ಅಂಗನವಾಡಿ ಕಾರ್ಯಕರ್ತೆಯರ ಬೃಹತ್ ಪ್ರತಿಭಟನೆ

Anganwadi  workers huge protest at bengaluru

10-07-2018

ಬೆಂಗಳೂರು: ಕನಿಷ್ಠ ವೇತನ 18 ಸಾವಿರ ರೂ.ನೀಡುವುದು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ನಗರದಲ್ಲಿ ಇಂದು  ಪ್ರತಿಭಟನೆ ನಡೆಸಿದರು.

ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಫೆಡರೇಶನ್ ನೇತೃತ್ವದಲ್ಲಿ ಪುರಭವನದ ಮುಂಭಾಗ ಸೇರಿದ ನೂರಾರು ಮಂದಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಕನಿಷ್ಟ ವೇತನ ನೀಡಿ ಸಮಾನ ಕೆಲಸಕ್ಕೆ ಸಮಾನ ವೇತನ ದೊರೆಯುವಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ತಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ಹೇಳಿಕೊಂಡಿರುವಂತೆ ಎಲ್ಲಾ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿರ ಸೇವೆಯನ್ನು ಖಾಯಂ ಮಾಡಿ, ನಿವೃತ್ತಿ ವೇತನ ಕೊಡಬೇಕು ಎಂದು ಪ್ರತಿಭಟನೆಯ ನೇತೃತ್ವ ವಹಿಸಿದ್ದ ಫೆಡರೇಷನ್ ಅಧ್ಯಕ್ಷ ಎನ್.ಶಿವಣ್ಣ ಆಗ್ರಹಿಸಿದರು.

ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರನ್ನು ಖಾಯಂಗೊಳಿಸುವ ಜೊತೆಗೆ ‘ಸಿ’ ಮತ್ತು ‘ಡಿ’ ದರ್ಜೆ ನೌಕರರ ಸೌಲಭ್ಯ ನೀಡಬೇಕು. ಅಂಗನವಾಡಿ ಮಹಿಳೆಯರಿಗೆ ಸೇವಾವಧಿ ಆಧಾರದಲ್ಲಿ ಗೋವಾ ರಾಜ್ಯದ ಮಾದರಿಯಲ್ಲಿ ಗೌರವಧನ, ವೇತನ ಹೆಚ್ಚಿಸಬೇಕು. ಅದೇ ರೀತಿ, ನಿವೇಶನ ರಹಿತರಿಗೆ ವಸತಿ ಸೌಲಭ್ಯ ದೊರಕಿಸಿಕೊಡಬೇಕು ಎಂದು ಒತ್ತಾಯಿಸಿದರು.

ರಾಜ್ಯ ವ್ಯಾಪ್ತಿಯಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳು ಎಲ್‍ಕೆಜಿ ಹಾಗೂ ಯುಕೆಜಿ ಶಾಲೆಗಳನ್ನು ತೆರೆದಿದ್ದು, ಅಂಗನವಾಡಿ ಕಾರ್ಯಕರ್ತೆಯರಿಗೆ ಹಾಲಿ ಜವಾಬ್ದಾರಿಯನ್ನುವಹಿಸಿ ತರಬೇತಿ ನೀಡಬೇಕು ಎಂದ ಅವರು, ಬಹುತೇಕ ಖಾಸಗಿ ಸಂಸ್ಥೆಗಳು ನಿಯಮಗಳನ್ನು ಉಲ್ಲಂಘನೆ ಮಾಡಿದ್ದು, ಈ ಸಂಬಂಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಪ್ರಧಾನ ಕಾರ್ಯದರ್ಶಿ ಎಂ.ಜಯಮ್ಮ ಮಾತನಾಡಿ, ಗೌರವ ಧನ ಹೆಚ್ಚಳ ಮಾಡಬೇಕು. ಮಿನಿ ಅಂಗನವಾಡಿ ಕೇಂದ್ರಗಳಿಗೆ ಸಹಾಯಕಿಯರನ್ನು ತುರ್ತಾಗಿ ನೇಮಿಸಿ, ಮಾತಪೂರ್ಣ ಯೋಜನೆ ಯಶಸ್ವಿಯಾಗಿ ಜಾರಿ ಮಾಡಬೇಕು. ಸಾಮಾಜಿಕ ಭದ್ರತಾ ಯೋಜನೆಗಳಿಂದ ಇಎಸ್‍ಐ ಭವಿಷ್ಯನಿಧಿ ಗ್ರ್ಯಾಚ್ಯುಯಿಟಿ ಜಾರಿಗೊಳಿಸಿ, ಪ್ರತಿ ತಿಂಗಳು ಅಂಗನವಾಡಿ ಕೇಂದ್ರಗಳ ಬಾಡಿಗೆ ಮತ್ತು ಕಾರ್ಯಕರ್ತೆಯರು ಮತ್ತು ಸಹಾಯಕಿಯರ ವೇತನವನ್ನು ಪಾವತಿಸಬೇಕು ಎಂದು ಆಗ್ರಹಿಸಿದರು.


ಸಂಬಂಧಿತ ಟ್ಯಾಗ್ಗಳು

anganwadi protest ಭವಿಷ್ಯ ನಿಧಿ ಕಾರ್ಯಕರ್ತೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ