ಕೇವಲ 20ರೂ.ಗಾಗಿ ಹೆಂಡತಿಯನ್ನೇ ಕೊಂದಿದ್ದಾನೆ ಗಂಡ!

Husband Murdered his wife just for 20 rupees!

06-07-2018

ಬೆಂಗಳೂರು: ನಗರದ ಹೆಸರಘಟ್ಟ ರಸ್ತೆಯ ಚಿಕ್ಕಸಂದ್ರದಲ್ಲಿ ಪತ್ನಿಯ ತಲೆಯ ಮೇಲೆ ಹಾಲೋಬ್ಲಾಕ್ (ಸಿಮೆಂಟ್‍ಇಟ್ಟಿಗೆ) ಎತ್ತಿ ಹಾಕಿ, ಹೊಡೆದು ಬರ್ಬರವಾಗಿ ಕೊಲೆ ಮಾಡಿರುವ ದಾರುಣ ಘಟನೆ ನಡೆದಿದೆ. ಕೇವಲ 20ರೂ.ಗಳಿಗಾಗಿ ನಡೆದ ಗಂಡ-ಹೆಂಡತಿ ನಡುವಿನ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ.

ಚಿಕ್ಕಸಂದ್ರದಲ್ಲಿ ಕೂಲಿ ಮುಗಿಸಿಕೊಂಡು ನಿನ್ನೆ ರಾತ್ರಿ ಕಿರ್ಲೋಸ್ಕರ್ ಲೇಔಟ್‍ನ ಕೂಲಿ ಕಾರ್ಮಿಕರ ಶೆಡ್‍ನಲ್ಲಿ ಊಟ ಮಾಡಿ ಮಲಗಲು ಸಿದ್ದರಾಗಿದ್ದಾಗ 20 ರೂಗಾಗಿ ಜಗಳ ತೆಗೆದು ಪತ್ನಿ ಕಸ್ತೂರಿಯನ್ನು (35) ಕೊಲೆಗೈದ ಪತಿ ರಾಜಾಸಿಂಗ್(29) ನನ್ನು ಬಂಧಿಸಲಾಗಿದೆ.

ಮಧ್ಯಪ್ರದೇಶ ಮೂಲದ ರಾಜಾಸಿಂಗ್ ಪತ್ನಿ ಕಸ್ತೂರಿಯೊಂದಿಗೆ ಒಂದು ವಾರದ ಹಿಂದಷ್ಟೇ ಕೂಲಿ ಅರಸಿ ನಗರಕ್ಕೆ ಬಂದಿದ್ದು, ಕಿರ್ಲೋಸ್ಕರ್ ಲೇಔಟ್ ಬಳಿ ಕಟ್ಟಡ ನಿರ್ಮಾಣದ ಕೂಲಿ ಕೆಲಸ ಮಾಡಿಕೊಂಡಿದ್ದರು. ಕುಡಿತದ ಚಟ ಅಂಟಿಸಿಕೊಂಡಿದ್ದ ರಾಜಾಸಿಂಗ್ ರಾತ್ರಿ 10ರ ವೇಳೆ ಕುಡಿತಕ್ಕಾಗಿ 20 ರೂ ನೀಡುವಂತೆ ಪತ್ನಿಯನ್ನು ಕೇಳಿದ್ದಾನೆ. ಆದರೆ, ಹಣ ನೀಡಲು ಪತ್ನಿ ಒಪ್ಪದಿದ್ದರಿಂದ ಉಂಟಾದ ಜಗಳ ವಿಕೋಪಕ್ಕೆ ತಿರುಗಿದೆ.

ರೊಚ್ಚಿಗೆದ್ದ ರಾಜಾಸಿಂಗ್ ಪತ್ನಿಯ ತಲೆ ಮೇಲೆ ಹಾಲೋಬ್ಲಾಕ್ ಎತ್ತಿಹಾಕಿ ಕೊಲೆ ಮಾಡಿದ್ದಾನೆ. ದಂಪತಿಗೆ ಮಕ್ಕಳಿದ್ದು ತವರಿನಲ್ಲಿ ಬಿಟ್ಟು ಬಂದಿದ್ದರು. ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ  ಸೋಲದೇವನಹಳ್ಳಿ ಪೊಲೀಸರು ಆರೋಪಿ ರಾಜಾಸಿಂಗ್‍ನನ್ನು ಬಂಧಿಸಿ ಮುಂದಿನ ತನಿಖೆ ನಡೆಸುತ್ತಿದ್ದಾರೆ ಎಂದು ಉತ್ತರ ವಿಭಾಗದ ಡಿಸಿಪಿ ಚೇತನ್‍ಸಿಂಗ್ ತಿಳಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Murder wife ಉತ್ತರ ವಿಭಾಗ ತನಿಖೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ