ಕುಮಾರಸ್ವಾಮಿ ಬಜೆಟ್ ನಲ್ಲಿ ಕೃಷಿ ಇಲಾಖೆಗೆ ಸಿಕ್ಕಿದ್ದೇನು?

what has given to farmers in kumaraswamy budget?

05-07-2018

ಬೆಂಗಳೂರು: ಸಿಎಂ ಆಗುವುದಕ್ಕಿಂತ ಮುಂಚೆ ಇಸ್ರೆಲ್ ಗೆ ತೆರಳಿದ್ದ ಹೆಚ್.ಡಿ.ಕುಮಾರಸ್ವಾಮಿ ಬಜೆಟ್ ನಲ್ಲಿ ಅದನ್ನು ಪ್ರಸ್ತಾಪಿಸಿ ಸಾರ್ಥಕತೆ ಮೆರೆದಿದ್ದಾರೆ.

ಇಸ್ರೇಲ್ ಮಾದರಿ ನೀರಾವರಿ ವ್ಯವಸ್ಥೆಗೆ ಕೋಲಾರ, ಚಿತ್ರದುರ್ಗ, ಕೊಪ್ಪಳ, ಗದಗ ಜಿಲ್ಲೆಯಲ್ಲಿ ಮೊದಲ ಹಂತದಲ್ಲಿ ತಲಾ 5000 ಹೆಕ್ಟೇರ್ ಶುಷ್ಕ ಜಮೀನಿನಲ್ಲಿ 150 ಕೋಟಿ ನೀಡಿಕೆಗೆ ಸಿಎಂ ನಿರ್ಧರಿಸಿದ್ದಾರೆ. ಇಸ್ರೇಲ್ ಮಾದರಿ ನೀರಾವರಿ ವ್ಯವಸ್ಥೆ ರೈತರ ಬಾಳು ಹಸನು ಮಾಡಲಿದೆ ಎಂಬ ವಿಶ್ವಾಸ ನನ್ನದು. ಈ ನಂಬಿಕೆಯಿಂದ ಪ್ರಯತ್ನಕ್ಕೆ ಮುಂದಾಗಿದ್ದೇನೆ ಎಂದಿದ್ದಾರೆ.

ರೈತರ ಬಾಳಿನಲ್ಲಿ ಆರ್ಥಿಕ ಚಿಲುಮೆ ಚಿಮ್ಮಿಸಲು ಸರ್ವ ಪ್ರಯತ್ನ ಮಾಡಲಿದ್ದು, ಸರ್ಕಾರವು ಕೃಷಿ ವಲಯ ಚಟುವಟಿಕೆಗಳಲ್ಲಿ ರೈತರ ಸಹಭಾಗಿತ್ವವನ್ನು ಹೆಚ್ಚಿನ ಪ್ರಮಾಣದಲ್ಲಿ ತೊಡಗಿಸಿಕೊಳ್ಳಲು ಬಯಸಿದೆ. ಇದಕ್ಕಾಗಿ ರಾಜ್ಯ ರೈತರ ಸಲಹಾ ಸಮಿತಿ ರಚಿಸಲಿದ್ದೇವೆ. ರಾಜ್ಯದ ಪ್ರತಿ ಜಿಲ್ಲೆಯಿಂದ ಇಬ್ಬರು ಪ್ರಗತಿಪರ ರೈತರನ್ನು ಒಳಗೊಂಡ ಸಲಹಾ ಸಮಿತಿ ರಚಿಸಿ ಅದರೊಂದಿಗೆ ಪ್ರತಿ ಎರಡು ತಿಂಗಳಿಗೆ ಒಮ್ಮೆ ಚರ್ಚಿಸುತ್ತೇನೆ ಎಂದಿದ್ದಾರೆ.

ಕೃಷಿ ಉತ್ಪನ್ನಗಳ ಬೆಲೆ ಕುಸಿತದಿಂದ ರೈತ ಸಾಲಗಾರನಾಗಿದ್ದಾನೆ. ಈ ದುಸ್ಥಿತಿಯಿಂದ ಹೊರತರಲು ಗಂಭೀರ ಚಿಂತನೆ ನಡೆಸಿದ್ದೇನೆ. ಇದರಿಂದ ಆಂಧ್ರಪ್ರದೇಶದ ಸರ್ಕಾರ ಜಾರಿಗೊಳಿಸಿರುವ ಶೂನ್ಯ ಬಂಡವಾಳ ಕೃಷಿ ನಮ್ಮ ರೈತರಿಗೆ ಉಪಯುಕ್ತ ಎನ್ನುವುದು ನನ್ನ ಅಭಿಪ್ರಾಯ. ಇದರ ಅಳವಡಿಕೆಗೆ ಅಗತ್ಯವಿರುವ ಕೃಷಿ ತಾಂತ್ರಿಕ ಸಹಾಯಕ್ಕೆ 50ಕೋಟಿ ರೂ. ನಿಗದಿ ಪಡಿಸುತ್ತಿದ್ದೇನೆ ಎಂದಿದ್ದಾರೆ.

ರಾಜ್ಯದ ರೈತರ ಸಂಕಷ್ಟ ನಿವಾರಣೆಗೆ ಸಿಎಂ ಅಧ್ಯಕ್ಷತೆಯಲ್ಲಿ ಕೃಷಿ ಹಾಗೂ ಇದಕ್ಕೆ ಸಂಬಂಧಿಸಿದ ಇಲಾಖೆ ಸಚಿವರನ್ನು ಒಳಗೊಂಡ ಕೃಷಿ ಸಮನ್ವಯ ಉನ್ನತ ಸಮಿತಿಯನ್ನು ರಚಿಸಲಾಗುವುದು. ಸಮಿತಿ ಮೂರು ತಿಂಗಳಿಗೆ ಒಮ್ಮೆ ಸಭೆ ಸೇರಲಿದೆ. ಅಲ್ಲಿ ಅಗತ್ಯ ವಿಚಾರಗಳ ಚರ್ಚೆ ನಡೆಯಲಿದೆ. ರಾಜ್ಯದಲ್ಲಿ 10ಕೃಷಿ ಹವಾಮಾನ ವಲಯಗಳಿದ್ದು, 5 ವಿಭಿನ್ನವಾದ ಮಳೆ ಹಂಚಿಕೆ ಮಣ್ಣು ವಲಯಗಳಿವೆ. ವಿವಿಧ ಆಹಾರ ಹಾಗೂ ತೋಟಗಾರಿಕೆ ಬೆಳೆ ಬೆಳೆಯುವ ಅವಕಾಶವಿದೆ. ಇದನ್ನು ಆಧರಿಸಿ ಯೋಜನೆ ರೂಪಿಸಿ ಕೃಷಿ ಉತ್ಪಾದನೆ ಹಾಗೂ ಮಾರುಕಟ್ಟೆ ಬೆಲೆ ಸುಸ್ಥಿರತೆ ಕಾಪಾಡುವ ಮೂಲಕ ಕೃಷಿಯನ್ನು ಲಾಭದಾಯಕ ಉದ್ದಿಮೆಯಾಗಿಸುತ್ತೇವೆ ಎಂದರು. ರೈತರನ್ನು ಸಂಘಟಿಸಲು, ಬೆಳೆದ ಬೆಳೆಗೆ ಬೆಲೆ ಕೊಡಿಸಲು ರೈತರ ಉತ್ಪಾದಕ ಸಂಸ್ಥೆ ಸ್ಥಾಪಿಸಲಾಗುವುದು. ಇದರ ಮೂಲಕ ಗುಣಮಟ್ಟದ ಪರಿಕರ, ಕೃಷಿ ಯಂತ್ರಧಾರೆ, ಕೊಯ್ಲಿನ ನಂತರದ ನಿರ್ವಹಣೆಗೆ ಮೂಲಭೂತ ಸೌಕರ್ಯವನ್ನು ಸ್ಥಾಪಿಸಬಹುದಾಗಿದೆ. ಕೇಂದ್ರ ಸರ್ಕಾರದ ಕೃಷಿ ವಿಕಾಸ ಯೋಜನೆಯ ಮಾರ್ಗಸೂಚಿಯಂತೆ ಪ್ರತಿ ಜಿಲ್ಲೆಗಳಲ್ಲಿ ಸೂಕ್ತ ಯೋಜನೆಗಳಿಗೆ ಮಂಜೂರಾತಿ ನೀಡಲಾಗುವುದು. ಸಿರಿಧಾನ್ಯ, ಬೇಳೇಕಾಳು, ಎಣ್ಣೆಕಾಳು , ಮುಸುಕಿನಜೋಳ ಇತ್ಯಾದಿ ಬೆಳೆಗೆ ಸೂಕ್ತ ಮಾರುಕಟ್ಟೆ ಒದಗಿಸಲಾಗುವುದು.

ಅಂಟುವಾಳಕಾಯಿ ಮರಗಳ ವ್ಯಾಪಕ ಬೇಸಾಯಕ್ಕೆ ಕಾರ್ಯಕ್ರಮ ರೂಪಿಸಲು 10 ಕೋಟಿ ರೂ. ಮೀಸಲು. ನಂದಿನಿ ಮತ್ತು ಇ-ಮಾರ್ಕೆಟಿಂಗ್ ಯೋಜನೆ ಅನುಷ್ಠಾನಕ್ಕೆ 5ಕೋಟಿ ರೂ. ನೀಡಿಕೆ ಮಾಡಲು ನಿರ್ಧರಿಸಲಾಗಿದೆ. ಧಾರವಾಡ ಕೃಷಿ ವಿವಿಗೆ 3 ಕೋಟಿ ರೂ. ನೀಡಿಕೆಗೆ ಸರ್ಕಾರ ನಿರ್ಧರಿಸಿದೆ.

ನವ ಉದ್ಯಮಗಳ ಹೊಸ ಆವಿಷ್ಕಾರಕ್ಕೆ ಪ್ರೋತ್ಸಾಹ ನೀಡಲು ಹಮ್ಮಿಕೊಂಡಿರುವ ಕಾರ್ಯಕ್ರಮಕ್ಕೆ 5 ಕೋಟಿ ರೂ. ನೀಡಿಕೆ. ಅಂತರಗಂಗ ಸೂಕ್ಷ್ಮ ನೀರಾವರಿ ನಿಗಮ ಸರ್ವಾಂಗೀಣ ಅಭಿವೃದ್ಧಿಗೆ ಹಾಗೂ ಮೂಲಭೂತ ಸೌಕರ್ಯಗಳಿಗಾಗಿ 2 ಕೋಟಿ ರೂ. ನೀಡಿಕೆ. ಗುಣಮಟ್ಟದ ಬಿತ್ತನೆ ಬೀಜ ದೃಢೀಕರಣ ಕೇಂದ್ರ ಸ್ಥಾಪನೆಗೆ 5 ಕೋಟಿ ರೂ ಅನುದಾನ ನೀಡಲು ನಿರ್ಧರಿಸಲಾಗಿದೆ.


ಸಂಬಂಧಿತ ಟ್ಯಾಗ್ಗಳು

H.D.Kumaraswamy Farmers ಮೂಲಭೂತ ನೀರಾವರಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ