ಬಸನಗೌಡ ಪಾಟೀಲ್ ಯತ್ನಾಳ್ ಮರಳಿ ಬಿಜೆಪಿಗೆ !

Kannada News

27-05-2017

ಬೆಂಗಳೂರು:- ಕೇಂದ್ರದ ಮಾಜಿ ಸಚಿವ ಬಸನಗೌಡ ಪಾಟೀಲ್ ಯತ್ನಾಳ್ ಬಿಜೆಪಿ ಪಾಳೆಯಕ್ಕೆ ಮರಳಲು ವೇದಿಕೆ ಸಿದ್ಧಗೊಂಡಿದೆ. ಯತ್ನಾಳ್ ಬಿಜೆಪಿ ಸೇರ್ಪಡೆಗೆ ವರಿಷ್ಠರು ಗ್ರೀನ್ ಸಿಗ್ನಲ್ ನೀಡಿದ್ದು,ಸದ್ಯದಲ್ಲೇ ಅವರು ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ ಎನ್ನಲಾಗುತ್ತಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪರೊಂದಿಗಿನ ಕಲಹದಿಂದ ಪಕ್ಷದಿಂದ ಉಚ್ಛಾಟನೆಗೊಂಡಿದ್ದ ಕೇಂದ್ರದ ಮಾಜಿ ಸಚಿವ ಬಸನಗೌಡ ಪಾಟೀಲ್ ಯತ್ನಾಳ್ ಪಕ್ಷಕ್ಕೆ ಮರಳುತ್ತಿದ್ದಾರೆ. ಸ್ವತಃ ಯಡಿಯೂರಪ್ಪ ಯತ್ನಾಳ್ರನ್ನು ಪಕ್ಷಕ್ಕೆ ಕರೆತರುತ್ತಿದ್ದಾರೆ. ಉತ್ತರ ಕರ್ನಾಟಕದಲ್ಲಿ ಪ್ರಾಬಲ್ಯ ಹೊಂದಿರುವ ಯತ್ನಾಳ್ ಪಕ್ಷ ಸೇರ್ಪಡೆಯಿಂದ ಪಕ್ಷ ಬಲವರ್ಧನೆಯಾಗಲಿದೆ. ಅವರು ನಮ್ಮ ಪಕ್ಷದ ಹಿರಿಯರು. ಅವರನ್ನು ಮರಳಿ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳೋಣ ಎನ್ನುವ ಯಡಿಯೂರಪ್ಪ ಪ್ರಸ್ತಾಪಕ್ಕೆ ಕೇಂದ್ರದ ನಾಯಕರು ಸಹಮತ ವ್ಯಕ್ತಪಡಿಸಿದ್ದಾರೆ. ಅಮಿತ್ ಶಾ, ಅರುಣ್ ಜೇಟ್ಲಿ, ರಾಜ್ಯ ಉಸ್ತುವಾರಿ ಮುರುಳಿಧರ್ ರಾವ್ ಕೂಡ ಇದಕ್ಕೆ ಸಮ್ಮತಿ ನೀಡಿದ್ದಾರೆ ಎಂದು ತಿಳಿದುಬಂದಿದೆ. ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್, ಸಂಸದ ಪ್ರಹ್ಲಾದ್ ಜೋಶಿ, ಕೇಂದ್ರ ಸಚಿವ ರಮೇಶ ಜಿಗಜಣಗಿ ವಿರೋಧದ ಮಧ್ಯೆಯೂ ಯತ್ನಾಳ್ ಸೇರ್ಪಡೆಗೆ ಹೈಕಮಾಂಡ್ ಗ್ರೀನ್ ಸಿಗ್ನಲ್ ನೀಡಿದೆ. ಮುಂದಿನ ವಾರ ಯತ್ನಾಳ್ ಅವರನ್ನು ಖುದ್ದಾಗಿ ಭೇಟಿ ಮಾಡಿ ಯಡಿಯೂರಪ್ಪ ಮಾತುಕತೆ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ. ಮೂಲಗಳ ಪ್ರಕಾರ ಬರ ಅಧ್ಯಯನ ಪ್ರವಾಸದ ಸಮಾರೋಪ ವೇಳೆಗೆ ಯತ್ನಾಳ್ ಸೇರ್ಪಡೆಯಾಗುವ ಸಾಧ್ಯತೆ ಇದೆ.
ಮಾತೃ ಪಕ್ಷಕ್ಕೆ ಮರಳುವ ಕುರಿತು ಪ್ರತಿಕ್ರಿಯೆ ನೀಡಿರುವ ಬಸನಗೌಡ ಪಾಟೀಲ್ ಯತ್ನಾಳ್, ಕೇಂದ್ರ ನಾಯಕರು ಪಕ್ಷ ಸೇರ್ಪಡೆಗೆ ಸಹಮತ ವ್ಯಕ್ತಪಡಿಸಿದ್ದಾರೆ. ಗೌರವಯುತವಾಗಿ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುವ ವಾತಾವರಣ ಸೃಷ್ಟಿಯಾಗಿದೆ ಎಂದರು. ಯಡಿಯೂರಪ್ಪ ಮತ್ತು ನನ್ನ ನಡುವಿನ ವೈಮನಸ್ಸು ಕ್ಲೀಯರ್ ಆಗಿದೆ. ಇಬ್ಬರಿಗೂ ತಪ್ಪು ಕಲ್ಪನೆಗಳ ಅರಿವಾಗಿದೆ. ಯಾವುದೋ ಕಾರಣಕ್ಕೆ ನಮ್ಮಿಬ್ಬರ ನಡುವೆ ವೈಮನಸ್ಸು ಉಂಟಾಗಿತ್ತು. ಈಗ ಪೂರಕವಾದ ವಾತಾವರಣ ಸೃಷ್ಟಿಯಾದ ಹಿನ್ನೆಲೆಯಲ್ಲಿ ಪಕ್ಷ ಸೇರ್ಪಡೆಗೆ ಒಲವು ಹೊಂದಿದ್ದೇನೆ ಎಂದಿದ್ದಾರೆ.


ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ