ಕ್ರಿಕೆಟ್ ಬ್ಯಾಟ್ ನಿಂದ ಹೊಡೆದು ವ್ಯಕ್ತಿ ಕೊಲೆ!

cricket bat and murder

12-07-2018

ಬೆಂಗಳೂರು: ರಿಯಲ್ ಎಸ್ಟೇಟ್ ಏಜೆಂಟ್‍ ಒಬ್ಬರನ್ನು ಕೊಲೆ ಮಾಡಿ ಮೃತದೇಹವನ್ನು ಒಳಚಡ್ಡಿ ಮಾತ್ರ ಬಿಟ್ಟು ಸಂಪೂರ್ಣ ನಗ್ನಗೊಳಿಸಿ ಹಳ್ಳವೊಂದರಲ್ಲಿ ಎಸೆದು ಬಂದಿದ್ದ ಪ್ರಕರಣವು ಮಹಿಳೆಯೊಬ್ಬರ ಆತ್ಮಹತ್ಯೆ ಯತ್ನದಿಂದ ಬೆಳಕಿಗೆ ಬಂದಿರುವ ದಾರುಣ ಘಟನೆ ಸೋಲದೇವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ರಿಯಲ್ ಎಸ್ಟೇಟ್ ಏಜೆಂಟ್‍ ನನ್ನು ಸ್ನೇಹಿತನ ಪುತ್ರನೇ ಕ್ರಿಕೆಟ್ ಬ್ಯಾಟ್‍ನಿಂದ ತಲೆಗೆ ಹೊಡೆದು ಕೊಲೆಗೈದು ಮೃತದೇಹವನ್ನು ಮೈಸೂರಿನ ಕೆ.ಆರ್.ನಗರದ ಸಮೀಪ ಹಳ್ಳವೊಂದರಲ್ಲಿ ಎಸೆದಿದ್ದ ಪ್ರಕರಣ ಇದಾಗಿದ್ದು, ಕೃತ್ಯವನ್ನು ಪೊಲೀಸರು ಬಯಲಿಗೆಳೆದು ಆರೋಪಿಯನ್ನು ಬಂಧಿಸಿದ್ದಾರೆ.

ಸೋಲದೇವನಹಳ್ಳಿಯ ಆಚಾರ್ಯ ಕಾಲೇಜು ಬಳಿ ವಾಸಿಸುತ್ತಿದ್ದ ರಿಯಲ್ ಎಸ್ಟೇಟ್ ಏಜೆಂಟ್ ಬಶೀರ್ (38)ನನ್ನು ಕೊಲೆಗೈದು ಮೃತದೇಹವನ್ನು ಒಳಚಡ್ಡಿ ಮಾತ್ರ ಬಿಟ್ಟು ಗುರುತು ಸಿಗದಂತೆ ಹಳ್ಳಕ್ಕೆ ಎಸೆದಿದ್ದ ರೋಷನ್ (20) ಬಂಧಿತ ಆರೋಪಿಯಾಗಿದ್ದಾನೆ. ಕೃತ್ಯಕ್ಕೆ ಸಹಕರಿಸಿದ ಆತನ ತಾಯಿ ಜುಬಿನಾಳನ್ನು ತೀವ್ರ ವಿಚಾರಣೆಗೊಳಪಡಿಸಲಾಗಿದೆ ಎಂದು ಉತ್ತರ ವಿಭಾಗದ ಡಿಸಿಪಿ ಚೇತನ್‍ಸಿಂಗ್ ರಾತೋರ್ ತಿಳಿಸಿದ್ದಾರೆ.

ಕೊಲೆಯಾದ ಬಿಜಾಪುರ ಮೂಲದ ಬಶೀರ್ ಹಾಗೂ ಕೃತ್ಯವೆಸಗಿದ ರೋಷನ್‍ನ ತಂದೆ ಇಲಿಯಾಸ್ ಇಬ್ಬರು ಆತ್ಮೀಯ ಸ್ನೇಹಿತರಾಗಿದ್ದರು. ಅವಿವಾಹಿತನಾಗಿದ್ದ ಬಶೀರ್, ಇಲಿಯಾಸ್ ಮನೆಯಲ್ಲಿಯೇ ಕಳೆದ 18 ವರ್ಷಗಳಿಂದ ವಾಸಿಸುತ್ತಿದ್ದ. ಮೊದಲಿಗೆ ಇಲಿಯಾಸ್ ಜತೆ ಗ್ಯಾರೇಜ್ ನಡೆಸುತ್ತಿದ್ದ ಆತ ಇತ್ತೀಚೆಗೆ ರಿಯಲ್ ಎಸ್ಟೇಟ್ ಏಜೆಂಟಾಗಿ ಕೆಲಸ ಮಾಡುತ್ತಿದ್ದನು.

ಇಲಿಯಾಸ್ ಕೂಡ ಗ್ಯಾರೇಜ್ ಬಿಟ್ಟು ಹಳೆಯ ವಾಹನಗಳನ್ನು ಖರೀದಿಸಿ ಮಾರಾಟ ಮಾಡುತ್ತಿದ್ದರು. ಕಳೆದ ಜೂ.27 ರಂದು ಇಲಿಯಾಸ್ ಕೆಲಸದ ನಿಮಿತ್ತ ತುಮಕೂರಿಗೆ ಹೋಗಿದ್ದರು. ಅದಾದ 2 ದಿನಗಳ ನಂತರ ಜೂ.29ರಂದು ರಾತ್ರಿ ಅವರ ಪುತ್ರ ಆರೋಪಿ ರೋಷನ್, ಮೊಬೈಲ್‍ನಲ್ಲೇ ಕಾಲ ಕಳೆಯುತ್ತಿದ್ದ ಯಾವಾಗಲೂ ಮೊಬೈಲ್‍ನಲ್ಲೇ ಇರುತ್ತಿರುವುದನ್ನು ನೋಡಿದ ಬಶೀರ್, ಬುದ್ದಿ ಹೇಳಲು ಮುಂದಾಗಿದ್ದಾನೆ.

ಸೋಮಾರಿಯಾಗಿ ಯಾವಾಗಲೂ ಮೊಬೈಲ್‍ನಲ್ಲೇ ಮುಳುಗಿರುತ್ತಿದ್ದು ಸರಿಯಾಗಿ ಓದಲು ಇಲ್ಲ ಕೆಲಸಕ್ಕೂ ಹೋಗುವುದಿಲ್ಲ ಎಂದು ಜಗಳ ಮಾಡಿ ಮೊಬೈಲ್‍ನನ್ನು ಕಡಿಮೆ ಮಾಡುವಂತೆ ಬುದ್ಧಿ ಹೇಳಿ, ಥಳಿಸಲು ಮುಂದಾಗಿದ್ದ ಕೂಡಲೇ ಆತನ ವಿರುದ್ಧ  ರೋಷನ್ ತಿರುಗಿಬಿದ್ದರಿಂದ ಗಲಾಟೆಯಾಗಿದ್ದು ರೊಚ್ಚಿಗೆದ್ದ ರೋಷನ್ ಕ್ರಿಕೆಟ್ ಬ್ಯಾಟ್‍ನಿಂದ ಬಶೀರ್‍ ಗೆ ಹೊಡೆದಿದ್ದು, ತಲೆಗೆ ಗಂಭೀರವಾಗಿ ಗಾಯಗೊಂಡಿದ್ದ ಆತ, ಕೆಲವೇ ಕ್ಷಣದಲ್ಲಿ ಮೃತಪಟ್ಟಿದ್ದ.

ಇಲಿಯಾಸ್ ಪತ್ನಿ ಜುಬಿನಾಳ ಚಿನ್ನಾಭರಣಗಳನ್ನು ತೆಗೆದುಕೊಂಡು ಒತ್ತೆ ಇಟ್ಟು ವ್ಯವಹಾರ ನಡೆಸುತ್ತಿದ್ದ ಬಶೀರ್ ನಂತರ, ಅವುಗಳನ್ನು ಬಿಡಿಸಿಕೊಟ್ಟಿರಲಿಲ್ಲ. ಈ ವಿಚಾರವಾಗಿಯೂ ಜುಬಿನಾ ಜತೆ ಜಗಳವಾಗಿತ್ತು. ಬಷೀರ್ ಮೃತಪಟ್ಟಿದ್ದನ್ನು ನೋಡಿದ ಜುಬಿನಾ ಶವವನ್ನು ಬೇರೆ ಕಡೆ ಎಸೆದು ಕೃತ್ಯದಿಂದ ಪಾರಾಗಲು ಯೋಚನೆ ನಡೆಸಿದರು.

ಹೆಚ್ಚು ಸಮಯ ಕಾಯದೇ ತಾಯಿ-ಮಗ ಆತನ ಶವವನ್ನು ಚೀಲದಲ್ಲಿ ಕಟ್ಟಿ ಕಾರಿನಲ್ಲಿ ಹಾಕಿಕೊಂಡು ರಾತ್ರೋರಾತ್ರಿ ಮೈಸೂರಿನ ಕೆ.ಆರ್.ನಗರದಿಂದ 20 ಕಿ.ಮೀ ದೂರದ ಹಳ್ಳದ ಬಳಿ ಒಳ ಚಡ್ಡಿಯನ್ನು ಬಿಟ್ಟು ನಗ್ನವಾದ ಮೃತದೇಹವನ್ನು ಎಸೆದು ವಾಪಸ್ ಬಂದಿದ್ದರು.

ಕೃತ್ಯ ನಡೆದ 2 ದಿನಗಳ ನಂತರ ಜುಲೈ 1ರಂದು ತುಮಕೂರಿನಲ್ಲಿ ಕೆಲಸ ಮುಗಿಸಿಕೊಂಡು ಮನೆಗೆ ಬಂದ ಇಲಿಯಾಸ್, ಬಶೀರ್ ಕಾಣದಿರುವ ಬಗ್ಗೆ ಪತ್ನಿ-ಮಗನಲ್ಲಿ ವಿಚಾರಿಸಿದಾಗ ಕೊಲೆಯನ್ನು ಮುಚ್ಚಿಟ್ಟು ಸ್ವಂತ ಊರಿಗೆ ಹೋಗಿರುವುದಾಗಿ ಹೇಳಿ ಹೋಗಿದ್ದು ವಾಪಸ್ ಬಂದಿಲ್ಲ ಎಂದಿದ್ದರು.

 ಇದಾದ 2 ದಿನಗಳ ನಂತರವೂ ಬಶೀರ್ ಪತ್ತೆಯಾಗದಿದ್ದಾಗ ಆತಂಕಗೊಂಡ ಇಲಿಯಾಸ್ ಜು.4ರಂದು ಸೋಲದೇವನಹಳ್ಳಿ ಪೊಲೀಸರಿಗೆ ನಾಪತ್ತೆ ದೂರು ನೀಡಿದ್ದರು. ದೂರು ದಾಖಲಿಸಿಕೊಂಡ ಪೊಲೀಸರು ಬಶೀರ್ ಗಾಗಿ ಹುಡುಕಾಟ ನಡೆಸಿ ಅನುಮಾನದ ಮೇಲೆ ಜುಬಿನಾ ಹಾಗೂ ರೋಷನ್ ಅವರನ್ನು ವಿಚಾರಣೆ ನಡೆಸಲು ಮುಂದಾದರು.

ಮನೆಯ ಬಳಿ ವಿಚಾರಣೆಗೆ ಪೊಲೀಸರು ಬರುವುದು ಗೊತ್ತಾದ ಕೂಡಲೇ ಕೊಲೆ ಪ್ರಕರಣ ನನ್ನ ಮೇಲೆ ಎಲ್ಲಿ ಬರುತ್ತದೋ ಎಂದು ಭಯಗೊಂಡ ಜುಬಿನಾ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು ಕೂಡಲೇ ಆಕೆಯನ್ನು ಕೆ.ಸಿ.ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಇದರಿಂದ ಮತ್ತಷ್ಟು ಅನುಮಾನಗೊಂಡ ಪೊಲೀಸರು ರೋಷನ್‍ನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆಗೊಳಪಡಿಸಿದಾಗ ಬಶೀರ್ ಕೊಲೆಗೈದ ಕೃತ್ಯವನ್ನು ಬಾಯ್ಬಿಟ್ಟು, ಶವವನ್ನು ಎಸೆದ ಜಾಗವನ್ನು ತೋರಿಸಿದ್ದಾನೆ.

ಸ್ಥಳಕ್ಕೆ ಧಾವಿಸಿದ ಪೊಲೀಸರು ಮೃತದೇಹವನ್ನು ವಶಕ್ಕೆ ತೆಗೆದುಕೊಂಡು ತನಿಖೆ ಮುಂದುವರೆಸಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಜುಬಿನಾ ಗುಣಮುಖಳಾದ ನಂತರ ಕೊಲೆ ಕೃತ್ಯವನ್ನು ಮರೆಮಾಚಲು ಸಹಕರಿಸಿದ್ದಕ್ಕಾಗಿ ಪ್ರಕರಣ ದಾಖಲಿಸಿ ಬಂಧಿಸುವುದಾಗಿ ಚೇತನ್ ಸಿಂಗ್ ವಿವರಿಸಿದ್ದಾರೆ. ಜುಬಿನಾ ಹಾಗೂ ಬಶೀರ್ ನಡುವೆ ಅನೈತಿಕ ಸಂಬಂಧವಿದ್ದು, ಇದು ಕೂಡ ಬಶೀರ್ ಕೊಲೆಗೆ ಕಾರಣವಾಗಿರಬಹುದು ಎಂದು ತನಿಖೆಯಲ್ಲಿ ಕಂಡು ಬಂದಿದೆ.


ಸಂಬಂಧಿತ ಟ್ಯಾಗ್ಗಳು

Murder cricket bat ಆಸ್ಪತ್ರೆ ಚಿಕಿತ್ಸೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ