ಕೆಎಂಎಫ್ ನೇಮಕಾತಿಯಲ್ಲಿ ಭಾರಿ ಅಕ್ರಮ: ಮಾಧುಸ್ವಾಮಿ

Illegal in KMF appointments, said Madhuswamy

12-07-2018

ಬೆಂಗಳೂರು: ಕರ್ನಾಟಕ ಹಾಲು ಒಕ್ಕೂಟ ಮಹಾ ಮಂಡಳಿಯ ನೇಮಕಾತಿಯಲ್ಲಿ ಭಾರೀ ಅಕ್ರಮ ನಡೆದಿದೆ. ವರ್ಷಕ್ಕೆ 96ಲಕ್ಷ ರೂಪಾಯಿ ವೇತನ ನೀಡಿ ಕನ್ಸಲ್ಟೆಂಟ್ ನೇಮಕ ಮಾಡಿಕೊಳ್ಳಲಾಗಿದೆ. ಅದರಲ್ಲೂ ಸರ್ಕಾರ ಹಾಲು ಉತ್ಪಾದಕರಿಗೆ ಪ್ರೋತ್ಸಾಹ ಧನ ಘೋಷಿಸಿದ ನಂತರ ಕೆಎಂಎಫ್ ನಲ್ಲಿ ಲೆಕ್ಕ ಜವಾಬ್ದಾರಿಯೇ ಇಲ್ಲದಂತಾಗಿದೆ. ಸರ್ಕಾರದ ಸಬ್ಸಿಡಿ ಹಣ ಮಧ್ಯವರ್ತಿಗಳ ಪಾಲಾಗುತ್ತಿದೆ ಎಂದು ವಿಧಾನಸಭೆಯಲ್ಲಿ ಬಿಜೆಪಿಯ ಮಾಧುಸ್ವಾಮಿ ಆರೋಪಿಸಿದರು.

ಕೆಎಂಎಫ್ ಅಕ್ರಮಗಳ ಬಗ್ಗೆ ಬಿಜೆಪಿಯ ಮಾಧುಸ್ವಾಮಿ ಮಾತನಾಡುತ್ತಿದ್ದ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿದ ಸಿದ್ದರಾಮಯ್ಯ ನೂತನ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಬಜೆಟ್ ಮೇಲಿನ ಚರ್ಚೆಯಲ್ಲಿ ಮೊದಲ ಬಾರಿಗೆ ಮಾತನಾಡಿದರು. ಹಾಲು ಉತ್ಪಾದಕರಿಗೆ ಕೊಡುತ್ತಿರುವ ಐದು ರೂಪಾಯಿ ಸಬ್ಸಿಡಿಯಲ್ಲ. ಅದು ಪ್ರೋತ್ಸಾಹ ಧನ. ಇದರಿಂದ ಹಾಲು ಉತ್ಪಾದನೆ ಪ್ರಮಾಣ 75ಲಕ್ಷ ಲೀಟರ್‌ಗೆ ಹೆಚ್ಚಳವಾಗಿದೆ. ರೈತರ ಉತ್ಪಾದನೆಗೆ ಸರಿಯಾದ ದರ ಸಿಗುತ್ತಿಲ್ಲ ಎಂಬ ಕಾರಣಕ್ಕೆ ಪ್ರೋತ್ಸಾಹ ಧನ ನೀಡಲಾಗುತ್ತಿದೆ. ಹಾಗೆಂದು ಕೆಎಂಎಫ್ ನಲ್ಲಿ ಎಲ್ಲವೂ ಸರಿಯಿಲ್ಲ. ಕೆಎಂಎಫ್ ನಷ್ಟದಲ್ಲಿದ್ದು, ನಷ್ಟ ಸರಿದೂಗಿಸಲು ಶಾಲಾ ವಿದ್ಯಾರ್ಥಿಗಳಿಗೆ ವಾರದಲ್ಲಿ ನಾಲ್ಕು ದಿನ ಉಚಿತ ಹಾಲು ವಿತರಣೆ ಯೋಜನೆ ಆರಂಭಿಸಲಾಯ್ತು ಎಂದರು.

ಬಿಜೆಪಿಯ ಸೋಮಶೇಖರ ರೆಡ್ಡಿ ಮಾತನಾಡಿ, ಕೆಎಂಎಫ್ ನ ಹಾಲು ಉತ್ಪಾದಕರ ಸಬ್ಸಿಡಿ ಹಣ ದುರುಪಯೋಗವಾಗಿಲ್ಲ. ಮಧ್ಯವರ್ತಿಗಳ ಪಾಲಾಗಿಲ್ಲ. ಸಬ್ಸಿಡಿ ಹಣ ನೇರವಾಗಿ ಹಾಲು ಉತ್ಪಾದಕರ ಅಕೌಂಟ್ ಗೆ ಹೋಗುತ್ತಿದೆ ಎಂದು ಅಭಿಪ್ರಾಯಪಟ್ಟರು.

ರೈತರಿಗೆ ಕೊಡುತ್ತಿರುವ ಹಣವನ್ನು ಸಬ್ಸಿಡಿ ಎಂದು ಬಳಸಬೇಡಿ. ಅದನ್ನು ಪ್ರೋತ್ಸಾಹಧನ ಎಂದೇ ಪರಿಗಣಿಸಬೇಕೆಂದು ಸಭಾಧ್ಯಕ್ಷ ರಮೇಶ್ ಕುಮಾರ್ ಸಲಹೆ ನೀಡಿದರು. ಮಾಧುಸ್ವಾಮಿ ಆರೋಪಕ್ಕೆ ಸಮರ್ಥನೆ ನೀಡಿದ ಸಚಿವ ಹೆಚ್.ಡಿ.ರೇವಣ್ಣ ಕೆಲವು ಹಾಲು ಉತ್ಪಾದಕರ ಸಂಘಗಳಲ್ಲಿ ಸದಸ್ಯರೇ ರೈತರ ಹೆಸರಲ್ಲಿ ನಕಲಿ ಖಾತೆಗಳನ್ನು ತೆರೆದು ಪ್ರೋತ್ಸಾಹ ಧನ ಕಬಳಿಸುತ್ತಿರುವುದು ನಿಜ. ಇದನ್ನು ತಪ್ಪಿಸಿ ನೈಜ ಫಲಾನುಭವಿಗಳಿಗೆ ಅನುಕೂಲವಾಗುವಂತೆ ಮಾಡಬೇಕು ಎಂದರು.


ಸಂಬಂಧಿತ ಟ್ಯಾಗ್ಗಳು

Madhuswamy KMF ಸೋಮಶೇಖರ ರೆಡ್ಡಿ ಅನುಕೂಲ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ