ಕೈಗಾರಿಕಾ ಹಬ್ ಸ್ವಾಗತಾರ್ಹ: ಪರಮೇಶ್ವರ್

Industrial Hub is welcome move: Parameshwar

06-07-2018

ಬೆಂಗಳೂರು: ತುಮಕೂರಿನ ವಸಂತನರಸಾಪುರದಲ್ಲಿ ನಿರ್ಮಾಣವಾಗುತ್ತಿರುವ ಕೈಗಾರಿಕಾವಲಯ ಇನ್ನಷ್ಟು ಯಶಸ್ವಿಯಾಗಲು ಬೆಂಗಳೂರಿನಿಂದ ತುಮಕೂರಿಗೆ 'ಶೀಘ್ರ ಸಂಪರ್ಕ ಕಲ್ಪಿಸುವ ಸಾರಿಗೆ ವ್ಯವಸ್ಥೆ' ಮಾಡುವ ಅಗತ್ಯವಿದೆ ಎಂದು ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅಭಿಪ್ರಾಯಪಟ್ಟಿದ್ದಾರೆ.

ಚೆನ್ನೈ-ಬೆಂಗಳೂರು ಕೈಗಾರಿಕಾ ಕಾರಿಡಾರ್ ಅಡಿಯಲ್ಲಿ ತುಮಕೂರಿನ ವಸಂತನರಸಾಪುರ ಕೈಗಾರಿಕಾ ನಿರ್ಮಾಣ ಸಂಬಂಧ ಕೇಂದ್ರ ಸರಕಾರದೊಂದಿಗೆ ಒಪ್ಪಂದ ಮಾಡಿಕೊಂಡ ಬಳಿಕ ಮಾತನಾಡಿದರು.

ನನ್ನ ಕ್ಷೇತ್ರದಲ್ಲಿ ಕೈಗಾರಿಕಾ ಹಬ್ ನಿರ್ಮಾಣವಾಗುತ್ತಿರುವುದು ಖುಷಿ ನೀಡಿದೆ. ತುಮಕೂರಿನಿಂದ ಬೆಂಗಳೂರಿಗೆ ದಿನಕ್ಕೆ ಸುಮಾರು 30ಸಾವಿರ ಜನ ಸಂಚರಿಸುತ್ತಾರೆ. ಈ ತುಮಕೂರಿನಲ್ಲೇ ಕೈಗಾರಿಕಾ ಹಬ್ ನಿರ್ಮಾಣವಾಗುತ್ತಿರುವುದರಿಂದ ಬೆಂಗಳೂರು-ತುಮಕೂರು ಮಾರ್ಗಕ್ಕೆ ಮೆಟ್ರೋ ಅಥವಾ ಎಲೆಕ್ಟ್ರಿಕ್ ರೈಲು ವ್ಯವಸ್ಥೆ‌ ನಿರ್ಮಿಸಿದರೆ ಇನ್ನಷ್ಟು ಅನುಕೂಲವಾಗಲಿದೆ. ಅಥವಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಸಂಪರ್ಕ ಕಲ್ಪಿಸಿದರೆ ಇನ್ನೂ ಉತ್ತಮ.‌ ಇದರಿಂದ ರಾಜ್ಯದ ಆರ್ಥಿಕ ಸ್ಥಿತಿ‌ ಇನ್ನಷ್ಟು ವೃದ್ಧಿಸಲಿದೆ ಎಂದು ಸಲಹೆ ನೀಡಿದರು.‌

ಈ ಸಾಲಿನ ಬಜೆಟ್‌ನಲ್ಲಿಯೂ ಕೈಗಾರಿಕಾ ಕ್ಷೇತ್ರಕ್ಕೆ ಹೆಚ್ಚು ಒತ್ತು ನೀಡಲಾಗಿದೆ. ಬೀದರ್, ಬಳ್ಳಾರಿ, ರಾಯಚೂರು, ಕೊಪ್ಪಳ, ಚಿಕ್ಕಬಳ್ಳಾಪುರ ಹಾಗೂ ತುಮಕೂರು ಜಿಲ್ಲೆಯನ್ನು ಕೈಗಾರಿಕಾ ಕ್ಲಸ್ಟರ್‌ ಆಗಿ ಅಭಿವೃದ್ಧಿ ಮಾಡಲು ಆಯ್ಕೆ ಮಾಡಿಕೊಂಡಿದೆ.‌ ಕೈಗಾರಿಕಾ ನಿರ್ಮಾಣದಿಂದ ನ್ಯಾನೋ ತಂತ್ರಜ್ಞಾನ, ರೋಬೋಟಿಕ್, ಸಿಡಿ ಪ್ರಿಂಟಿಂಗ್, ವಿಜ್ಞಾನ, ಮಿಲಿಟರಿ, ಏರೋಸ್ಪೇಸ್ ತಂತ್ರಜ್ಞಾನದಲ್ಲಿ ಸಾಕಷ್ಟು ಅವಕಾಶಗಳು ಸಿಗಲಿವೆ ಎಂದರು.

ಕರ್ನಾಟಕ ಗುಣಮಟ್ಟದ ಶಿಕ್ಷಣ ಹಾಗೂ ಕೈಗಾರಿಕೆಯಲ್ಲಿ ಐದು ವರ್ಷದ ಹಿಂದೆಯೇ ಮುಂಚೂಣಿಯಲ್ಲಿದೆ. ಗುಣಮಟ್ಟದ ವೈದ್ಯರು ಹಾಗೂ ಎಂಜಿನಿಯರ್‌ಗಳನ್ನು ನೀಡುತ್ತಿದ್ದೇವೆ.‌ ಶಿಕ್ಷಣ ಹಾಗೂ ಕೈಗಾರಿಕಾ ಕ್ಷೇತ್ರಕ್ಕೆ ಆದ್ಯತೆ ನೀಡಿದರೆ ರಾಜ್ಯದ ಆರ್ಥಿಕತೆಯೂ ಬೆಳೆಯುತ್ತದೆ ಎಂದರು.‌

ವಸಂತನರಸಾಪುರ ಪ್ರಮುಖ ಕೈಗಾರಿಕಾವಲಯ ಆಗುವುದರಲ್ಲಿ ಅನುಮಾನವಿಲ್ಲ. ಕೈಗಾರಿಕೆ ಉದ್ಯೋಗ ಯಾವ ವಿಚಾರವೇ ತೆಗೆದುಕೊಂಡರೂ ಮೊದಲು ಬೆಂಗಳೂರಿನ ಕಡೆಯೇ ನಾವು ಗಮನ ಹರಿಸುತ್ತಿದ್ದೆವು. ಈ ಕೈಗಾರಿಕಾ ಹಬ್ ಯಶಸ್ವಿಯಾದರೆ, ಕೇವಲ ತುಮಕೂರು ಅಲ್ಲದೆ ಚಿತ್ರದುರ್ಗ, ಶಿವಮೊಗ್ಗ, ದಾವಣಗೆರೆ ನಾಲ್ಕೈದು ಜಿಲ್ಲೆಗಳ ಜನರಿಗೆ ಸದುಪಯೋಗವಾಗಲಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಬೃಹತ್ ಕೈಗಾರಿಕಾ ಸಚಿವ ಕೆ.ಜೆ.ಜಾರ್ಜ್, ಐಎಎಸ್ ಅಧಿಕಾರಿ ಅಲ್ಕೇ ಶರ್ಮ, ಸರಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಿ.ವಿ.ಪ್ರಸಾದ್, ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ ಪ್ರಧಾನ ಕಾರ್ಯದರ್ಶಿ ಗೌರವ್ ಗುಪ್ತ, ಆಯುಕ್ತ ದರ್ಪಣ್ ಜೈನ್, ಕೆಐಇಡಿಬಿ ಸಿಇಒ ಜಯರಾಮ್ ಇದ್ದರು.


ಸಂಬಂಧಿತ ಟ್ಯಾಗ್ಗಳು

G.Parameshwara Industrial corridor ಕೆ.ಜೆ.ಜಾರ್ಜ್ ಐಎಎಸ್


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ