ಸ್ಮಾರ್ಟ್‍ಫೋನ್‍ನ ಅತಿಬಳಕೆ ಮಕ್ಕಳಿಗೆ ಮಾರಕ..!

Kannada News

27-05-2017

ಇಂದು ಅಂಗೈಯಲ್ಲಿ ಸ್ಮಾರ್ಟ್‍ಫೋನಿದ್ದರೆ ಜಗತ್ತೇ ನಮ್ಮ ಕೈಯ್ಯಲ್ಲಿ. ಮೊದಲೆಲ್ಲ ಜನ ಎದ್ದಕೂಡಲೇ ಅಂಗೈ ನೋಡಿ ದೇವರ ನಾಮ ಪಠಿಸಿದ್ರೆ ಇಂದಿನ ಜನರೇಶನ್ ನವರಿಗೆ ಕಣ್ಣುಬಿಟ್ಟಕೂಡಲೇ ಮೊಬೈಲ್ ನೋಡದೆ ಹೋದರೆ ಬೆಳಗಾಗೋದಿಲ್ಲ. ಸ್ಮಾರ್ಟ್‍ಫೋನಿನಲ್ಲಿ ಏನುಂಟು ಏನಿಲ್ಲ ಹೇಳಿ. ಕೆಲಸ, ಶಿಕ್ಷಣ, ಮನರಂಜನೆ, ಜ್ಞಾನ, ಹರಟೆ ಹೀಗೆ ಅನೇಕಾನೇಕ ಬೇಕು-ಬೇಡಗಳು ಸ್ಮಾರ್ಟ್ ಫೋನಿನಲ್ಲಿವೆ. ಅಗತ್ಯವಿದೆಯೋ ಇಲ್ಲವೋ... ಜನರಂತೂ ಸ್ಮಾರ್ಟ್ ಫೋನಿಗೆ ಎಡಿಕ್ಟ್ ಆಗಿದ್ದಾರೆ.   ಆದ್ರೆ ಅತಿಯಾದ್ರೆ ಅಮೃತವೂ ವಿಷ ಅನ್ನೋದನ್ನು ಬಹಳಷ್ಟು ಜನ ಮರೆಯುತ್ತಾರೆ.

ಈ ಡಿಜಿಟಲ್ ಯುಗದಲ್ಲಿ ಸ್ಮಾರ್ಟ್‍ಫೋನ್, ಟಾಬ್ಲೆಟ್, ಲ್ಯಾಪ್‍ಟಾಪ್ ಹಾಗೆಯೇ ಸಾಕಷ್ಟು ಡಿವೈಸ್ ಗಳ ಜೊತೆಗೆ ನಾವು ದಿನಗಳೆಯುತ್ತೇವೆ. ಕೆಲವೊಮ್ಮೆ ಇದು ಅನಿವಾರ್ಯವಾದ್ರೂ ಇದಕ್ಕೆ ನಾವು ಎಡಿಕ್ಟ್ ಆಗಿದ್ದೇವೆ ಅನ್ನೋದು ಸುಳ್ಳಲ್ಲ. ಈ ತಂತ್ರಜ್ಞಾನದ ಅತಿಯಾದ ಬಳಕೆಯಿಂದ ಸಾಕಷ್ಟು ಆರೋಗ್ಯ ಸಂಬಂಧಿ ಸಮಸ್ಯೆಗಳು ಸೃಷ್ಟಿಯಾಗುತ್ತವೆ. ಕಣ್ಣು ನೋವು, ತಲೆ ನೋವು, ಕೆಲವೊಮ್ಮೆ ಮೆದುಳಿಗೆ ಸಂಬಂಧಪಟ್ಟ ಸಮಸ್ಯೆಗಳು ಸೇರಿದಂತೆ ಹಲವಾರು ಮಾನಸಿಕ ಹಾಗೂ ಶಾರೀರಿಕ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.

ಈ ಡಿಜಿಟಲ್ ಡಿವೈಸ್‍ಗಳಿಂದ ಅದರಲ್ಲೂ ಸ್ಮಾರ್ಟ್ ಫೋನ್ ಅನ್ನು ದಿನವಿಡೀ ಉಪಯೋಗಿಸುವುದರಿಂದ ನಮ್ಮ ಮೆದುಳಿಗಷ್ಟೇ ಅಲ್ಲದೇ ಮಕ್ಕಳ ಆರೋಗ್ಯದ ಮೇಲೆ ಪ್ರಭಾವ ಬೀರುತ್ತದೆ. ಮಕ್ಕಳ ಅಭಿವೃದ್ಧಿ ಜರ್ನಲ್ ನಲ್ಲಿ ಪ್ರಕಟವಾದ ಸಂಶೋಧನಾ ವರದಿಯ ಪ್ರಕಾರ ಪೋಷಕರು ಅತಿಯಾಗಿ ಸ್ಮಾರ್ಟ್‍ಫೋನ್ ಬಳಸುವುದರಿಂದ ಮಕ್ಕಳಲ್ಲಿ ಸಾಕಷ್ಟು ಮಾನಸಿಕ ಆರೋಗ್ಯದ ಸಮಸ್ಯೆಗಳು ಉಂಟಾಗುತ್ತವೆ.

ಮನೆಯಲ್ಲಿ ಪೋಷಕರು, ಊಟ ಮಾಡಬೇಕಾದರೆ, ಮಕ್ಕಳು ಆಟವಾಡಬೇಕಾದರೆ, ಮಕ್ಕಳೊಂದಿಗೆ ಮಾತನಾಡಬೇಕಾದರೆ ಅಥವಾ ದಿನದ ಚಟುವಟಿಕೆಯಲ್ಲೆಲ್ಲ ಸ್ಮಾರ್ಟ್‍ಫೋನ್ ಬಳಸಿದರೆ ಮಕ್ಕಳ ಮಾನಸಿಕ ಆರೋಗ್ಯ ಹಾಗೂ ಅವರ ನಡವಳಿಕೆಯ ಮೇಲೆ ತುಂಬಾ ಪರಿಣಾಮ ಬೀರುತ್ತದೆ. ಇದರಿಂದಾಗಿ ಮಕ್ಕಳು ಅತಿಯಾದ ಭಾವುಕತೆ, ಒಮ್ಮೆಲೇ ಸಿಟ್ಟಿಗೇಳುವುದು, ಒಂಟಿತನ, ಅತಿಯಾದ ಕೀಟಲೆ ಮಾಡುವುದು ಮುಂತಾದ ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

ಆದರೆ ಕೆಲವೊಮ್ಮೆ ಮನೆಗಳಲ್ಲೂ ಕೆಲಸ ಮಾಡಬೇಕಾದ ಅನಿವಾರ್ಯತೆ, ಅನಿವಾರ್ಯವಾಗಿ ನೂರೆಂಟು ಸಮಸ್ಯೆಗಳು ತಳುಕು ಹಾಕಿಕೊಳ್ಳುತ್ತವೆ. ಇಂಥ ಸಂದರ್ಭಗಳಲ್ಲಿ ಪರಿಹಾರವನ್ನೂ ನೀವೆ ಕಂಡುಕೊಳ್ಳಬೇಕು. ಮಕ್ಕಳಿಗೆಂದೇ ಕೆಲ ಸಮಯವನ್ನು ಮೀಸಲಿಡಬೇಕು. ಆ ಸಮಯದಲ್ಲಿ ಫೋನ್ ಸೇರಿದಂತೆ ಯಾವುದೇ ಡಿಜಿಟಲ್ ಡಿವೈಸ್ ನಿಂದ ದೂರವಿರಬೇಕು. ಮಕ್ಕಳೊಂದು ಲವಲವಿಕೆಯಿಂದ ಕೆಲ ಸಮಯವನ್ನಾದರೂ ಕಳೆಯಬೇಕು. ಮಕ್ಕಳು ಆರೋಗ್ಯವಾಗಿದ್ದರೆ ತಾನೆ ನಾವೂ ನೆಮ್ಮದಿಯಾಗಿರೋಕೆ ಸಾಧ್ಯ. 24 ಗಂಟೆ ಕೆಲಸ ಕೆಲಸ ಎಂದೆನ್ನದೇ ದಿನದ ಕೆಲ ಗಂಟೆಗಳನ್ನಾದರೂ ನಿಮ್ಮ ಮಕ್ಕಳೊಂದಿಗೆ.. ನಿಮ್ಮ ಕುಟುಂಬದೊಂದಿಗೆ ಕಳೆಯೋದು ನಿಮ್ಮ ಮಾನಸಿಕ ಆರೋಗ್ಯಕ್ಕೂ ಒಳ್ಳೆಯ. ಮನೆಯಲ್ಲಿ ಶಾಂತಿಯಿದ್ದರೆ ತಾನೆ ಮನಸ್ಸೂ ಶಾಂತಿಯಿಂದಿರುತ್ತೆ ಅಲ್ಲವೇ?   

 ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ