'ಇದು ನೀವು ಜನರಿಗೆ ಮಾಡುವ ದ್ರೋಹವಲ್ಲವೇ’? ಸದನದಲ್ಲಿ ಬಿಎಸ್ವೈ ಪ್ರಶ್ನೆ

opposition leader B.S.yeddyurappa talked about irrigation in session

11-07-2018

ಬೆಂಗಳೂರು: ರಾಜ್ಯದ ನೀರಾವರಿ ಯೋಜನೆಗಳನ್ನು ಪೂರೈಸಲು ತಕ್ಷಣವೇ ಐವತ್ತು ಸಾವಿರ ಕೋಟಿ ರೂಗಳನ್ನು ಜನರಿಂದ ಸಂಗ್ರಹಿಸಿ, ಇದಕ್ಕಾಗಿ ನೀರಾವರಿ ಬಾಂಡ್‍ಗಳನ್ನು ಬಿಡುಗಡೆ ಮಾಡಿ ಎಂದು ವಿರೋಧ ಪಕ್ಷದ ನಾಯಕ ಯಡಿಯೂರಪ್ಪ ವಿಧಾನಸಭೆಯಲ್ಲಿಂದು ಒತ್ತಾಯಿಸಿದ್ದಾರೆ.

ಬಜೆಟ್ ಮೇಲಿನ ಚರ್ಚೆಯಲ್ಲಿ ಬಿಜೆಪಿ ಉಪನಾಯಕ ಗೋವಿಂದ ಕಾರಜೋಳ್ ಮಾತನಾಡುತ್ತಿದ್ದ ಸಂದರ್ಭದಲ್ಲಿ ಮಧ್ಯೆ ಪ್ರವೇಶಿಸಿದ ಅವರು, ಬೇರೆ ರಾಜ್ಯಗಳು ನೀರಾವರಿ ವಿಷಯದಲ್ಲಿ ತಮ್ಮ ತಮ್ಮ ಪಾಲಿನ ಹಣವನ್ನು ಸದ್ಬಳಕೆ ಮಾಡಿಕೊಳ್ಳುತ್ತಿವೆ. ಆದರೆ, ಕರ್ನಾಟಕದಲ್ಲಿ ಆ ಕೆಲಸ ಮಾಡುತ್ತಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.

ಯಾವುದೇ ನೀರಾವರಿ ಯೋಜನೆ ಇರಬಹುದು. ರಾಜ್ಯಗಳ ಪಾಲಿಗೆ ಹಂಚಿಕೆಯಾದ ನೀರನ್ನು ಆಯಾ ರಾಜ್ಯಗಳು ಬಳಕೆ ಮಾಡಿಕೊಳ್ಳುತ್ತಿರುವುದಲ್ಲದೆ ಹೆಚ್ಚುವರಿ ನೀರನ್ನೂ ಬಳಸಿಕೊಳ್ಳುತ್ತಿವೆ. ಆದರೆ, ಕರ್ನಾಟಕದಲ್ಲಿ ಆ ಕೆಲಸ ಮಾಡುತ್ತಿಲ್ಲ ಎಂದರು.

ನಾವು ಇದುವರೆಗೆ ನಮ್ಮ ಪಾಲಿಗೆ ಹಂಚಿಕೆಯಾಗಿರುವ ನೀರನ್ನೂ ಸಮರ್ಪಕವಾಗಿ ಬಳಸಿಕೊಂಡಿಲ್ಲ. ಇನ್ನು ಹೆಚ್ಚುವರಿ ನೀರನ್ನು ಬಳಸಿಕೊಳ್ಳುವುದು ಬೇರೆ ಮಾತು ಎಂದು ಅವರು ಛೇಡಿಸಿದರು.

ಈ ಹಿಂದೆ ಕಾಂಗ್ರೆಸ್ ಪಕ್ಷದವರು ಅಧಿಕಾರಕ್ಕೆ ಬರುವ ಮುನ್ನ ಕೇವಲ ಕೃಷ್ಣಾ ನದಿ ಯೋಜನೆಗೆ ವರ್ಷಕ್ಕೆ ಹತ್ತು ಸಾವಿರ ಕೋಟಿ ರೂ ನೀಡುವುದಾಗಿ ಹೇಳಿದ್ದರು. ಆದರೆ, ಇದುವರೆಗೆ ಕೊಟ್ಟಿರುವುದು ಕೇವಲ ಎಂಟೂವರೆ ಸಾವಿರ ಕೋಟಿ ರೂ. ಇದೇ ರೀತಿ ಹಣ ಬಳಕೆ ಮಾಡುತ್ತಾ ಹೋದರೆ ನಮ್ಮ ನೀರಾವರಿ ಯೋಜನೆಗಳನ್ನು ಇಪ್ಪತ್ತೈದು ವರ್ಷಗಳಾದರೂ ಪೂರ್ಣ ಮಾಡಲಾಗುವುದಿಲ್ಲ ಎಂದು ಅವರು ಇದೇ ಸಂದರ್ಭದಲ್ಲಿ ಆಕ್ಷೇಪ ವ್ಯಕ್ತಪಡಿಸಿದರು.

ಇದು ನೀವು ಜನರಿಗೆ ಮಾಡುವ ದ್ರೋಹವಲ್ಲವೇ? ಎಂದು ಪ್ರಶ್ನಿಸಿದ ಅವರು, ಸರ್ಕಾರ ತನ್ನ ಉಳಿದ ಯೋಜನೆಗಳನ್ನು ಪಕ್ಕಕ್ಕಿಟ್ಟು ಮೊದಲು ನೀರಾವರಿ ಯೋಜನೆಗಳನ್ನು ಕೈಗೆತ್ತಿಕೊಳ್ಳಲಿ. ಅದನ್ನು ಪೂರೈಸಿ ಜನರಿಗೆ ಅನುಕೂಲ ಮಾಡಿಕೊಡಲಿ. ಅದೇ ರೀತಿ ಐವತ್ತು ಸಾವಿರ ಕೋಟಿ ರೂ. ಮೌಲ್ಯದ ನೀರಾವರಿ ಬಾಂಡ್‍ಗಳನ್ನು ಬಿಡುಗಡೆ ಮಾಡಿ ತಕ್ಷಣವೇ ನೀರಾವರಿ ಯೋಜನೆಗಳನ್ನು ಸಮರೋಪಾದಿಯಲ್ಲಿ ಕೈಗೆತ್ತಿಕೊಳ್ಳಿ ಎಂದು ಅವರು ಸಲಹೆ ನೀಡಿದರು.


ಸಂಬಂಧಿತ ಟ್ಯಾಗ್ಗಳು

irrigation B.S.Yeddyurappa ದ್ರೋಹ ಯೋಜನೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ