‘ನಾನು ಯಾವುದೇ ಒಂದು ಜಾತಿಗೆ ಸೀಮಿತವಾದ ಸಿಎಂ ಅಲ್ಲ’09-07-2018

ಬೆಂಗಳೂರು: ‘ನಾನು ಯಾವುದೇ ಒಂದು ಜಾತಿಗೆ ಸೀಮಿತವಾದ ಮುಖ್ಯಮಂತ್ರಿಯಲ್ಲ. ರಾಜ್ಯದ ಆರೂವರೆ ಕೋಟಿ ಜನರ ಪ್ರತಿನಿಧಿ’ ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ವಿಧಾನಸಭೆಯಲ್ಲಿ ತಿಳಿಸಿದರು.

ರಾಜ್ಯಪಾಲರ ಭಾಷಣಕ್ಕೆ ಸಂಬಂಧಿಸಿದ ವಂದನಾರ್ಪಣಾ ಪ್ರಸ್ತಾವದ ಮೇಲೆ ನಡೆದ ಚರ್ಚೆಗೆ ಉತ್ತರ ನೀಡಿದ ಅವರು, ತಮ್ಮನ್ನು ಒಂದು ಜಾತಿಗೆ ಸೀಮಿತಗೊಳಿಸಬೇಡಿ. ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ ಎಂಬ ತಾರತಮ್ಯ ಮಾಡಿಲ್ಲ ಎಂದಾಗ, ಆಡಳಿತ ಪಕ್ಷದ ಸದಸ್ಯರು ಮೇಜುಕುಟ್ಟಿ ಸ್ವಾಗತಿಸಿದರು.

ಹಾಸನದ ಹೊರ ವರ್ತುಲ ರಸ್ತೆಗೆ 30ಕೋಟಿ ನೀಡಿರುವುದನ್ನು ದೊಡ್ಡದಾಗಿ ಪ್ರಸ್ತಾಪ ಮಾಡಲಾಗಿದೆ. ಹಾಸನ ಶಾಸಕರು ಬಿಜೆಪಿಯವರು. ಅನುದಾನವನ್ನು ಹಾಸನಕ್ಕೆ ಬೇಡವೆಂದರೆ ಉತ್ತರ ಕರ್ನಾಟಕಕ್ಕೆ ಕೊಡೋಣ ಎಂದರು. ಆಗ ಬಿಜೆಪಿ ಶಾಸಕ ಎ.ಎಸ್.ಪಾಟೀಲ್ ನಡಹಳ್ಳಿ ಉತ್ತರ ಕರ್ನಾಟಕಕ್ಕೆ ನೀಡಿರುವ ಅನುದಾನದ ಬಗ್ಗೆ ಪ್ರಸ್ತಾಪಿಸಿ ಎಂದಾಗ, ಆಡಳಿತ ಪಕ್ಷದ ಸದಸ್ಯರಿಂದ ತೀವ್ರ ಆಕ್ಷೇಪ ವ್ಯಕ್ತವಾಯಿತು.

ಉತ್ತರ ಮುಂದುವರೆಸಿದ ಸಿಎಂ, ಸ್ವಾತಂತ್ರ್ಯ ಬಂದ ನಂತರ ಈ ಕ್ಷಣದವರೆಗೆ ಯಾವ ಯಾವ ಭಾಗದಲ್ಲಿ ಅಭಿವೃದ್ಧಿಯಾಗಿದೆ. ಯಾವ ಯಾವ ಭಾಗಕ್ಕೆ ಅನ್ಯಾಯವಾಗಿದೆ ಎಂಬುದರ ಬಗ್ಗೆ  ಒಂದೆರಡು ದಿನ ಇಲ್ಲವಾದರೆ ಒಂದು ವಾರದ ಕಾಲ ಕರ್ನಾಟಕದ ಸಮಗ್ರ ಚರ್ಚೆಯಾಗಲಿ. ಸಭಾಧ್ಯಕ್ಷರು ಇದಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿದರು. ಉತ್ತರ ಕರ್ನಾಟಕದ ಮುಗ್ಧ ಜನರಿಗೆ ಏನು ಅನ್ಯಾಯವಾಗಿದೆ ಎಂಬುದು ಚರ್ಚೆಯಾಗಲಿ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ತಿರುಗೇಟು ನೀಡಿದರು.

 


ಸಂಬಂಧಿತ ಟ್ಯಾಗ್ಗಳು

Kumaraswamy vidhana soudha ಭಾಷಣ ಜಾತಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ