ಕಾಂಗ್ರೆಸ್ ಮೇಲೆ ರಾಮದಾಸ್ ಆರೋಪ: ಸದನದಲ್ಲಿ ಭಾರೀ ಕೋಲಾಹಲ

Ramdas blames on Congress in vidhan sabha session: congress opposed ramdas allegation

12-07-2018

ಬೆಂಗಳೂರು: ಬಡವರಿಗೆ ರಿಯಾಯ್ತಿ ದರದಲ್ಲಿ ಆಹಾರ ಒದಗಿಸುವ ಇಂದಿರಾಕ್ಯಾಂಟೀನ್ ಯೋಜನೆಯಲ್ಲಿ ನೂರೈವತ್ತು ಕೋಟಿ ರೂ ಹಗರಣ ನಡೆದಿದ್ದು ಈ ಪೈಕಿ ಐವತ್ತು ಕೋಟಿ ರೂಗಳಷ್ಟು ಹಣ ಎಐಸಿಸಿಯ ಪ್ರಭಾವಿಯೊಬ್ಬರಿಗೆ ತಲುಪಿದೆ ಎಂದು ಬಿಜೆಪಿ ನಾಯಕ ಎ.ರಾಮದಾಸ್ ಮಾಡಿದ ಆರೋಪ ವಿಧಾನಸಭೆಯಲ್ಲಿಂದು ಭಾರೀ ಕೋಲಾಹಲಕ್ಕೆ ಕಾರಣವಾಯಿತಲ್ಲದೆ ಆಡಳಿತ-ಪ್ರತಿಪಕ್ಷಗಳ ನಡುವೆ ಭಾರೀ ವಾಕ್ಸಮರ ನಡೆಯಲು ದಾರಿ ಮಾಡಿಕೊಟ್ಟಿತು.

ಸದನ ಆರಂಭವಾದ ಕೆಲ ಹೊತ್ತಿನಲ್ಲಿ ಎದ್ದು ನಿಂತ ಸದಸ್ಯ ಎ.ರಾಮದಾಸ್,ಸಾರ್,ನನಗೊಂದು ಗೊಂದಲ ಶುರುವಾಗಿದೆ. ನಾನು ಇಂದಿರಾಕ್ಯಾಂಟೀನ್ ಯೋಜನೆಯಲ್ಲಿ ನಡೆದ ಅವ್ಯವಹಾರದ ಬಗ್ಗೆ ಮಾತನಾಡಿದರೆ ಸರ್ಕಾರ ಅದಕ್ಕೆ ಸಮರ್ಪಕ ಉತ್ತರ ನೀಡಲು ತಯಾರಿಲ್ಲ ಎಂದರು.

ಈ ಕುರಿತು ವಿವರವಾಗಿ ಹೇಳಿ ಎಂದು ಸಭಾಧ್ಯಕ್ಷ ರಮೇಶ್ ಕುಮಾರ್ ಹೇಳಿದಾಗ ಮಾತು ಮುಂದುವರಿಸಿದ ರಾಮದಾಸ್,ಇಂದಿರಾ ಕ್ಯಾಂಟೀನ್ ಯೋಜನೆಯಲ್ಲಿ ಭಾರೀ ಪ್ರಮಾಣದ ಅವ್ಯವಹಾರ ನಡೆದಿದೆ ಎಂದು ವಿವರ ನೀಡಿದರು.

ಈ ಯೋಜನೆಯಡಿ ನಡೆಯುತ್ತಿರುವ ನಿರ್ವಹಣೆಯಿಂದ ಹಿಡಿದು ಹಲವು ವಿಷಯಗಳಲ್ಲಿ ನಡೆದ ಹಗರಣಗಳ ಕುರಿತು ದಾಖಲೆ ಇರಿಸಿಕೊಂಡಿದ್ದೇನೆ. ಇಂದಿರಾ ಕ್ಯಾಂಟೀನ್ ನಡೆಸುತ್ತಿರುವವರು ನೂರರಿಂದ ನೂರಿಪ್ಪತ್ತು ಜನರಿಗೆ ಆಹಾರ ಒದಗಿಸಿ ಐನೂರೈವತ್ತು ಜನರಿಗೆ ಆಹಾರ ಒದಗಿಸಿರುವುದಾಗಿ ಬಿಲ್ ಕೊಟ್ಟಿರುವ ಕುರಿತು ನನ್ನಲ್ಲಿ ದಾಖಲೆಗಳಿವೆ.

ಈ ಯೋಜನೆಯ ಟೆಂಡರ್ ಅನ್ನು ಅರಬ್ ಸಂಯುಕ್ತ ಸಂಸ್ಥಾನದಲ್ಲಿರುವ ವ್ಯಕ್ತಿಯೊಬ್ಬರಿಗೆ ನೀಡಲಾಗಿದೆ. ಹುಡುಕುತ್ತಾ ಹೋದರೆ ಇದರಲ್ಲಿ ನಡೆದ ನೂರೈವತ್ತು ಕೋಟಿ ಹಗರಣದಲ್ಲಿ ಐವತ್ತು ಕೋಟಿ ರೂಗಳಷ್ಟು ಹಣ ಎಐಸಿಸಿಯ ಪ್ರಭಾವಿಯೊಬ್ಬರಿಗೆ ತಲುಪಿದೆ ಎಂಬ ಮಾಹಿತಿ ಸಿಗುತ್ತಿದೆ ಎಂದು ಆರೋಪಿಸಿದರು.

ಎಂಭತ್ತೆಂಟು ಕೋಟಿ ಕೊಡುವ ಜಾಗದಲ್ಲಿ ಗುತ್ತಿಗೆದಾರರಿಗೆ ಇನ್ನೂರು ಕೋಟಿ ರೂಗಳಿಗೂ ಹೆಚ್ಚು ಹಣವನ್ನು ಯಾವ ಕಾರಣಕ್ಕಾಗಿ ನೀಡಲಾಯಿತು?ಎಂದು ಅವರು ಪ್ರಶ್ನಿಸಿದಾಗ ಸಭಾಧ್ಯಕ್ಷ ರಮೇಶ್ ಕುಮಾರ್ ಆಕ್ಷೇಪ ವ್ಯಕ್ತಪಡಿಸಿದರು.

ನೀವು ಹೇಳಿದ ವಿಷಯ ಗಂಭೀರವಾದುದು. ಆದರೆ ಎಐಸಿಸಿಯ ಯಾವುದೋ ಪ್ರಭಾವಿ ವ್ಯಕ್ತಿಗೆ ಐವತ್ತು ಕೋಟಿ ರೂ ಸಂದಾಯವಾಗಿದೆ ಎಂಬುದು ಗುರುತರ ವಿಷಯ. ಆದರೆ ಈ ವಿಷಯದಲ್ಲಿ ಕೇವಲ ಆರೋಪ ಮಾಡುವುದಲ್ಲ, ಇದು ಹಿಟ್ ಅಂಡ್ ರನ್ ಕೇಸ್ ಆಗಬಾರದು ಎಂದರು.

ಯಾವುದೇ ವ್ಯಕ್ತಿಯ ಚಾರಿತ್ರ್ಯವಧೆ ಮಾಡಿ ಹೋದರೆ ಸಾಲದು. ಅದನ್ನು ಪ್ರಸ್ತಾಪಿಸುವಾಗ ಅಗತ್ಯದ ದಾಖಲೆಗಳು ನಿಮ್ಮ ಕೈಲಿರಬೇಕು. ಹೀಗಾಗಿ ಈ ಕುರಿತು ದಾಖಲೆ ಇದ್ದರೆ ಕೊಡಿ. ಇಲ್ಲದೆ ಹೋದರೆ ಯಾವ ಕಾರಣಕ್ಕೂ ಚಾರಿತ್ರ್ಯವಧೆಗೆ ನಾನು ಅವಕಾಶ ಕೊಡುವುದಿಲ್ಲ.

ನಾನು ನನ್ನ ಕುಟುಂಬ ಇಂತಹ ಚಾರಿತ್ರ್ಯವಧೆಗಳ ಕಾರಣಕ್ಕಾಗಿ ಸುಸ್ತಾಗಿ ಹೋಗಿದ್ದೇವೆ. ಈ ಜನ್ಮದಲ್ಲೇ ಸಾಕು ಅನ್ನುವಂತಾಗಿ ಹೋಗಿದ್ದೇವೆ. ಚಾರಿತ್ರ್ಯ ವಧೆ ಮಾಡುವುದು ಸುಲಭ. ಆದರೆ ಅದಕ್ಕೆ ಪೂರಕವಾದ ದಾಖಲೆಗಳು ಇರದಿದ್ದರೆ ನಾನು ಸಹಿಸುವುದಿಲ್ಲ ಎಂದರು.

ಈ ಹಂತದಲ್ಲಿ ಮಧ್ಯೆ ಪ್ರವೇಶಿಸಿದ ಕೃಷಿ ಸಚಿವ ಕೃಷ್ಣ ಭೈರೇಗೌಡ, ಸರ್ಕಾರ ಕೂಡಾ ಇದೇ ವಿಷಯದಲ್ಲಿ ತಕರಾರು ಮಾಡುತ್ತಿರುವುದು. ಎಐಸಿಸಿಯ ಯಾರೇ ಪ್ರಭಾವಿಗಳು ಐವತ್ತು ಕೋಟಿ ರೂ ಕಿಕ್ ಬ್ಯಾಕ್ ಪಡೆದಿದ್ದರೆ ದಾಖಲೆ ಕೊಡಿ. ನಿಮ್ಮ ಪಕ್ಷಕ್ಕೆ ಇದರಿಂದ ರಾಷ್ಟ್ರ ಮಟ್ಟದಲ್ಲಿ ರಾಜಕೀಯ ಲಾಭ ಸಿಗುತ್ತದೆ ಎಂದು ಹೇಳುತ್ತಿದ್ದೇವೆ. ಇಲ್ಲದಿದ್ದರೆ ಇದು ಸುಮ್ಮನೆ ಹಿಟ್ ಅಂಡ್ ರನ್ ಕೇಸ್ ಅನ್ನುವ ಭಾವನೆ ಬರುತ್ತದೆ ಎಂದರು.

ಈ ಹಂತದಲ್ಲಿ ಸಂಸದೀಯ ಸಲಹಾ ಸಮಿತಿ ಸಭೆಯಲ್ಲಿ ಭಾಗವಹಿಸಲು ರಮೇಶ್ ಕುಮಾರ್ ಅವರು ಸಭಾಧ್ಯಕ್ಷ ಸ್ಥಾನದಿಂದ ತಮ್ಮ ಕೊಠಡಿಗೆ ಹೋದಾಗ ಉಪಾಧ್ಯಕ್ಷ ಕೃಷ್ಣಾ ರೆಡ್ಡಿ ಬಂದು ಸಭಾಧ್ಯಕ್ಷ ಸ್ಥಾನದಲ್ಲಿ ಕುಳಿತರು. ಆದರೆ ಈ ಹಂತದಲ್ಲಿ ರಾಮದಾಸ್ ಮಾಡಿದ ಆರೋಪಕ್ಕೆ ಬಿಜೆಪಿ ಸದಸ್ಯರಾದ ಸಿ.ಟಿ.ರವಿ,ಆರ್.ಅಶೋಕ್,ಎಂ.ಪಿ.ರೇಣುಕಾಚಾರ್ಯ,ಯಡಿಯೂರಪ್ಪ ಸೇರಿದಂತೆ ಹಲವರು ಬೆಂಬಲ ವ್ಯಕ್ತಪಡಿಸಿ,ಇದು ಹಿಟ್ ಅಂಡ್ ರನ್ ಕೇಸ್ ಅಲ್ಲ. ಹಿಟ್ ಅಂಡ್ ಕ್ಯಾಚ್ ಕೇಸ್. ಹೀಗಾಗಿ ಈ ಸದನದಲ್ಲಿ ವಿಷಯವನ್ನು ಮಂಡಿಸಲು ಅವಕಾಶ ನೀಡಬೇಕು ಎಂದು ಪಟ್ಟು ಹಿಡಿದರು.

ಆದರೆ ಉಪಸಭಾಧ್ಯಕ್ಷರು, ನಿಮ್ಮ ಬಳಿ ಏನೇ ದಾಖಲೆಗಳಿದ್ದರೂ ಅದನ್ನು ವಿಧಾನಸಭೆಯ ಕಾರ್ಯದರ್ಶಿಗಳಿಗೆ ಒದಗಿಸಿ. ಚರ್ಚೆಗೆ ಅವಕಾಶ ನೀಡುತ್ತೇನೆ. ಆದರೆ ಅದನ್ನು ಮಾಡದೇ ಇದ್ದರೆ ಚರ್ಚೆಗೆ ಅವಕಾಶ ನೀಡಲಾಗುವುದಿಲ್ಲ ಎಂದಾಗ ಸದನದಲ್ಲಿ ಪ್ರತಿಪಕ್ಷದ ಸದಸ್ಯರು ಭಾರೀ ಅಬ್ಬರ ಮಾಡಿದರು. ಇದು ಹಿಟ್ ಅಂಡ್ ರನ್ ಕೇಸ್ ಎಂಬ ಕೃಷ್ಣಭೈರೇಗೌಡರ ಮಾತನ್ನು ಕಡತದಿಂದ ತೆಗೆದುಹಾಕಬೇಕು ಎಂದು ಬಿಜೆಪಿ ಸದಸ್ಯರು ಪಟ್ಟು ಹಿಡಿದಾಗ ಆಡಳಿತಾರೂಢ ಪಕ್ಷದ ಸದಸ್ಯರು ಅದನ್ನು ವಿರೋಧಿಸಿದರು.

ಈ ಹಂತದಲ್ಲಿ ಸದಸ್ಯ ಎ.ರಾಮದಾಸ್ ತಮಗೆ ಮಾತನಾಡಲು ಅವಕಾಶ ನೀಡಬೇಕು.ಎಲ್ಲ ದಾಖಲೆಗಳನ್ನು ಇಟ್ಟುಕೊಂಡೇ ನಾನಿಲ್ಲಿ ಬಂದಿದ್ದೇನೆ ಎಂದರೆ ಸಿ.ಟಿ.ರವಿ ಮತ್ತಿತರರು ಮಾತನಾಡಿ, ಎಂಭತ್ತೆಂಟು ಕೋಟಿ ರೂ ಕೊಡುವ ಜಾಗದಲ್ಲಿ ಗುತ್ತಿಗೆದಾರರಿಗೆ ಯಾವ ಕಾರಣಕ್ಕಾಗಿ ಇನ್ನೂರು ಕೋಟಿ ರೂಗಳಿಗೂ ಹೆಚ್ಚು ಹಣ ನೀಡಲಾಯಿತು?ಅನ್ನುವ ಕುರಿತು ತನಿಖೆ ನಡೆಸಿ ಎಂದು ಆಗ್ರಹ ಪಡಿಸಿದರು.

ಈ ಹಗರಣದ ಕುರಿತು ನ್ಯಾಯಾಂಗ ತನಿಖೆಯನ್ನಾದರೂ ನಡೆಸಿ, ಲೋಕಾಯುಕ್ತ ತನಿಖೆಯನ್ನಾದರೂ ನಡೆಸಿ, ಅಥವಾ ಯಾವ ಸ್ವರೂಪದ ತನಿಖೆಯನ್ನಾದರೂ ನಡೆಸಿ ಎಂದು ಒತ್ತಾಯಿಸಿದರು. ಆದರೆ ಉಪಸಭಾಧ್ಯಕ್ಷರು ಇದಕ್ಕೆ ಅವಕಾಶ ನೀಡದೆ ಇದ್ದಾಗ ಅಸಮಾಧಾನಗೊಂಡ ಎ.ರಾಮದಾಸ್ ಸಭಾಧ್ಯಕ್ಷರ ಎದುರಿನ ಬಾವಿಗೆ ಬಂದು ಧರಣಿ ನಡೆಸಿದರು. ತದನಂತರ ರಮೇಶ್ ಕುಮಾರ್ ಅವರು ಮರಳಿ ಆಗಮಿಸಿದಾಗ ಪರಿಸ್ಥಿತಿ ಶಾಂತವಾಯಿತು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ