ಕರ್ನಾಟಕದಲ್ಲಿ ಯಡಿಯೂರಪ್ಪ ಪಕ್ಷಕ್ಕೆ ಅನಿವಾರ್ಯ !

Kannada News

29-05-2017

2018ರ ವಿಧಾನಸಭೆ ಚುನಾವಣೆಗೆ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರೇ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಘೋಷಣೆ ಮಾಡಿರುವುದರಿಂದ ಕಮಲದೊಳಗಿನ ಕಲಹ ಬಹುತೇಕ ಪೂರ್ಣ ವಿರಾಮ ಬಿದ್ದಂತಾಗಿದೆ. ರಾಷ್ಟ್ರೀಯ ಅಧ್ಯಕ್ಷರೇ ಯಡಿಯೂರಪ್ಪ ನಾಯಕತ್ವಕ್ಕೆ ಜಯಕಾರ ಹಾಕಿರುವುದರಿಂದ ಇನ್ನು ಸ್ಥಳೀಯ ನಾಯಕರು ಅವರ ವಿರುದ್ದ ಬಂಡಾಯ, ಇಲ್ಲವೇ ಭಿನ್ನರ ಚಟುವಟಿಕೆಗಳಿಗೆ ಒಂದಿಷ್ಟು ಅವಕಾಶವೂ ಇಲ್ಲದಂತಾಗಿದೆ. ಪದಾಧಿಕಾರಿಗಳ ಬದಲಾವಣೆ ಮುಂದಿಟ್ಟುಕೊಂಡು ಬಿಎಸ್‍ವೈ ವಿರುದ್ಧ ದೆಹಲಿ ವರಿಷ್ಠರಿಗೆ ದೂರು ನೀಡಲು ವಿಧಾನಸಭೆಯ ಪ್ರತಿಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ ಸೇರಿದಂತೆ ಹಲವರು ದೂರು ನೀಡಲು ಮುಂದಾಗಿದ್ದರು. ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಜೂನ್ ತಿಂಗಳ ಮೊದಲ ವಾರದಲ್ಲಿ ಭಿನ್ನಮತೀಯರು ಯಡಿಯೂರಪ್ಪ, ರಾಜ್ಯ ಉಸ್ತುವಾರಿ ಮುರುಳೀಧರರಾವ್, ಸಂಸದೆ ಶೋಭಾ ಕರಂದ್ಲಾಜೆ ವಿರುದ್ಧ ದೂರು ನೀಡಲು ಸಜ್ಜಾಗಿದ್ದರು. ಇದಕ್ಕೆ ದೆಹಲಿಯಲ್ಲಿ ರಾಜ್ಯದ ಪ್ರಮುಖರೊಬ್ಬರು ವೇದಿಕೆಯನ್ನು ಸಿದ್ದಪಡಿಸಿದ್ದರು.  ಬಿಜೆಪಿಯ ಚಾಣಕ್ಯ ಎಂದೇ ರಾಜಕೀಯ ವಲಯದಲ್ಲಿ ಗುರುತಿಸಿಕೊಂಡಿರುವ ಅಮಿತ್ ಷಾ ಕರ್ನಾಟಕದಲ್ಲಿ ಯಡಿಯೂರಪ್ಪ ಪಕ್ಷಕ್ಕೆ ಅನಿವಾರ್ಯ. ಅವರ ನಾಯಕತ್ವದಲ್ಲೇ ಎಲ್ಲರೂ ಮುನ್ನಡೆಯಿರಿ ಎಂಬ ಸಂದೇಶವನ್ನು ಭಿನ್ನಮತೀಯರಿಗೆ ರವಾನಿಸಿದ್ದಾರೆ. ಇನ್ನು ಅಮಿತ್ ಷಾ ಒಂದೇ ಕಲ್ಲಿನಲ್ಲಿ ಹಲವು ಹಕ್ಕಿಗಳನ್ನು ಹೊಡೆದಿದ್ದಾರೆ.ಸ್ವತಃ ಯಡಿಯೂರಪ್ಪನವರಿಗೆ 2018ರ ವಿಧಾನಸಭೆ ಚುನಾವಣೆಯಲ್ಲಿ ಪಕ್ಷ ಅಧಿಕಾರಕ್ಕೆ ಬಂದರೆ ಮುಖ್ಯಮಂತ್ರಿ ಮಾಡುತ್ತಾರೋ ಇಲ್ಲವೋ ಎಂಬ ಗೊಂದಲವಿತ್ತು. ಇನ್ನು ಪಕ್ಷದ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಮೊದಲಿನಿಂದಲೂ ಕರ್ನಾಟಕದ ರಾಜಕಾರಣದ ಮೇಲೆ ಆಸಕ್ತಿ ವಹಿಸಿದ್ದರು. ಹಲವು ರಾಜ್ಯಗಳ ಉಸ್ತುವಾರಿ ನೀಡಿದ್ದರು ಅವರು ಮಾತ್ರ ಪಕ್ಷದ ಕಚೇರಿ ಬಿಟ್ಟು ಅತ್ತಿತ್ತ ತೆರಳುತ್ತಿರಲಿಲ್ಲ. ಯಡಿಯೂರಪ್ಪ ವಿರುದ್ಧ ಭಿನ್ನಮತೀಯ ಚಟುವಟಿಕೆಗಳನ್ನು ನಡೆಸಲು ಖುದ್ದು ಸಂತೋಷ್ ಪೋಷಕ ಪಾತ್ರ ವಹಿಸಿದ್ದರೆಂಬುದು ಗುಟ್ಟಾಗಿ ಉಳಿದಿರಲಿಲ್ಲ. ಸಂತೋಷ್ ಕುಮ್ಮಕ್ಕಿನಿಂದಲೇ ಈಶ್ವರಪ್ಪ ಹಾಗೂ 2ನೇ ಹಂತದ ನಾಯಕರಾದ ಭಾನುಪ್ರಕಾಶ್, ಸೊಗಡು ಶಿವಣ್ಣ , ಎಚ್.ಎ.ರವೀಂದ್ರನಾಥ್ ಸೇರಿದಂತೆ ಹಲವು ಗುಟುರು ಹಾಕುತ್ತಿದ್ದರು.   ಈ ಎಲ್ಲಾ ಗೊಂದಲಗಳಿಗೆ ಅಂಕುಶ ಹಾಕಿರುವ ಅಮಿತ್ ಷಾ, ಯಡಿಯೂರಪ್ಪ ಪಕ್ಷಕ್ಕೆ ಅನಿವಾರ್ಯ. ಭಿನ್ನಮತ, ಅಸಮಾಧಾನ ಏನೇ ಇದ್ದರೂ ಅವರಲ್ಲೇ ಬಗೆಹರಿಸಿಕೊಳ್ಳಬೇಕೆಂಬ ಸೂಚನೆಯನ್ನು ನೀಡಿದ್ದಾರೆ.  


ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ