ಹಂಪಿಯಲ್ಲಿ ಪ್ರವಾಸಿ ವಿಶ್ವವಿದ್ಯಾಲಯ!

Tourist University in Hampi

05-07-2018

ಬೆಂಗಳೂರು: ರಾಜ್ಯದಲ್ಲಿರುವ ಸರ್ಕಾರಿ ಪ್ರಾಥಮಿಕ, ಪ್ರೌಢಶಾಲೆಗಳು ಹಾಗೂ ಪದವಿ ಪೂರ್ವ ಕಾಲೇಜುಗಳ ಕಟ್ಟಡಗಳ ದುರಸ್ಥಿಗಾಗಿ ವಿಶೇಷ ಪ್ಯಾಕೇಜ್ ಮೂಲಕ ನೂರೈವತ್ತು ಕೋಟಿ ರೂ ಒದಗಿಸಲಾಗುವುದು, ಸರ್ಕಾರಿ ಕನ್ನಡ ಪ್ರಾಥಮಿಕ ಶಾಲೆಗಳಲ್ಲಿ ಹಾಲಿ ಇರುವ ಕನ್ನಡ ಮಾಧ್ಯಮ ತರಗತಿಗಳ ಜತೆ ಆಂಗ್ಲ ಮಾಧ್ಯಮ ತರಗತಿಗಳನ್ನು ಆರಂಭಿಸಲಾಗುವುದು ಎಂದರು.

ಆರಂಭಿಕವಾಗಿ ಒಂದು ಸಾವಿರ ಸರ್ಕಾರಿ ಶಾಲೆಗಳಲ್ಲಿ ಈ ಯೋಜನೆಯನ್ನು ಜಾರಿಗೊಳಿಸಲಾಗುವುದು ಎಂದ ಅವರು, ರಾಜ್ಯದ ನಲವತ್ತೆಂಟು ಸಾವಿರ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಮತ್ತು ಮಕ್ಕಳ ಹಾಜರಾತಿಯ ಕುರಿತು ನಿಗಾವಹಿಸಲು ಬಯೋಮೆಟ್ರಿಕ್ ಸಾಧನಗಳನ್ನು ಅಳವಡಿಸಲಾಗುವುದು ಎಂದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧೀನದಲ್ಲಿರುವ ಅಂಗನವಾಡಿ ಕೇಂದ್ರಗಳನ್ನು ಆಯ್ದ 4100 ಸರ್ಕಾರಿ ಪ್ರಾಥಮಿಕ ಶಾಲೆಗಳ ಆವರಣಕ್ಕೆ ಸ್ಥಳಾಂತರಿಸಿ, ಬಾಲಸ್ನೇಹಿ ಕೇಂದ್ರ ಬಲವರ್ಧಿಸಲಾಗುವುದು. ಅದೇ ರೀತಿ ಸರ್ಕಾರಿ ಶಾಲೆಗಳಲ್ಲಿ ಎಲ್‍ಕೆಜಿ ಮತ್ತು ಯುಕೆಜಿ ತರಗತಿಗಳನ್ನು ಆರಂಭಿಸಲಾಗುವುದು ಎಂದರು.

ಒಂದು ಕಿಲೋಮೀಟರ್ ವ್ಯಾಪ್ತಿಯಲ್ಲಿರುವ ಮತ್ತು ದಾಖಲಾತಿ ಕಡಿಮೆ ಇರುವ ಸರ್ಕಾರಿ ಮತ್ತು ಅನುದಾನಿತ ಶಾಲೆಗಳನ್ನು ಹತ್ತಿರದಲ್ಲಿರುವ ಶಾಲೆಗಳೊಂದಿಗೆ ವಿಲೀನಗೊಳಿಸಲಾಗುವುದು. ಈಗಾಗಲೇ ಇಂತಹ 28 ಸಾವಿರಕ್ಕೂ ಅಧಿಕ ಶಾಲೆಗಳನ್ನು ಗುರುತಿಸಲಾಗಿದ್ದು ಇವನ್ನು 8530 ಸರ್ಕಾರಿ ಶಾಲೆಗಳೊಂದಿಗೆ ವಿಲೀನಗೊಳಿಸಲಾಗುವುದು ಎಂದು ವಿವರಿಸಿದರು.

ರಾಜ್ಯದಲ್ಲಿರುವ ವಿವಿಗಳಲ್ಲಿ ವೃತ್ತಿಪೂರಕ ಶಿಕ್ಷಣ ನೀಡುತ್ತಿಲ್ಲವಾದ್ದರಿಂದ ಪದವೀಧರರನ್ನು ನೇರವಾಗಿ ಉದ್ಯೋಗಕ್ಕೆ ತೆಗೆದುಕೊಳ್ಳಲು ತೊಂದರೆಯಾಗಿದೆ ಎಂದು ಪರಿಣಿತರು ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಕೌಶಲ್ಯವೇ ಬುನಾದಿಯಾದ ಪದ್ಧತಿಯನ್ನು ವಿವಿಗಳಲ್ಲಿ ಅಳವಡಿಸಲಾಗುವುದು ಎಂದರು.

ಕ್ರೀಡೆ ಮತ್ತು ಅಂಗಸಾಧನೆಯನ್ನು ಒಂದು ವಿಷಯವಾಗಿ ಕಲಿಸಲು ತುಮಕೂರಿನಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ಒಂದು ವಿವಿಯನ್ನು ಆರಂಭಿಸಲಾಗುವುದು ಮತ್ತು ಸರ್ಕಾರಿ, ಖಾಸಗಿ ಭದ್ರತಾ ಸಿಬ್ಬಂದಿಗಳಿಗೆ ಅಗತ್ಯವಾದ ತರಬೇತಿ ಒದಗಿಸುವ ಅನಿವಾರ್ಯತೆ ಇದೆ. ಅದರಲ್ಲೂ ಮುಖ್ಯವಾಗಿ ಸೈಬರ್ ಕ್ರೈಂ ನಂತರಹ ಪ್ರಮುಖ ವಿಷಯವನ್ನು ಮುಖ್ಯವಾಗಿಸಿಕೊಂಡು ತಾಯಿನಾಡು ಭದ್ರತಾ ವಿವಿಯನ್ನು ಶಿವಮೊಗ್ಗದಲ್ಲಿ ಆರಂಭಿಸಲಾಗುವುದು ಎಂದರು.

ಹಂಪಿಯಲ್ಲಿ ಪ್ರವಾಸಿ ವಿವಿಯನ್ನು ಸ್ಥಾಪಿಸಲು ನಿರ್ಧರಿಸಲಾಗಿದ್ದು ಪ್ರವಾಸಿ ಸ್ಥಳಗಳಿಗೆ ತೆರಳುವವರಿಗೆ ಉತ್ತಮ ಮಾರ್ಗದರ್ಶಿಗಳು ಲಭ್ಯವಾಗುವುದರಿಂದ ಹಿಡಿದು ಎಲ್ಲ ರೀತಿಯ ಮೂಲ ಸೌಕರ್ಯಗಳನ್ನು ಒದಗಿಸಲು ಅಗತ್ಯವಾದ ಶಿಕ್ಷಣ ಮತ್ತು ಅನುಕೂಲವನ್ನು ಕಲ್ಪಿಸಲು ಅದು ವೇದಿಕೆಯಾಗಲಿದೆ.

ರಾಜ್ಯದ ಎಲ್ಲ ಶಾಲೆ, ಕಾಲೇಜುಗಳ ವೆಬ್ ಪೋರ್ಟೆಲ್ ಆರಂಭಿಸಲಾಗುವುದು ಮತ್ತು ಅಲ್ಲಿನ ಸ್ಥಿತಿಯನ್ನು ವಿವರವಾಗಿ ನೀಡಲಾಗುವುದು. ಇದನ್ನು ಗಮನಿಸಿ ಅಲ್ಲಿ ಓದಿದ ವಿದ್ಯಾರ್ಥಿಗಳು ಅಗತ್ಯದ ನೆರವು ನೀಡಲು ಮುಂದಾಗುವಂತೆ ಮಾಡುವ ಉದ್ದೇಶ ನನ್ನ ಸರ್ಕಾರದ್ದು ಎಂದು ಅವರು ವಿವರ ನೀಡಿದರು.

ತಾವು ಓದಿದ ಶಾಲೆಯ, ಶಿಕ್ಷಕರ ಅಗತ್ಯಗಳನ್ನು ಗಮನಿಸಿ ಅಲ್ಲಿ ಓದಿದ ವಿದ್ಯಾರ್ಥಿಗಳು ಆಯಾ ಶಾಲೆಗಳಿಗೆ ನೆರವು ನೀಡುವುದು ಒಳ್ಳೆಯದು.ಆ ಮೂಲಕ ಮಾನವ ಸಂಬಂಧಗಳ ಮರುಸ್ಥಾಪನೆಯಾಗುತ್ತದೆ. ಅದೇ ಕಾಲಕ್ಕೆ ಶಿಕ್ಷಣ ವ್ಯವಸ್ಥೆ ಬಲಿಷ್ಟವಾಗುತ್ತದೆ ಎಂದರು.


ಸಂಬಂಧಿತ ಟ್ಯಾಗ್ಗಳು

H.D.Kumaraswamy Education ಹಾಜರಾತಿ ಬಯೋಮೆಟ್ರಿಕ್


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ