದಿದ್ದಾರೆ. 

ಕುಮಾರಸ್ವಾಮಿ ಅವರ ಕಣ್ಣೀರಧಾರೆಗೆ ಜೆಡಿಎಸ್‍ನ ಹಿರಿಯ ನಾಯಕ ಮತ್ತು ಪಶುಸಂಗೋಪನಾ ಸಚಿವ ವೆಂಕಟರಾವ್ ನಾಡಗೌಡ ಬೆಂಬಲ ವ್ಯಕ್ತಪಡಿಸಿದ್ದಾರೆ. ಹೃದಯವಂತರಿಗೆ ಕಣ್ಣೀರು ಬರುವುದು ಸಹಜ. ಕಲ್ಲು ಹೃದಯವರಿಗೆ ಕಣ್ಣೀರು ಬರುವುದಿಲ್ಲ. ಮುಖ್ಯಮಂತ್ರಿಯಾಗಿ ರೈತರ ಸಾಲ ಮನ್ನಾ ಸೇರಿ ಹಲವಾರು ನಿರ್ಧಾರಗಳನ್ನು ಕೈಗೊಂಡಿದ್ದರೂ ಸಹ ಟೀಕೆ ಮಾಡಿದರೆ ಕುಮಾರ ಸ್ವಾಮಿ ಅವರಾದರೂ ಏನು ಮಾಡಬೇಕು ಎಂದಿದ್ದಾರೆ. ಕುಮಾರ ಸ್ವಾಮಿ ಬಹಿರಂಗವಾಗಿ ಅತ್ತು, ಕಣ್ಣೀರು ಸುರಿಸಿರುವ ಕುರಿತು ಸಿದ್ದರಾಮಯ್ಯ ಆಪ್ತರ ಜತೆ ಗಂಭೀರವಾಗಿ ಚರ್ಚೆ ನಡೆಸಿದ್ದಾರೆ. ಇದು ಮುಂದಿನ ಲೋಕಸಭೆ ಚುನಾವಣೆಯಲ್ಲಿ ಪಕ್ಷದ ಭವಿಷ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ ಎಂದು ಹೇಳಿಕೊಂಡಿದ್ದಾರೆ.

 ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ