ಸಚಿವರುಗಳಿಗೆ ಸಭಾಧ್ಯಕ್ಷ ರಮೇಶ್ ಕುಮಾರ್ ಎಚ್ಚರಿಕೆ

Speaker Ramesh Kumar warned Minister in the session

04-07-2018

ಬೆಂಗಳೂರು: ವಿಧಾನಸಭೆಯಲ್ಲಿ ಸಚಿವರ ಗೈರು ಹಾಜರಿ ಬಗ್ಗೆ ಗರಂ ಆದ ಸಭಾಧ್ಯಕ್ಷ ರಮೇಶ್ ಕುಮಾರ್, ಇದೇನಿದು ಸಚಿವರುಗಳು ಸದನಕ್ಕೆ ಬರದಿರುವುದನ್ನು ಗಂಭೀರವಾಗಿ ಪರಿಗಣಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ ಪ್ರಸಂಗ ನಡೆಯಿತು.

ರಾಜ್ಯಪಾಲರ ಭಾಷಣದ ಮೇಲೆ ವಂದನೆ ಸಲ್ಲಿಸಿ ಕಾಂಗ್ರೆಸ್‍ನ ಬಿ.ಸಿ.ಪಾಟೀಲ್ ಮಾತನಾಡುತ್ತಿದ್ದಾಗ ಮಧ್ಯ ಪ್ರವೇಶಿಸಿದ ಸಭಾಧ್ಯಕ್ಷರು, ಸದನದಲ್ಲಿ ಉಪಸ್ಥಿತರಿದ್ದ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ರವರಿಗೆ ಇಂದು ಸದನದಲ್ಲಿ 13 ಮಂದಿ ಸಚಿವರು ಹಾಜರಿರಬೇಕಿತ್ತು. ಆರು ಮಂದಿ ಮಾತ್ರ ಇದ್ದಾರೆ. ಉಳಿದವರು ಎಲ್ಲಿ ಹೋದರು ಹೀಗಾದರೆ ಹೇಗೆ ಇದನ್ನು ಗಂಭೀರವಾಗಿ ಪರಿಗಣಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಇನ್ನು 15 ನಿಮಿಷ ಸಮಯ ನೀಡುತ್ತೇನೆ ಎಲ್ಲ ಸಚಿವರು ಸದನಕ್ಕೆ ಹಾಜರಾಗಬೇಕು. ಸದನದಲ್ಲಿ ಕೂರುವುದನ್ನು ಬಿಟ್ಟು ಬೇರೆ ಇನ್ನೆನು ಮಹಾನ್ ಕೆಲಸ ಇದೆ ಎಂದರು.

ಇಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಸಚಿವರಾದ ಹೆಚ್.ಡಿ.ರೇವಣ್ಣ, ಬಂಡೆಪ್ಪ ಕಾಶಂಪೂರ್, ಡಿ.ಕೆ.ಶಿವಕುಮಾರ್, ಎಂ.ಸಿ.ಮನಗುಳಿ, ರಮೇಶ್ ಜಾರಕಿಹೊಳಿ, ವೆಂಕಟರಾವ್ ನಾಡಗೌಡ, ಪ್ರಿಯಾಂಕ ಖರ್ಗೆ, ಸಿ.ಎಸ್.ಪುಟ್ಟರಾಜು, ಯು.ಟಿ. ಖಾದರ್, ಸಾ.ರಾ.ಮಹೇಶ್, ಶಿವಾನಂದಪಾಟೀಲ್ ಹಾಜರಿರಬೇಕಿತ್ತು, ಈ ಪೈಕಿ ಡಾ.ಜಿ. ಪರಮೇಶ್ವರ್, ಬಂಡೆಪ್ಪ ಕಾಶಂಪೂರ್, ಬಿ.ಮನುಗುಳಿ, ಪ್ರಿಯಾಂಕ ಖರ್ಗೆ, ಪುಟ್ಟರಾಜು, ಶಿವಾನಂದಪಾಟೀಲ್ ಮಾತ್ರ ಹಾಜರಿದ್ದರು. ಉಳಿದವರು ಎಲ್ಲಿ ಎಂದು ಸಿಟ್ಟಿನಿಂದ ಪ್ರಶ್ನಿಸಿದರು.

ಸಚಿವ ಡಿ.ಕೆ. ಶಿವಕುಮಾರ್ ಅವರು ತುರುವೇಕೆರೆಯಲ್ಲಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಬಗ್ಗೆ ಮಾಹಿತಿ ನೀಡಿ ನನ್ನ ಅನುಮತಿ ಪಡೆಯಬೇಕಿತ್ತು. ಇದನ್ನು ಸಹಿಸಲು ಸಾಧ್ಯವಿಲ್ಲ ಎಂದು ಗುಡುಗಿದರು.

ಸಭಾಧ್ಯಕ್ಷರ ಮಾತಿಗೆ ಬೆಂಬಲ ಸೂಚಿಸಿದ ಬಿಜೆಪಿಯ ಅರಗ ಜ್ಞಾನೇಂದ್ರ ಸಚಿವರು ಇಲ್ಲ, ಅಧಿಕಾರಿಗಳು ಇಲ್ಲ ನಾವು ಕುರ್ಚಿಗಳಿಗೆ ಮಾತನಾಡಬೇಕಾ ಎಂದಾಗ ಸಭಾಧ್ಯಕ್ಷರು ಅಧಿಕಾರಿಗಳಿದ್ದಾರೆ, ನಾನು ನಿನ್ನೆ ಮುಖ್ಯಮಂತ್ರಿಗೆ ಅಧಿಕಾರಿಯನ್ನು ನಿಯೋಜಿಸಿ ಎಂದು ಹೇಳಿದ್ದೇನೆ ಆ ಬಗ್ಗೆ ಚಿಂತೆ ಬೇಡ ಎಂದರು.

ಇದರ ನಡುವೆ ಮಾತನಾಡಿದ ಬಿಜೆಪಿಯ ರಾಜೀವ್, ಸಚಿವರ ವಿಚಾರ ಬಂದಾಗ ನೀವು ಹಾರ್ಡ್ ಆಗುತ್ತೀರಾ, ಅಧಿಕಾರಿಗಳ ವಿಚಾರದಲ್ಲಿ ಸಾಫ್ಟ್ ಏಕೆ ಎಂದು ಹಾಸ್ಯದ ದಾಟಿಯಲ್ಲಿ ಹೇಳಿದಾಗ ಗಂಭೀರವಾಗಿಯೇ ಪ್ರತಿಕ್ರಿಯಿಸಿದ ರಮೇಶ್ ಕುಮಾರ್, ನಾನು ಸಾಫ್ಟೂ ಅಲ್ಲ, ಹಾರ್ಡೂ ಅಲ್ಲ, ನ್ಯೂಟ್ರಲ್. ನೀವು ಮಾತನಾಡಿದಾಗ ಹಾರ್ಡ್ ಆಗುತ್ತೇನೆ. ಈಶ್ವರಪ್ಪನವರು ಮಾತನಾಡಿದರೆ ಸಾಫ್ಟ್ ಆಗುತ್ತೇನೆ ಎಂದು ನಗುತ್ತಾ ಹೇಳಿದರು.


ಸಂಬಂಧಿತ ಟ್ಯಾಗ್ಗಳು

Ramesh Kumar G.Parameshwara ರಾಜ್ಯಪಾಲ ಸಭಾಧ್ಯಕ್ಷ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ