ಸಾಲಮನ್ನಾ: ಸರ್ಕಾರದ ಮೇಲೆ 34ಸಾವಿರ ಕೋಟಿ ಹೊರೆ

Debt relief: 34,000 crore burden on government

05-07-2018

ಬೆಂಗಳೂರು: ರೈತರ 2 ಲಕ್ಷ ರೂವರೆಗಿನ ಕೃಷಿ ಸಾಲ ಮನ್ನಾ, ವಿದ್ಯುತ್, ಪೆಟ್ರೋಲ್, ಡೀಸೆಲ್, ಮದ್ಯದ ದರಗಳಲ್ಲಿ ಗಣನೀಯ ಏರಿಕೆ, ಹಿಂದಿನ ಸಿದ್ದರಾಮಯ್ಯ ನೇತೃತ್ವದ ಎಲ್ಲಾ ಕಾರ್ಯಕ್ರಮಗಳ ಮುಂದುವರಿಕೆ, ಸೇರಿದಂತೆ ಮಹತ್ವದ ಯೋಜನೆಗಳನ್ನು ಹೊಂದಿರುವ 2,18,488 ಕೋಟಿ ರೂ ಗಾತ್ರದ 2018-19 ನೇ ಸಾಲಿನ ಬಜೆಟ್ ಅನ್ನು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ವಿಧಾನಸಭೆಯಲ್ಲಿಂದು ಮಂಡಿಸಿದರು.

ಒಟ್ಟು 78 ಪುಟಗಳ ಜೆಡಿಎಸ್–ಕಾಂಗ್ರೆಸ್ ಮೈತ್ರಿಕೂಟದ ಬಜೆಟ್ ಮಂಡಿಸಿದರು. ರೈತರ ಕೃಷಿ ಸಾಲ ಮನ್ನಾದಿಂದ ಬೊಕ್ಕಸದ ಮೇಲೆ 34 ಸಾವಿರ ಕೋಟಿ ರೂ ಹೊರೆ ಬೀಳಲಿದ್ದು, ಇದನ್ನು ನಿವಾರಿಸಿಕೊಳ್ಳಲು ಪೆಟ್ರೋಲ್, ಡೀಸೆಲ್, ಮದ್ಯ ಹಾಗೂ ವಿದ್ಯುತ್ ಮೇಲೆ ಹೆಚ್ಚು ಹೊರೆ ಹೇರಲು ತೀರ್ಮಾನಿಸಲಾಗಿದೆ.

ಕೃಷಿ ಕ್ಷೇತ್ರಕ್ಕೆ ಪ್ರಧಾನ ಆದ್ಯತೆ ನೀಡಲಾಗಿದ್ದು, ಇಸ್ರೇಲ್ ಮಾದರಿಯ ನೀರಾವರಿ ವ್ಯವಸ್ಥೆ ನಮ್ಮ ರೈತರ ಬೆಳೆಗಳನ್ನು ಕಾಪಾಡಿ ಅವರ ಬದುಕನ್ನು ಹಸನುಗೊಳಿಸಲಿದೆ ಎಂಬುದರಲ್ಲಿ ನನಗೆ ಯಾವುದೇ ಸಂಶಯವಿಲ್ಲ. ಹೀಗಾಗಿ ಕೊಪ್ಪಳ, ಚಿತ್ರದುರ್ಗ, ಕೋಲಾರ ಸೇರಿದಂತೆ ನಾಲ್ಕು ಜಿಲ್ಲೆಗಳಲ್ಲಿ ತಲಾ ಐದು ಸಾವಿರ ಹೆಕ್ಟೇರ್ ಖುಷ್ಕಿ ಭೂಮಿಯಲ್ಲಿ ಇಸ್ರೇಲ್ ಮಾದರಿಯ ನೀರಾವರಿ ಸೌಲಭ್ಯ ಒದಗಿಸುವ ಯೋಜನೆಯನ್ನು ಮೊದಲ ಹಂತದಲ್ಲಿ ಜಾರಿಗೊಳಿಸುವುದಾಗಿ ಹೇಳಿದ್ದಾರೆ.

ರೈತರ ಸಂಕಷ್ಟವನ್ನು ನಿವಾರಿಸಲು ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಕೃಷಿ ಸಮನ್ವಯ ಉನ್ನತ ಸಮಿತಿಯನ್ನು  ರಚಿಸಲಾಗುವುದು ಮತ್ತು ಮೂರು ತಿಂಗಳಿಗೊಮ್ಮೆ ಸಭೆ ಸೇರಿ ಇಲಾಖೆಗಳಲ್ಲಿ ನಡೆದಿರುವ ಕಾರ್ಯಕ್ರಮಗಳ ಸಮನ್ವಯತೆ ಹೇಗಿದೆ?ಎಂಬುದನ್ನು ಪರಿಶೀಲಿಸಲಾಗುವುದು.

ಪ್ರತಿ ಜಿಲ್ಲೆಗಳಲ್ಲಿ ರೈತರು ಬೆಳೆಯುವ ಬೆಳೆಗೆ ಅನುಗುಣವಾಗಿ ಉತ್ತೇಜನ ನೀಡಲು ಕೇಂದ್ರ ಸರ್ಕಾರದ ಕಾರ್ಯಕ್ರಮಗಳನ್ನು ಬಳಸಿಕೊಂಡು ನಾವು ಕೂಡಾ ನೆರವು ನೀಡುವ ಕೆಲಸ ಮಾಡುತ್ತೇವೆ ಎಂದರು.


ಸಂಬಂಧಿತ ಟ್ಯಾಗ್ಗಳು

Budget Petrol ಕಾರ್ಯಕ್ರಮ ನೆರವು


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ