'ನೀವು ಸಾಂದರ್ಭಿಕ ಶಿಶುವಲ್ಲ, ನಾಡಿನ ಮುಖ್ಯಮಂತ್ರಿ'

BJP leader govind karjol questions in vidhan sabha to CM

04-07-2018

ಬೆಂಗಳೂರು: ಮುಖ್ಯಮಂತ್ರಿಗಳೇ ನೀವು ಸಾಂದರ್ಭಿಕ ಶಿಶುವಲ್ಲ, ಈ ನಾಡಿನ ಆರೂವರೆ ಕೋಟಿ ಜನರ ಮುಖ್ಯಮಂತ್ರಿ. ಅವರ ಆಶೋತ್ತರಗಳನ್ನು ಈಡೇರಿಸುವ ನಾಯಕರಾಗಿ ನೀವು ಮೇಲೆದ್ದು ನಿಲ್ಲಬೇಕು. ಹಿಂದಿನ ಸರ್ಕಾರದ ಬಗ್ಗೆ ನೀವೇ ಮಾಡಿದ್ದ ಆರೋಪಗಳ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂದು ಬಿಜೆಪಿ ನಾಯಕ ಗೋವಿಂದ ಕಾರಜೋಳ ವಿಧಾನ ಸಭೆಯಲ್ಲಿಂದು ಆಗ್ರಹಿಸಿದ್ದಾರೆ.

ರಾಜ್ಯಪಾಲರ ವಂದನಾ ನಿರ್ಣಯದ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸರ್ಕಾರ ರಚನೆಯಾದ ಸಂದರ್ಭದಲ್ಲಿ ನೀವು, ‘ನಾನು ಸಾಂದರ್ಭಿಕ ಶಿಶು. ಆಕಸ್ಮಿಕ ಸನ್ನಿವೇಶದಲ್ಲಿ ಸಿಎಂ ಆಗಿದ್ದೇನೆ’ ಎಂದು ಹೇಳಿದ್ದೀರಿ. ಇದು ಸರಿಯಲ್ಲ ಎಂದರು.

ನೀವು ಮುಖ್ಯಮಂತ್ರಿಗಳಾಗಲು ಏನೇ ಕಾರಣಗಳು ಇರಲಿ, ಯಾವ ಸನ್ನಿವೇಶವೇ ಇರಲಿ, ಆದರೆ ನೀವು ಈ ನಾಡಿನ ಆರೂವರೆ ಕೋಟಿ ಜನರ ಮುಖ್ಯಮಂತ್ರಿ ಎಂಬುದನ್ನು ಮರೆಯಬೇಡಿ. ಅಷ್ಟು ಜನರ ಆಶೋತ್ತರಗಳನ್ನು ಈಡೇರಿಸುವ ಹೊಣೆ ನಿಮ್ಮ ಮೇಲಿದೆ ಎಂಬುದನ್ನು ಮರೆಯಬೇಡಿ ಎಂದರು.

ಈ ಹಿಂದಿನ ಸರ್ಕಾರದ ಅವಧಿಯಲ್ಲಿ ನೀವು ಪ್ರತಿಪಕ್ಷದಲ್ಲಿದ್ದಿರಿ. ಡಿ.ಕೆ.ರವಿ ಸೇರಿದಂತೆ ಹಲವು ಪ್ರಾಮಾಣಿಕ ಅಧಿಕಾರಿಗಳ ಸಾವಿನ ಹಿಂದಿನ ನಿಗೂಢತೆಯ ಬಗ್ಗೆ ಆರೋಪ ಮಾಡಿದ್ದಿರಿ. ಮರಳು ಮಾಫಿಯಾ ಧಂದೆಗೆ ಬಲಿಯಾದ ಅಧಿಕಾರಿಗಳ ಬಗ್ಗೆ ಪ್ರಸ್ತಾಪಿಸಿದ್ದಿರಿ.

ಇದೇ ರೀತಿ ಹಿಂದಿನ ಸರ್ಕಾರದ ಆಕ್ರಮಗಳ ಬಗ್ಗೆ ಮಾತನಾಡಿದ್ದಿರಿ. ಆರೋಪ ಮಾಡಿದ್ದಿರಿ. ಆದರೆ ನೀವೇ ಈಗ ಮುಖ್ಯಮಂತ್ರಿ ಹುದ್ದೆಯಲ್ಲಿ ಬಂದು ಕುಳಿತಿದ್ದೀರಿ. ಈಗ ಆ ಆರೋಪಗಳ ಬಗ್ಗೆ ನೀವು ಏನೂ ಮಾತನಾಡುತ್ತಿಲ್ಲ.

ಹಾಗಿದ್ದರೆ ಹಿಂದೆ ಮಾಡಿದ ಆರೋಪಗಳು ಸುಳ್ಳೇ?ಸುಖಾ ಸುಮ್ಮನೆ ನೀವು ಆರೋಪ ಮಾಡಿದ್ದಿರಾ?ಅಲ್ಲವಾದರೆ ಈಗ ಮುಖ್ಯಮಂತ್ರಿಯಾಗಿರುವಾಗ ನಿಮ್ಮ ಹಿಂದಿನ ಆರೋಪಗಳ ಕುರಿತು ನಿಮ್ಮ ಪ್ರತಿಕ್ರಿಯೆ ಏನು?ಆ ಆರೋಪಗಳ ಕುರಿತು ಸಮಗ್ರ ತನಿಖೆ ಮಾಡಿಸುತ್ತೀರಾ? ಎಂದು ಪ್ರಶ್ನೆ ಮಾಡಿದರು. ರಾಜ್ಯದ ಹತ್ತೊಂಬತ್ತು ಜಿಲ್ಲೆಗಳಲ್ಲಿ ಭರಪೂರ ಮಳೆ ಬಂದಿದೆ. ಉಳಿದ ಕಡೆ ಮಳೆಯೇ ಬಂದಿಲ್ಲ. ಹೀಗಾಗಿ ಏಕಕಾಲಕ್ಕೆ ರಾಜ್ಯದಲ್ಲಿ ಅತಿವೃಷ್ಟಿ ಮತ್ತು ಅನಾವೃಷ್ಟಿ ಕಾಡುತ್ತಿದೆ. ತಕ್ಷಣವೇ ಈ ಸಂಬಂಧ ಕ್ರಮ ಕೈಗೊಳ್ಳಿ.

ಅತಿವೃಷ್ಟಿ ಆದ ಕಡೆ ಬೆಳೆ ನಾಶವಾಗಿದೆ. ಜನರ ನಿತ್ಯದ ಬದುಕು ನರಕ ಪ್ರಾಯವಾಗಿದೆ. ಅದೇ ರೀತಿ ಮಳೆ ಇಲ್ಲದ ಜಿಲ್ಲೆಗಳಲ್ಲಿ ಮುಂದೇನು?ಅನ್ನುವ ಚಿಂತೆ ಶುರುವಾಗಿದೆ. ಹೀಗಾಗಿ ತಕ್ಷಣವೇ ಅತಿವೃಷ್ಟಿ ಹಾಗೂ ಅನಾವೃಷ್ಟಿಗಳೆರಡಕ್ಕೂ ಸಂಬಂಧಿಸಿದಂತೆ ಕ್ರಮ ಕೈಗೊಳ್ಳಿ ಎಂದರು.

ನೀರಾವರಿ ಮುಂದಿನ ಐದು ವರ್ಷಗಳಲ್ಲಿ ಒಂದೂಕಾಲು ಲಕ್ಷ ಕೋಟಿ ರೂ. ನೀಡುವುದಾಗಿ ರಾಜ್ಯಪಾಲರ ಭಾಷಣದಲ್ಲಿ ಹೇಳಿಸಿದ್ದೀರಿ. ಆದರೆ, ಕೇವಲ ಕೃಷ್ಣಾ ಮೇಲ್ದಂಡೆ ಯೋಜನೆಯೊಂದಕ್ಕೆ ಎಪ್ಪತ್ತೈದು ಸಾವಿರ ಕೋಟಿ ರೂ ಬೇಕು. ಅದೂ ಒಂದೇ ಕಂತಿನಲ್ಲಿ ಈ ಹಣ ಬಿಡುಗಡೆ ಮಾಡಬೇಕು.

ಯಾಕೆಂದರೆ ಒಂದು ಲಕ್ಷ ಎಕರೆಗೂ ಅಧಿಕ ಪ್ರದೇಶ ಮುಳುಗಡೆ ಆಗುವುದರಿಂದ ನೀವು ಸಂತ್ರಸ್ತರಿಗೆ ಪರಿಹಾರ ನೀಡಿ ಪುನರ್ವಸತಿ ಕಲ್ಪಿಸಬೇಕು. ಒಂದೂ ಕಾಲು ಲಕ್ಷ ಕೋಟಿರೂಗಳನ್ನು ಐದು ವರ್ಷಗಳಲ್ಲಿ ಕೊಡುತ್ತೇವೆ ಎಂದರೆ ನೀರಾವರಿ ಯೋಜನೆಗಳು ಹೇಗೆ ಪೂರ್ಣಗೊಳ್ಳುತ್ತವೆ?ಎಂದು ಪ್ರಶ್ನಿಸಿದರು.


ಸಂಬಂಧಿತ ಟ್ಯಾಗ್ಗಳು

govind karjol governor ಆಶೋತ್ತರ ಸರ್ಕಾರ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ