‘ಆಗ ನೀವು ಮಾಡಿದ್ದು ನ್ಯಾಯ, ಈಗ ನಾವು ಮಾಡಿದ್ದು ಅನ್ಯಾಯ ಎನ್ನುತ್ತೀರಲ್ಲ’

CM kumaraswamy answers to BJP at vidhana soudha session

09-07-2018

ಬೆಂಗಳೂರು: ಮಹಾಭಾರತದ ಕರ್ಣನಂತೆ ನಾನು ಸಾಂದರ್ಭಿಕ ಶಿಶು, ಆದರೆ ಕರ್ಣನಿಗೂ ಅಪ್ಪ-ಅಮ್ಮ ಇದ್ದರು. ನನಗೂ ಜೆಡಿಎಸ್-ಕಾಂಗ್ರೆಸ್ ಎಂಬ ಅಪ್ಪ-ಅಮ್ಮ ಇದ್ದಾರೆ. ಈ ಸಾಂದರ್ಭಿಕ ಶಿಶು ಐದು ವರ್ಷಗಳ ಕಾಲ ಸುಭದ್ರ ಆಡಳಿತ ನೀಡಲಿದೆ ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರ ಸ್ವಾಮಿ ವಿಧಾನಸಭೆಯಲ್ಲಿಂದು ತಮ್ಮ ಸರ್ಕಾರವನ್ನು ಬಲವಾಗಿ ಸಮರ್ಥಿಸಿಕೊಂಡಿದ್ದಾರೆ.

ರಾಜ್ಯಪಾಲರ ವಂದನಾ ನಿರ್ಣಯದ ಮೇಲಿನ ಸುದೀರ್ಘ ಚರ್ಚೆಗೆ ಉತ್ತರಿಸಿದ ಅವರು, ಕಾಂಗ್ರೆಸ್ – ಜೆಡಿಎಸ್ ಮೈತ್ರಿ ಸರ್ಕಾರ ಆರೂವರೆ ಕೋಟಿ ಜನರ ಆಶೋತ್ತರಗಳನ್ನು ಈಡೇರಿಸಲಿದೆ. ನನ್ನ ಸರ್ಕಾರವನ್ನು ಅಪವಿತ್ರ ಮೈತ್ರಿ, ರಾಜ್ಯದ ಜನರ ನಂಬಿಕೆಗೆ ಮಾಡಿದ ದ್ರೋಹ ಎಂದೆಲ್ಲ ಬಣ್ಣಿಸಲಾಗಿದೆ. ಆದರೆ ಇದು ಸಂವಿಧಾನಬದ್ಧ ಸರ್ಕಾರ. ಸಂವಿಧಾನ ಬದ್ಧವಲ್ಲದಿದ್ದರೆ ರಾಜ್ಯಪಾಲರು ಸರ್ಕಾರ ರಚಿಸಲು ನಮಗೆ ಅವಕಾಶ ನೀಡುತ್ತಿರಲಿಲ್ಲ ಎಂದು ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದರು.

ಹಿಂದೆ 2004ರಲ್ಲಿ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದಾಗ ಅಪವಿತ್ರ ಸರ್ಕಾರವಾಗಿರಲಿಲ್ಲ. ಈಗ ನಾನು ಕಾಂಗ್ರೆಸ್ ಜತೆ ಕೈ ಜೋಡಿಸಿದಾಗ ಹೇಗೆ ಅಪವಿತ್ರವಾಗುತ್ತದೆ? ನಾನು ಸಂವಿಧಾನಬದ್ಧ ಮುಖ್ಯಮಂತ್ರಿ. ಆರೂವರೆ ಕೋಟಿ ಜನರ ಮುಖ್ಯಮಂತ್ರಿ. ಆದರೆ ಕರ್ಣನಂತೆ ನಾನು ಸಾಂದರ್ಭಿಕ ಶಿಶು ಎಂದರು.

ಮಹಾಭಾರತದಲ್ಲಿ ಕುಂತಿ ಋಷಿಯೊಬ್ಬರ ಸೇವೆಮಾಡಿ ವರ ಪಡೆಯುತ್ತಾಳೆ, ಸೂರ್ಯನನ್ನು ಸ್ಮರಿಸಿ ಕರ್ಣನನ್ನು ಪಡೆಯುತ್ತಾಳೆ, ಆನಂತರ ಸಮಾಜ ಏನು ಹೇಳುತ್ತದೋ? ಎಂದು ಹೆದರಿಕೆಯಾಗಿ ನದಿಯಲ್ಲಿ ತೇಲಿ ಬಿಡುತ್ತಾಳೆ, ಆ ಮಗುವನ್ನು ಬೆಸ್ತನೊಬ್ಬ ಕಾಪಾಡುತ್ತಾನೆ. ಮುಂದೆ ಆತ ಬೆಳೆದು ದೊಡ್ಡವನಾದಾಗ ಧುರ್ಯೋಧನನ ಸಹಾಯದಿಂದ ಅಂಗರಾಜ್ಯದ ರಾಜನಾಗುತ್ತಾನೆ. ಈ ಎಲ್ಲ ಬೆಳವಣಿಗೆಗಲ್ಲಿ ಕರ್ಣ ಸಾಂದರ್ಭಿಕ ಶಿಶು. ಹಾಗೆಯೇ ಈಗ ನಾನು ಕೂಡಾ ಸಾಂದರ್ಭಿಕ ಶಿಶು. ಆತನ ನೋವು, ತೊಳಲಾಟಗಳೆಲ್ಲ ನನ್ನವೂ ಆಗಿವೆ ಎಂದು ಬಾವುಕರಾಗಿ ಹೇಳಿದರು.

ಇಂತಹ ಸ್ಥಿತಿಯಲ್ಲಿ ನಾನು ಅಧಿಕಾರಕ್ಕೆ ಬಂದು ಒಂದೂವರೆ ತಿಂಗಳು ಕಳೆದಿದೆ ಅಷ್ಟೇ. ಅಷ್ಟರಲ್ಲೇ ಈ ಸರ್ಕಾರ ಬಹುಕಾಲ ಉಳಿಯುವುದಿಲ್ಲ. ಬೇಗನೆ ಬೀಳುತ್ತದೆ ಎಂದು ವ್ಯಾಖ್ಯಾನ ಮಾಡುತ್ತಿದ್ದೀರಿ. ಆದರೆ ಯಾವ ಕಾರಣಕ್ಕೂ ಈ ಸರ್ಕಾರ ಬೀಳುವುದಿಲ್ಲ. ಐದು ವರ್ಷ ಕಾಲ ಸುಭದ್ರವಾಗಿರುತ್ತದೆ ಎಂದು ಹೇಳಿದರು.

ಇವತ್ತು ಬಿಜೆಪಿ ರಾಜ್ಯದ ಅತಿ ದೊಡ್ಡ ಪಕ್ಷ. 104 ಮಂದಿ ಶಾಸಕರನ್ನು ಹೊಂದಿರುವ ಪಕ್ಷ. ಹೀಗಾಗಿ ಕೇವಲ ಮೂವತ್ತೇಳು ಮಂದಿ ಶಾಸಕರ ಬೆಂಬಲ ಇಟ್ಟುಕೊಂಡ ಕುಮಾರಸ್ವಾಮಿ ಸಿಎಂ ಆಗಿದ್ದ ಅಕ್ಷಮ್ಯ ಎಂದು ಬಿಜೆಪಿಯವರು ಬಣ್ಣಿಸಿದ್ದಾರೆ.

ಆದರೆ ನಾನು ಮೂವತ್ತೇಳು ಶಾಸಕರ ಬೆಂಬಲದಿಂದ ಸಿಎಂ ಆಗಿಲ್ಲ. ನೂರಾ ಹತ್ತೊಂಭತ್ತು ಮಂದಿ ಶಾಸಕರ ಬೆಂಬಲದಿಂದ ಸಿಎಂ ಆಗಿದ್ದೇನೆ. ಮುಂದಿನ ಐದು ವರ್ಷಗಳ ಕಾಲವೂ ಸಿಎಂ ಆಗಿರುತ್ತೇನೆ. ಯಾವ ಅನುಮಾನವೂ ಬೇಡ ಎಂದು ಚುಚ್ಚಿದರು.

ಇವತ್ತು ಮೂವತ್ತೇಳು ಶಾಸಕರ ಬೆಂಬಲದೊಂದಿಗೆ ನಾನು ಸಿಎಂ ಆಗಿರುವುದು ಅಪರಾಧ ಎಂಬಂತೆ ಮಾತನಾಡುತ್ತೀರಲ್ಲ? 2006ರಲ್ಲಿ ಬಿಜೆಪಿ ನಾಯಕ ಯಡಿಯೂರಪ್ಪ ಅವರೇ ತಮ್ಮ ಮಿತ್ರ ಪಕ್ಷ ಜೆಡಿಯು ಸೇರಿದಂತೆ ಎಂಭತ್ನಾಲ್ಕು ಶಾಸಕರನ್ನು ಕರೆದುಕೊಂಡು ಬಂದು ನನ್ನ ಜತೆ ಕೈ ಜೋಡಿಸಿ ಜೆಡಿಎಸ್-ಬಿಜೆಪಿ ಸರ್ಕಾರ ರಚನೆಯಾಗುವಂತೆ ಮಾಡಿದರಲ್ಲ?ಆಗ ನನ್ನ ಜತೆಗಿದ್ದವರು ಮೂವತ್ತೆಂಟು ಮಂದಿ ಮಾತ್ರ. ಆಗ ಧರ್ಮಸಿಂಗ್ ಅವರನ್ನು ಪದಚ್ಯುತಗೊಳಿಸಿ ನನ್ನ ಜತೆ ಸರ್ಕಾರ ನಡೆಸಿದ್ದು ಅಕ್ಷಮ್ಯವಲ್ಲವೇ ಯಡಿಯೂರಪ್ಪನವರೇ? ಆಗ ಮಾಡಿದ್ದು ನ್ಯಾಯ. ಈಗ ಮಾಡಿದ್ದು ಅನ್ಯಾಯ ಎನ್ನುತ್ತೀರಲ್ಲ? ಎಂದು ಕುಮಾರಸ್ವಾಮಿ ಟೀಕಿಸಿದರು.

ರಾಜಕೀಯದಲ್ಲಿ ಪರಸ್ಪರ ವೈರುಧ್ಯದ ಘಟನೆಗಳು ನಡೆಯುತ್ತವೆ. ನಾವು ಪರಸ್ಪರರನ್ನು ಟೀಕಿಸುತ್ತೇವೆ. ಕಾಂಗ್ರೆಸ್, ಬಿಜೆಪಿಯವರನ್ನು ನಾವು, ನಮ್ಮನ್ನು ಕಾಂಗ್ರೆಸ್‍ ನವರನ್ನು ಬಿಜೆಪಿಯವರು, ಬಿಜೆಪಿ ಹಾಗೂ ನಮ್ಮನ್ನು ಕಾಂಗ್ರೆಸ್‍ನವರು ಟೀಕಿಸಿರುತ್ತಾರೆ. ಆದರೆ ಅದು ಸಹಜ ಎಂದು ಅವರು ಹೇಳಿದರು.

ನಾನು ಕೇವಲ ಶಾಸಕನಾಗಿ ಮೂಲೆಯಲ್ಲಿ ಕುಳಿತಿದ್ದಾಗ ಇದೇ ಯಡಿಯೂರಪ್ಪನವರು ತಮ್ಮ ಸಹಾಯಕನ ಬಳಿ ಚೀಟಿ ಕಳಿಸಿ, ಐದು ನಿಮಿಷ ಮಾತನಾಡಬೇಕಿತ್ತು ಎಂದಿದ್ದಿರಿ. ಆನಂತರ ನಾನು ಸದಾಶಿವನಗರದ ನಿಮ್ಮ ಮನೆಗೆ ನಾನು ಬಂದೆ. ಆಗ ಏನೇನು ಮಾತುಕತೆ ನಡೆಯಿತು? ಅಂತ ನಾನು ಹೇಳಬೇಕಿಲ್ಲ. ಆದರೆ, ನಾನೇನೂ ನನ್ನನ್ನು ಸಿಎಂ ಮಾಡಿ ಎಂದು ಹೇಳಲಿಲ್ಲ. ನೀವೇ ಮೈತ್ರಿಕೂಟ ಸರ್ಕಾರ ರಚಿಸೋಣ. ನಿಮ್ಮನ್ನು ಸಿಎಂ ಮಾಡಲು ನಮ್ಮ ಶಾಸಕರನ್ನು ಒಪ್ಪಿಸುತ್ತೇನೆ ಎಂದಿರಿ. ವಾಸ್ತವವಾಗಿ ಅಂದಿದ್ದ ಧರ್ಮಸಿಂಗ್ ಸರ್ಕಾರವನ್ನು ಅಸ್ಥಿರಗೊಳಿಸಲು ಕೆಲವು ಶಕ್ತಿಗಳು ಯತ್ನಿಸಿದವು.

ಆಗ ನನ್ನ ತಂದೆಯವರು ಸೋನಿಯಾಗಾಂಧಿಯವರನ್ನು ಭೇಟಿ ಮಾಡಿ, ಸರ್ಕಾರ ವಿಸರ್ಜಿಸಿ ಮಧ್ಯಂತರ ಚುನಾವಣೆಗೆ ಹೋಗೋಣ ಎಂದು ಹೇಳಲು ದೆಹಲಿಗೆ ಹೊರಟಿದ್ದರು. ಆಗ ನಮ್ಮ ಪಕ್ಷದ ಕೆಲ ಶಾಸಕರೂ, ಚುನಾವಣೆಗೆ ಮಾಡಿದ ಸಾಲ ತೀರಿಸಿಲ್ಲ. ಈಗಲೇ ಚುನಾವಣೆಗೆ ಹೋಗೂವುದು ಹೇಗೆ? ಎಂದು ಪಟ್ಟು ಹಿಡಿದಾಗ ನಾನು ನನ್ನ ತಂದೆಯ ಇಚ್ಚೆಯ ವಿರುದ್ಧವಾಗಿ ಯಡಿಯೂರಪ್ಪ ಅವರ ಜತೆ ಕೈ ಜೋಡಿಸಿ ಸರ್ಕಾರ ರಚಿಸಿದೆ.

ಸರ್ಕಾರ ಟೇಕ್ ಆಫ್ ಆಗಿಲ್ಲ ಎಂದು ಪದೇ ಪದೇ ಹೇಳುತ್ತೀರಲ್ಲ? 2008 ರಲ್ಲಿ ಅಧಿಕಾರಕ್ಕೆ ಬಂದು ಸ್ವಯಂಬಲದ ಮೇಲೆ ಸರ್ಕಾರ ರಚಿಸಿಕೊಂಡಿರಲ್ಲ? ಆಗ ಸುಭದ್ರ ಸರ್ಕಾರ ನೀಡಿದಿರಾ? ಮೂರು ಜನ ಮುಖ್ಯಮಂತ್ರಿಗಳನ್ನು ಸುಭದ್ರ ಸರ್ಕಾರ ಯಾಕೆ ಕಂಡಿತು? ಎಂದು ವ್ಯಂಗ್ಯವಾಡಿದರು.

ಅಧಿಕಾರಕ್ಕೆ ಬಂದ ಆರೇ ತಿಂಗಳಲ್ಲಿ ಯಡಿಯೂರಪ್ಪ ಅವರು ಸಹಕಾರಿ ಬ್ಯಾಂಕೊಂದರ ಕಾರ್ಯಕ್ರಮಕ್ಕೆ ಹೋಗಿದ್ದರು. ನನ್ನ ಸರ್ಕಾರ ಅಲುಗಾಡುತ್ತಿದೆ ಎಂದರು. ಇವರ ಪಕ್ಷದಲ್ಲಿ ನಲವತ್ತು ಶಾಸಕರು ಬಂಡಾಯವೆದ್ದರು. ಯಡಿಯೂರಪ್ಪ ಅವರನ್ನು ಪದಚ್ಯುತಗೊಳಿಸಲು ಹೊರಟರು.

ಇದರ ಫಲವಾಗಿ ಏನೇನಾಯಿತು? ಶೋಭಾ ಕರಂದ್ಲಾಜೆಯವರನ್ನು ಬಲಿಕೊಟ್ಟು ಯಡಿಯೂರಪ್ಪ ಅವರು ಉಳಿದುಕೊಳ್ಳಬೇಕಾಯಿತು. ಇದೇ ರೀತಿ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಕಚ್ಚಾಟವಾಗಿತ್ತು ಎಂದು ದೊಡ್ಡದಾಗಿ ಹೇಳುತ್ತೀರಲ್ಲ?

ಬಿಜೆಪಿ ಒಡೆದು ಕೆಜೆಪಿ ರಚನೆಯಾದಾಗ ಪರಸ್ಪರ ಏನೇನು ಮಾತನಾಡಿದ್ದಿರಿ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಿ. ಯಡಿಯೂರಪ್ಪ ಅವರಿಂದಲೇ ಭ್ರಷ್ಟಾಚಾರ ಶುರುವಾಯಿತು ಎಂದು ಸದಾನಂದಗೌಡರು ಹೇಳಿದ್ದರು. ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಮತ್ತವರ ಕುಟುಂಬ ಕೋಟಿಗಟ್ಟಲೆ ಲೂಟಿ ಮಾಡಿದೆ ಎಂದು ಇದೇ ಯಡಿಯೂರಪ್ಪ ಹೇಳಿದ್ದರು.

ಇದೇ ರೀತಿ ಜಲಸಂಪನ್ಮೂಲ ಸಚಿವನಾಗಿ ಬಸವರಾಜ ಬೊಮ್ಮಾಯಿ ಕೋಟಿಗಟ್ಟಲೆ ಲೂಟಿ ಮಾಡಿದ್ದಾನೆ. ಆತನನ್ನು ಮಗನಂತೆ ನೋಡಿಕೊಂಡಿದ್ದೆ. ಆದರೆ ಬಿಜೆಪಿ ಬಿಟ್ಟು ಕೆಜೆಪಿ ಕಟ್ಟುವಾಗ ನನ್ನ ಜತೆ ಬರದೆ ದ್ರೋಹ ಮಾಡಿದ ಎಂದು ಇದೇ ಯಡಿಯೂರಪ್ಪ ಟೀಕಿಸಿದ್ದರು.

ಇನ್ನು ಈಶ್ವರಪ್ಪ ಅವರು ಒಂದು ಸಮಾರಂಭದಲ್ಲಿ, ನಮಗೆ ಯಾವುದೇ ವಿಷಯ ಗೊತ್ತಿರಲಿ, ಗೊತ್ತಿಲ್ಲದೇ ಇರಲಿ, ಸಂದರ್ಭಕ್ಕೆ ತಕ್ಕ ಸುಳ್ಳು ಹೇಳಿ ಬಂದು ಬಿಡಬೇಕು ಎಂದು ಕಾರ್ಯಕರ್ತರಿಗೆ ಉಪದೇಶ ಕೊಡುತ್ತಾರೆ.

ಹೀಗೆ ನೀವೇ ಒಬ್ಬರಿಗೊಬ್ಬರು ಯಾವ್ಯಾವ ರೀತಿ ಬೈದುಕೊಂಡಿದ್ದಿರಿ? ಅನ್ನುವುದನ್ನು ಗಮನದಲ್ಲಿಟ್ಟುಕೊಳ್ಳಿ. ಈಗ ಸಿದ್ದರಾಮಯ್ಯ ಮತ್ತು ನಾವು ಚುನಾವಣೆಯ ಕಾಲದಲ್ಲಿ ಏನು ಟೀಕೆ ಮಾಡಿಕೊಂಡಿದ್ದೆವು ಎಂದು ದೊಡ್ಡದು ಮಾಡಲು ಹೋಗಬೇಡಿ.

ಯಾಕೆಂದರೆ ಚುನಾವಣೆಯ ಸಂದರ್ಭದಲ್ಲಿ ಪರಸ್ಪರರನ್ನು ಟೀಕಿಸುತ್ತೇವೆ. ನೀವೇ ಸಿದ್ದರಾಮಯ್ಯ ಅವರು ಮುಖ್ಯ ಮಂತ್ರಿಯಾದಾಗ ಏನು ಟೀಕೆ ಮಾಡಿದ್ದಿರಿ? ಅಧಿಕಾರಕ್ಕೆ ಬಂದು ಇಪ್ಪತ್ನಾಲ್ಕು ಗಂಟೆಯಲ್ಲಿ ಸಿದ್ದರಾಮಯ್ಯ ಅವರನ್ನು ಜೈಲಿಗೆ ಹಾಕುತ್ತೇನೆ ಎಂದಿದ್ದಿರಿ. ಈಗ ಪ್ರೀತಿ ತೋರಿಸುತ್ತಿದ್ದೀರಿ ಎಂದು ವ್ಯಂಗ್ಯವಾಡಿದರು.

ಅಧಿಕಾರಕ್ಕೆ ಬಂದ ಇಪ್ಪತ್ನಾಲ್ಕು ಗಂಟೆಗಳಲ್ಲಿ ರೈತರ ಸಾಲ ಮನ್ನಾ ಮಾಡುವುದಾಗಿ ಕುಮಾರಸ್ವಾಮಿ ಹೇಳಿದ್ದರು. ಆದರೆ ಮಾಡಲಿಲ್ಲ ಎಂದು ಕೂಗಾಡಿದಿರಲ್ಲ?ನಾನು ಚುನಾವಣಾ ಪ್ರಣಾಳಿಕೆಯಲ್ಲಿ, ಜನರ ಮುಂದೆ ಏನು ಹೇಳಿದ್ದೆ? ಸ್ವಯಂಬಲದ ಮೇಲೆ ನಮ್ಮ ಪಕ್ಷ ಅಧಿಕಾರಕ್ಕೆ ಬರುವಂತೆ ಮಾಡಿದರೆ ಇಪ್ಪತ್ನಾಲ್ಕು ಗಂಟೆಗಳಲ್ಲಿ ರೈತರ ಸಾಲ ಮನ್ನಾ ಮಾಡುತ್ತೇನೆ ಎಂದಿದ್ದೆ.

ಆದರೆ ಜನ ನಮ್ಮಪಕ್ಷದ ಪ್ರಣಾಳಿಕೆಯನ್ನು ತಿರಸ್ಕರಿಸಿದರು. ಪುರಸ್ಕರಿಸಿದ್ದರೆ ನೂರಾ ಹದಿಮೂರು ಸೀಟುಗಳನ್ನು ಕೊಟ್ಟಿದ್ದರೆ ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತಿದ್ದೆ. ಆದರೆ ಆಗಲಿಲ್ಲ.

ಆದರೆ ಈಗ ರೈತರ ಮೂವತ್ನಾಲ್ಕು ಸಾವಿರ ಕೋಟಿ ಸಾಲ ಮನ್ನಾ ಮಾಡಲಾಗಿದೆ.ಅದಕ್ಕಾಗಿ ಒಂದು ಒಳ್ಳೆಯ ಮಾತು ಆಡಲು ಇವರಿಗೆ ಮನಸ್ಸು ಬರಲಿಲ್ಲ. ಅದರಲ್ಲೂ ಹುಳುಕು ಹುಡುಕಲು ಹೊರಟರು. ಒಕ್ಕಲಿಗ ರೈತರ ಶೇಕಡಾ ಇಪ್ಪತ್ತೇಳರಷ್ಟು, ಲಿಂಗಾಯತ ರೈತರ ಶೇಕಡಾ ಹತ್ತರಷ್ಟು, ಪರಿಶಿಷ್ಟ ರೈತರ ಶೇಕಡಾ ಹತ್ತರಷ್ಟು ಸಾಲ ಮನ್ನಾ ಮಾಡಲಾಗಿದೆ ಎಂದು ಪ್ರಚಾರ ಮಾಡಿದರು.

ಆದರೆ ಅನ್ನತಿನ್ನುವಾಗ ಯಾವ ರೈತ ಅನ್ನ ಬೆಳೆದ ಎಂದು ನಾವು ಯೋಚಿಸುತ್ತೇವಾ? ಟೀಕೆಗೂ ಜಾತಿಯ ಲೇಪನ ಮಾಡಬೇಕೇ? ಉತ್ತರ ಕರ್ನಾಟಕ ಅಂತೆ, ದಕ್ಷಿಣ ಕರ್ನಾಟಕ ಅಂತೆ .ನಾವು ಸಾಲಮನ್ನಾ ಮಾಡುವಾಗ ಜಾತಿ ನೋಡದೆ, ಭಾಗ ನೋಡದೆ ಸಾಲ ಮನ್ನಾ ಮಾಡಿದ್ದೇವೆ ಎಂದರು.

ಇದೇ ರೀತಿ ರಾಜ್ಯಪಾಲರ ವಂದನಾ ನಿರ್ಣಯದ ಮೇಲೆ ಚರ್ಚೆ ನಡೆದ ಸಂದರ್ಭದಲ್ಲಿ ಮರಳು ಮಾಫಿಯಾ ಕುರಿತು, ಎಸಿಬಿ ಕುರಿತು, ಲೋಕಾಯುಕ್ತ ಕುರಿತು, ಲೋಕೋಪಯೋಗಿ ಇಲಾಖೆಯ ಕುರಿತು, ಜಿಲ್ಲಾ ಪಂಚಾಯ್ತಿಯ ಕುರಿತು, ಕೃಷಿಯ ಕುರಿತು, ಹಲವು ಇಲಾಖೆಗಳ ಕುರಿತು ಸದಸ್ಯರು ಮಾತನಾಡಿದ್ದಾರೆ. ಈ ಎಲ್ಲ ಅಂಶಗಳನ್ನು ನಾನು ಗಮನದಲ್ಲಿಟ್ಟುಕೊಂಡಿದ್ದೇನೆ. ಅಧಿಕಾರಕ್ಕೆ ಬಂದು ಕೇವಲ ಒಂದೂವರೆ ತಿಂಗಳಾಗಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಎಲ್ಲವನ್ನೂ ಗಂಭೀರವಾಗಿ ಪರಿಗಣಿಸಿ ಈಡೇರಿಸುತ್ತೇನೆ ಎಂದು ಭರವಸೆ ನೀಡಿದರು.

ಮುಂದಿನ ದಿನಗಳಲ್ಲಿ ನಾವು ಸುಭದ್ರ ಸರ್ಕಾರ ನೀಡುವ ಕುರಿತು ಯಾವ ಅನುಮಾನವೂ ಬೇಡ ಎಂದರಲ್ಲದೆ, ರಾಜ್ಯಪಾಲರ ವಂದನಾ ನಿರ್ಣಯಕ್ಕೆ ಒಪ್ಪಿಗೆ ನೀಡುವಂತೆ ಸದನದ ಸದಸ್ಯರಲ್ಲಿ ಮನವಿ ಮಾಡಿಕೊಂಡರು. ತದ ನಂತರ ಹಲವು ವಿಷಯಗಳ ಕುರಿತು ಮುಖ್ಯಮಂತ್ರಿ ಕುಮಾರಸ್ವಾಮಿ, ವಿರೋಧ ಪಕ್ಷದ ನಾಯಕ ಯಡಿಯೂರಪ್ಪ ಅವರ ನಡುವೆ ಮಾತಿನ ವಾಗ್ದಾಳಿ ನಡೆಯಿತಾದರೂ ತದ ನಂತರ ರಾಜ್ಯಪಾಲರ ವಂದನಾ ನಿರ್ಣಯಕ್ಕೆ ಸದನ ಬಹುಮತದಿಂದ ಅಂಗೀಕಾರ ನೀಡಿತು.

 

 ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ