ವಿಭಜನೆ ವಿಚಾರ ಪ್ರಸ್ತಾಪ: ಕ್ಷಮೆ ಕೋರಿದ ಶ್ರೀರಾಮುಲು!

Sreeramulu apologised for this issue in vidhan sabha!

11-07-2018

ಬೆಂಗಳೂರು: ವಿಧಾನಸಭೆ ಅಧಿವೇಶನದಲ್ಲಿ ಇಂದು ಪ್ರತ್ಯೇಕ ಉತ್ತರ ಕರ್ನಾಟಕ ರಾಜ್ಯ ರಚನೆ ವಿಚಾರ ಪ್ರತಿಧ್ವನಿಸಿತು. ಬಜೆಟ್ ಕುರಿತ ಚರ್ಚೆ ವೇಳೆ ಮಾತನಾಡಿದ ಶಾಸಕ ಬಿ.ಶ್ರೀರಾಮುಲು, ಉತ್ತರ ಕರ್ನಾಟಕ ಅಭಿವೃದ್ಧಿ ಆಗಿಲ್ಲ ಎಂದು ಆಕ್ರೋಶ ಹೊರಹಾಕಿದರು. ಇದೇ ವೇಳೆ ‘ಕರ್ನಾಟಕ ವಿಭಜನೆಯಾಗಿ ಪ್ರತ್ಯೇಕ ಉತ್ತರ ಕರ್ನಾಟಕ ರಾಜ್ಯ ಆಗಲಿ’ ಎಂದು ಶ್ರೀರಾಮುಲು ಹೇಳಿಕೆ ನೀಡಿದರು. ಈ ಕೂಡಲೆ ಎದ್ದು ನಿಂತ ಜೆಡಿಎಸ್ ಶಾಸಕ ಎ.ಟಿ.ರಾಮಸ್ವಾಮಿ, ‘ಕರ್ನಾಟಕ ವಿಭಜನೆ ಅನ್ನೋದು ಬೇಡ. ಈ ಪದ ಹೊರಗೆ ಹೋಗೋದು ಕೂಡ ಬೇಡ. ಜನಕ್ಕೆ ಈ ರೀತಿ ಸಂದೇಶ ಹೊರ ಹೋಗಬಾರದು. ವಿಭಜನೆ ಪದ ಕಡತದಿಂದ ತೆಗೆದುಹಾಕಿ ಎಂದು ಸ್ಪೀಕರ್ ಗೆ ಮನವಿ ಮಾಡಿದರು.

ಎ.ಟಿ.ರಾಮಸ್ವಾಮಿ ಹೇಳಿಕೆಗೆ ಧ್ವನಿ ಗೂಡಿಸಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ‘ನಾವೂ ಕೂಡಾ ಸಮಗ್ರ ಕರ್ನಾಟಕದ ಅಭಿವೃದ್ಧಿಯ ಆಸೆ ಇಟ್ಟುಕೊಂಡವರು’. ಆದರೆ, ಸರ್ಕಾರಗಳಿಗೆ ಉತ್ತರ ಕರ್ನಾಟಕದ ಆದಾಯ ಮಾತ್ರ ಬೇಕು ಆದರೆ, ಅಭಿವೃದ್ಧಿ ಮಾಡೋದು ಬೇಡವೇ? ಎಂದು ಪ್ರಶ್ನಿಸಿದ್ದಾರೆ.

ಮಧ್ಯ ಪ್ರವೇಶಿಸಿದ ವಿಪಕ್ಷ ನಾಯಕ ಯಡಿಯೂರಪ್ಪ ಉತ್ತರ ಕರ್ನಾಟಕ ಅಭಿವೃದ್ಧಿ ಕಂಡಿಲ್ಲ ಹೀಗಾಗಿ ಅಲ್ಲಿನ ಜನರ ಪರವಾಗಿ ಶ್ರೀರಾಮುಲು ಮಾತನಾಡಿದ್ದಾರೆ. ಶ್ರೀರಾಮುಲು ಅವರು, ವಿಭಜನೆ ಪದ ಬಳಸಬಾರದಿತ್ತು, ಕಡತದಿಂದ ಆ ಪದವನ್ನು ತೆಗೆದುಹಾಕಿ ಎಂದರು.

ಶ್ರೀರಾಮುಲು ಅವರ ಭಾಷಣದ ಅಂತ್ಯದಲ್ಲಿ ವಿಭಜನೆ ವಿಚಾರ ಪ್ರಸ್ತಾಪಿಸಿದ್ದಕ್ಕೆ ಕ್ಷಮೆ ಕೋರಿ, ‘ಸಮಗ್ರ ಕರ್ನಾಟಕದ ವಿಚಾರ, ಅಭಿವೃದ್ಧಿಗೆ ನಾವು ಬದ್ಧ. ಮಾತನಾಡುವ ಭರದಲ್ಲಿ ವಿಭಜನೆ ವಿಚಾರ ಪ್ರಸ್ತಾಪಿಸಿದ್ದಕ್ಕೆ ಕ್ಷಮೆ ಇರಲಿ ಎಂದರು.


ಸಂಬಂಧಿತ ಟ್ಯಾಗ್ಗಳು

B.Sriramulu vidhan sabha ಸಮಗ್ರ ಕರ್ನಾಟಕ ಭಾಷಣ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ