ಇಲ್ಲಿ ಹೊಗಳುತ್ತೀರಿ. ಊರಿಗೆ ಬಂದು ಬೊಗಳುತ್ತೀರಿ: ಶಿವಾನಂದ ಪಾಟೀಲ

vidhan sabha session: shivanand patil v/s Govinda kajol

04-07-2018

ಬೆಂಗಳೂರು: ಹಿಂದಿನ ಸರ್ಕಾರದಲ್ಲಿ ಜಲಸಂಪನ್ಮೂಲ ಸಚಿವರಾಗಿದ್ದವರ ಬಗ್ಗೆ ಇಲ್ಲಿ ಹೊಗಳುತ್ತೀರಿ. ಊರಿಗೆ ಬಂದು ಬೊಗಳುತ್ತೀರಿ ಎಂದು ಸಚಿವ ಶಿವಾನಂದ ಪಾಟೀಲ್ ಅವರು ಹಿರಿಯ ನಾಯಕ ಗೋವಿಂದ ಕಾರಜೋಳ ಅವರನ್ನು ಟೀಕಿಸಿದ್ದು ವಿಧಾನಸಭೆಯಲ್ಲಿಂದು ಭಾರೀ ವಾಗ್ವಾದಕ್ಕೆ ಕಾರಣವಾಯಿತು.

ರಾಜ್ಯಪಾಲರ ವಂದನಾ ನಿರ್ಣಯದ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಸದಸ್ಯ ಗೋವಿಂದ ಕಾರಜೋಳ ಮಾತನಾಡುತ್ತಿದ್ದಾಗ ನೀರಾವರಿ ವಿಷಯದಲ್ಲಿ ಹಿಂದಿನ ಸರ್ಕಾರದಲ್ಲಿ ಜಲಸಂಪನ್ಮೂಲ ಸಚಿವರಾಗಿದ್ದ ಎಂ.ಬಿ.ಪಾಟೀಲ್ ಒಳ್ಳೆಯ ಕೆಲಸ ಮಾಡಿದ್ದರು ಎಂದು ಹೊಗಳಿದರು. ಹಿಂದಿನ ಸರ್ಕಾರದಲ್ಲಿ ಸಚಿವರಾಗಿದ್ದ ಎಂ.ಬಿ.ಪಾಟೀಲ್ ಅವರು ನೀರಾವರಿ ವಿಷಯದಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡಿದ್ದಾರೆ. ಏನೇ ಮಿತಿಗಳಿದ್ದರೂ ಅವರು ಮಾಡಿದ ಕೆಲಸದ ಬಗ್ಗೆ ನಾನು ಪ್ರಶಂಸೆ ವ್ಯಕ್ತಪಡಿಸಲೇಬೇಕು ಎಂದರು.

ಸಚಿವರಾಗಿ ಅವರು ಒಳ್ಳೆಯ ಕೆಲಸ ಮಾಡಿದರು. ನೀರಾವರಿಯ ವಿಷಯದಲ್ಲಿ ತಮಗೆ ಎಷ್ಟು ಸಾಧ್ಯವೋ? ಅಷ್ಟು ಕೆಲಸ ಮಾಡಿದರು ಎಂದು ಗೋವಿಂದ ಕಾರಜೋಳ ಅವರು ಎಂ.ಬಿ.ಪಾಟೀಲ್ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದಾಗ ಸಚಿವ ಶಿವಾನಂದ ಪಾಟೀಲ್ ಮಧ್ಯೆ ಪ್ರವೇಶಿಸಿದರು.

‘ಅಲ್ರೀ ಕಾರಜೋಳರೇ, ಇಲ್ಲಿ ನೋಡಿದರೆ ಎಂ.ಬಿ.ಪಾಟೀಲರನ್ನು ಹೊಗಳುತ್ತೀರಿ. ಅಲ್ಲಿ (ಊರಿನಲ್ಲಿ) ಬೊಗಳುತ್ತೀರಿ’ ಎಂದು ಟೀಕಿಸಿದಾಗ ಬಿಜೆಪಿಯ ಸದಸ್ಯರು ಸಾರಾಸಗಟಾಗಿ ಎದ್ದು ನಿಂತು ಪ್ರತಿಭಟನೆ ವ್ಯಕ್ತಪಡಿಸಿದರು. ಮಾತನಾಡಲು ನಮಗೂ ಬರುತ್ತದೆ. ಸರ್ಕಾರ ಒಳ್ಳೆಯ ಕೆಲಸ ಮಾಡಿದಾಗ ನಾವು ಹೊಗಳುತ್ತೇವೆ. ತಪ್ಪು ಕೆಲಸ ಮಾಡಿದಾಗ ಟೀಕಿಸುತ್ತೇವೆ. ಆದರೆ ಟೀಕೆಯನ್ನು ಬೊಗಳುವುದು ಎಂದು ಬಣ್ಣಿಸಿದರೆ ಏನರ್ಥ? ಅಂತ ವಾಗ್ದಾಳಿ ನಡೆಸಿದರು.

ಸದಸ್ಯರಾದ ಬಸವನಗೌಡ ಪಾಟೀಲ್ ಯತ್ನಾಳ್, ಮಾಧುಸ್ವಾಮಿ ಸೇರಿದಂತೆ ಹಲವರು ಎದ್ದು ನಿಂತು ಸಚಿವ ಶಿವಾನಂದ ಪಾಟೀಲರ ಮೇಲೆ ವಾಗ್ದಾಳಿ ನಡೆಸತೊಡಗಿದಾಗ ಕೆಲ ಕಾಲ ಯಾರ ಮಾತು ಯಾರಿಗೂ ಕೇಳದಂತಹ ಸ್ಥಿತಿ ಸೃಷ್ಟಿಯಾಗಿತ್ತು. ಆನಂತರ ವಿಪಕ್ಷಗಳ ಸದಸ್ಯರ ಆಕ್ರೋಶಕ್ಕೆ ಸ್ಪಂದಿಸಿದ ಸಚಿವ ಶಿವಾನಂದ ಪಾಟೀಲ್, ನನ್ನ ಮಾತಿನಿಂದ ಅವರಿಗೆ ನೋವಾಗಿದ್ದರೆ ನನ್ನ ಮಾತನ್ನು ವಾಪಸ್ ಪಡೆಯುತ್ತೇನೆ ಎಂದು ಹೇಳಿದಾಗ ಸದನ ಶಾಂತವಾಯಿತು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ