ಮಾವು ಬೆಳೆಗೆ ಸರ್ಕಾರದಿಂದ ಬೆಂಬಲ ಬೆಲೆ

support price for mango crop from government

09-07-2018

ಬೆಂಗಳೂರು: ರಾಜ್ಯದ ಇತಿಹಾಸದಲ್ಲಿ ಇದೇ ಮೊದಲ ಬಾರಿ ಮಾವು ಬೆಳೆಗಾರರ ಸಂಕಷ್ಟಕ್ಕೆ ಸ್ಪಂದಿಸಿರುವ ಸರ್ಕಾರ ಪ್ರತಿ ಟನ್ ಮಾವು ಬೆಳೆಗೆ 2500 ರೂ ಬೆಂಬಲ ಬೆಲೆ ನೀಡಿ ಖರೀದಿಸುವುದಾಗಿ ಘೋಷಿಸಿದೆ.

ವಿಧಾನಸಭೆಯಲ್ಲಿಂದು ಮಾವು ಬೆಳಗಾರರು ನಡೆಸುತ್ತಿರುವ ಧರಣಿಯ ಕುರಿತು ಪ್ರಸ್ತಾಪಿಸಿದ ಕೃಷಿ ಸಚಿವ ವೆಂಕಟಶಿವಾರೆಡ್ಡಿ ಅವರು, ಮಾವು ಬೆಳೆಯ ಬೆಲೆ ಕುಸಿದು ರೈತರು ಸಂಕಷ್ಟದಲ್ಲಿದ್ದಾರೆ. ಅವರ ನೆರವಿಗೆ ಧಾವಿಸಬೇಕಾದ ಅಗತ್ಯವಿದೆ ಎಂದು ಪ್ರಸ್ತಾಪಿಸಿದರು.

ಈ ಸಂದರ್ಭದಲ್ಲಿ ಮಧ್ಯೆ ಪ್ರವೇಶಿಸಿದ ಸಭಾಧ್ಯಕ್ಷ ರಮೇಶ್ ಕುಮಾರ್, ಈ ಮೊದಲು ಬೆಳೆ ಹೆಚ್ಚಾದಾಗ ರೈತರು ಪಕ್ಕದ ಆಂಧ್ರ ಪ್ರದೇಶದಲ್ಲಿರುವ ಮಾವು ಸಂಸ್ಕರಣಾ ಘಟಕಕ್ಕೆ ಮಾವು ಬೆಳೆಯನ್ನು ಮಾರಾಟ ಮಾಡುತ್ತಿದ್ದರು. ಆದರೆ, ಈ ಬಾರಿ ಅಲ್ಲೂ ಬೆಳೆ ಹೆಚ್ಚಾಗಿ ಮಾವು ಬೆಳೆಯನ್ನು ಆಮದು ಮಾಡಿಕೊಳ್ಳದಿರಲು ಆಂಧ್ರಪ್ರದೇಶ ಸರ್ಕಾರ ನಿರ್ಧರಿಸಿದೆ ಎಂದರು.

ಪರಿಣಾಮವಾಗಿ ಮಾವು ಬೆಳೆಗಾರರು ಸಂಕಷ್ಟದಲ್ಲಿದ್ದಾರೆ. ಹೀಗಾಗಿ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಬೇಕು. ರೈತರ ಸಮಸ್ಯೆಯನ್ನುಪರಿಹರಿಸಬೇಕು. ಸಮಸ್ಯೆ ಶುರುವಾದ ಕೂಡಲೇ ಸರ್ಕಾರ ಸ್ಪಂದಿಸುವ ಕೆಲಸ ಮಾಡಿದೆ. ಇದಕ್ಕಾಗಿ ನಾನು ಸರ್ಕಾರವನ್ನು ಅಭಿನಂದಿಸುತ್ತೇನೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ಕುಮಾರಸ್ವಾಮಿ, ಮಾವು ಬೆಳೆಗಾರರ ಸಮಸ್ಯೆಯನ್ನು ಪರಿಹರಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಆಂಧ್ರದ ಚಿತ್ತೂರಿನಲ್ಲಿದ್ದ ಆಹಾರ ಸಂಸ್ಕರಣಾ ಘಟಕ ತನ್ನ ಭಾಗದಲ್ಲೇ ಬೆಳೆ ಹೆಚ್ಚಾಗಿದ್ದರಿಂದ ಮಾವು ಬೆಳೆಯ ಆಮದನ್ನು ನಿಷೇಧಿಸಿದೆ ಎಂದರು.

ಅದೇ ರೀತಿ ಮಹಾರಾಷ್ಟ್ರದ ಆಹಾರ ಸಂಸ್ಕರಣ ಘಟಕದಲ್ಲಿ ಐವತ್ತು ಸಾವಿರ ಟನ್ ಸಂಸ್ಕರಿತ ಆಹಾರ ಹಾಗೇ ಉಳಿದಿದೆ. ಹೀಗಾಗಿ ಅದು ಕೂಡಾ ಮಾವು ಬೆಳೆಯನ್ನು ಖರೀದಿ ಮಾಡಲು ಸಿದ್ಧವಿಲ್ಲ. ಹೀಗಾಗಿ ನಮಗೇ ಹದಿನೇಳರಿಂದ ಹದಿನೆಂಟು ಕೋಟಿ ರೂಗಳಷ್ಟು ಹೊರೆಯಾದರೂ ಸಂಕಷ್ಟದಲ್ಲಿರುವ ರೈತರ ನೆರವಿಗೆ ಧಾವಿಸಲು ಮುಂದಾಗಿದ್ದೇವೆ ಎಂದರು.

ಈ ಸಂದರ್ಭದಲ್ಲಿ ಪುನ: ಮಾತನಾಡಿದ ಕೃಷಿ ಸಚಿವ ವೆಂಕಟಶಿವಾರೆಡ್ಡಿ, ಮಾವು ಬೆಳೆಗೆ ಟನ್‍ಗೆ ಎರಡೂವರೆ ಸಾವಿರ ರೂಪಾಯಿಗಳನ್ನುನೀಡಲು ಸರ್ಕಾರ ತೀರ್ಮಾನಿಸಿದ್ದು ಈ ಹಿನ್ನೆಲೆಯಲ್ಲಿ ರೈತರು ಧರಣಿಯನ್ನು ಹಿಂಪಡೆಯಬೇಕು ಎಂದು ಮನವಿ ಮಾಡಿಕೊಂಡರು.


ಸಂಬಂಧಿತ ಟ್ಯಾಗ್ಗಳು

shivashankar reddy session ಬೆಂಬಲ ಬೆಲೆ ಸಂಕಷ್ಟ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ