ಉಪ ಚುನಾವಣೆಗೆ ಮೀನಾ ಮೇಷ!

Loksabha by election

16-07-2018

ಬೆಂಗಳೂರು: ಲೋಕಸಭೆಗೆ ಅವಧಿಗೂ ಮುನ್ನ ಚುನಾವಣೆ ನಡೆಸಬೇಕೇ ಅಥವಾ ಬೇಡವೆ ಎನ್ನುವ ಗೊಂದಲ್ಲಿರುವ ಕೇಂದ್ರ ಚುನಾವಣಾ ಆಯೋಗ, ರಾಜೀನಾಮೆ ಹಾಗೂ ವಿವಿಧ ಕಾರಣಗಳಿಂದ ತೆರವಾಗಿರುವ ಲೋಕಸಭಾ ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಸುವ ವಿಚಾರದಲ್ಲಿ ವಿಚಾರದಲ್ಲಿ ಇನ್ನೂ ಮೀನಾ ಮೇಷ ಎಣಿಸುತ್ತಿದೆ. ಇದರಿಂದಾಗಿ ತೆರವಾಗಿರುವ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯೂ ವಿಳಂಬವಾಗಿದೆ.
 
ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ವಿಧಾನಸಭೆ ಪ್ರತಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ರಾಜೀನಾಮೆ ನೀಡಿದ್ದು, ಮಾಜಿ ಸಚಿವ ಬಿ.ಶ್ರೀರಾಮುಲು ಬಳ್ಳಾರಿ ಮತ್ತು ಹಾಲಿ ಸಚಿವ ಸಿ.ಎಚ್. ಪುಟ್ಟರಾಜು ಮಂಡ್ಯ ಲೋಕಸಭಾ ಕ್ಷೇತ್ರವನ್ನು ತೆರವು ಮಾಡಿದ್ದಾರೆ.
 
ಇದೇ ರೀತಿ ಮುಖ್ಯಮಂತ್ರಿ ಎಚ್.ಡಿ.ಕುಮಾರ ಸ್ವಾಮಿ ಎರಡು ಕ್ಷೇತ್ರಗಳಿಂದ ಆಯ್ಕೆಯಾಗಿದ್ದ ರಾಮನಗರ ಕ್ಷೇತ್ರಕ್ಕೆ ರಾಜೀನಾಮೆ ಸಲ್ಲಿಸಿ, ಚೆನ್ನಪಟ್ಟಣ ಕ್ಷೇತ್ರವನ್ನು ಉಳಿಸಿಕೊಂಡಿದ್ದಾರೆ. ಜಮುಖಂಡಿ ಕ್ಷೇತ್ರದ ಶಾಸಕರಾಗಿದ್ದ ಸಿದ್ದುನ್ಯಾಮೆಗೌಡ ಅಪಘಾತದಲ್ಲಿ ನಿಧನ ಹೊಂದಿದ ಕಾರಣ ಈ ಕ್ಷೇತ್ರ ತೆರವಾಗಿದೆ. ಅಂದರೆ ಒಟ್ಟು ಮೂರು ಲೋಕಸಭೆ ಮತ್ತು ಎರಡು ವಿಧಾನಸಭಾ ಕ್ಷೇತ್ರಗಳಿಗೆ ಇದೀಗ ಉಪ ಚುನಾವಣೆ ನಡೆಯಬೇಕಾಗಿದೆ.
 
ಚುನಾವಣಾ ಆಯೋಗದ ಮೂಲಗಳ ಪ್ರಕಾರ, ಈ ಕ್ಷೇತ್ರಗಳಿಗೆ ಈ ವೇಳೆಗಾಗಲೇ ಉಪ ಚುನಾವಣೆ ಘೋಷಣೆಯಾಗಬೇಕಾಗಿತ್ತು. ಲೋಕಸಭೆಗೆ ಅವಧಿಗಿಂತ ಮುನ್ನ ಸಾರ್ವತ್ರಿಕ ಚುನಾವಣೆ ನಡೆಯಬಹುದು ಎನ್ನುವ ನಿರೀಕ್ಷೆ ಇರುವ ಹಿನ್ನೆಲೆಯಲ್ಲಿ ಆಯೋಗ ಉಪ ಚುನಾವಣೆ ಘೋಷಣೆಯನ್ನು ವಿಳಂಬ ಮಾಡಿದೆ.
 
ಇದಲ್ಲದೇ ಬಿಜೆಪಿ ಇತ್ತೀಚೆಗೆ ನಡೆದ ಉಪ ಚುನಾವಣೆಗಳಲ್ಲಿ ಹೀನಾಯವಾಗಿ ಪರಾಭವಗೊಂಡಿದೆ. ಇದೀಗ ಚತ್ತೀಸ್‍ಗಢ, ರಾಜಸ್ತಾನ ಮತ್ತು ಮಧ್ಯ ಪ್ರದೇಶ ರಾಜ್ಯಗಳ ವಿಧಾನಸಭಾ ಚುನಾವಣೆ ಈ ವರ್ಷಾಂತ್ಯದ ವೇಳೆಗೆ ನಡೆಯಲಿದೆ. ಈ ಮೂರೂ ರಾಜ್ಯದಲ್ಲಿ ಬಿಜೆಪಿ ಭಾರೀ ಪ್ರಮಾಣದಲ್ಲಿ ಆಡಳಿತ ವಿರೋಧಿ ಅಲೆ ಎದುರಿಸುತ್ತಿದೆ.
 
ಈ ರಾಜ್ಯಗಳಲ್ಲಿ ಬಿಜೆಪಿ ಅಧಿಕಾರದಿಂದ ವಂಚಿತವಾದರೆ ಅದು ಮುಂಬರುವ ಲೋಕಸಭಾ ಚುನಾವಣೆಯ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ. ಹೀಗಾಗಿ ಈ ಮೂರು ರಾಜ್ಯಗಳ ಜತೆಗೆ ಅವಧಿಗೂ ಮುನ್ನ ಲೋಕಸಭಾ ಚುನಾವಣೆಗೆ ಹೋಗಬೇಕೆ ಅಥವಾ ಅವಧಿ ಪೂರ್ಣಗೊಳಿಸಿ ಬರುವ ಏಪ್ರಿಲ್ ಇಲ್ಲವೆ ಮೇ ತಿಂಗಳಲ್ಲಿ ಚುನಾವಣೆ ಎದುರಿಸಬೇಕೆ ಎನ್ನುವ ಗೊಂದಲದಲ್ಲಿ ಬಿಜೆಪಿ ಇದೆ.
 
ವಿಶೇಷವೆಂದರೆ ಚುನಾವಣಾ ಆಯೋಗ ಕೂಡ ಕೇಂದ್ರದ ಆಡಳಿತಾರೂಢ ಬಿಜೆಪಿ ನಿಲುವುನ್ನು ಎದುರು ನೋಡುತ್ತಿದೆ. ವಿಧಾನಸಭೆಗಳು ಮತ್ತು ಲೋಕಸಭೆಗೆ ಒಟ್ಟಿಗೆ ಚುನಾವಣೆ ನಡೆಸುವ ಬಿಜೆಪಿ ಪ್ರಯತ್ನಕ್ಕೆ ಅಷ್ಟೇನು ಸಕರಾತ್ಮಕ ಪ್ರತಿಕ್ರಿಯೆ ದೊರೆತಿಲ್ಲ. ಹೀಗಾಗಿ ಬಿಜೆಪಿ ಗೊಂದಲದಲ್ಲಿದೆ. ಮತ್ತೊಂದೆಡೆ ಕೇಂದ್ರ ಚುನಾವಣಾ ಆಯೋಗ ಕೂಡ ಏನು ಮಾಡಬೇಕೆಂದು ತೋಚದ ಸ್ಥಿತಿಯಲ್ಲಿದೆ.
 
ಒಂದು ವರ್ಷ ಇಲ್ಲವೆ ಅದಕ್ಕೂ ಕಡಿಮೆ ಅವಧಿಯಿದ್ದರೆ ಅಂತಹ ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಸದೇ ಇರುವ ಸಾಕಷ್ಟು ನಿದರ್ಶನಗಳಿವೆ. ಈಗ ರಾಜ್ಯದ ಮೂರು ಲೋಕಸಭಾ ಕ್ಷೇತ್ರಕ್ಕೆ ಕೇವಲ 8 ರಿಂದ 10 ತಿಂಗಳು ಅವಧಿ ಇದೆ. ಹೀಗಾಗಿ ಲೋಕಸಭೆಗೆ ಚುನಾವಣೆ ನಡೆಯುವ ಸಾಧ್ಯತೆಗಳು ಕ್ಷೀಣಿಸಿವೆ. ಇದರಿಂದ ಎರಡು ವಿಧಾನಸಭಾ ಕ್ಷೇತ್ರಗಳಿಗೂ ಸಹ ಚುನಾವಣೆ ನಡೆಸದ ಪರಿಸ್ಥಿತಿ ನಿರ್ಮಾಣವಾಗಿದೆ.
 
ಈ ಹಿಂದೆ ಕಾರವಾರ ವಿಧಾನಸಭಾ ಕ್ಷೇತ್ರದಲ್ಲಿ ಎರಡು ವರ್ಷಕ್ಕೂ ಹೆಚ್ಚು ಕಾಲ ಚುನಾವಣೆ ನಡೆಸಿರಲಿಲ್ಲ. ವಸಂತ ಆಸ್ನೋಟಿಕರ್ ನಿಧನದಿಂದಾಗಿ ಕಾರವಾರ ಕ್ಷೇತ್ರ ತೆರವಾಗಿತ್ತು. ಜತೆಗೆ ಚುನಾವಣಾ ತಕರಾರು ಅರ್ಜಿ ನ್ಯಾಯಾಯದಲ್ಲಿದ್ದ ಕಾರಣ ಕಾರವಾದಲ್ಲಿ ಚುನಾವಣೆ ನಡೆಸಲು ಸಾಧ್ಯವಾಗಿರಲಿಲ್ಲ. ಆದರೆ ಈಗಿನ ಪರಿಸ್ಥಿತಿ ಬೇರೆ ಇದೆ. ಉಪ ಚುನಾಣೆ ವಿಚಾರದಲ್ಲಿ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗದ ಆಯೋಗದ ಕ್ರಮದಿಂದಾಗಿ ಕ್ಷೇತ್ರದ ಜನತೆ ಪರಿತಪಿಸುವಂತಾಗಿದೆ.
 
 


ಸಂಬಂಧಿತ ಟ್ಯಾಗ್ಗಳು

election loksabha ಲೋಕಸಭೆ ಕರ್ನಾಟಕ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ