ಕಾಂಗ್ರೆಸ್ ಶಾಸಕಾಂಗ ಪಕ್ಷ ಸಭೆಯಲ್ಲಿ ಕೈ ಶಾಸಕರ ಕಿಡಿ!

congress MLAs outrage about petrol and electricity rates hike congress legislature party meeting

11-07-2018

ಬೆಂಗಳೂರು: ರೈತರ ಸಾಲಮನ್ನಾ ಮಾಡಲು ಪೆಟ್ರೋಲ್, ಡೀಸೆಲ್, ವಿದ್ಯುತ್ ದರ ಏರಿಕೆ ಮಾಡಿರುವ ಸರ್ಕಾರ ತಕ್ಷಣವೇ ತನ್ನ ನಿರ್ಧಾರವನ್ನು ಹಿಂತೆಗೆದುಕೊಳ್ಳಬೇಕು. ಇಲ್ಲದಿದ್ದರೆ ಮುಂದಿನ ಚುನಾವಣೆಯಲ್ಲಿ ನಮ್ಮ ಪಕ್ಷಕ್ಕೇ ಜನರೇ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಕಾಂಗ್ರೆಸ್ ಶಾಸಕರು ಕಿಡಿ ಕಾರಿದ್ದಾರೆ.

ಪಕ್ಷದ ಶಾಸಕಾಂಗ ಸಭೆಯಲ್ಲಿ ಮಾತನಾಡಿದ ಬಹುತೇಕ ಶಾಸಕರು, ರೈತರ ಸಾಲ ಮನ್ನಾ ಮಾಡಲು ಸರ್ಕಾರದ ವಿವಿಧ ಇಲಾಖೆಗಳಲ್ಲಿ ಆಗುತ್ತಿರುವ ಸೋರಿಕೆಯನ್ನು ಕಟ್ಟು ನಿಟ್ಟಾಗಿ ತಡೆಗಟ್ಟುವ ಕೆಲಸವಾಗಬೇಕಿತ್ತು. ಸರ್ಕಾರದ ವಿವಿಧ ಇಲಾಖೆಗಳಲ್ಲಿ ಆಗುತ್ತಿರುವ ಸೋರಿಕೆಯನ್ನು ಪರಿಣಾಮಕಾರಿಯಾಗಿ ತಡೆಗಟ್ಟಿದರೆ ರೈತರ ಸಾಲ ಮನ್ನಾ ಮಾಡಬಹುದಿತ್ತು.  ಆದರೆ ಅದನ್ನು ಬಿಟ್ಟು ಜನ ಸಾಮಾನ್ಯರ ಜೀವನದ ಮೇಲೆ ಹೆಚ್ಚಿನ ಹೊರೆ ಹೇರುವಂತಹ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಡೀಸೆಲ್ ಮೇಲಿನ ಸೆಸ್ ಪ್ರಮಾಣವನ್ನು ಹೆಚ್ಚಳ ಮಾಡಿರುವುದರಿಂದ ಸರಕು ಸಾಗಣೆಯ ವಾಹನಗಳ ಮೇಲೆ ಹೊರೆ ಬೀಳುತ್ತದೆ. ಆ ಮೂಲಕ ಜನರ ದಿನ ನಿತ್ಯದ ಬದುಕಿನ ಮೇಲೆ ಹೊರೆ ಬೀಳುತ್ತದೆ. ಇದೇ ರೀತಿ ವಿದ್ಯುತ್ ದರ ಹೆಚ್ಚಳ ಮಾಡುವ ತೀರ್ಮಾನ ತೆಗೆದುಕೊಳ್ಳಲಾಗಿದೆ. ನಾವೇ ಕೇಂದ್ರ ಸರ್ಕಾರದ ಆರ್ಥಿಕ ನೀತಿಯಿಂದ ಜನ ಸಾಮಾನ್ಯರು ತತ್ತರಿಸುತ್ತಿದ್ದಾರೆಂದು ಹೇಳಿ ಈಗ ನಾವೇ ಜನ ಸಾಮಾನ್ಯರ ಮೇಲೆ ಹೊರೆ ಹೇರುವುದು ಯಾವ ನೆಲೆಯಲ್ಲಿ ಸರಿ?

ಹೀಗೆ ಪೆಟ್ರೋಲ್, ಡೀಸೆಲ್, ವಿದ್ಯುತ್ ದರ ಏರಿಕೆ ಮಾಡಿರುವ ಕ್ರಮ ಸರಿಯಲ್ಲ. ಅದೇ ರೀತಿ ಮದ್ಯದ ಮೇಲಿನ ದರ ಹೆಚ್ಚಳ ಮಾಡುವ ನಿರ್ಧಾರ ಕೂಡಾ ಬಡವರ ಮೇಲೇ ಹೆಚ್ಚಿನ ಹೊರೆ ಹೇರುವ ಕ್ರಮ ಎಂದು ಶಾಸಕರು ದೂರಿದರು.

ಈಗಾಗಲೇ ಮದ್ಯದ ದರ ಮುಗಿಲು ಮುಟ್ಟಿದೆ. ಏನೇ ಹೇಳಿದರೂ ಮದ್ಯದ ಶೇಕಡಾ ತೊಂಭತ್ತರಷ್ಟು ಭಾಗವನ್ನು ಬಳಕೆ ಮಾಡುವವರು ಬಡ, ಮಧ್ಯಮ ವರ್ಗದ ಜನ ಕುಡಿಯುತ್ತಾರೆ ಎಂಬ ತಪ್ಪಿಗಾಗಿ ಅವರು ಹೊರೆಯನ್ನು ಏಕೆ ಹೊರಬೇಕು?

ಮದ್ಯದ ದರ ಎಷ್ಟೇ ಏರಿಕೆಯಾದರೂ ಜನ ಕುಡಿಯುತ್ತಾರೆ ಎಂಬ ಕಾರಣಕ್ಕಾಗಿ ನೀವು ಇದನ್ನು ಮಾಡಿದರೆ ಬಡ, ಮಧ್ಯಮ ವರ್ಗದ ಕುಟುಂಬಗಳ ಗತಿ ಏನಾಗಬೇಕು?ಎಂದು ಪ್ರಶ್ನಿಸಿದರು.

ಈ ಮಧ್ಯೆ ಮಾಜಿ ಸಚಿವ ಹೆಚ್.ಕೆ.ಪಾಟೀಲ್ ಅವರು ರೈತರ ಸಾಲ ಮನ್ನಾ ಕೆಲಸದಿಂದ ಉತ್ತರ ಕರ್ನಾಟಕ ಭಾಗಕ್ಕೆ ಅನ್ಯಾಯವಾಗಿದೆ ಎಂಬುದು ಸೇರಿದಂತೆ ಹಲವು ವಿಷಯಗಳ ಕುರಿತು ಸಿದ್ಧರಾಮಯ್ಯ ಅವರಿಗೆ, ಪರಮೇಶ್ವರ್ ಅವರಿಗೆ ಪತ್ರ ಬರೆದಿದ್ದಾರೆ ಎಂದು ಶಾಸಕರು ಪ್ರಸ್ತಾಪಿಸಿದಾಗ ಆ ಕುರಿತು ಸಭೆ ಸುಧೀರ್ಘ ಚರ್ಚೆ ನಡೆಸಿತು.

ಸಾಲ ಮನ್ನಾ ಕೆಲಸದಿಂದ ಉತ್ತರ ಕರ್ನಾಟಕ ಭಾಗಕ್ಕೆ ನ್ಯಾಯ ಸಿಕ್ಕಿಲ್ಲ. ಅದೇ ರೀತಿ ಬಜೆಟ್‍ನಲ್ಲಿ ಉತ್ತರ ಕರ್ನಾಟಕ ಭಾಗವನ್ನು ನಿರ್ಲಕ್ಷಿಸಲಾಗಿದೆ ಎಂಬುದು ಸೇರಿದಂತೆ ಹಲವು ಅಂಶಗಳ ಕುರಿತು ಹೆಚ್.ಕೆ.ಪಾಟೀಲ್ ಬರೆದಿರುವ ಪತ್ರ ಪ್ರಾಮಾಣಿಕವಾಗಿದೆ ಎಂಬುದನ್ನು ಪಕ್ಷದ ನಾಯಕರೂ ಒಪ್ಪಿಕೊಂಡರು.

ಈ ಮಧ್ಯೆ ಶಾಸಕಾಂಗ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಚಿವ ಹೆಚ್.ಕೆ.ಪಾಟೀಲ್,ಬಜೆಟ್ ಕುರಿತು ಸುಧೀರ್ಘವಾಗಿ ಚರ್ಚೆ ನಡೆಸಲಾಗಿದೆ. ನಾನು ಬರೆದಿರುವ ಪತ್ರಗಳ ಕುರಿತೂ ಸುಧೀರ್ಘ ಚರ್ಚೆ ನಡೆದಿದೆ ಎಂದರು. ಆಗಿರುವ ಲೋಪಗಳನ್ನು ಸರಿಪಡಿಸುವ ಕುರಿತು ಪಕ್ಷದ ನಾಯಕರೂ ಸಹಮತ ವ್ಯಕ್ತಪಡಿಸಿದ್ದಾರೆ. ಅದೇ ರೀತಿ ರೈತರ ಸಾಲ ಮನ್ನಾ ಮಾಡಲು ಪೆಟ್ರೋಲ್, ಡೀಸೆಲ್ ಮೇಲೆ ಹೆಚ್ಚುವರಿ ಸೆಸ್ ಹಾಕಿರುವ ಕುರಿತೂ ಶಾಸಕಾಂಗ ಸಭೆಯಲ್ಲಿ ಚರ್ಚೆ ನಡೆದಿದೆ ಎಂದರು.

ಶಾಸಕಾಂಗ ಸಭೆಯಲ್ಲಿ ಪಕ್ಷದ ಶಾಸಕರು ತಮ್ಮ ನಿಲುವಿನ ಕುರಿತು ವಿವರವಾಗಿ ಚರ್ಚಿಸಿದ್ದಾರೆ. ಆಗಿರುವ ಲೋಪಗಳು ಮುಂದಿನ ದಿನಗಳಲ್ಲಿ ಸರಿಯಾಗಲಿವೆ ಎಂಬ ಭರವಸೆ ನಮಗಿದೆ ಎಂದು ಹೇಳಿದರು.


ಸಂಬಂಧಿತ ಟ್ಯಾಗ್ಗಳು

H.K.Patil Congress ಸುಧೀರ್ಘ ಕರ್ನಾಟಕ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ